ಗುರುವಾರ, ನವೆಂಬರ್ 12, 2009

ಸಂವಿಧಾನದ ಮಾನ ಕಳೆದ ಕಪಾಳಮೋಕ್ಷ


ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹದು.ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವೊಂದರ ವಿಧಾನಸಭೆಯಲ್ಲಿ ರಾಷ್ಟ್ರ ಭಾಷೆ ಹಿಂದಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರೆಂಬ ಕಾರಣಕ್ಕಾಗಿ ಪ್ರಜಾಪ್ರತಿನಿಧಿಯೊಬ್ಬನಿಗೆ ವಿಧಾನ ಭವನದ ಒಳಗೆ ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಹಲ್ಲೆ ನಡೆಸಿ ಕೊನೆಗೆ ಆತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕೆಲವು ದುಷ್ಟ ರಾಜಕೀಯ ಪಕ್ಷಗಳಿಂದಾಗಿ ನಮ್ಮ ದೇಶ ಯಾವ ರೀತಿಯ ಸಂಸ್ಕೃತಿಯೆಡೆಗೆ ವಾಲುತ್ತಿದೆ ಎಂಬುವುದನ್ನು ಸೂಚಿಸುತ್ತದೆ. ಈ ಘಟನೆ ಸಮಾಜವಾದಿ ಪಕ್ಷದ ಮುಖಂಡ ಶ್ರೀ ಅಬೂಹಾಶಿಂ ಆಜ್ಮಿ ಮೇಲೆ ನಡೆದ ಹಲ್ಲೆ ಅಲ್ಲ, ಇದು ರಾಷ್ಟ್ರವೊಂದರ ಸಂಸ್ಕೃತಿಯ ಮೇಲೆ, ಅಲ್ಲಿನ ಪ್ರಜಾಪ್ರಭುತ್ವದ ಮೇಲೆ ಅಲ್ಲಿನ ರಾಷ್ಟ್ರಭಾಷೆಯ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ.

ಮೊನ್ನೆ ವಿಧಾನಸಭಾ ಅಧಿವೇಶನ ಆರಂಭವಾಗುವ ಮುನ್ನವೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಎಲ್ಲಾ ಶಾಸಕರೂ ಮರಾಠಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಇಲ್ಲದಿದ್ದರೆ ಅದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ ಎಂದು ಥೇಟ್ ತಾಲಿಬಾನಿಗಳ ತರಹ ಎಚ್ಚರಿಕೆ ನೀಡಿದ್ದರು.ಅದರಂತೆ ಆಡಳಿತ ಪಕ್ಷ ಕಾಂಗ್ರೆಸ್ ಸೇರಿ ಇತರ ಎಲ್ಲಾ ಪಕ್ಷದ ಶಾಸಕರೂ ಮರಾಠಿಯಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜ್ ಠಾಕ್ರೆಯ ಈ ಎಚ್ಚರಿಕೆಯನ್ನು ಮೊದಲೇ ಖಂಡಿಸಿದ್ದ ಮತ್ತು ಸಂವಿಧಾನಾತ್ಮಕವಲ್ಲದ ಶಕ್ತಿಗಳ ಬೆದರಿಕೆಗೆ ತಾನು ಜಗ್ಗುವುದಿಲ್ಲವೆಂದು ಘೋಷಿಸಿದ ಸಮಾಜವಾದಿ ಪಕ್ಷದ ಮುಖಂಡ ಅಬೂಹಾಶಿಂ ಆಜ್ಮಿ ಸಂವಿಧಾನಾತ್ಮಕವಾಗಿ ರಾಷ್ಟ್ರಭಾಷೆ ಹಿಂದಿಯಲ್ಲಿ ಪ್ರತಿಜ್ಞೆ ಸ್ವೀಕರಿಸುವುದಾಗಿ ಹೇಳಿದ್ದರು. ಹೀಗಿದ್ದೂ ಅಲ್ಲಿನ ಸರ್ಕಾರ ವಿಧಾನಸಭೆಯ ಒಳಗೆ ಸೂಕ್ತ ಭದ್ರತಾ ಕ್ರಮಗಳನ್ನು ಏರ್ಪಡಿಸದೆ ಒಬ್ಬ ಜನಪ್ರತಿನಿಧಿಯೊಬ್ಬನ ಮೇಲೆ ಬಹಿರಂಗವಾಗಿ ಹಲ್ಲೆ ನಡೆಸುವಂತಹ ಘಟನೆಗೆ ಪರೋಕ್ಷವಾಗಿ ಕಾರಣವಾಗುವುದರ ಜೊತೆಗೆ ದೇಶದ ಮಾನವನ್ನು ಬಹಿರಂಗವಾಗಿ ವಿಶ್ವದ ಮುಂದೆ ಕಳೆಯಲು ಕಾರಣವಾಯಿತು .ಒಬ್ಬ ಜನಪ್ರತಿನಿಧಿಯೊಬ್ಬನ ಮೇಲಿನ ಹಲ್ಲೆಯನ್ನು ಅದೂ ವಿಧಾನ ಸಭೆಯ ಒಳಗೆ ತಡೆಯಲಾಗದ ನೂತನ ಸರ್ಕಾರ ಮಹಾರಾಷ್ಟ್ರದ ಜನತೆಗೆ ಯಾವ ರೀತಿಯ ರಕ್ಷಣೆ ನೀಡಬಲ್ಲದು ಎಂಬ ಸಂಶಯವನ್ನೂ ಹುಟ್ಟುಹಾಕುವಂತೆ ಮಾಡಿತು.

ಇಲ್ಲಿ ಪ್ರಶ್ನೆ ಇರುವುದು ಭಾಷೆಯದ್ದಲ್ಲ ಮತಬ್ಯಾಂಕಿನದು. ಮರಾಠಿ ಜನಗಳ ಭಾಷಾಪ್ರೇಮವನ್ನು ದುರುಪಯೋಗಪಡಿಸಿಕೊಂಡು ಆಕ್ರಮಣಕಾರಿ ಹೇಳಿಕೆಗಳ ಮೂಲಕ ಮರಾಠಿ ಮತಬ್ಯಾಂಕ್ ಸೃಷ್ಟಿಸಿಕೊಂಡ ರಾಜ್ ಠಾಕ್ರೆ ಮರಾಠಿ ಜನರ ಮನಗೆಲ್ಲಲು ಮತ್ತೆ ಈ ರೀತಿಯ ನೀಚ ತಂತ್ರಗಳನ್ನು ಪ್ರಯೋಗಿಸುತ್ತಿರುವುದು ಅಖಂಡ ಭಾರತವನ್ನು ಭಾಷೆಯ ಹೆಸರಿನಲ್ಲಿ ಒಡೆಯುವ ರಾಷ್ಟ್ರದ್ರೋಹಿ ಕೆಲಸ ಎಂದೇ ಪರಿಗಣಿಸಬೇಕಾಗುತ್ತದೆ. ರಾಜ್ಯ ಮತ್ತು ಭಾಷೆಗಳಿಗಿಂತಲೂ ರಾಷ್ಟ್ರ ಮುಖ್ಯ .ನೆರೆಯಲ್ಲಿ ಚೀನಾ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳು ಭಾರತದ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುತಿದ್ದರೆ ಭಾರತೀಯರಾದ ನಾವು ಏಕತೆಯಿಂದ ಬಲಿಷ್ಠ ರಾಷ್ಟ್ರ ಕಟ್ಟುವ ಬದಲು ಭಾಷೆಯ ಹೆಸರಿನಲ್ಲಿ ಪರಸ್ಪರ ಜಗಳಕ್ಕೆ ನಿಂತರೆ ಇದರಿಂದ ರಾಷ್ಟಕ್ಕೆ ಅಪಾಯವೇ ಹೆಚ್ಚು.ಸೌಹಾರ್ದ ಭಾರತದ ಕಲ್ಪನೆಯೊಂದಿಗೆ ಸ್ವಾತಂತ್ಯ್ರ ತಂದುಕೊಟ್ಟ ಮಹನೀಯರು ಸುಗಮ ಆಡಳಿತಕ್ಕಾಗಿ ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿದರು. ಅವರಲ್ಲಿ ಅಧಿಕಾರದ ವಿಕೇಂದ್ರೀಕರಣದ ಕಲ್ಪನೆ ಇತ್ತು.ಭಾರತದ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಈ ಮಾದರಿ ಉತ್ತಮವೆಂದೇ ಅವರು ಭಾವಿಸಿದ್ದರು. ಅದು ಸರಿ ಕೂಡಾ ಆಗಿತ್ತು. ಆದರೆ ರಾಜ್ ಠಾಕ್ರೆಯಂತಹ ಪುಂಡರು ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ರಾಷ್ಟ್ರವನ್ನು ಭಾಷೆಯ ಆಧಾರದ ಮೇಲೆ ವಿಭಜಿಸುತ್ತಿರುವುದು ಖಂಡನೀಯವಾಗಿದೆ.

ಇದುವರೆಗೆ ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆದು ತಮ್ಮ ಮತಬ್ಯಾಂಕ್ ಸೃಷ್ಠಿಸಿಕೊಳ್ಳುತಿದ್ದ ರಾಜಕಾರಣಿಗಳು ಈಗ ಭಾಷೆಯ ಆಧಾರದ ಮೇಲೆ ರಾಷ್ಟ್ರದ ಏಕತೆಗೆ ದಕ್ಕೆ ತರುತ್ತಿರುವುದು ಶೋಭೆ ತರುವಂತಹದ್ದಲ್ಲ. ಸರ್ಕಾರ ಇಂತಹ ಶಕ್ತಿಗಳನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು. ಇಲ್ಲದಿದ್ದರೆ ಇದು ಮುಂದೆ ಹೆಮ್ಮರವಾಗಿ ಮತ್ತೊಂದು ರೀತಿಯ ಖಾಲಿಸ್ತಾನ್ ಚಳುವಳಿಯನ್ನು ಹುಟ್ಟುಹಾಕಬಹುದು.ಅದಕ್ಕೆ ಅವಕಾಶ ಕೊಡದೆ ರಾಷ್ಟೀಯ ಭದ್ರತಾ ಕಾಯ್ದೆಯಡಿ ಇಂತಹ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಮೂಲಕ ರಾಷ್ಟ್ರ ಒಡೆಯುವ ಶಕ್ತಿಗಳಿಗೆ ಸೂಕ್ತ ಎಚ್ಚರಿಕೆಯನ್ನು ಕೊಡಬೇಕು.


ಹಿಂದೆ ಕರ್ನಾಟಕದ ವಿಧಾನಸಭೆಗೆ ಬೆಳಗಾವಿ ಭಾಗದಿಂದ ಆಯ್ಕೆಯಾಗಿ ಬರುತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಅವರ ಪಕ್ಷದ ರುಮಾಲನ್ನು ತಲೆಗೆ ಸುತ್ತಿಕೊಂಡು ವಿಧಾನಸಭೆಗೆ ಬಂದು ಅಲ್ಲಿ ಮರಾಠಿಯಲ್ಲಿ ಮಾತನಾಡುವುದರ ಜೊತೆಗೆ ಮಹಾರಾಷ್ಟ್ರ ಪರ ಘೋಷಣೆಗಳನ್ನು ಕೂಗುತಿದ್ದರು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಬಹಿರಂಗವಾಗಿ ಕೂಗುತಿದ್ದರು.ಇದು ರಾಜ್ಯ ದ್ರೋಹದ ಕೆಲಸ.ಇಲ್ಲಿ ಅವರು ರಾಜ್ಯದ ಭಾಷೆ ಅಥವಾ ರಾಷ್ಟ್ರದ ಭಾಷೆಯನ್ನು ಬಳಸುದುವುದನ್ನು ಬಿಟ್ಟು ಅನ್ಯ ಸಂಸ್ಥಾನದ ಭಾಷೆಯನ್ನು ಬಳಸುತಿದ್ದರು.ವಿಚಿತ್ರವೆಂದರೆ ಇಂತಹ ರಾಜ್ಯದ್ರೋಹದ ಕೆಲಸಕ್ಕೆ ಬಾಳಾಠಾಕ್ರೆ,ರಾಜ್ ಠಾಕ್ರೆ ಆದಿಯಾಗಿ ಮಹಾರಾಷ್ಟ್ರದ ಇತರ ಪಕ್ಷಗಳ ರಾಜಕಾರಣಿಗಳು ಬೆಂಬಲ ಕೊಡುತಿದ್ದರು.ಆದರೆ ಈಗ ತಮ್ಮ ಸಂಸ್ಥಾನದಲ್ಲಿ ಭಾರತ ದೇಶದ ರಾಷ್ಟ್ರಭಾಷೆಯ ಬಳಕೆ ಅವರಿಗೆ ಬೇಡ.ಇಂತಹ ರಾಜಕಾರಣಿಗಳಿಗೆ ಏನನ್ನಬೇಕು? ಇಂತಹ ಹೊಲಸು ರಾಜಕಾರಣದಿಂದಲೇ ದೇಶ ಇಂದು ಅಧೋಗತಿಗಿಳಿಯುತ್ತಿರುವುದು.


ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರಿಗೆ ಕರ್ನಾಟಕದ ವಿಧಾನಸಭೆಯಲ್ಲಿ ಕಪಾಳಮೊಕ್ಷದಂತಹ ಘಟನೆ ನಡೆಯಲಿಲ್ಲ.ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇವರ ಮಹಾರಾಷ್ಟ್ರ ಪರ ಧೋರಣೆ ಖಂಡಿಸಿ ಸಂವಿಧಾನಾತ್ಮಕವಾಗಿ ಸದನದಲ್ಲಿ ಪ್ರತಿಭಟನೆ ಮಾಡುತಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಆಗಿದ್ದು ಮಾತ್ರ ನಾಚಿಕೆಗೇಡು. ಈ ಘಟನೆ ಭಾರತದ ಏಕತೆಗೆ ಭಂಗ ತರುವಂತಹದ್ದು, ಇದರಿಂದ ದೇಶದ ಘನತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸಿಯುವಂತಾಯಿತು.ನಮ್ಮ ಜನಗಳು ಇಂತಹ ಸಂವಿಧಾನ ವಿರೋಧಿ ಶಕ್ತಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿಕಳುಹಿಸುವ ಮೂಲಕ ತಮಗೆ ತಾವೇ ಅವಮಾನಿಸಿಕೊಂಡಿದ್ದಾರೆ. ಇವರ ಈ ನೀಚ ಕೆಲಸಕ್ಕಾಗಿ ಈ ನಾಲ್ವರು ಶಾಸಕರನ್ನು ಮುಂದಿನ ನಾಲ್ಕು ವರ್ಷಗಳ ಕಾಲ ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ. ಜನಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಡಬೇಕಾಗಿದ್ದ ಶಾಸಕರು ಸ್ವತಹ ಇನ್ನು ನಾಲ್ಕು ವರ್ಷ ವಿಧಾನಸಭೆ ಪ್ರವೇಶಿಸುವಂತಿಲ್ಲ. ಹೀಗಾದಾಗ ಆ ಕ್ಷೇತ್ರದ ಪಾಡೇನಾಗಬೇಕು? ಒಟ್ಟಿನಲ್ಲಿ ಇಂತಹ ಶಾಸಕರನ್ನು ಆಯ್ಕೆ ಮಾಡುವ ನಾವು ಮೊದಲು ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿದೆ.


- ಅಶ್ರಫ್ ಮಂಜ್ರಾಬಾದ್.