ಸೋಮವಾರ, ಜೂನ್ 14, 2010

ಗಲ್ಫ್ ಮಂಗಳೂರಿಗರ ಒಗ್ಗಟ್ಟಿನಿಂದ ಜೈಲು ವಿಮೋಚನೆಗೊಂಡ ಲೋಹಿತಾಕ್ಷ


ರಿಯಾದ್: ಕಳೆದ ಎಂಟು ತಿಂಗಳಿಂದ ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಮಂಗಳೂರು ದೇರೆಬೈಲು ಕೊಂಚಾಡಿ ನಿವಾಸಿ ಲೋಹಿತಾಕ್ಷ ಮಂಗಳೂರು ಅಸೋಸಿಯೇಶನ್ ಫಾರ್ ಸೌದಿ ಅರೇಬಿಯಾ (MASA) ಮತ್ತು ಇತರ ಕೆಲವು ಸಮಾನ ಮನಸ್ಕ ಸಂಘಟನೆಗಳ ನೆರವಿನೊಂದಿಗೆ ಬಿಡುಗಡೆಗೊಂಡಿದ್ದಾರೆ। ಕರ್ನಾಟಕದಲ್ಲಿ ನಡೆದ ಹಾಲಪ್ಪ, ನಿತ್ಯಾನಂದರ ರಾಸಲೀಲೆಗಳ ಸುದ್ದಿಗಳ ಭರಾಟೆಯಲ್ಲಿರುವ ಕನ್ನಡ ನಾಡಿನ ಪತ್ರಿಕೆಗಳಿಗೆ ಈ ವಿಷಯ ಒಂದು ದೊಡ್ಡ ಸುದ್ಧಿಯಾಗಿ ಕಾಣಲೇ ಇಲ್ಲ।

ಗಲ್ಫ್ ನಾಡಿನಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿರುವ ಕನ್ನಡಿಗರ ಸಂಘಗಳು ಮಾಡಿದ ಈ ಕೆಲಸ ಅಷ್ಟು ಸುಲಭವಾಗಿ ತಳ್ಳಿಬಿಡುವಂತಹದ್ದಲ್ಲ। ಗಲ್ಫ್ ನಾಡಿನಲ್ಲಿ ಸದಾ ಒತ್ತಡದ ನಡುವೆ ಬಿಡುವಿಲ್ಲದೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ವಿದೇಶಿಯರು ಸಂಘಟಿತರಾಗುವುದು ಅಷ್ಟೊಂದು ಸುಲಭವಲ್ಲ। ಹಾಗೇನಾದರೂ ಸಂಘಟಿತವಾಗಿದ್ದರೆ ಅದು ಹೆಚ್ಚಿನದಾಗಿ ಕೇರಳೀಯರು. ತಮ್ಮ ರಾಜ್ಯದ ಜನರಿಗೆ ಏನಾದರೂ ಆದರೆ ಅದಕ್ಕೆ ಅತೀ ಶೀಘ್ರ ಸ್ಪಂದಿಸುವ ಮಲಯಾಳಿ ಸಂಘಟನೆಗಳನ್ನು ನಾನು ನೋಡಿದ್ದೇನೆ.


ಸಂಘಟಿತ ಹೋರಾಟಕ್ಕೆ ಜಯ:ಅದೇ ರೀತಿ ಈಗ ಮಾಸಾದ ನೇತೃತ್ವದಲ್ಲಿ ಸೌದಿ ಅರೇಬಿಯಾ ಮತ್ತು ಯು.ಎ.ಇ. ಯ ಕೆಲವು ಸಂಘಟನೆಗಳು ಒಂದಾಗಿ ಲೋಹಿತಾಕ್ಷರನ್ನು ಬಿಡುಗಡೆ ಮಾಡಿಸಿದ್ದು ಕನ್ನಡಿಗರು ಒಂದಾದಲ್ಲಿ ಏನನ್ನೂ ಸಾಧಿಸಿಯಾರು ಎಂಬ ಸಂದೇಶವನ್ನು ಅಸಂಘಟಿತ ಗಲ್ಫ್ ಕನ್ನಡಿಗರ ಮುಂದೆ ಸಾಧಿಸಿ ತೋರಿಸುವುದರ ಜೊತೆಗೆ ಕನ್ನಡಿಗರನ್ನು ಸಂಘಟಿತರಾಗುವಂತೆ ಪ್ರೇರೇಪಿಸಿದೆ. ಅಸಲಿಗೆ ಲೋಹಿತಾಕ್ಷರನ್ನು ಜೈಲಿಗೆ ತಳ್ಳಲು ಕಾರಣವೇನು ಎಂದು ನೋಡಿದರೆ ವಿದೇಶಿಯರ ಜೊತೆ ಇಲ್ಲಿ ಎಂತಹ ಅನ್ಯಾಯಗಳು ಕೆಲವೊಮ್ಮೆ ನಡೆಯುತ್ತವೆ ಎಂಬ ವಾಸ್ತವ ವಿಚಾರವನ್ನು ನಮ್ಮ ಮುಂದಿಡುತ್ತವೆ. ಕಳೆದ ಹದಿನೈದು ವರ್ಷಗಳಿಂದ ಸೌದಿ ಅರೇಬಿಯಾದ ಬಂದರು ನಗರ ದಮ್ಮಾಮಿನಲ್ಲಿ ವೃತ್ತಿಯಲ್ಲಿ ಕ್ರೇನ್ ಚಾಲಕರಾಗಿ ದುಡಿಯುತ್ತಿರುವ ಲೋಹಿತಾಕ್ಷ ತಮ್ಮ ಕಷ್ಟದ ಕೆಲಸದ ನಡುವೆಯೂ ನಿಷ್ಠೆಯಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರು.

ಆದರೆ ಈ ಹದಿನೈದು ವರ್ಷದಲ್ಲಿ ನಡೆಯದ ಅನೀರೀಕ್ಷಿತ ಅಪಘಾತವೊಂದು ಅವರ ಜೀವನದಲ್ಲಿ ನಡೆಯಿತು. ಅವರು ನಿಯಂತ್ರಿಸುತ್ತಿದ್ದ ಕ್ರೇನ್ ಅಕಸ್ಮಾತ್ತಾಗಿ ಅವರ ನಿಯಂತ್ರಣ ತಪ್ಪಿ ಹೊಂಡವೊಂದಕ್ಕೆ ಬಿದ್ದು ಪುಡಿಪುಡಿಯಾಯಿತು.ಏನೋ ದೇವರ ದಯೆ ಲೋಹಿತಾಕ್ಷ ಯಾವುದೇ ರೀತಿಯ ಅಪಾಯವಿಲ್ಲದೆ ಪಾರಾದರು. ಆದರೆ ಇಲ್ಲಿ ವಿಧಿ ಅವರ ಬೆನ್ನು ಬಿಡಲಿಲ್ಲ. ಮಾಲೀಕ ತನ್ನ ಕ್ರೇನ್ ಪುಡಿಯಾದ ಬಗ್ಗೆ ಇವರ ವಿರುದ್ಧವೇ ದೂರು ಕೊಟ್ಟ. ದೂರಿನ ಪ್ರಕಾರ ಹಿಂದು ಮುಂದು ನೋಡದೆ ಪೊಲೀಸರು ಇವರನ್ನು ಬಂಧಿಸಿ ಜೈಲಿಗೆ ತಳ್ಳಿದರು. ಹರಕೆಯ ಕುರಿಯಾದ ಲೋಹಿತಾಕ್ಷ:ವಾಸ್ತವವಾಗಿ ನೋಡುವುದಾದರೆ ಈ ಅಪಘಾತದಲ್ಲಿ ಲೋಹಿತಾಕ್ಷರದೇನೂ ತಪ್ಪಿಲ್ಲ. ನಡೆಯಬೇಕಾಗಿದ್ದ ಒಂದು ದುರ್ಘಟನೆ ಅನೀರೀಕ್ಷಿತವಾಗಿ ನಡೆದು ಹೋಗಿತ್ತು. ಆದರೆ ಇದರಲ್ಲಿ ಸುಮ್ಮನೆ ಲೋಹಿತಾಕ್ಷ ಬಲಿಪಶುವಾದರು. ಆನಂತರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕ್ರೇನ್ ಮಾಲೀಕನಿಗೆ ಪರಿಹಾರವಾಗಿ ಲೋಹಿತಾಕ್ಷ ಹತ್ತು ಲಕ್ಷ ರೂಪಾಯಿ ಅಂದರೆ ಎಂಬತ್ತು ಸಾವಿರ ರಿಯಾಲ್ ಪರಿಹಾರ ಕೊಡಬೇಕೆಂದು ತೀರ್ಪಾಯಿತು. ಹೇಳಿ ಕೇಳಿ ಲೋಹಿತಾಕ್ಷ ಕಡಿಮೆ ಸಂಬಳಕ್ಕೆ ದುಡಿಯುವ ಒಬ್ಬ ಬಡ ಕಾರ್ಮಿಕ . ಎಲ್ಲಿಂದ ಹೊಂದಿಸಿಯಾರು ಅಷ್ಟೊಂದು ದೊಡ್ಡ ಮೊತ್ತವನ್ನು ?. ಅದಲ್ಲದೆ ಎಂಟು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಇಂತಹವರಿಗೆ ಹತ್ತು ಲಕ್ಷ ರೂಪಾಯಿ ದಂಡ ಹಾಕಿದರೆ ಅವರು ಏನು ಮಾಡಿಯಾರು ? ಲೋಹಿತಾಕ್ಷ ಜೀವನದ ಆಸೆಯನ್ನೇ ಬಿಟ್ಟರು. ಒಮ್ಮೆ ಮನೆಗೆ ದೂರವಾಣಿ ಕರೆ ಮಾಡಿದ ಅವರು ತನ್ನ ಬರುವಿಕೆಯ ಬಗೆಗಿನ ಆಸೆಯನ್ನು ಬಿಟ್ಟುಬಿಡುವಂತೆ ಹೇಳಿದ್ದರಂತೆ.

ಆದರೆ ಈ ವಿಷಯ ತಿಳಿದ masa ದ ಅಧ್ಯಕ್ಷ ಮಾಧವ ಅಮೀನ್ ಜಾಗೃತರಾದರು.ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಸೇವೆಯಲ್ಲಿ ಸದಾ ಮುಂದೆ ನಿಲ್ಲುವ ಮಾಧವ ಅಮೀನ್ ತನ್ನ ಸಂಘಟನೆಯ ಉಪಾಧ್ಯಕ್ಷರಾದ ರವಿ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಹಾಗೂ ಪಧಾದಿಕಾರಿಗಳಾದ ಮಧುಕರ ದೇವಾಡಿಗ, ಬಾಬು ಕೋಟೆಬೆಟ್ಟು, ದಯಾನಂದ ಶ್ರೀಯಾನ್, ಅಲ್ ರಾಜಿ ಬ್ಯಾಂಕಿನ ವಸಂತ್ ಕುಮಾರ್ ಹೆಗ್ಡೆ ಅವರೊಂದಿಗೆ ಸೇರಿ ಈ ವಿಷಯದಲ್ಲಿ ಲೋಹಿತಾಕ್ಷರಿಗೆ ನೆರವಾಗಬೇಕೆಂದು ರಂಗಕ್ಕಿಳಿದರು. ಜೊತೆಗೆ ಇವರು ತಮ್ಮ ಸಂಘಟನೆಯ ಪರವಾಗಿ ಸ್ವಲ್ಪ ಮಟ್ಟಿಗಿನ ಹಣವನ್ನು ಸಂಗ್ರಹಿಸಿದರು. ಇವರ ಈ ಕೆಲಸವನ್ನು ಗಮನಿಸಿದ ಕರಾವಳಿಯ ಜನತೆ ಹಾಗೂ ಸಂಘ ಸಂಸ್ಥೆಗಳು ಇವರ ಬೆಂಬಲಕ್ಕೆ ನಿಂತು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣ ಸಂಗ್ರಹಿಸಿ ಕೊಟ್ಟವು. ರಿಯಾದ್ ಕರಾವಳಿ ಅಸೋಸಿಯೇಶನ್ ಅಧ್ಯಕ್ಷ ವಿಜಯ್ ರೈ, ರಿಯಾದ್ ಬಂಟರ ಸಂಘದ ಮೋಹನದಾಸ್ ಶೆಟ್ಟಿ, ಭಟ್ಕಳ ಸಮಾಜದ ಅರ್ಶದ್, ಜುಬೈರ್, ಫಯಾಜ್, ಮಂಗಳೂರಿನ ರೋಯಿಸ್ತನ್ ಪ್ರಭು ಹಾಗೂ ಇತರರು ತಮ್ಮ ಕೈಲಾದ ನೆರವು ನೀಡುವುದರ ಜೊತೆಗೆ ಈ ಕಾರ್ಯದಲ್ಲಿ ತಮ್ಮ ಸಹಕಾರವನ್ನೂ ಕೊಟ್ಟರು.

ಇತ್ತ ಸೌದಿ ಅರೇಬಿಯಾದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೆ ಅತ್ತ ಯು.ಎ.ಇ. ಯಲ್ಲಿ ಶೋಧನ್ ಪ್ರಸಾದ್ ಈ ವಿಷಯದಲ್ಲಿ ರಂಗಕ್ಕಿಳಿದಿದ್ದರು. ಮಿತ್ರ ಅಫ್ರೋಜ್ ಅಸ್ಸಾದಿ ಜೊತೆ ನಮ್ಮ ತುಳುವೆರ್, ದೇವಾಡಿಗ ಸಂಘ ಈ ಕಾರ್ಯದಲ್ಲಿ ಇವರ ಬೆಂಬಲಕ್ಕೆ ನಿಂತವು. ಈ ಎಲ್ಲಾ ಸಹೃದಯರ ನೆರವಿನಿಂದ ಕೊನೆಗೂ ಜೂನ್ ಎಂಟರಂದು ಲೋಹಿತಾಕ್ಷರ ಬಿಡುಗಡೆಯಾಯಿತು. ಲೋಹಿತಾಕ್ಷರನ್ನು ಆದರದಿಂದ ಬರಮಾಡಿಕೊಂಡ MASA ಸಂಘಟನೆಯ ಪಧಾದಿಕಾರಿಗಳು ಅವರನ್ನು ಎರಡೇ ದಿನಗಳಲ್ಲಿ ತಾಯ್ನಾಡಾದ ಮಂಗಳೂರಿಗೆ ಬೀಳ್ಕೊಟ್ಟರು. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದ ಒಬ್ಬ ಅನಿವಾಸಿ ಕನ್ನಡಿಗನ ನೆರವಿಗೆ ಧಾವಿಸಿದ MASA ದ ಪದಾಧಿಕಾರಿಗಳಿಗೆ ಅವರ ಬೆಂಬಲಕ್ಕೆ ನಿಂತ ಕೊಲ್ಲಿ ರಾಷ್ಟ್ರದ ಅನಿವಾಸಿ ಕನ್ನಡ ಸಂಘ ಸಂಸ್ಥೆಗಳಿಗೆ ಮತ್ತು ನಾಗರೀಕರಿಗೆ, ಈ ವಿಷಯವನ್ನು ಜನರ ಮುಂದೆ ತಂದ ದಾಯ್ಜಿ ವರ್ಲ್ಡ್ ತಂಡಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನ ಕರ್ತವ್ಯ ಎಂದರೂ ತಪ್ಪಾಗಲಾರದು.


- ಅಶ್ರಫ್ ಮಂಜ್ರಾಬಾದ್. ಸಕಲೇಶಪುರ

ಶುಕ್ರವಾರ, ಜೂನ್ 04, 2010

ನಕ್ಸಲ್ ಸಮಸ್ಯೆಗೆ ಪರಿಹಾರ ನಕ್ಸಲರ ಕೈಯಲ್ಲೇ ಇದೆ… !!!

ನಕ್ಸಲರ ಮೇಲೆ ಅನುಕಂಪ ತೋರಿಸುತ್ತಿರುವವರ ಮೇಲೆ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿರುವ ಬೆನ್ನಲ್ಲೇ ಈ ಬಗ್ಗೆ ವಿವಾದಗಳು ಆರಂಭವಾಗಿವೆ. ನಕ್ಸಲರ ಮೇಲೆ ಕ್ರಮಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿರುವ ಸರ್ಕಾರ ಈಗ ಅವರ ಮೇಲೆ ಅನುಕಂಪ ಹೊಂದಿರುವವರ ಮೇಲೆ ಕ್ರಮ ಕೈಗೊಳ್ಳಲು ಹೊರಟಿದೆ. ಈ ಬಗ್ಗೆ ಈಗಾಗಲೇ ದಾಂತೆವಾಡದ ದಂಡಕಾರಣ್ಯದಲ್ಲಿ ನಕ್ಸಲರೊಂದಿಗೆ ಕೆಲವು ದಿನಗಳನ್ನು ಕಳೆದು ಅವರ ಜೀವನದ ನೈಜ ಚಿತ್ರಣಗಳು ಅವರ ಉದ್ದೇಶಗಳನ್ನು ಪುಸ್ತಕ ರೂಪದಲ್ಲಿ ಹೊರತಂದ ಬೂಕರ್ ಪ್ರಶಸ್ತಿ ವಿಜೇತೆ, ಅಂತರಾಷ್ಟ್ರೀಯ ಖ್ಯಾತಿಯ ಕೇರಳ ಮೂಲದ ಲೇಖಕಿ ಆರುಂಧತಿ ರಾಯ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. ಜೊತೆಗೆ ಸರ್ಕಾರ ಇದಕ್ಕಾಗಿ ನನ್ನನ್ನು ಬಂಧಿಸುವುದಾದರೆ ಬಂಧಿಸಲಿ ಎಂಬ ನೇರ ಸವಾಲನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.



ನಕ್ಸಲರು ಯಾರೆಂದು ನೋಡಲು ಹೋದರೆ ಈ ವ್ಯವಸ್ಥೆಯ ದಬ್ಬಾಳಿಕೆಯಿಂದ ನರಳಿ ಕೊನೆಗೆ ಈ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಾಗಿ ಮಾವೋ ಚಿಂತನೆಗೆ ಅನುಸಾರವಾಗಿ ಬಂದೂಕನ್ನು ಕೈಗೆತ್ತಿಕೊಂಡು ಸಮಾಜವನ್ನು ಸರಿದಾರಿಗೆ ತರುತ್ತೇವೆ ಎಂದು ಹೊರಟ ಶೋಷಿತ ಮತ್ತು ದಮನಿತ ಸಮುದಾಯದ ಜನರು. ಆದರೆ ಈ ಹೋರಾಟದಿಂದ ಅವರು ಸಾಧಿಸಿದ್ದೇನು ಎಂದು ನೋಡಿದರೆ ಕಂಡು ಬರುವ ಫಲಿತಾಂಶ ಮಾತ್ರ ಶೂನ್ಯ. ಆದರೆ ಇತ್ತೀಚಿನ ನಕ್ಸಲ್ ಹೋರಾಟದ ದಿಕ್ಕನ್ನು ನೋಡಿದರೆ ಎಲ್ಲೋ ಒಂದು ಕಡೆ ಈ ಹೋರಾಟದ ದಿಕ್ಕು ತಪ್ಪಿದೆ ಮತ್ತು ತಪ್ಪುತ್ತಿದೆ ಎಂದು ಎನಿಸುವುದು ಸಾಮಾನ್ಯ. ಇದಕ್ಕೆ ಇತ್ತೀಚಿಗೆ ನಕ್ಸಲ್ ಹೆಸರಿನಲ್ಲಿ ಮುಗ್ಧ ನಾಗರೀಕರ ಮೇಲೆ ನಡೆಯುತ್ತಿರುವ ದಾಳಿ ಒಂದು ಉದಾಹರಣೆ ಎನ್ನಬಹುದು. ಸಮಾಜವನ್ನು ಸರಿದಾರಿಗೆ ತರಲು ನಕ್ಸಲರು ಎನಿಸಿಕೊಂಡಂತೆ ಬಂದೂಕಿನ ಹೋರಾಟದ ಮೂಲಕ ಖಂಡಿತ ಸಾಧ್ಯವಿಲ್ಲ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಲು ಅನೇಕ ಮಾರ್ಗಗಳಿವೆ.


ಸಂವಿಧಾನ ಶಿಲ್ಪಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಒಂದು ಪುಸ್ತಕದಲ್ಲಿ ಈ ರೀತಿ ಹೇಳಿದ್ದಾರೆ. Ballet is more powerful than bullet. ಅಂದರೆ ಮತಪತ್ರ (ಬ್ಯಾಲೆಟ್) ಬುಲೆಟ್ ಗಿಂತಲೂ ಶಕ್ತಿಶಾಲಿಯಾದದ್ದು ಎಂದು. ಒಂದು ಸರ್ಕಾರದ ಅಥವಾ ಒಂದು ವ್ಯವಸ್ಥೆಯ ವಿರುದ್ಧ ಹೋರಾಡಲು ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುವುದು ಒಂದು ಅತೀ ದೊಡ್ಡ ಅಸ್ತ್ರ . ಈ ಕಾರಣದಿಂದಲೇ ಅಂಬೇಡ್ಕರ್ ತನ್ನ ಅನುಯಾಯಿಗಳಿಗೆ ಮತ್ತು ಶೋಷಿತ ಜನರಿಗೆ ಶಿಕ್ಷಣ, ಸಂಘಟನೆ, ಹೋರಾಟ ಮತ್ತು ರಾಜ್ಯಾಧಿಕಾರದ ಕರೆಯನ್ನು ಕೊಟ್ಟರು. ಅಂಬೇಡ್ಕರ್ ಶೋಷಿತ ಸಮುದಾಯಗಳ ಎಲ್ಲಾ ಸಮಸ್ಯೆಗಳಿಗೆ ರಾಜ್ಯಾಧಿಕಾರದಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ನಂಬಿದ್ದರು.


ಇಂದಿನ ಈ ನಕ್ಸಲ್ ಹೋರಾಟಗಾರರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ ತಮ್ಮ ಬಂದೂಕನ್ನು ಬದಿಗಿಟ್ಟು ತಾವು ಇದುವರೆಗೆ ಬಹಿಷ್ಕರಿಸಿಕೊಂಡು ಬಂದಿದ್ದ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು. ಹಾಗಾದಾಗ ಮಾತ್ರ ನಕ್ಸಲರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇಲ್ಲದಿದ್ದರೆ ಅವರ ಈ ಹೋರಾಟ ಅರ್ಥಹೀನವಾಗಬಹುದು. ನಕ್ಸಲರ ವಿಚಾರಧಾರೆಗಳು ಮಾನವ ಮತ್ತು ಮಾನವೀತೆಯ ಪರ ಇದ್ದರೂ ಅವರ ಕೈಯಲ್ಲಿರುವ ಬಂದೂಕು ಅವರ ಹೋರಾಟವನ್ನು ನಿಷ್ಪ್ರಯೋಜಕಗೊಳಿಸಬಹುದು.ಈ ಕಾರಣದಿಂದಲೇ ಆರುಂಧತಿ ರಾಯ್ ತನ್ನ ಪುಸ್ತಕದಲ್ಲಿ ನಕ್ಸಲೀಯರನ್ನು ಬಂದೂಕು ಹಿಡಿದ ಆಧುನಿಕ ಗಾಂಧಿಗಳು ಎಂದು ವರ್ಣಿಸಿರಬಹುದು. ಒಂದು ಸರ್ಕಾರ ಮನಸ್ಸು ಮಾಡಿದರೆ ನಕ್ಸಲರನ್ನು ಮಣ್ಣು ಮುಕ್ಕಿಸುವುದು ಅಷ್ಟು ಕಷ್ಟವೇನಲ್ಲ. ಆದರೆ ಅದರಿಂದ ಮುಗ್ಧ ನಾಗರೀಕರ ಹತ್ಯೆ ಆಗಬಹುದು ಎಂಬ ಆಘಾತಕಾರಿ ಅಂಶವೂ ಸತ್ಯವೇ ಆಗಿದೆ. ನಕ್ಸಲರು ಸ್ವತಹ ಸಮಾಜದ ಮುಖ್ಯವಾಹಿನಿಗೆ ಬಂದು ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಬೇಕೇ ಹೊರತು ಕಾಡಿನೊಳಗೆ ಕುಳಿತು ಮುಗ್ಧ ನಾಗರೀಕರನ್ನು ಸರ್ಕಾರದ ವಿರುದ್ಧ ದಾಳವಾಗಿ ಬಳಸಿಕೊಳ್ಳುವುದರ ಮೂಲಕ ಅಲ್ಲ.



– ಅಶ್ರಫ್ ಮಂಜ್ರಾಬಾದ್.

ಆಶ್ರಮದಲ್ಲಿನ ಗುಂಡಿನ ದಾಳಿಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ.

ಬೆಂಗಳೂರಿನ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆಶ್ರಮದಲ್ಲಿ ನಡೆದ ಗುಂಡಿನ ದಾಳಿ ಮತ್ತು ಆನಂತರ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳು ಸಾರ್ವಜನಿಕ ವಲಯದಲ್ಲಿ ಒಂದು ರೀತಿಯ ಸಂಶಯದ ಮುಳ್ಳನ್ನು ಬಿತ್ತಿದೆ. ರವಿಶಂಕರ ಗುರೂಜಿ ಲಕ್ಷಾಂತರ ಭಕ್ತರನ್ನು ದೇಶ ವಿದೇಶಗಳಲ್ಲಿ ಒಳಗೊಂಡಿರುವಂತಹ ಆಧ್ಯಾತ್ಮಿಕ ಧರ್ಮಗುರುಗಳು. ಅಲ್ಲದೆ ಸದಾ ಯಾವಾಗಲೂ ಶಾಂತಿಯ ಮಂತ್ರವನ್ನು ಜಪಿಸುತ್ತಿರುವಂತಹವರು. ಅಂತಹವರ ಆಶ್ರಮದಲ್ಲಿ ನಡೆದ ಗುಂಡಿನ ದಾಳಿ ಈ ನಾಡಿನ ಶಾಂತಿಯ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ.


ಆದರೆ ಇದಕ್ಕೆ ಕಾರಣವೇನೂ ಎಂಬುವುದು ಇನ್ನೂ ಸ್ಪಷ್ಟವಾಗದಿದ್ದರೂ ಹಲವು ರೀತಿಯ ಸಂಶಯಗಳನ್ನು ಮಾತ್ರ ಹುಟ್ಟು ಹಾಕಿದೆ. ಅದೂ ಅಲ್ಲದೆ ಸ್ವಾಮೀಜಿ ಕಾರಿನಲ್ಲಿ ತೆರಳಿದ ನಂತರ ನಡೆದ ಈ ಗುಂಡು ಹಾರಾಟದ ಉದ್ದೇಶ ಸ್ವಾಮೀಜಿಯನ್ನು ಕೊಲ್ಲುವ ಉದ್ದೇಶದಿಂದ ನಡೆಸಿದ ದಾಳಿ ಅಲ್ಲ ಎಂಬುವುದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಕೊಂಡ ಸತ್ಯ.
ಈಗಂತೂ ಸ್ವತಹ ಸ್ವಾಮೀಜಿಯೇ ಝಡ್‌ಪ್ಲಸ್ ಭದ್ರತೆ ಪಡೆಯಲು ಈ ದಾಳಿಯ ನಾಟಕ ಹಮ್ಮಿಕೊಂಡಿದ್ದರು ಎಂಬುವುದು ಕೆಲ ಮೂಲಗಳಿಂದ ತಿಳಿದು ಬರುತ್ತಿರುವುದು ಒಂದು ರೀತಿಯ ಆಶ್ಚರ್ಯಕರ ಸುದ್ಧಿ . ಹೀಗಾದರೆ ಇದು ಮಾತ್ರ ಅತ್ಯಂತ ಖಂಡನೀಯ.


ಇತ್ತೀಚಿಗೆ ಸ್ವಾಮೀಜಿಗಳಿಗೆ ಝಡ್‌ಪ್ಲಸ್ ಭದ್ರತೆ ಮತ್ತು ಕೆಂಪು ದೀಪದ ಕಾರು ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಅನೇಕ ಸ್ವಾಮೀಜಿಗಳು ಈ ರೀತಿಯ ಕೆಂಪು ದೀಪದ ಕಾರಿನಲ್ಲಿ ಓಡಾಡುತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಅದನ್ನು ಕಂಡೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿದೆ. ಹೀಗಿರುವಾಗ ರವಿಶಂಕರ್ ಗುರೂಜಿ ತನ್ನ ಬಹುದಿನಗಳ ಕೋರಿಕೆಯಾದ ಝಡ್‌ಪ್ಲಸ್ ಭದ್ರತೆ ಪಡೆಯಲು ಈ ರೀತಿ ದಾಳಿಯ ನಾಟಕ ನಡೆಸಿದ್ದಾರೆ ಎಂದು ಕಂಡು ಬಂದರೆ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವೇ ಈ ದಾಳಿ ಬೇರೆ ಯಾರಿಂದಾದರೂ ನಡೆದಿದ್ದಲ್ಲಿ ಅವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಈ ಎಲ್ಲಾ ವಿಷಯ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ. ಸರ್ಕಾರ ಅದನ್ನು ಆದಷ್ಟು ಬೇಗ ಮಾಡಿ ಮುಗಿಸಲಿ.


- ಅಶ್ರಫ್ ಮಂಜ್ರಾಬಾದ್.

ಶುಕ್ರವಾರ, ಮೇ 28, 2010

ಓ ದೇವರೇ ಈ ರೀತಿಯ ದುರಂತದ ಮರಣ ಇನ್ನಾರಿಗೂ ಬರದಿರಲಿ..


ಮಂಗಳೂರಿನಲ್ಲಿ ನಡೆದ ದುಬಾಯಿ - ಮಂಗಳೂರು ನಡುವೆ ಸಂಚರಿಸುವ ಏರ್ ಇಂಡಿಯಾ ವಿಮಾನದ ಅಪಘಾತ ಎಂತಹವರ ಮನಸ್ಸನ್ನೂ ನೋಯಿಸುವಂತಹದ್ದು. ಹಲವಾರು ಕನಸುಗಳನ್ನು ಹೊತ್ತು ಊರಿಗೆ ಹಿಂದಿರುಗುತ್ತಿದ್ದ ಅನಿವಾಸಿ ಭಾರತೀಯರು ಊರು ತಲುಪಿದರೂ ಮನೆ ತಲುಪಲಾಗದೆ ದುರಂತದ ಬೆಂಕಿಯಲ್ಲಿ ಬೆಂದು ತಮ್ಮವರಿಗೂ ತಮ್ಮ ಗುರುತು ಸಿಗಲಾರದಂತೆ ಸುಟ್ಟು ಕರಕಲಾಗಿ ಹೋಗಿದ್ದರು.



ಹೇಳಿ ಕೇಳಿ ಮಂಗಳೂರು ವಿಮಾನ ನಿಲ್ದಾಣ ಅಷ್ಟೇನೂ ಸುರಕ್ಷಿತವಲ್ಲದ ಬೆಟ್ಟ ಗುಡ್ಡಗಳ ನಡುವೆ ನಿರ್ಮಿಸಿದ ಕಿರಿದಾದ ರನ್ ವೇ ಯನ್ನು ಒಳಗೊಂಡ ಅಪಾಯಕಾರಿ ವಿಮಾನ ನಿಲ್ದಾಣ. ಇದು ಅಲ್ಲಿ ವಿಮಾನದ ಮೂಲಕ ಬಂದಿಳಿದವರಿಗೆ ಸಾಮಾನ್ಯವಾಗಿ ಅನುಭವವಾಗಿರುತ್ತದೆ. ವಿಮಾನ ಇಳಿಯುತ್ತಿದ್ದಂತೆ ಕಾಣುವ ಬೆಟ್ಟಗುಡ್ಡಗಳನ್ನೊಳಗೊಂಡ ವಿಮಾನ ನಿಲ್ದಾಣದ ನೋಟ ಪ್ರಯಾಣಿಕರ ಎದೆ ಜುಂ ಎನಿಸುತ್ತದೆ. ವಿಮಾನ ಭೂಸ್ಪರ್ಶವಾಗುತ್ತಿದ್ದಂತೆ ಅಲ್ಲಿ ಹಾಕುವ ಬ್ರೇಕ್ ಒಮ್ಮೆಲೇ ವಿಮಾನದ ಒಳಗಿರುವ ಪ್ರಯಾಣಿಕರನ್ನು ಎತ್ತಿನಗಾಡಿಯ ಪ್ರಯಾಣದ ನೆನಪಿಗೆ ಕೊಂಡು ಹೋಗುತ್ತದೆ. ಬ್ರೇಕ್ ಹಾಕುವಾಗ ವಿಮಾನದ ಒಳಗೆ ಅಲುಗಾಡುವ ಪರಿ ಅಂತಹದ್ದು. ಇದು ಈ ರನ್ ವೇ ಎಷ್ಟು ಅಪಾಯಕಾರಿ ಎಂಬುವದನ್ನು ಪ್ರಾಯೋಗಿಕವಾಗಿಯೇ ನಮ್ಮ ಮುಂದೆ ತೆರೆದಿಡುತ್ತದೆ. ನನ್ನ ಅನುಭವದ ಪ್ರಕಾರ ನಾನು ಅಬುಧಾಬಿ, ಶಾರ್ಜಾ, ಬೆಂಗಳೂರು, ಮುಂಬೈ, ರಿಯಾದ್, ತಬೂಕ್, ಮಂಗಳೂರು ವಿಮಾನ ನಿಲ್ದಾಣಗಳ ರನ್ ವೇ ಗಳಲ್ಲಿ ವಿಮಾನದ ಮೂಲಕ ಇಳಿದಿದ್ದೇನೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಗುವಂತಹ ಅನುಭವವೇ ಬೇರೇ.



ನನ್ನ ಪ್ರಕಾರ ಇದು ನನ್ನ ಒಬ್ಬನ ಅನುಭವವಲ್ಲ. ಸಾಧಾರಣ ಪ್ರಯಾಣಿಕರಿಗೆ ಇದರ ಅನುಭವವಾಗಿರುತ್ತದೆ. ಮೊನ್ನೆ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಮುಂಬೈ ಮೂಲದ ಗಗನ ಯಾತ್ರಿ ಈ ನಿಲ್ದಾಣದ ಅಪಾಯಕಾರಿ ರನ್ ವೇ ಬಗ್ಗೆ ತನ್ನ ಪೋಷಕರಲ್ಲಿ ಹೇಳಿ ಇಲ್ಲಿ ವಿಮಾನದ ಲ್ಯಾಂಡಿಂಗ್ ಮೊದಲು ಗಗನ ಸಖಿಯರಾದ ನಾವು ವಿಮಾನದ ಸುರಕ್ಷಿತ ಲ್ಯಾಂಡಿಂಗ್ ಗಾಗಿ ದೇವರಲ್ಲಿ ಪ್ರಾರ್ಥಿಸುತಿದ್ದೆವು ಎಂದು ಹೇಳಿದ ವಿಚಾರವನ್ನು ಆಕೆಯ ಶವ ಪಡೆಯಲು ಬಂದ ಆಕೆಯ ಪೋಷಕರು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಇದು ಈ ರನ್ ವೇಯ ಅಪಾಯಕಾರಿ ಮಟ್ಟವನ್ನು ಸೂಚಿಸುತ್ತದೆ.


ದುರಂತ ನಡೆದ ನಂತರ ವಿಮಾನ ನಿಲ್ದಾಣದ ಸುರಕ್ಷತಾ ವಿಭಾಗದ ಅಧಿಕಾರಿಗಳು ಹಾಗೂ ನೌಕರರು ಕೈಗೊಂಡ ಪರಿಹಾರ ಕ್ರಮಗಳು ಸಕಾಲಿಕವಾಗಿ ಜರುಗಿದ್ದರೆ ಇನ್ನೂ ಅನೇಕ ಜೀವಗಳನ್ನು ಉಳಿಸಬಹುದಿತ್ತು ಎಂಬುವುದು ದುರಂತ ನಡೆದ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ದುರಂತ ಸ್ಥಳಕ್ಕೆ ಓಡಿ ಹೋದ ಸ್ಥಳೀಯ ನಾಗರೀಕರ ಅಭಿಪ್ರಾಯ. ಅವರ ಪ್ರಕಾರ ವಿಮಾನ ಬಿದ್ದ ಹತ್ತು ನಿಮಿಷಗಳಲ್ಲಿ ವಿಮಾನ ನಿಲ್ದಾಣದ ರನ್ ವೇ ಮೇಲಿನಿಂದ ಎರಡು ಅಗ್ನಿಶಾಮಕ ವಾಹನಗಳು ನೊರೆಭರಿತ ನೀರನ್ನು ವಿಮಾನದ ಮೇಲೆ ಸಿಂಪಡಿಸಿದವು. ಆದರೆ ಅವು ವಿಮಾನವನ್ನು ತಲುಪಲೇ ಇಲ್ಲ . ಕೊನೆಗೆ ಅವು ಹಿಂತಿರುಗಿ ಹೋಗಿ ಇನ್ನೊಂದು ದಾರಿಯ ಮೂಲಕ ಸುಮಾರು ಇಪ್ಪತ್ತು ನಿಮಿಷದ ದುರ್ಗಮ ಹಾದಿಯ ಮೂಲಕವಾಗಿ ದುರಂತ ಸ್ಥಳಕ್ಕೆ ಬಂದವು. ಆನಂತರ ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಮತ್ತು ಕೆಲವು ಶವಗಳನ್ನು ಹೊರಗೆ ಎಳೆಯಲು ಸಾಧ್ಯವಾಯಿತು. ಇಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಸುರಕ್ಷತಾ ಕ್ರಮಗಳ ಲೋಪ ಮತ್ತು ಅವು ಅಳವಡಿಸಿಕೊಂಡ ಅವೈಜ್ಞಾನಿಕ ರೀತಿಯ ವ್ಯವಸ್ಥೆ ಎದ್ದು ಕಾಣುತ್ತದೆ. ಬೆಟ್ಟ ಗುಡ್ಡಗಳ ನಡುವೆ ಇರುವ ವಿಮಾನ ನಿಲ್ದಾಣ ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವಿಮಾನ ಗುಂಡಿಗೆ ಬೀಳುವ ಸಾಧ್ಯತೆಯೇ ಅಧಿಕ .


ಈ ಮುಂಚೆ ವೀರಪ್ಪ ಮೊಯ್ಲಿ ಪ್ರಯಾಣಿಸಿದ ವಿಮಾನ ಸಹ ಈ ರೀತಿ ಗುಂಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಅವರ ಜೀವ ಉಳಿದಿತ್ತು. ಅಂದು ಕೂಡ ಅದು ತಡೆಗೋಡೆಗೆ ಡಿಕ್ಕಿ ಹೊಡೆಯದಿದ್ದರೆ ಅವರೂ ಕೂಡ ವಿಮಾನದೊಟ್ಟಿಗೆ ಗುಂಡಿಗೆ ಬೀಳುತಿದ್ದರು. ಈ ಎಲ್ಲಾ ಘಟನೆಗಳನ್ನು ಅವರು ಈ ದುರಂತ ನಡೆಯುವ ಒಂದು ವಾರ ಮೊದಲು ನಡೆದ ನೂತನ ರನ್ ವೇಯ ಉದ್ಘಾಟನೆಯಲ್ಲೂ ನೆನಪಿಸಿಕೊಂಡಿದ್ದರು. ಹೀಗಿರುವಾಗ ವಿಮಾನ ನಿಲ್ದಾಣದ ಮೇಲಿನಿಂದ ಅಗ್ನಿಶಾಮಕ ವಾಹನಗಳು ಹಾರಿಸಿದ ನೊರೆಭರಿತ ನೀರು ಕೆಳಗಿದ ವಿಮಾನಕ್ಕೆ ತಲುಪಿಲ್ಲ ಅಂದರೆ ಇಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು ಎಷ್ಟೊಂದು ಅವೈಜ್ಞಾನಿಕ ಎನ್ನುವುದನ್ನು ಸೂಚಿಸುತ್ತದೆ. ಅದಲ್ಲದೆ ಪರ್ಯಾಯ ದಾರಿ ಇಲ್ಲದೆ ಇದ್ದ ಕಚ್ಚಾ ರಸ್ತೆಯನ್ನು ಬಳಸಿಕೊಂಡು ಬರಲು ತೆಗೆದು ಕೊಂಡ ಅಮೂಲ್ಯ ಇಪ್ಪತ್ತು ನಿಮಿಷವೂ ಸಹ ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂಬುವುದು ಪ್ರತ್ಯಕ್ಷದರ್ಶಿಗಳ ಸ್ಪಷ್ಟ ಅಭಿಪ್ರಾಯ.


ದುರಂತವೇನೋ ನಡೆದಿದೆ. ಇದಕ್ಕೆ ಕಾರಣ ಬ್ಲಾಕ್ ಬಾಕ್ಸಿನ ವರದಿ ಬಂದ ನಂತರ ಸ್ಪಷ್ಟವಾಗಿ ತಿಳಿಯಲಿದೆ. ಆದರೆ ಈ ರೀತಿಯ ದುರಂತ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಜೊತೆಗೆ ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ. ದುರಂತದಲ್ಲಿ ಮಡಿದ ಅಮಾಯಕ ನಾಗರೀಕರಿಗೆ ಅಲ್ಲಲ್ಲಿ ಶೋಕ ಸಭೆಗಳು ನಡೆಯುತ್ತಿದೆ. ಸಭೆ ಸಮಾರಂಭಗಳ ಮೂಲಕ ಜನತೆ ಅವರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ದುರಂತದ ಬಗ್ಗೆ ಮತ್ತು ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತವಾದ ತನಿಖೆ ನಡೆದು ಮೃತರ ಕುಟುಂಬಸ್ಥರಿಗೆ ಯಾವುದೇ ಅಡಚಣೆ ಇಲ್ಲದೆ ಪರಿಹಾರ ದೊರಕಿಸಿಕೊಟ್ಟರೆ ಅದು ಮಾತ್ರ ಮೃತರಿಗೆ ಸಲ್ಲಿಸುವ ನೈಜ ಶ್ರದ್ದಾಂಜಲಿಯಾಗಬಹುದು.



- ಅಶ್ರಫ್ ಮಂಜ್ರಾಬಾದ್. ಸಕಲೇಶಪುರ.

ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಮತ್ತು ಮುಸ್ಲಿಂ ಮೀಸಲಾತಿ ..


ಆಂಧ್ರ ಹೈಕೋರ್ಟ್ ಆಂಧ್ರ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ನೀಡಲು ಉದ್ದೇಶಿಸಿದ್ದ ಶೇಕಡ ನಾಲ್ಕರ ಮೀಸಲಾತಿಯನ್ನು ರದ್ದು ಪಡಿಸುತಿದ್ದಂತೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟ್ ಸರಕಾರ ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇಕಡ ಹತ್ತರಷ್ಟು ಮೀಸಲಾತಿಯನ್ನು ನೀಡುವುದಾಗಿ ಪ್ರಕಟಿಸಿದೆ. ಸಾಚಾರ್ ಸಮಿತಿಯ ಜಾರಿಗೆ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಕೆಲ ಪ್ರಗತಿಪರ ಮಾನವ ಹಕ್ಕು ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿರುವಂತೆ ಪಶ್ಚಿಮ ಬಂಗಾಳದ ಅಪ್ಪಟ ಧರ್ಮ ನಿರಪೇಕ್ಷ ಕಮ್ಯುನಿಷ್ಟ್ ಸಿದ್ಧಾಂತದ ಸರಕಾರ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಪ್ರಕಟಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಒಂದು ರೀತಿಯ ಕುತೂಹಲದ ಜೊತೆಗೆ ವಿವಾದವನ್ನೂ ಮೂಡಿಸಿದೆ.


ಆಶ್ಚರ್ಯ ಆಗುವುದು ಅದಲ್ಲ. ಇದುವರೆಗೆ ಸುಮಾರು ಮೂರು ದಶಕಗಳ ಕಾಲ ನಿರಂತರವಾಗಿ ಪಶ್ಚಿಮ ಬಂಗಾಳದ ಗದ್ದುಗೆಯನ್ನಾಲಿದ ಈ ಸರ್ಕಾರ ಇದುವರೆಗೆ ಮುಸ್ಲಿಂ ಮೀಸಲಾತಿಯ ಬಗ್ಗೆ ಸೊಲ್ಲೆತ್ತದೆ ಈಗ ಏಕಾಏಕಿ ಮೀಸಲಾತಿ ನೀಡುವುದಾಗಿ ಘೋಷಿಸಿರುವುದು. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿದೆ. ಕಮ್ಯುನಿಷ್ಟರ ಭದ್ರ ಕೋಟೆಗಳು ಮಮತಾ ಬ್ಯಾನರ್ಜಿಯ ವರ್ಚಸ್ಸಿನ ಮುಂದೆ ಈಗಾಗಲೇ ಅಲುಗಾಡತೊಡಗಿವೆ. ಬಂಡವಾಳಶಾಹಿಗಳ ವಿರೋಧಿಗಳಾಗಿದ್ದ ಕಮ್ಯುನಿಷ್ಟರು ನಂದಿ ಗ್ರಾಮದಲ್ಲಿ ಟಾಟಾ ಕಂಪೆನಿಯ ನ್ಯಾನೋ ಘಟಕಕ್ಕೆ ರೈತರ ಫಲವತ್ತಾದ ಜಾಗ ಕೊಡುವ ಭರದಲ್ಲಿ ಅಲ್ಲಿನ ರೈತರ ಮೇಲೆ ನಡೆಸಿದ ಅಧಿಕಾರಿಕ ದಾಳಿ ಇದೆಯಲ್ಲ ಅದು ಇಡೀ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ವಿರೋಧಿ ಅಲೆಯನ್ನು ಎಬ್ಬಿಸಿದೆ. ಅದೂ ಅಲ್ಲದೆ ನಂದಿಗ್ರಾಮ ಮುಸ್ಲಿಂ ಬಾಹುಳ್ಯದ ಪ್ರದೇಶ. ಅಲ್ಲಿ ಪೋಲಿಸ್ ದೌರ್ಜನ್ಯದಿಂದ ಸಂತ್ರಸ್ತರಾದವರು ಮತ್ತು ಸತ್ತವರಲ್ಲಿ ಹೆಚ್ಚಿನವರು ಮುಸ್ಲಿಮರು. ಇದು ಸಹಜವಾಗಿ ಮುಸ್ಲಿಮರನ್ನು ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ. ಜೊತೆಗೆ ಸಾಚಾರ್ ಸಮಿತಿಯ ವರದಿಯಲ್ಲಿ ದೇಶದಲ್ಲೇ ಮುಸ್ಲಿಮರು ಅತೀ ಹೆಚ್ಚು ಹಿಂದುಳಿದಿರುವ ರಾಜ್ಯ ಪಶ್ಚಿಮ ಬಂಗಾಳ ಎಂದು ಸ್ಪಷ್ಟವಾಗಿ ಹೇಳಿರುವುದು ಇದುವರೆಗೆ ಅಲ್ಲಿನ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೈಗೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಅನುಷ್ಠಾನಕ್ಕೆ ವಹಿಸಿದ ಮುತುವರ್ಜಿಯನ್ನು ನೇರವಾಗಿ ಜನರ ಮುಂದೆ ತೆರೆದಿಟ್ಟಿದೆ.


ಇವೆಲ್ಲಾ ಕಳೆದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಕಮ್ಯುನಿಷ್ಟರು ನಿರಂತರವಾಗಿ ಗೆದ್ದು ಬರುತಿದ್ದ ಸ್ಥಾನಗಳಲ್ಲಿ ಕಮ್ಯುನಿಷ್ಟ್ ವಿರೋಧಿಗಳಾದ ಮಮತಾ ಬ್ಯಾನರ್ಜಿಯ ತಂಡ ಭರ್ಜರಿ ಜಯ ದಾಖಲಿಸಿದೆ. ಜೊತೆಗೆ ಮಾವೋವಾದಿಗಳೂ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲಿನ ಭೂಸ್ವಾಧೀನ ಪ್ರಕ್ರಿಯೆ ಸ್ವಲ್ಪ ಮಟ್ಟಿಗೆ ಕಮ್ಯುನಿಷ್ಟ್ ಸಿದ್ಧಾಂತದ ಅಡಿ ಬೇರುಗಳಂತಹ ನಾಯಕರನ್ನೇ ಪಕ್ಷದಿಂದ ದೂರ ಹೋಗುವಂತೆ ಮಾಡಿದೆ. ಹೀಗೆಲ್ಲಾ ಇರುವಾಗ ಪುನಃ ಪಕ್ಷದತ್ತ ಮುಸ್ಲಿಮರನ್ನು ಸೆಳೆಯಲು ಸಿಕ್ಕ ಅಸ್ತ್ರವೇ ಶೇಕಡಾ ಹತ್ತರ ಮೀಸಲಾತಿ.


ಯಾವುದೇ ಸಮುದಾಯಕ್ಕೆ ಮೀಸಲಾತಿ ಕೊಡುವುದು ತಪ್ಪಲ್ಲ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರಿಗೆ ಮೀಸಲಾತಿ ನೀಡುತ್ತಾ ಹೇಳಿದ್ದರು ಮೀಸಲಾತಿ ಶೋಷಿತ ಜನಾಂಗಕ್ಕೆ ಭಿಕ್ಷೆ ಅಲ್ಲ. ಅದು ಅವರ ಹಕ್ಕು ಎಂದು. ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯವನ್ನು ಮೇಲೆತ್ತಲು ಮೀಸಲಾತಿ ಅವಶ್ಯಕ. ಅದು ಆಯಾ ಜನಸಂಖ್ಯೆಯ ಪ್ರಮಾಣಕ್ಕೆ ಅನುಸರಿಸಿ ಆಗಿರಬೇಕು. ಆದರೆ ಅದು ಭಾರತದಲ್ಲಿ ಇದುವರೆಗೆ ಆಗಿಲ್ಲ. ಶೇಕಡಾ ೪೦ ರಷ್ಟಿರುವ ದಲಿತರಿಗೆ ಶೇಕಡಾ ೪೦ ರಷ್ಟು ಮೀಸಲಾತಿ ಕೊಟ್ಟರೆ ಶೇ ೧೩ ರಷ್ಟಿರುವ ಮುಸ್ಲಿಮರಿಗೆ ಶೇ ೧೩ ರಷ್ಟು ಶೇ ೪ ರಷ್ಟಿರುವ ಬ್ರಾಹ್ಮಣರಿಗೆ ಶೇ ೪ ರಷ್ಟು ಶೇ ೨೨ ರಷ್ಟಿರುವ ಹಿಂದುಳಿದವರಿಗೆ ಶೇ ೨೨ ರಷ್ಟು ಶೇ ೨ ರಷ್ಟಿರುವ ಕ್ರೈಸ್ತರಿಗೆ ಶೇ ೨ ರಷ್ಟು ಹೀಗೆ ಆಯಾ ಜಾತಿಯ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಕೊಡಬೇಕು. ಅದು ನ್ಯಾಯ ಕೂಡ. ಆ ಮೂಲಕ ಸಮಾಜದ ಎಲ್ಲಾ ವರ್ಗಗಳು ತಮ್ಮ ಪಾಲನ್ನು ಪಡೆಯಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ಈಗ ನಡೆಯುತ್ತಿರುವ ಮೀಸಲಾತಿ ರಾಜಕೀಯ ಇದೆಯಲ್ಲ ಅದು ನಂದಿ ಗ್ರಾಮ ಘಟನೆಯಿಂದ ದೂರ ಹೋದ ಮುಸ್ಲಿಮರನ್ನು ಪಕ್ಷಕ್ಕೆ ಸೆಳೆಯುವ ತಂತ್ರವೇ ಹೊರತು ಇನ್ನೇನೂ ಅಲ್ಲ.



- ಅಶ್ರಫ್ ಮಂಜ್ರಾಬಾದ್.

ಮರುಭೂಮಿಯ ನಡುವಿನಲ್ಲಿ ಕನ್ನಡಿಗನ ಸಾಹಿತ್ಯ ಪ್ರೇಮ ..


ಶ್ರೀ ಎಜಾಸುದ್ದೀನ್. ವಿಶ್ವ ಕನ್ನಡಿಗರ ಒಕ್ಕೂಟದ ಸಕ್ರಿಯ ಸದಸ್ಯ ಮತ್ತು ಉತ್ತಮ ಬರಹಗಾರ ಕೂಡ. ಇವರು ಮೂಲತಃ ಮಂಗಳೂರಿನವರು. ಇವರ ಮಾತೃಭಾಷೆ ಬ್ಯಾರಿ, ಇವರ ಕನ್ನಡದ ಜ್ಞಾನ ಹೈಸ್ಕೂಲು ವರೆಗಿನದ್ದು , ಅರಬೀ ಬಾಷೆಯಲ್ಲಿ ಪದವೀಧರ. ಜೊತೆಗೆ ಉರ್ದು ಭಾಷೆಯಲ್ಲಿ ಉತ್ತಮ ಪಾಂಡಿತ್ಯವನ್ನೂ ಹೊಂದಿದ್ದಾರೆ. ಇವರ ಪ್ರಕಾರ ಕನ್ನಡದ ಜೊತೆಗೆ ಉರ್ದು ಸಹ ಇವರ ಇಷ್ಟದ ಭಾಷೆ.ಉದ್ಯೋಗ ನಿಮಿತ್ತ ಈಗ ಕುವೈತಿನಲ್ಲಿ ನೆಲೆಸಿರುವ ಇವರು ಕುವೈತಿನಿಂದ ಹೊರಡುವ ಒಂದು ಉರ್ದು ಮಾಸಿಕದ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸುತಿದ್ದಾರೆ.




ಇವರು ಹೇಳಿಕೊಳ್ಳುವಂತೆ ಇವರಿಗೆ ಹೆಚ್ಚಾಗಿ ಕನ್ನಡದಲ್ಲಿ ಬರೆಯುವ ಅನುಭವವಿಲ್ಲ .ತೀರಾ ಇತ್ತೀಚೆಗಷ್ಟೇ ಕನ್ನಡದಲ್ಲಿ ಬರೆಯಲಾರಂಭಿಸಿದ್ದು ಅದೂ ಸುಮಾರು ಇಪ್ಪತ್ತು ವರ್ಷಗಳ ವಿಯೋಗದ ಬಳಿಕ ಎಂದು ಹೇಳುವ ಇವರ ಕನ್ನಡ ಬರಹ ಮತ್ತು ಅದರಲ್ಲಿರುವ ಬರವಣಿಗೆಯ ಶೈಲಿಯನ್ನು ನೋಡಿದರೆ ನಿಜಕ್ಕೂ ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಜ್ಞಾನದ ಬೆಳಕಿನಲ್ಲಿ ಅಜ್ಞಾನದ ಕತ್ತಲನ್ನು ದೂರಮಾಡಿ ಒಂದು ಆರೋಗ್ಯಪೂರ್ಣ ಸ್ವಸ್ಥ ಸಮಾಜದ ಸ್ಥಾಪನೆಯಲ್ಲಿ ನನ್ನದೂ ಪಾಲು ಇರಲಿ ಎಂಬ ಉದ್ದೇಶದೊಂದಿಗೆ ಇವರು ದೂತ ಎಂಬ ಬ್ಲಾಗ್ ಒಂದನ್ನು ರಚಿಸಿದ್ದಾರೆ . ಇಂತಹ ಒಂದು ಕನ್ನಡ ಸಾಹಿತ್ಯ ಪ್ರೇಮಿ ನಮ್ಮ ಒಕ್ಕೂಟದ ಸದಸ್ಯನಾಗಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ.ಇವರ ಬರಹಗಳನ್ನು ಓದಲು ಇವರ ಬ್ಲಾಗ್ http://ipcblogger.net/ijaz/ ಗೆ ಭೇಟಿ ಕೊಡಿ

ಬುಧವಾರ, ಜನವರಿ 13, 2010

ರಮ್ಯಾ,ರಾಜು ಶೆಟ್ಟರ ರೊಮ್ಯಾಂಟಿಕ್ ಪ್ರಣಯದಲ್ಲಿ ಅನಾಥೆಯಾದ ಸಫಿಯಾ...




ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜೊತೆಗೆ ಹಲವು ರೀತಿಯ ಪ್ರತಿಭಟನೆಗಳಿಗೆ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನರಿಂಗಾನ ಗ್ರಾಮದ ಪೊಟ್ಟೋಲಿಕೆಯ ರಮ್ಯಾ ಶೆಟ್ಟಿ ಮತ್ತು ಮೂರು ಮಕ್ಕಳ ತಂದೆ ಮೇಸ್ತ್ರಿ ಮಹಮ್ಮದ್ ಆಲಿಯಾಸ್ ರಾಜು ಶೆಟ್ಟಿಯವರ ಪ್ರೇಮ ಮತ್ತು ಪಾಲಾಯನ ಪ್ರಕರಣ ಅವರನ್ನು ವಿಚಿತ್ರ ತಿರುವಿನೊಂದಿಗೆ ಪತ್ತೆ ಹಚ್ಚುವುದರೊಂದಿಗೆ ಅಂತ್ಯ ಕಂಡಿದೆ.

ಮುಸಲ್ಮಾನನಾಗಿದ್ದ ಮಹಮ್ಮದ್ ರಮ್ಯಳಿಗಾಗಿ ತನ್ನ ಧರ್ಮವನ್ನು ತ್ಯಜಿಸಿ ಹಿಂದೂ ಆಗಿದ್ದಾನೆ. ಜೊತೆಗೆ ತನ್ನ ಹೆಂಡತಿ ಮಕ್ಕಳನ್ನೂ ತ್ಯಜಿಸಿದ್ದಾನೆ. ಇದು ಪ್ರೀತಿಯ ಮಹಿಮೆಯೋ ಅಥವಾ ಇನ್ನೇನೋ ಗೊತ್ತಿಲ್ಲ. ರಮ್ಯ ನಾನು ಇನ್ನು ಮುಂದೆ ರಾಜು ಶೆಟ್ಟಿಯೊಂದಿಗೆ ಬಾಳ್ವೆ ನಡೆಸುವುದಾಗಿಯೂ ನಾವು ಸುಬ್ರಮಣ್ಯ ದೇವಸ್ಥಾನದಲ್ಲಿ ವಿವಾಹವಾಗಿರುವುದಾಗಿಯೂ ನನಗಾಗಿ ಆತ ಇಸ್ಲಾಂ ಧರ್ಮವನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಿರುವುದಾಗಿಯೂ ಹೇಳಿದ್ದಾಳೆ. ಒಟ್ಟಿನಲ್ಲಿ ಪ್ರಕರಣ ಜನರು ಆರೋಪಿಸಿದ್ದಕ್ಕಿಂತ ನೇರ ಉಲ್ಟಾ ಹೊಡೆದಿದೆ.

ರಮ್ಯಾಳ ಅಪಹರಣದ ಹಿಂದೆ ಕೆಲವು ಧಾರ್ಮಿಕ ಸಂಘಟನೆಗಳ ಕೈವಾಡ ಇದೆ ಎಂದೂ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಕೇರಳದ ಪೋನ್ನಾನಿಗೆ ಕರೆದುಕೊಂಡು ಹೋಗಲಾಗಿದೆಯೆಂದೂ ಇನ್ನಿತರ ಕಟ್ಟು ಕಥೆಗಳನ್ನು ಕಟ್ಟಿ ಒಂದು ಸಮುದಾಯದ ವಿರುದ್ಧ ಆರೋಪ ಮಾಡುತಿದ್ದ ಸಂಘಟನೆಗಳಿಗೆ ಈ ಪ್ರಕರಣ ಮತ್ತೊಮ್ಮೆ ತಿರುಗೇಟು ನೀಡಿದೆ. ಇಲ್ಲಿ ಯಾವ ರಮ್ಯಳನ್ನು ಲವ್ ಜಿಹಾದಿನ ಬಲೆಯಲ್ಲಿ ಬೀಳಿಸಿ ಅವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗುತಿತ್ತೋ ಅದೇ ರಮ್ಯ ಈ ಕಾಮುಕ ಮೇಸ್ತ್ರಿ ಮಹಮ್ಮದ್ ಆಲಿಯಾಸ್ ರಾಜು ಶೆಟ್ಟಿಯನ್ನು ತನ್ನ ಬಲೆಯಲ್ಲಿ ಕೆಡವಿ ಆತನನ್ನು ಹಿಂದೂ ಮಾಡಿಬಿಟ್ಟಿದ್ದಳು. ಈತನನ್ನು ಮದುವೆ ಆಗಿ ಕೈಕೈ ಹಿಡಿದು ಇವರು ಜಾತ್ರೆಗಳಲ್ಲಿ ಸುತ್ತಾಡುತಿದ್ದರೆ ಇವರ ಈ ಪ್ರೇಮ ಪ್ರಕರಣದ ನೈಜ ಬಲಿಪಶುಗಳಾದ ಮಹಮ್ಮದನ ಹೆಂಡತಿ ಸಫಿಯಾ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳು ಒಪ್ಪೊತ್ತಿನ ಊಟಕ್ಕೆ ಹಣವಿಲ್ಲದೆ ಪರಿತಪಿಸುತಿದ್ದರು.

ಲವ್ ಜಿಹಾದ್ ಹೆಸರಿನಲ್ಲಿ ಒಮ್ಮೆ ಲಾಭ ಪಡೆಯಲು ಹೊರಟು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿ ಕಾಮ ಜಿಹಾದಿ ಮೋಹನನ ಬಂಧನದಿಂದ ಮುಖಭಂಗಕ್ಕೀಡಾಗಿದ್ದ ಕೆಲವು ಕೋಮುವಾದಿ ಸಂಘಟನೆಗಳು ಇದನ್ನು ದೊಡ್ಡದು ಮಾಡಿ ಅದರಲ್ಲಿ ಹೋದ ಮಾನವನ್ನು ಈ ಪ್ರಕರಣದಲ್ಲಿ ಪಡೆಯಲು ಯತ್ನಿಸಿದ್ದವು. ಆದರೆ ಈ ಪ್ರಕರಣವೂ ಉಲ್ಟಾ ಹೊಡೆದಿದೆ. ಇತ್ತ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ತಂದ ಈ ಕಾಮುಕ ಮಹಮ್ಮದ್ ಈಗ ಹಿಂದೂ ಆಗಿ ಬದಲಾಗಿರುವುದನ್ನು ಸ್ವಾಭಿಮಾನಿ ಹಿಂದುಗಳೂ ಒಪ್ಪಲು ತಯಾರಿಲ್ಲ.


ಮಹಮ್ಮದ್ ಮಾಡಿದ ಈ ನೀಚ ಕೆಲಸ ಯಾವ ಮನುಷ್ಯನೂ ಒಪ್ಪುವಂತಹದ್ದಲ್ಲ. ಇರುವ ಹೆಂಡತಿ ಮಕ್ಕಳನ್ನು ಸರಿಯಾಗಿ ಸಾಕಲಾರದ ಅಯೋಗ್ಯ ಇನ್ನೊಬ್ಬ ಹುಡುಗಿಯ ಮೇಲೆ ಕಣ್ಣು ಹಾಕಿರುವುದು ಅತ್ಯಂತ ಹೇಯ ಕೆಲಸ. ಆಕೆಯೂ ಸಹ ಅಪ್ರಾಪ್ತ ವಯಸ್ಕಳೇನಲ್ಲ. ಆಕೆಗೂ ಸ್ವಲ್ಪ ಮಟ್ಟಿಗಿನ ಜ್ಞಾನ ಇರಬೇಕಾಗಿತ್ತು. ಈ ಕಾಮುಕನ ಪ್ರೀತಿಯ ಬಲೆಯಲ್ಲಿ ಬಿದ್ದು ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಆತನ ಕೈ ಹಿಡಿದ ಹೆಂಡತಿ ಮತ್ತು ಆತನ ಮೂರು ಮಕ್ಕಳು ಬೀದಿಪಾಲಾಗುವ ಬಗ್ಗೆಯೂ ಯೋಚಿಸಬಹುದಿತ್ತು. ಬಹುಶ ಪ್ರೇಮಕ್ಕೆ ಕಣ್ಣಿಲ್ಲ, ಕಾಮಕ್ಕೆ ಕಣ್ಣಿಲ್ಲ ಎಂಬ ಮಾತು ಇವರ ವಿಚಾರದಲ್ಲಿ ಹೆಚ್ಚು ಅನ್ವಯಿಸಿರಬಹುದು. ಆದರೂ ಇವರು ಮಾಡಿರುವ ಕೆಲಸ ಪ್ರೀತಿ ಪ್ರೇಮ ಎಂಬ ಪದಕ್ಕೇ ಅವಮಾನ. ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಪ್ರೀತಿ ಪ್ರೇಮಕ್ಕೆ ಈ ಪ್ರಕರಣ ಒಂದು ಕಪ್ಪು ಚುಕ್ಕೆ.

ಇನ್ನಾದರೂ ಹುಡುಗಿಯರು ಪ್ರೀತಿ ಪ್ರೇಮ ಎನ್ನುವ ಮುಂಚೆ ತಮ್ಮ ಭವಿಷ್ಯದ ಬಗ್ಗೆ ಜಾಗರೂಕರಾಗಬೇಕಿದೆ. ತಮ್ಮ ಈ ರೀತಿಯ ಪ್ರೀತಿ ತಮ್ಮ ಭವಿಷ್ಯವನ್ನೂ ಹಾಳು ಮಾಡುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸುತ್ತದೆ ಎಂಬ ಸಾಮಾನ್ಯ ಅರಿವು ಅವರಲ್ಲಿ ಮೂಡಬೇಕಿದೆ. ಒಟ್ಟಿನಲ್ಲಿ ಈ ಪ್ರಕರಣವೇನೋ ಅಂತ್ಯ ಕಂಡಿದೆ. ಮಹಮ್ಮದ್ ರಮ್ಯಾ ಶೆಟ್ಟಿಯ ಕೈ ಹಿಡಿದು ರಾಜು ಶೆಟ್ಟಿ ಆಗಿದ್ದಾನೆ. ಕೆಲವು ಪತ್ರಿಕೆಗಳು ಇವರ ಪತ್ತೆಯಿಂದ ಈ ಪ್ರಕರಣ ಸುಖಾಂತ್ಯವಾಯಿತು ಎಂದು ಬರೆದಿವೆ. ಆದರೆ ರಾಜು ಶೆಟ್ಟರಿಗೆ ಮತ್ತು ರಮ್ಯಾಳಿಗೆ ಜೊತೆಗೆ ಸಮಾಜಕ್ಕೆ ಇವರ ಪತ್ತೆ ಸುಖಾಂತ್ಯ ವಾಗಿರಬಹುದು ಆದರೆ ಈತನನ್ನೇ ನಂಬಿ ಈತನ ಕೈಹಿಡಿದ ಸಫಿಯಾ ಜೊತೆಗೆ ಆಕೆಯನ್ನು ಕಿತ್ತು ತಿನ್ನುತ್ತಿರುವ ಬಡತನ ಮತ್ತು ಈತನ ಕಾರಣದಿಂದ ಆಕೆ ಜನ್ಮ ನೀಡಿದ ಆ ಮೂರು ಹೆಣ್ಣು ಮಕ್ಕಳ ಜೀವನದ ನೈಜ ಸಂಕಷ್ಟಗಳು ಈಗಷ್ಟೇ ಆರಂಭವಾಗಿವೆ.