ಶನಿವಾರ, ಮೇ 03, 2014

ಮೋದಿ ನರಹಂತಕನಾದರೆ ಕಾಂಗ್ರೆಸ್ಸಿನ ತರುಣ್ ಗಗೋಯ್ ಯಾರು ?

ಅಸ್ಸಾಮಿನಲ್ಲಿ ಮತ್ತೆ ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ಮಾರಣಹೋಮ ಮುಂದುವರೆದಿದೆ . ಕಾಂಗ್ರೆಸ್ ಆಡಳಿತ ನಡೆಸುತ್ತಿರುವ , ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪ್ರತಿನಿಧಿಸುತ್ತಿರುವ ಅಸ್ಸಾಂ ರಾಜ್ಯದಲ್ಲಿ ಶಸ್ತ್ರ ಸಜ್ಜಿತ ಬೋಡೋ ಉಗ್ರರು ಕಳೆದರೆಡು ದಿನಗಳಲ್ಲಿ ಸುಮಾರು ಮೂವತ್ತೆರಡು ಮಂದಿ ನಿರಾಯುಧಧಾರಿ ಮುಸ್ಲಿಮರನ್ನು ಮಾರಣಹೋಮ ಮಾಡಿ ಕೊಂದು ಹಾಕಿದ್ದಾರೆ . ಮೃತರಲ್ಲಿ ಮಹಿಳೆಯರು ಮತ್ತು ಪುಟ್ಟ ಮಕ್ಕಳ ಸಂಖ್ಯೆ ಹೆಚ್ಚಿದ್ದು ಬೋಡೋ ಉಗ್ರರ ಆಕ್ರಮಣದ ಭೀತಿಯಿಂದ ಸಾವಿರಾರು ಮಂದಿ ಮನೆತೊರೆದಿದ್ದಾರೆ . ಇವೆಲ್ಲಾ ನಡೆಯುತ್ತಿರುವುದು ತರುಣ್ ಗಗೋಯ್  ನೇತೃತ್ವದಲ್ಲಿ  ಕಾಂಗ್ರೆಸ್ ಸರ್ಕಾರ  ಆಡಳಿತ ನಡೆಸುತ್ತಿರುವ ಅಸ್ಸಾಮಿನಲ್ಲಿ ! ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ನರಹಂತಕ , ಮೌತ್ ಕಾ ಸೌದಾಗರ್ ಎನ್ನುವ ಕಾಂಗ್ರೆಸ್ ಹೈಕಮಾಂಡ್  ತನ್ನದೇ ಪಕ್ಷ ಆಡಳಿತ  ನಡೆಸುತ್ತಿರುವ ಅಸ್ಸಾಮಿನಲ್ಲಿ ೨೦೧೨ ರಲ್ಲಿ   ನೂರಕ್ಕೂ ಅಧಿಕ ಮುಸ್ಲಿಮರು ಬೋಡೋ  ಜನಾಂಗ  ನಡೆಸಿದ ದಾಳಿಯಲ್ಲಿ ಮೃತಪಟ್ಟಾಗ , ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಾಗ ಅಲ್ಲಿನ ಆಡಳಿತದ ನೇತೃತ್ವ ವಹಿಸಿದ್ದ ತರುಣ್ ಗಗೋಯ್ ವಿರುದ್ಧ ತುಟಿ ಬಿಚ್ಚದೇ  ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೇ  ಮೌನ ಪಾಲಿಸಿತ್ತು . ಅದರ ಪರಿಣಾಮವಾಗಿ ಬೋಡೋ ಉಗ್ರರ ಅಟ್ಟಹಾಸ ಈಗ ಮತ್ತೆ ಮುಂದುವರೆದಿದ್ದು ಎರಡೇ ದಿನಗಳಲ್ಲಿ ಮೂವತ್ತೆರಡು ಜನರನ್ನು ಬಲಿ ತೆಗೆದುಕೊಂಡಿದೆ . ಸಾವಿನ ಸಂಖ್ಯೆ ಪ್ರತೀ ಗಂಟೆಗೆ ಹೆಚ್ಚಾಗುತ್ತಾ ಹೋಗುತ್ತಿದೆ . ಮಾತು ಮಾತಿಗೆ ಗುಜರಾತಿನಲ್ಲಿ ನಡೆದ ಅಲ್ಪಸಂಖ್ಯಾತರ ಹತ್ಯಾಕಾಂಡದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಅಸ್ಸಾಮಿನ ಮುಸ್ಲಿಮರ ಮಾರಣ ಹೋಮದ ಬಗ್ಗೆ ಜಾಣ ಮೌನರಾಗಿದ್ದಾರೆ . ತಮ್ಮದೇ ಪಕ್ಷದ ಮುಖ್ಯಮಂತ್ರಿ  ತರುಣ್ ಗಗೋಯ್ ರಾಜಿನಾಮೆ ಪಡೆಯದೇ , ಆತನನ್ನು ನರಹಂತಕ ಅನ್ನದೇ ಬಿಜೆಪಿಯತ್ತ ಬೆರಳು ತೋರಿಸುತ್ತಿದ್ದಾರೆ .


ಈಗ ನಡೆದಿರುವ ಹತ್ಯಾಕಾಂಡಕ್ಕೆ ಕಾರಣ ಈ ಭಾಗದ ಮುಸ್ಲಿಮರು ಬೋಡೋ ನಾಯಕನಿಗೆ ಮತದಾನ ಮಾಡಿಲ್ಲ ಎಂಬ ಕಾರಣಕ್ಕೆ ಎನ್ನಲಾಗಿದೆ . ಅದೇನಿದ್ದರೂ ಈ ಭಾಗದಲ್ಲಿ ಇಲ್ಲಿನ ಬೋಡೋ  ಜನಾಂಗದ ಮಧ್ಯೆ ಮತ್ತು ಬಂಗಾಳಿ ಮಾತನಾಡುವ ಮುಸ್ಲಿಮರ ಮಧ್ಯೆ ನಿರಂತರ ಸಣ್ಣ ಪುಟ್ಟ ವೈಷಮ್ಯಗಳು ಆಗಾಗ ಭುಗಿಲೇಳುತ್ತಲೇ ಇವೆ .  ಇಲ್ಲಿರುವ ಮುಸ್ಲಿಮರು ಮೂಲತಃ ಬಾಂಗ್ಲಾ ವಲಸಿಗರಾಗಿದ್ದು ಅವರನ್ನು ಇಲ್ಲಿಂದ  ಓಡಿಸಬೇಕು ಎಂಬ ಉದ್ದೇಶವನ್ನು ಮುಂದಿಟ್ಟುಕೊಂಡು ಬೋಡೋ ಜನಾಂಗದ ಕೆಲ ಉಗ್ರರು ಸೇರಿಕೊಂಡು ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎಂಬ ಶಸ್ತ್ರ ಸಜ್ಜಿತ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ . ಈ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಲು ಇಲ್ಲಿನ ಮುಖ್ಯಮಂತ್ರಿ ತರುಣ್ ಗಗೋಯ್  ವಿಫಲರಾಗಿದ್ದಾರೆ . ಅಷ್ಟಕ್ಕೂ ಈ ಉಗ್ರರ ರಾಜಕೀಯ ಪಕ್ಷ ಬೋಡೋ  ಲ್ಯಾಂಡ್ ಪೀಪಲ್ಸ್ ಪಾರ್ಟಿ ತರುಣ್ ಗಗೋಯ್ ಸರ್ಕಾರವನ್ನು ಬೆಂಬಲಿಸುತ್ತಿದೆ . ಈ ಕಾರಣಕ್ಕೆ ಗಗೋಯ್  ಇವರ ವಿರುದ್ಧ ಮೃದು ಧೋರಣೆ ತಳೆಯುತ್ತಿದ್ದಾರೆ ಎನ್ನುವುದು ಇಲ್ಲಿನ ಮುಸ್ಲಿಮರ ಆರೋಪ . ಇದನ್ನು ಬಳಸಿಕೊಂಡ ಈ ದುಷ್ಕರ್ಮಿಗಳು ೨೦೧೨ ರಲ್ಲಿ ನಡೆದ ಮುಸ್ಲಿಮರ ಮಾರಣಹೋಮದಲ್ಲಿ ಸುಮಾರು ನೂರಕ್ಕೂ ಅಧಿಕ ಜನರನ್ನು ಕೊಂದು ಹಾಕಿದ್ದರು . ಈಗ ಮತ್ತೆ ಇದೇ  ಉಗ್ರರ ಸಂಘಟನೆ ಬಂದೂಕು ಹಿಡಿದು ಮುಸ್ಲಿಮರ ಹತ್ಯಾಕಾಂಡ ನಡೆಸುತ್ತಿದೆ . ತರುಣ್ ಗಗೋಯ್ ಮಾತ್ರ ಎಂದಿನಂತೆ ಕೇಂದ್ರ ಪಡೆಗಳು ಬಂದಿದ್ದು ಪರಿಸ್ಥಿತಿಯ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂಬ ಹೇಳಿಕೆ ನೀಡಿ ಕೈತೊಳೆದುಕೊಂಡಿದ್ದಾರೆ .


ಅಸ್ಸಾಮಿನ ಕೊಕ್ರಜಾರ್ , ಬಕ್ಸಾ , ಚಿರಾಂಗ್ ಜಿಲ್ಲೆಗಳಲ್ಲಿ ಬೋಡೋ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಕರ್ಫ್ಯೂ ಹಾಕಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೂ ಸಾಮೂಹಿಕವಾಗಿ ಕೊಂದು ಹಾಕಿದ ಮೃತದೇಹಗಳು ಈಗಲೂ ಪತ್ತೆಯಾಗುತ್ತಿವೆ . ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಅಸ್ಸಾಂ ಸರ್ಕಾರದ ಗಡಿ ವ್ಯವಹಾರಗಳ ಸಚಿವ ಸಿದ್ದೀಕ್ ಅಹಮದ್ ಗಲಭೆ ತರುಣ್ ಗಗೋಯ್ ಅವರ ವೈಫಲ್ಯ ಕಾರಣ ಎಂದು ನೇರವಾಗಿ ಹೇಳಿದ್ದಾರೆ  . ರಾಜ್ಯ ಸರ್ಕಾರ ಇಲ್ಲಿನ ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ವಿಫಲವಾಗಿದ್ದು ಸರ್ಕಾರ ಬೋಡೋ  ಲ್ಯಾಂಡ್ ಪೀಪಲ್ಸ್ ಪಕ್ಷದ ಜೊತೆಗಿನ ಮೈತ್ರಿಯನ್ನು ಬಿಟ್ಟು ಅವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದ್ದಾರೆ . ಇಲ್ಲಿನ ಮುಸ್ಲಿಮರು ಬೋಡೋ ಲ್ಯಾಂಡ್ ಪಕ್ಷಕ್ಕೆ ಮತಹಾಕಿಲ್ಲ ಎಂಬ ಸಂದೇಶವನ್ನು ಸಾಮಾಜಿಕ ತಾಣಗಳ ಮೂಲಕ ರವಾನಿಸಿ ಗಲಭೆ ಆರಂಭವಾಗಲು ಕಾರಣರಾದ ಇಲ್ಲಿನ ಆ ಪಕ್ಷದ ಎಂ.ಎಲ್.ಎ ಪ್ರಮೀಳಾ ರಾಣಿ ಬ್ರಹ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ . ಆದರೆ ಇಲ್ಲಿನ ಮುಖ್ಯಮಂತ್ರಿ ತರುಣ್ ಗಗೋಯ್ ಮತ್ತು ಕಾಂಗ್ರೆಸ್ ಹೈಕಮಾಂಡ್  ಈ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಂಡಂತೆ ಕಾಣುತ್ತಿಲ್ಲ . ಮತ್ತದೇ ಕೇಂದ್ರ ಪಡೆಗಳು ಬಂದಿವೆ , ಶಾಂತಿಗಾಗಿ ಶ್ರಮಿಸಲಿದೆ ಎಂಬ ಮಾತುಗಳನ್ನು ಗಗೋಯ್   ಹೇಳಿದ್ದಾರೆ . ಕೇಂದ್ರ ಸರ್ಕಾರ ಹತ್ಯಾಕಾಂಡದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿ ಕೈತೊಳೆದುಕೊಂಡಿದೆ .  ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿ ಗುಜರಾತಿನಲ್ಲಿ ಮುಸ್ಲಿಮರ ನರಮೇಧ ಮಾಡಿಸಿದರು ಎನ್ನುವ ಕಾಂಗ್ರೆಸ್ ಪಕ್ಷ ಮಾತ್ರ ತನ್ನದೇ ಪಕ್ಷದ ಮುಖ್ಯಮಂತ್ರಿ ಬೋಡೋ ಉಗ್ರರ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಆಡಳಿತದ ಸವಿ ಅನುಭವಿಸುತ್ತಾ ಈಗ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಮೌನವಾಗಿರುವಾಗ ಕಣ್ಣು ಕಾಣದಂತೆ ವರ್ತಿಸುತ್ತಿದೆ .ಹೀಗಿರುವಾಗ ಮೋದಿ ಹಾಗೂ ತರುಣ್ ಗಗೋಯ್  ನಡುವೆ ಕಂಡು ಬರುವ ವ್ಯತ್ಯಾಸವೇನು ? ಬಹುಶಃ ಮೋದಿ ಅಲ್ಪಸಂಖ್ಯಾತರ ವಿರೋಧಿ ಪಕ್ಷ ಎಂದು ಬಿಂಬಿಸಲ್ಪಡುವ ಪಕ್ಷದ ಮುಖ್ಯಮಂತ್ರಿಯಾದರೆ ತರುಣ್  ಗಗೋಯ್ ಸ್ವಯಂ ಘೋಷಿತ ಅಲ್ಪಸಂಖ್ಯಾತರ ರಕ್ಷಕ ಎನ್ನುವ ಪಕ್ಷದ ಮುಖ್ಯಮಂತ್ರಿ ಎನ್ನುವುದು ಮಾತ್ರ ಇವರಿಬ್ಬರ ನಡುವಿನ ವ್ಯತ್ಯಾಸ ! ಮೋದಿ ನರಹಂತಕ ಎನ್ನುವುದಾದರೆ ತರುಣ್ ಗಗೋಯ್ ಕೂಡಾ ನರಹಂತಕ ....