ಶನಿವಾರ, ಮೇ 03, 2014

ಮೋದಿ ನರಹಂತಕನಾದರೆ ಕಾಂಗ್ರೆಸ್ಸಿನ ತರುಣ್ ಗಗೋಯ್ ಯಾರು ?

ಅಸ್ಸಾಮಿನಲ್ಲಿ ಮತ್ತೆ ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ಮಾರಣಹೋಮ ಮುಂದುವರೆದಿದೆ . ಕಾಂಗ್ರೆಸ್ ಆಡಳಿತ ನಡೆಸುತ್ತಿರುವ , ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪ್ರತಿನಿಧಿಸುತ್ತಿರುವ ಅಸ್ಸಾಂ ರಾಜ್ಯದಲ್ಲಿ ಶಸ್ತ್ರ ಸಜ್ಜಿತ ಬೋಡೋ ಉಗ್ರರು ಕಳೆದರೆಡು ದಿನಗಳಲ್ಲಿ ಸುಮಾರು ಮೂವತ್ತೆರಡು ಮಂದಿ ನಿರಾಯುಧಧಾರಿ ಮುಸ್ಲಿಮರನ್ನು ಮಾರಣಹೋಮ ಮಾಡಿ ಕೊಂದು ಹಾಕಿದ್ದಾರೆ . ಮೃತರಲ್ಲಿ ಮಹಿಳೆಯರು ಮತ್ತು ಪುಟ್ಟ ಮಕ್ಕಳ ಸಂಖ್ಯೆ ಹೆಚ್ಚಿದ್ದು ಬೋಡೋ ಉಗ್ರರ ಆಕ್ರಮಣದ ಭೀತಿಯಿಂದ ಸಾವಿರಾರು ಮಂದಿ ಮನೆತೊರೆದಿದ್ದಾರೆ . ಇವೆಲ್ಲಾ ನಡೆಯುತ್ತಿರುವುದು ತರುಣ್ ಗಗೋಯ್  ನೇತೃತ್ವದಲ್ಲಿ  ಕಾಂಗ್ರೆಸ್ ಸರ್ಕಾರ  ಆಡಳಿತ ನಡೆಸುತ್ತಿರುವ ಅಸ್ಸಾಮಿನಲ್ಲಿ ! ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ನರಹಂತಕ , ಮೌತ್ ಕಾ ಸೌದಾಗರ್ ಎನ್ನುವ ಕಾಂಗ್ರೆಸ್ ಹೈಕಮಾಂಡ್  ತನ್ನದೇ ಪಕ್ಷ ಆಡಳಿತ  ನಡೆಸುತ್ತಿರುವ ಅಸ್ಸಾಮಿನಲ್ಲಿ ೨೦೧೨ ರಲ್ಲಿ   ನೂರಕ್ಕೂ ಅಧಿಕ ಮುಸ್ಲಿಮರು ಬೋಡೋ  ಜನಾಂಗ  ನಡೆಸಿದ ದಾಳಿಯಲ್ಲಿ ಮೃತಪಟ್ಟಾಗ , ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಾಗ ಅಲ್ಲಿನ ಆಡಳಿತದ ನೇತೃತ್ವ ವಹಿಸಿದ್ದ ತರುಣ್ ಗಗೋಯ್ ವಿರುದ್ಧ ತುಟಿ ಬಿಚ್ಚದೇ  ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೇ  ಮೌನ ಪಾಲಿಸಿತ್ತು . ಅದರ ಪರಿಣಾಮವಾಗಿ ಬೋಡೋ ಉಗ್ರರ ಅಟ್ಟಹಾಸ ಈಗ ಮತ್ತೆ ಮುಂದುವರೆದಿದ್ದು ಎರಡೇ ದಿನಗಳಲ್ಲಿ ಮೂವತ್ತೆರಡು ಜನರನ್ನು ಬಲಿ ತೆಗೆದುಕೊಂಡಿದೆ . ಸಾವಿನ ಸಂಖ್ಯೆ ಪ್ರತೀ ಗಂಟೆಗೆ ಹೆಚ್ಚಾಗುತ್ತಾ ಹೋಗುತ್ತಿದೆ . ಮಾತು ಮಾತಿಗೆ ಗುಜರಾತಿನಲ್ಲಿ ನಡೆದ ಅಲ್ಪಸಂಖ್ಯಾತರ ಹತ್ಯಾಕಾಂಡದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಅಸ್ಸಾಮಿನ ಮುಸ್ಲಿಮರ ಮಾರಣ ಹೋಮದ ಬಗ್ಗೆ ಜಾಣ ಮೌನರಾಗಿದ್ದಾರೆ . ತಮ್ಮದೇ ಪಕ್ಷದ ಮುಖ್ಯಮಂತ್ರಿ  ತರುಣ್ ಗಗೋಯ್ ರಾಜಿನಾಮೆ ಪಡೆಯದೇ , ಆತನನ್ನು ನರಹಂತಕ ಅನ್ನದೇ ಬಿಜೆಪಿಯತ್ತ ಬೆರಳು ತೋರಿಸುತ್ತಿದ್ದಾರೆ .


ಈಗ ನಡೆದಿರುವ ಹತ್ಯಾಕಾಂಡಕ್ಕೆ ಕಾರಣ ಈ ಭಾಗದ ಮುಸ್ಲಿಮರು ಬೋಡೋ ನಾಯಕನಿಗೆ ಮತದಾನ ಮಾಡಿಲ್ಲ ಎಂಬ ಕಾರಣಕ್ಕೆ ಎನ್ನಲಾಗಿದೆ . ಅದೇನಿದ್ದರೂ ಈ ಭಾಗದಲ್ಲಿ ಇಲ್ಲಿನ ಬೋಡೋ  ಜನಾಂಗದ ಮಧ್ಯೆ ಮತ್ತು ಬಂಗಾಳಿ ಮಾತನಾಡುವ ಮುಸ್ಲಿಮರ ಮಧ್ಯೆ ನಿರಂತರ ಸಣ್ಣ ಪುಟ್ಟ ವೈಷಮ್ಯಗಳು ಆಗಾಗ ಭುಗಿಲೇಳುತ್ತಲೇ ಇವೆ .  ಇಲ್ಲಿರುವ ಮುಸ್ಲಿಮರು ಮೂಲತಃ ಬಾಂಗ್ಲಾ ವಲಸಿಗರಾಗಿದ್ದು ಅವರನ್ನು ಇಲ್ಲಿಂದ  ಓಡಿಸಬೇಕು ಎಂಬ ಉದ್ದೇಶವನ್ನು ಮುಂದಿಟ್ಟುಕೊಂಡು ಬೋಡೋ ಜನಾಂಗದ ಕೆಲ ಉಗ್ರರು ಸೇರಿಕೊಂಡು ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎಂಬ ಶಸ್ತ್ರ ಸಜ್ಜಿತ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ . ಈ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಲು ಇಲ್ಲಿನ ಮುಖ್ಯಮಂತ್ರಿ ತರುಣ್ ಗಗೋಯ್  ವಿಫಲರಾಗಿದ್ದಾರೆ . ಅಷ್ಟಕ್ಕೂ ಈ ಉಗ್ರರ ರಾಜಕೀಯ ಪಕ್ಷ ಬೋಡೋ  ಲ್ಯಾಂಡ್ ಪೀಪಲ್ಸ್ ಪಾರ್ಟಿ ತರುಣ್ ಗಗೋಯ್ ಸರ್ಕಾರವನ್ನು ಬೆಂಬಲಿಸುತ್ತಿದೆ . ಈ ಕಾರಣಕ್ಕೆ ಗಗೋಯ್  ಇವರ ವಿರುದ್ಧ ಮೃದು ಧೋರಣೆ ತಳೆಯುತ್ತಿದ್ದಾರೆ ಎನ್ನುವುದು ಇಲ್ಲಿನ ಮುಸ್ಲಿಮರ ಆರೋಪ . ಇದನ್ನು ಬಳಸಿಕೊಂಡ ಈ ದುಷ್ಕರ್ಮಿಗಳು ೨೦೧೨ ರಲ್ಲಿ ನಡೆದ ಮುಸ್ಲಿಮರ ಮಾರಣಹೋಮದಲ್ಲಿ ಸುಮಾರು ನೂರಕ್ಕೂ ಅಧಿಕ ಜನರನ್ನು ಕೊಂದು ಹಾಕಿದ್ದರು . ಈಗ ಮತ್ತೆ ಇದೇ  ಉಗ್ರರ ಸಂಘಟನೆ ಬಂದೂಕು ಹಿಡಿದು ಮುಸ್ಲಿಮರ ಹತ್ಯಾಕಾಂಡ ನಡೆಸುತ್ತಿದೆ . ತರುಣ್ ಗಗೋಯ್ ಮಾತ್ರ ಎಂದಿನಂತೆ ಕೇಂದ್ರ ಪಡೆಗಳು ಬಂದಿದ್ದು ಪರಿಸ್ಥಿತಿಯ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂಬ ಹೇಳಿಕೆ ನೀಡಿ ಕೈತೊಳೆದುಕೊಂಡಿದ್ದಾರೆ .


ಅಸ್ಸಾಮಿನ ಕೊಕ್ರಜಾರ್ , ಬಕ್ಸಾ , ಚಿರಾಂಗ್ ಜಿಲ್ಲೆಗಳಲ್ಲಿ ಬೋಡೋ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಕರ್ಫ್ಯೂ ಹಾಕಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೂ ಸಾಮೂಹಿಕವಾಗಿ ಕೊಂದು ಹಾಕಿದ ಮೃತದೇಹಗಳು ಈಗಲೂ ಪತ್ತೆಯಾಗುತ್ತಿವೆ . ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಅಸ್ಸಾಂ ಸರ್ಕಾರದ ಗಡಿ ವ್ಯವಹಾರಗಳ ಸಚಿವ ಸಿದ್ದೀಕ್ ಅಹಮದ್ ಗಲಭೆ ತರುಣ್ ಗಗೋಯ್ ಅವರ ವೈಫಲ್ಯ ಕಾರಣ ಎಂದು ನೇರವಾಗಿ ಹೇಳಿದ್ದಾರೆ  . ರಾಜ್ಯ ಸರ್ಕಾರ ಇಲ್ಲಿನ ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ವಿಫಲವಾಗಿದ್ದು ಸರ್ಕಾರ ಬೋಡೋ  ಲ್ಯಾಂಡ್ ಪೀಪಲ್ಸ್ ಪಕ್ಷದ ಜೊತೆಗಿನ ಮೈತ್ರಿಯನ್ನು ಬಿಟ್ಟು ಅವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದ್ದಾರೆ . ಇಲ್ಲಿನ ಮುಸ್ಲಿಮರು ಬೋಡೋ ಲ್ಯಾಂಡ್ ಪಕ್ಷಕ್ಕೆ ಮತಹಾಕಿಲ್ಲ ಎಂಬ ಸಂದೇಶವನ್ನು ಸಾಮಾಜಿಕ ತಾಣಗಳ ಮೂಲಕ ರವಾನಿಸಿ ಗಲಭೆ ಆರಂಭವಾಗಲು ಕಾರಣರಾದ ಇಲ್ಲಿನ ಆ ಪಕ್ಷದ ಎಂ.ಎಲ್.ಎ ಪ್ರಮೀಳಾ ರಾಣಿ ಬ್ರಹ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ . ಆದರೆ ಇಲ್ಲಿನ ಮುಖ್ಯಮಂತ್ರಿ ತರುಣ್ ಗಗೋಯ್ ಮತ್ತು ಕಾಂಗ್ರೆಸ್ ಹೈಕಮಾಂಡ್  ಈ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಂಡಂತೆ ಕಾಣುತ್ತಿಲ್ಲ . ಮತ್ತದೇ ಕೇಂದ್ರ ಪಡೆಗಳು ಬಂದಿವೆ , ಶಾಂತಿಗಾಗಿ ಶ್ರಮಿಸಲಿದೆ ಎಂಬ ಮಾತುಗಳನ್ನು ಗಗೋಯ್   ಹೇಳಿದ್ದಾರೆ . ಕೇಂದ್ರ ಸರ್ಕಾರ ಹತ್ಯಾಕಾಂಡದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿ ಕೈತೊಳೆದುಕೊಂಡಿದೆ .  ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿ ಗುಜರಾತಿನಲ್ಲಿ ಮುಸ್ಲಿಮರ ನರಮೇಧ ಮಾಡಿಸಿದರು ಎನ್ನುವ ಕಾಂಗ್ರೆಸ್ ಪಕ್ಷ ಮಾತ್ರ ತನ್ನದೇ ಪಕ್ಷದ ಮುಖ್ಯಮಂತ್ರಿ ಬೋಡೋ ಉಗ್ರರ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಆಡಳಿತದ ಸವಿ ಅನುಭವಿಸುತ್ತಾ ಈಗ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಮೌನವಾಗಿರುವಾಗ ಕಣ್ಣು ಕಾಣದಂತೆ ವರ್ತಿಸುತ್ತಿದೆ .ಹೀಗಿರುವಾಗ ಮೋದಿ ಹಾಗೂ ತರುಣ್ ಗಗೋಯ್  ನಡುವೆ ಕಂಡು ಬರುವ ವ್ಯತ್ಯಾಸವೇನು ? ಬಹುಶಃ ಮೋದಿ ಅಲ್ಪಸಂಖ್ಯಾತರ ವಿರೋಧಿ ಪಕ್ಷ ಎಂದು ಬಿಂಬಿಸಲ್ಪಡುವ ಪಕ್ಷದ ಮುಖ್ಯಮಂತ್ರಿಯಾದರೆ ತರುಣ್  ಗಗೋಯ್ ಸ್ವಯಂ ಘೋಷಿತ ಅಲ್ಪಸಂಖ್ಯಾತರ ರಕ್ಷಕ ಎನ್ನುವ ಪಕ್ಷದ ಮುಖ್ಯಮಂತ್ರಿ ಎನ್ನುವುದು ಮಾತ್ರ ಇವರಿಬ್ಬರ ನಡುವಿನ ವ್ಯತ್ಯಾಸ ! ಮೋದಿ ನರಹಂತಕ ಎನ್ನುವುದಾದರೆ ತರುಣ್ ಗಗೋಯ್ ಕೂಡಾ ನರಹಂತಕ ....


ಬುಧವಾರ, ಏಪ್ರಿಲ್ 30, 2014

ಕಬೀರ್ ಎನ್ಕೌಂಟರ್ ಮತ್ತು ಆನಂತರದ ರಾಜಕೀಯಶೃಂಗೇರಿಯಲ್ಲಿ  ನಕ್ಸಲ್ ನಿಗ್ರಹ ಪಡೆಯ ಪೇದೆಯೊಬ್ಬನ ಗುಂಡಿಗೆ ಬಲಿಯಾದ ಮಂಗಳೂರಿನ ದನದ ವ್ಯಾಪಾರಿ ಕಬೀರ್ ಸಾವಿನ ನಂತರ ದಕ್ಷಿಣ ಕನ್ನಡ , ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತನ ಪರ  ಮತ್ತು ವಿರೋಧದ ಹೋರಾಟ ರಾಜಕೀಯ ಜೋರಾಗಿದ್ದು ಕಬೀರ್ ಸಾವಿಗೆ ನ್ಯಾಯ ಸಿಗಬೇಕೆಂದು ಹಲವು ಸಂಘಟನೆಗಳು ಹೋರಾಟ ನಡೆಸುತ್ತಿದ್ದರೆ ಕಬೀರ್ ನನ್ನು ಎನ್ಕೌಂಟರ್ ಮಾಡಿದ ಪೇದೆ ನವೀನ್ ನಾಯಕ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದನ್ನು ವಿರೋಧಿಸಿ ಕೆಲ ಸಂಘಟನೆಗಳು ಸಹ ಬೀದಿಗಿಳಿದಿದೆ. ಸಾವಿನ ಮುಂಚೆ ಜಗತ್ತಿಗೆ ತೀರಾ ಅಪರಿಚಿತನಾಗಿದ್ದ ಕಬೀರ್ ಸಾವಿನ ನಂತರ ಈ ಭಾಗದ ಜನರ ಮನೆ ಮಾತಾಗಿದ್ದಾನೆ . ಕಬೀರ್  ನನ್ನು ಹುತಾತ್ಮ ಎನ್ನುವವರಿದ್ದರೆ ಆತ ಓರ್ವ ಅಕ್ರಮ ದನ ಸಾಗಾಟಗಾರನಾಗಿದ್ದು ಈ
ಕೃತ್ಯಕ್ಕಾಗಿ ಆತನಿಗೆ ಸರಿಯಾದ ಶಿಕ್ಷೆ ಸಿಕ್ಕಿದೆ ಎನ್ನುವವರೂ ಇದ್ದಾರೆ . ಕಬೀರ್ ಸಾವಿನ ನಂತರ ಆತನ ಸಾವನ್ನು ತಮಗೆ ಬೇಕಾದ ಹಾಗೆ ಅಂದರ ಪರ ಮತ್ತು ವಿರೋಧವಾಗಿ  ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿದ್ದು ಅದು ಮುಂದುವರಿಯುತ್ತಲೂ ಇದೆ .

ಕಬೀರ್ ಕುಟುಂಬ ಹಲವು ತಲೆಮಾರುಗಳಿಂದ ದನದ ವ್ಯಾಪಾರವನ್ನೇ ತನ್ನ ಕುಲಕಸುಬಾಗಿ ಮಾಡಿಕೊಂಡು ಬಂದಿತ್ತು . ಮಲೆನಾಡಿನ ಭಾಗದಲ್ಲಿ ರೈತರು ಮಾರುವ ಅನುಪಯುಕ್ತ ದನಗಳನ್ನು ಹಣ ಕೊಟ್ಟು ಖರೀದಿಸಿ ತಂದು ಮಾರುವ ಕಸುಬನ್ನು ಈತನ ತಂದೆಯೂ ನಡೆಸಿಕೊಂಡು ಬರುತ್ತಿದ್ದರು . ಅವರಿಗೆ ವಯಸ್ಸಾದ ನಂತರ ಈ ವೃತ್ತಿಯನ್ನು ಕಬೀರ್ ಮುಂದುವರೆಸಿಕೊಂಡು ಬಂದಿದ್ದ .  ಇದರಿಂದ ಈತನ ಕುಟುಂಬದ ಜೀವನವೂ ನಡೆಯುತ್ತಿತ್ತು . ಹಣ ಕೊಟ್ಟು ರೈತರಿಂದ
ದನಗಳನ್ನು ಖರೀದಿಸಿದರೂ ಅದನ್ನು ಸಾಗಿಸುವ ಕೆಲಸ ಮಾತ್ರ ಅಷ್ಟು ಸುಲಭವಲ್ಲ . ಮಲೆನಾಡಿನ ಗಡಿ ಭಾಗಗಳಲ್ಲಿ ರಾತ್ರಿ ಸಮಯದಲ್ಲಿ ಪೊಲೀಸರಿಗೆ ಮತ್ತು ಕೆಲ ಕೋಮುವಾದಿ ಸಂಘಟನೆಗಳ ಪ್ರಮುಖರಿಗೆ ಮಾಮೂಲಿ ಕೊಟ್ಟು ದನಗಳನ್ನು ತುಂಬಿದ ವಾಹನವನ್ನು ಸಾಗಿಸುವುದು ಈ ವೃತ್ತಿಯಲ್ಲಿ ಮಾಮೂಲಿಯಾದ ಸಂಗತಿ . ರಾತ್ರಿ ವೇಳೆಯಲ್ಲಿ ಇಂತಹ ವಾಹನಗಳನ್ನು ಕಾದು
ಅವರಿಂದ ಮಾಮೂಲಿ ಪಡೆದು ವಾಹನ ತೆರಳಲು ಅನುವು ಮಾಡಿಕೊಡುವ ಕೆಲ ಕೇಸರಿ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಯುವಕರ ಗುಂಪನ್ನು ಮಲೆನಾಡಿನಲ್ಲಿ ಅಲ್ಲಲ್ಲಿ ಕಾಣಲು ಸಾಧ್ಯ . ದನ ಸಾಗಾಟಕ್ಕೆ ಸಂಘ ಪರಿವಾರದ ವಿರೋಧ ಇರುವ ಕಾರಣಕ್ಕಾಗಿಯೇ ಅದರಲ್ಲಿರುವ ಕೆಲವರಿಗೆ ಮಾಮೂಲಿ ಫಿಕ್ಸ್ ಮಾಡಿ ದನ ಸಾಗಿಸುವುದು ಈ ವೃತ್ತಿಯಲ್ಲಿ ಪಳಗಿರುವ ಕೆಲವರ
ವ್ಯವಹಾರ ರಹಸ್ಯ  . ಇನ್ನು ಪೊಲೀಸರಿಗೆ ಇಂತಿಷ್ಟು ಅಂತ ಎಲ್ಲಾ ಕಡೆ ಮಾಮೂಲಿ ಫಿಕ್ಸ್ ಆಗಿರುತ್ತದೆ . ಹೀಗಾಗಿ  ಸಕ್ರಮವಾಗಿ ಖರೀದಿಸಿದ ದನಗಳನ್ನು ಸಾಗಿಸಲು ರಾತ್ರಿ ವೇಳೆಯಲ್ಲಿ ಸರ್ಕಾರಿ ಪೊಲೀಸರು ಮತ್ತು ನೈತಿಕ ಪೋಲೀಸರ ಕೃಪಾಕಟಾಕ್ಷದ ಅವಶ್ಯಕತೆ ಈ ದನದ ವ್ಯಾಪಾರಿಗಳಿಗೆ ಇರುತ್ತದೆ .

ಕಬೀರ್ ಈ ವೃತ್ತಿಯಲ್ಲಿ ಪಳಗಿದ ಕಾರಣಕ್ಕಾಗಿಯೇ ಆತನಿಗೆ ಎಲ್ಲೆಲ್ಲಿ ಮಾಮೂಲಿ ಕೊಡಬೇಕು ಎನ್ನುವ ಮಾಹಿತಿಯಿತ್ತು . ಜೊತೆಗೆ ವ್ಯಾಪಾರದ ಹಿತದೃಷ್ಟಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹಿಂದುಳಿದ ಜನಾಂಗದ ಯುವಕ ಪ್ರಮೋದ್ ಪೂಜಾರಿಯನ್ನೂ ತನ್ನ ಜೊತೆ ವ್ಯವಹಾರದಲ್ಲಿ ಸೇರಿಸಿಕೊಂಡಿದ್ದ . ಪ್ರಮೋದ್ ಪೂಜಾರಿಯಂತಹ ಯುವಕರು ಈ ಭಾಗದಲ್ಲಿ
ದನದ  ವ್ಯಾಪಾರಿಗಳ ಜೊತೆಯಲ್ಲಿ ಸಾಮಾನ್ಯವಾಗಿ  ಕಾಣ ಸಿಗುತ್ತಾರೆ . ಇದಕ್ಕಾಗಿ ಅವರಿಗೆ ಉತ್ತಮ ಮೊತ್ತದ ಸಂಭಾವನೆ ಮತ್ತು  ಲಾಭದಲ್ಲಿ ಪಾಲನ್ನು ನೀಡಲಾಗುತ್ತದೆ . ಇವರು ಒಂದು ರೀತಿಯಲ್ಲಿ ಸುರಕ್ಷತೆಗಾಗಿ ಬಳಸಲ್ಪಡುವ ಗುರಾಣಿಯ ತರಹ . ಇವರನ್ನು ಮುಂದಿಟ್ಟುಕೊಂಡೇ ದನದ ವ್ಯಾಪಾರವನ್ನು ಕುದುರಿಸಲಾಗುತ್ತದೆ. ಇವರ ಮೂಲಕವೇ ದನ ಸಾಗಾಟಕ್ಕೆ ಅಡ್ಡಿ ಮಾಡುವವರ ಜೊತೆ ವ್ಯವಹಾರವನ್ನೂ ಕುದುರಿಸಲಾಗುತ್ತದೆ .  ಇಂತಹ ವೃತ್ತಿಯಲ್ಲಿ ಪಳಗಿದ ಪ್ರಮೋದ್ ಪೂಜಾರಿಯ ಮೇಲೂ ಕೆಲ ಪ್ರಕರಣಗಳು ದಾಖಲಾದ ಬಗ್ಗೆ ಮಾಹಿತಿಯಿದೆ .

ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ನಲ್ಲಿ ನಡೆದ ಕಬೀರ್ ಎನ್ಕೌಂಟರ್ ಸಮಯದಲ್ಲಿ ಇದೇ ಪ್ರಮೋದ್ ಪೂಜಾರಿ ದನಗಳನ್ನು ಹೊತ್ತ ವಾಹನ ಚಲಾಯಿಸುತ್ತಿದ್ದ . ಈತ ಆರಂಭಿಕ ಹಂತದಲ್ಲಿ ನೀಡಿದ ಮಾಹಿತಿಯಂತೆ ದನ ಸಾಗಾಟದ ವಾಹನ ನಿಲ್ಲಿಸಿದ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಹಿಂಬದಿಯಲ್ಲಿ ದನಗಳ ಜೊತೆ ಇದ್ದ ಕಬೀರ್ ಎದೆಗೆ ಗುಂಡು ಹಾರಿಸಿ ಆತನನ್ನು ಕೊಲೆ ಮಾಡಿದ್ದರು . ಆದರೆ ಈಗ ಪ್ರಮೋದ್ ಪೂಜಾರಿ ಉಲ್ಟಾ ಹೊಡೆದಿದ್ದಾನೆ . ಕಬೀರ್ ಎ.ಎನ್.ಎಫ್ ಸಿಬ್ಬಂದಿಯ ಮೇಲೆ ಕಲ್ಲು ತೋರಿದ ಕಾರಣಕ್ಕಾಗಿ ಎನ್ಕೌಂಟರ್ ನಡೆದಿದ್ದು ತನ್ನನ್ನು ಬೇರೆ ಕಾರಣಕ್ಕೆ ಪುಸಲಾಯಿಸಿ ಕರೆದುಕೊಂಡು ಹೋಗಿ ಆ ನಂತರ ಬೆದರಿಸಿ ದನ ಸಾಗಾಟದ ವಾಹನವನ್ನು ಚಲಾಯಿಸುವಂತೆ ಮಾಡಲಾಗಿದೆ ಎಂಬ ಹೇಳಿಕೆಯನ್ನು ಸ್ಥಳೀಯ ಟಿವಿ
ಚಾನೆಲ್ ಒಂದರಲ್ಲಿ ಹೇಳಿಕೊಂಡಿದ್ದಾನೆ . ಕಬೀರ್ ಸಾವು ನಡೆದ ಸಮಯದಲ್ಲಿ ಒಂದು ರೀತಿಯ ಹೇಳಿಕೆ ನೀಡಿದ್ದ ಪ್ರಮೋದ್ ಪೂಜಾರಿಯ ಮೇಲೆ ಸ್ಥಳೀಯ ಸಂಘ ಪರಿವಾರದ ನಾಯಕರು ಕೆಂಗಣ್ಣು ಬೀರಿದ್ದರು . ಆತನ ಮನೆಯವರಿಗೂ ಬೆದರಿಕೆಗಳು ಹೋಗಿತ್ತು .ಈ ಕುರಿತು ಪತ್ರಿಕೆಗಳಲ್ಲೂ ವರದಿಯಾಗಿತ್ತು . ಆ ನಂತರ ಭೂಗತನಾಗಿದ್ದ ಪ್ರಮೋದ್ ಪೂಜಾರಿ ಈಗ ಮತ್ತೆ
ಕಾಣಿಸಿಕೊಂಡಿದ್ದು ಘಟನೆಯ ಕುರಿತಂತೆ ತಾನೇ ಈ ಹಿಂದೆ ನೀಡಿದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಹೊಸ ಹೇಳಿಕೆಗಳನ್ನು ನೀಡಿದ್ದಾನೆ . ಇಲ್ಲಿ ಪ್ರಮೋದ್ ಪೂಜಾರಿ ಸಂಘ ಪರಿವಾರದ ಬೆದರಿಕೆಗೆ ಹೆದರಿ ಸ್ನೇಹಿತನಿಗೆ ಮೋಸ ಮಾಡಿದ್ದಾನೆ ಅನ್ನುವವರೂ ಇದ್ದಾರೆ . ಅದೇನಿದ್ದರೂ  ನಿಷ್ಪಕ್ಷಪಾತ   ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ .

ಇನ್ನುಕಬೀರ್ ದನ ಕಳ್ಳ ಎನ್ನುವವರ ಬಳಿ ಆತ ದನಗಳನ್ನು ಕದ್ದು  ಸಾಗಿಸಿರುವುದಕ್ಕೆ ಯಾವ ದಾಖಲೆಯೂ ಇಲ್ಲ . ಶೃಂಗೇರಿ ಆಸುಪಾಸಿನ ಪೋಲಿಸ್ ಠಾಣೆಗಳಲ್ಲಿ ಈ ಸಮಯದಲ್ಲಿ ದನ ಕಳ್ಳತನ ನಡೆದ ಪ್ರಕರಣವೂ ದಾಖಲಾಗಿಲ್ಲ . ಹೀಗಿದ್ದರೂ ಸಂಘಪರಿವಾರ ಆತನನ್ನು ದನ ಕಳ್ಳ ಅನ್ನುತ್ತಿದೆ . ವಾಹನದಲ್ಲಿ ಐದು ದನಗಳನ್ನು ಸಾಗಿಸುವ ಜಾಗದಲ್ಲಿ ಇಪ್ಪತ್ತಕ್ಕೂ
ಹೆಚ್ಚು ದನಗಳನ್ನು ಅಮಾನವೀಯವಾಗಿ ಸಾಗಿಸಿದ್ದ ಎಂದು ಹೇಳುತ್ತಿವೆ . ಆದರೆ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದ ಕಬೀರ್ ಇದೇ ವಾಹನದ ಹಿಂಬದಿಯಲ್ಲಿ ಇದೇ ಇಪ್ಪತ್ತಕ್ಕೂ ಹೆಚ್ಚು ದನಗಳ ಮಧ್ಯದಲ್ಲಿ ಇದ್ದ ಎನ್ನುವ ಸತ್ಯವನ್ನು ಮರೆಮಾಚುತ್ತಿವೆ. ಕಬೀರ್ ಬಗ್ಗೆ ದ್ವೇಷ ಮೂಡಿಸಿ ದನಗಳ ಬಗ್ಗೆ ಅನುಕಂಪ ಮೂಡಿಸುತ್ತಿವೆ . ಸರ್ಕಾರ ಘೋಷಿಸಿದ
ಪರಿಹಾರಕ್ಕೆ ಖಂಡನೆ ಮಾಡಿ ಗುಂಡು ಹೊಡೆದ ಪೇದೆಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಕಾವಿಧಾರಿಯೊಬ್ಬ ಘೋಷಣೆ ಮಾಡಿದ್ದಾನೆ . ಇನ್ನು ಪರ ವಿರೋಧದ ಪ್ರತಿಭಟನೆಯಲ್ಲಿ ಧರ್ಮದ ವಾಸನೆ ಬರ  ತೊಡಗಿದೆ . ಧರ್ಮದ ಕಾರಣಕ್ಕಾಗಿಯೇ ಕಬೀರ್ ಕೊಲೆಯನ್ನು ಸಮರ್ಥಿಸುವವರೂ ಮತ್ತು ವಿರೋಧಿಸುವವರೂ ಇದ್ದಾರೆ .  ಆದರೆ ಹಾಗಾದಂತೆ ಎಚ್ಚರ ವಹಿಸಬೇಕಾಗಿರುವುದು ಈ ಭಾಗದ ಪ್ರಗತಿಪರ ಮತ್ತು ಜಾತ್ಯಾತೀತ ನಾಯಕರ ಕರ್ತವ್ಯ ಕೂಡ . ಕಬೀರ್ ಕೊಲೆ ಖಂಡಿಸಿ ನಡೆಸುವ ಪ್ರತಿಭಟನೆ ಪ್ರಭುತ್ವದ ದೌರ್ಜನ್ಯದ ವಿರುದ್ಧದ ಹೋರಾಟವಾಗಬೇಕೇ  ಹೊರತು ಆತ ಮುಸ್ಲಿಮನೆಂಬ ಕಾರಣಕ್ಕಾಗಿ ಹೋರಾಟ ಎಂಬಂತೆ ಆಗದ ರೀತಿಯಲ್ಲಿ  ನೋಡಿಕೊಳ್ಳಬೇಕಾಗಿರುವುದು ಈ ಭಾಗದಲ್ಲಿ ಪ್ರಭುತ್ವದ ದೌರ್ಜನ್ಯಕ್ಕೆ ಒಳಗಾಗಿ ಪ್ರಾಣ ತೆತ್ತ ಅಮಾಯಕರಿಗೆ ಸಲ್ಲಿಸುವ ನಿಜವಾದ ಶ್ರದ್ದಾಂಜಲಿ .

ಮಂಗಳವಾರ, ಅಕ್ಟೋಬರ್ 22, 2013

ಸೋಮವಾರ, ಅಕ್ಟೋಬರ್ 21, 2013

ಸೋಮವಾರ, ಜೂನ್ 14, 2010

ಗಲ್ಫ್ ಮಂಗಳೂರಿಗರ ಒಗ್ಗಟ್ಟಿನಿಂದ ಜೈಲು ವಿಮೋಚನೆಗೊಂಡ ಲೋಹಿತಾಕ್ಷ


ರಿಯಾದ್: ಕಳೆದ ಎಂಟು ತಿಂಗಳಿಂದ ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಮಂಗಳೂರು ದೇರೆಬೈಲು ಕೊಂಚಾಡಿ ನಿವಾಸಿ ಲೋಹಿತಾಕ್ಷ ಮಂಗಳೂರು ಅಸೋಸಿಯೇಶನ್ ಫಾರ್ ಸೌದಿ ಅರೇಬಿಯಾ (MASA) ಮತ್ತು ಇತರ ಕೆಲವು ಸಮಾನ ಮನಸ್ಕ ಸಂಘಟನೆಗಳ ನೆರವಿನೊಂದಿಗೆ ಬಿಡುಗಡೆಗೊಂಡಿದ್ದಾರೆ। ಕರ್ನಾಟಕದಲ್ಲಿ ನಡೆದ ಹಾಲಪ್ಪ, ನಿತ್ಯಾನಂದರ ರಾಸಲೀಲೆಗಳ ಸುದ್ದಿಗಳ ಭರಾಟೆಯಲ್ಲಿರುವ ಕನ್ನಡ ನಾಡಿನ ಪತ್ರಿಕೆಗಳಿಗೆ ಈ ವಿಷಯ ಒಂದು ದೊಡ್ಡ ಸುದ್ಧಿಯಾಗಿ ಕಾಣಲೇ ಇಲ್ಲ।

ಗಲ್ಫ್ ನಾಡಿನಲ್ಲಿ ಅದರಲ್ಲೂ ಸೌದಿ ಅರೇಬಿಯಾದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿರುವ ಕನ್ನಡಿಗರ ಸಂಘಗಳು ಮಾಡಿದ ಈ ಕೆಲಸ ಅಷ್ಟು ಸುಲಭವಾಗಿ ತಳ್ಳಿಬಿಡುವಂತಹದ್ದಲ್ಲ। ಗಲ್ಫ್ ನಾಡಿನಲ್ಲಿ ಸದಾ ಒತ್ತಡದ ನಡುವೆ ಬಿಡುವಿಲ್ಲದೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ವಿದೇಶಿಯರು ಸಂಘಟಿತರಾಗುವುದು ಅಷ್ಟೊಂದು ಸುಲಭವಲ್ಲ। ಹಾಗೇನಾದರೂ ಸಂಘಟಿತವಾಗಿದ್ದರೆ ಅದು ಹೆಚ್ಚಿನದಾಗಿ ಕೇರಳೀಯರು. ತಮ್ಮ ರಾಜ್ಯದ ಜನರಿಗೆ ಏನಾದರೂ ಆದರೆ ಅದಕ್ಕೆ ಅತೀ ಶೀಘ್ರ ಸ್ಪಂದಿಸುವ ಮಲಯಾಳಿ ಸಂಘಟನೆಗಳನ್ನು ನಾನು ನೋಡಿದ್ದೇನೆ.


ಸಂಘಟಿತ ಹೋರಾಟಕ್ಕೆ ಜಯ:ಅದೇ ರೀತಿ ಈಗ ಮಾಸಾದ ನೇತೃತ್ವದಲ್ಲಿ ಸೌದಿ ಅರೇಬಿಯಾ ಮತ್ತು ಯು.ಎ.ಇ. ಯ ಕೆಲವು ಸಂಘಟನೆಗಳು ಒಂದಾಗಿ ಲೋಹಿತಾಕ್ಷರನ್ನು ಬಿಡುಗಡೆ ಮಾಡಿಸಿದ್ದು ಕನ್ನಡಿಗರು ಒಂದಾದಲ್ಲಿ ಏನನ್ನೂ ಸಾಧಿಸಿಯಾರು ಎಂಬ ಸಂದೇಶವನ್ನು ಅಸಂಘಟಿತ ಗಲ್ಫ್ ಕನ್ನಡಿಗರ ಮುಂದೆ ಸಾಧಿಸಿ ತೋರಿಸುವುದರ ಜೊತೆಗೆ ಕನ್ನಡಿಗರನ್ನು ಸಂಘಟಿತರಾಗುವಂತೆ ಪ್ರೇರೇಪಿಸಿದೆ. ಅಸಲಿಗೆ ಲೋಹಿತಾಕ್ಷರನ್ನು ಜೈಲಿಗೆ ತಳ್ಳಲು ಕಾರಣವೇನು ಎಂದು ನೋಡಿದರೆ ವಿದೇಶಿಯರ ಜೊತೆ ಇಲ್ಲಿ ಎಂತಹ ಅನ್ಯಾಯಗಳು ಕೆಲವೊಮ್ಮೆ ನಡೆಯುತ್ತವೆ ಎಂಬ ವಾಸ್ತವ ವಿಚಾರವನ್ನು ನಮ್ಮ ಮುಂದಿಡುತ್ತವೆ. ಕಳೆದ ಹದಿನೈದು ವರ್ಷಗಳಿಂದ ಸೌದಿ ಅರೇಬಿಯಾದ ಬಂದರು ನಗರ ದಮ್ಮಾಮಿನಲ್ಲಿ ವೃತ್ತಿಯಲ್ಲಿ ಕ್ರೇನ್ ಚಾಲಕರಾಗಿ ದುಡಿಯುತ್ತಿರುವ ಲೋಹಿತಾಕ್ಷ ತಮ್ಮ ಕಷ್ಟದ ಕೆಲಸದ ನಡುವೆಯೂ ನಿಷ್ಠೆಯಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರು.

ಆದರೆ ಈ ಹದಿನೈದು ವರ್ಷದಲ್ಲಿ ನಡೆಯದ ಅನೀರೀಕ್ಷಿತ ಅಪಘಾತವೊಂದು ಅವರ ಜೀವನದಲ್ಲಿ ನಡೆಯಿತು. ಅವರು ನಿಯಂತ್ರಿಸುತ್ತಿದ್ದ ಕ್ರೇನ್ ಅಕಸ್ಮಾತ್ತಾಗಿ ಅವರ ನಿಯಂತ್ರಣ ತಪ್ಪಿ ಹೊಂಡವೊಂದಕ್ಕೆ ಬಿದ್ದು ಪುಡಿಪುಡಿಯಾಯಿತು.ಏನೋ ದೇವರ ದಯೆ ಲೋಹಿತಾಕ್ಷ ಯಾವುದೇ ರೀತಿಯ ಅಪಾಯವಿಲ್ಲದೆ ಪಾರಾದರು. ಆದರೆ ಇಲ್ಲಿ ವಿಧಿ ಅವರ ಬೆನ್ನು ಬಿಡಲಿಲ್ಲ. ಮಾಲೀಕ ತನ್ನ ಕ್ರೇನ್ ಪುಡಿಯಾದ ಬಗ್ಗೆ ಇವರ ವಿರುದ್ಧವೇ ದೂರು ಕೊಟ್ಟ. ದೂರಿನ ಪ್ರಕಾರ ಹಿಂದು ಮುಂದು ನೋಡದೆ ಪೊಲೀಸರು ಇವರನ್ನು ಬಂಧಿಸಿ ಜೈಲಿಗೆ ತಳ್ಳಿದರು. ಹರಕೆಯ ಕುರಿಯಾದ ಲೋಹಿತಾಕ್ಷ:ವಾಸ್ತವವಾಗಿ ನೋಡುವುದಾದರೆ ಈ ಅಪಘಾತದಲ್ಲಿ ಲೋಹಿತಾಕ್ಷರದೇನೂ ತಪ್ಪಿಲ್ಲ. ನಡೆಯಬೇಕಾಗಿದ್ದ ಒಂದು ದುರ್ಘಟನೆ ಅನೀರೀಕ್ಷಿತವಾಗಿ ನಡೆದು ಹೋಗಿತ್ತು. ಆದರೆ ಇದರಲ್ಲಿ ಸುಮ್ಮನೆ ಲೋಹಿತಾಕ್ಷ ಬಲಿಪಶುವಾದರು. ಆನಂತರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕ್ರೇನ್ ಮಾಲೀಕನಿಗೆ ಪರಿಹಾರವಾಗಿ ಲೋಹಿತಾಕ್ಷ ಹತ್ತು ಲಕ್ಷ ರೂಪಾಯಿ ಅಂದರೆ ಎಂಬತ್ತು ಸಾವಿರ ರಿಯಾಲ್ ಪರಿಹಾರ ಕೊಡಬೇಕೆಂದು ತೀರ್ಪಾಯಿತು. ಹೇಳಿ ಕೇಳಿ ಲೋಹಿತಾಕ್ಷ ಕಡಿಮೆ ಸಂಬಳಕ್ಕೆ ದುಡಿಯುವ ಒಬ್ಬ ಬಡ ಕಾರ್ಮಿಕ . ಎಲ್ಲಿಂದ ಹೊಂದಿಸಿಯಾರು ಅಷ್ಟೊಂದು ದೊಡ್ಡ ಮೊತ್ತವನ್ನು ?. ಅದಲ್ಲದೆ ಎಂಟು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಇಂತಹವರಿಗೆ ಹತ್ತು ಲಕ್ಷ ರೂಪಾಯಿ ದಂಡ ಹಾಕಿದರೆ ಅವರು ಏನು ಮಾಡಿಯಾರು ? ಲೋಹಿತಾಕ್ಷ ಜೀವನದ ಆಸೆಯನ್ನೇ ಬಿಟ್ಟರು. ಒಮ್ಮೆ ಮನೆಗೆ ದೂರವಾಣಿ ಕರೆ ಮಾಡಿದ ಅವರು ತನ್ನ ಬರುವಿಕೆಯ ಬಗೆಗಿನ ಆಸೆಯನ್ನು ಬಿಟ್ಟುಬಿಡುವಂತೆ ಹೇಳಿದ್ದರಂತೆ.

ಆದರೆ ಈ ವಿಷಯ ತಿಳಿದ masa ದ ಅಧ್ಯಕ್ಷ ಮಾಧವ ಅಮೀನ್ ಜಾಗೃತರಾದರು.ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಸೇವೆಯಲ್ಲಿ ಸದಾ ಮುಂದೆ ನಿಲ್ಲುವ ಮಾಧವ ಅಮೀನ್ ತನ್ನ ಸಂಘಟನೆಯ ಉಪಾಧ್ಯಕ್ಷರಾದ ರವಿ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಹಾಗೂ ಪಧಾದಿಕಾರಿಗಳಾದ ಮಧುಕರ ದೇವಾಡಿಗ, ಬಾಬು ಕೋಟೆಬೆಟ್ಟು, ದಯಾನಂದ ಶ್ರೀಯಾನ್, ಅಲ್ ರಾಜಿ ಬ್ಯಾಂಕಿನ ವಸಂತ್ ಕುಮಾರ್ ಹೆಗ್ಡೆ ಅವರೊಂದಿಗೆ ಸೇರಿ ಈ ವಿಷಯದಲ್ಲಿ ಲೋಹಿತಾಕ್ಷರಿಗೆ ನೆರವಾಗಬೇಕೆಂದು ರಂಗಕ್ಕಿಳಿದರು. ಜೊತೆಗೆ ಇವರು ತಮ್ಮ ಸಂಘಟನೆಯ ಪರವಾಗಿ ಸ್ವಲ್ಪ ಮಟ್ಟಿಗಿನ ಹಣವನ್ನು ಸಂಗ್ರಹಿಸಿದರು. ಇವರ ಈ ಕೆಲಸವನ್ನು ಗಮನಿಸಿದ ಕರಾವಳಿಯ ಜನತೆ ಹಾಗೂ ಸಂಘ ಸಂಸ್ಥೆಗಳು ಇವರ ಬೆಂಬಲಕ್ಕೆ ನಿಂತು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣ ಸಂಗ್ರಹಿಸಿ ಕೊಟ್ಟವು. ರಿಯಾದ್ ಕರಾವಳಿ ಅಸೋಸಿಯೇಶನ್ ಅಧ್ಯಕ್ಷ ವಿಜಯ್ ರೈ, ರಿಯಾದ್ ಬಂಟರ ಸಂಘದ ಮೋಹನದಾಸ್ ಶೆಟ್ಟಿ, ಭಟ್ಕಳ ಸಮಾಜದ ಅರ್ಶದ್, ಜುಬೈರ್, ಫಯಾಜ್, ಮಂಗಳೂರಿನ ರೋಯಿಸ್ತನ್ ಪ್ರಭು ಹಾಗೂ ಇತರರು ತಮ್ಮ ಕೈಲಾದ ನೆರವು ನೀಡುವುದರ ಜೊತೆಗೆ ಈ ಕಾರ್ಯದಲ್ಲಿ ತಮ್ಮ ಸಹಕಾರವನ್ನೂ ಕೊಟ್ಟರು.

ಇತ್ತ ಸೌದಿ ಅರೇಬಿಯಾದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೆ ಅತ್ತ ಯು.ಎ.ಇ. ಯಲ್ಲಿ ಶೋಧನ್ ಪ್ರಸಾದ್ ಈ ವಿಷಯದಲ್ಲಿ ರಂಗಕ್ಕಿಳಿದಿದ್ದರು. ಮಿತ್ರ ಅಫ್ರೋಜ್ ಅಸ್ಸಾದಿ ಜೊತೆ ನಮ್ಮ ತುಳುವೆರ್, ದೇವಾಡಿಗ ಸಂಘ ಈ ಕಾರ್ಯದಲ್ಲಿ ಇವರ ಬೆಂಬಲಕ್ಕೆ ನಿಂತವು. ಈ ಎಲ್ಲಾ ಸಹೃದಯರ ನೆರವಿನಿಂದ ಕೊನೆಗೂ ಜೂನ್ ಎಂಟರಂದು ಲೋಹಿತಾಕ್ಷರ ಬಿಡುಗಡೆಯಾಯಿತು. ಲೋಹಿತಾಕ್ಷರನ್ನು ಆದರದಿಂದ ಬರಮಾಡಿಕೊಂಡ MASA ಸಂಘಟನೆಯ ಪಧಾದಿಕಾರಿಗಳು ಅವರನ್ನು ಎರಡೇ ದಿನಗಳಲ್ಲಿ ತಾಯ್ನಾಡಾದ ಮಂಗಳೂರಿಗೆ ಬೀಳ್ಕೊಟ್ಟರು. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದ ಒಬ್ಬ ಅನಿವಾಸಿ ಕನ್ನಡಿಗನ ನೆರವಿಗೆ ಧಾವಿಸಿದ MASA ದ ಪದಾಧಿಕಾರಿಗಳಿಗೆ ಅವರ ಬೆಂಬಲಕ್ಕೆ ನಿಂತ ಕೊಲ್ಲಿ ರಾಷ್ಟ್ರದ ಅನಿವಾಸಿ ಕನ್ನಡ ಸಂಘ ಸಂಸ್ಥೆಗಳಿಗೆ ಮತ್ತು ನಾಗರೀಕರಿಗೆ, ಈ ವಿಷಯವನ್ನು ಜನರ ಮುಂದೆ ತಂದ ದಾಯ್ಜಿ ವರ್ಲ್ಡ್ ತಂಡಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನ ಕರ್ತವ್ಯ ಎಂದರೂ ತಪ್ಪಾಗಲಾರದು.


- ಅಶ್ರಫ್ ಮಂಜ್ರಾಬಾದ್. ಸಕಲೇಶಪುರ

ಶುಕ್ರವಾರ, ಜೂನ್ 04, 2010

ನಕ್ಸಲ್ ಸಮಸ್ಯೆಗೆ ಪರಿಹಾರ ನಕ್ಸಲರ ಕೈಯಲ್ಲೇ ಇದೆ… !!!

ನಕ್ಸಲರ ಮೇಲೆ ಅನುಕಂಪ ತೋರಿಸುತ್ತಿರುವವರ ಮೇಲೆ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿರುವ ಬೆನ್ನಲ್ಲೇ ಈ ಬಗ್ಗೆ ವಿವಾದಗಳು ಆರಂಭವಾಗಿವೆ. ನಕ್ಸಲರ ಮೇಲೆ ಕ್ರಮಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿರುವ ಸರ್ಕಾರ ಈಗ ಅವರ ಮೇಲೆ ಅನುಕಂಪ ಹೊಂದಿರುವವರ ಮೇಲೆ ಕ್ರಮ ಕೈಗೊಳ್ಳಲು ಹೊರಟಿದೆ. ಈ ಬಗ್ಗೆ ಈಗಾಗಲೇ ದಾಂತೆವಾಡದ ದಂಡಕಾರಣ್ಯದಲ್ಲಿ ನಕ್ಸಲರೊಂದಿಗೆ ಕೆಲವು ದಿನಗಳನ್ನು ಕಳೆದು ಅವರ ಜೀವನದ ನೈಜ ಚಿತ್ರಣಗಳು ಅವರ ಉದ್ದೇಶಗಳನ್ನು ಪುಸ್ತಕ ರೂಪದಲ್ಲಿ ಹೊರತಂದ ಬೂಕರ್ ಪ್ರಶಸ್ತಿ ವಿಜೇತೆ, ಅಂತರಾಷ್ಟ್ರೀಯ ಖ್ಯಾತಿಯ ಕೇರಳ ಮೂಲದ ಲೇಖಕಿ ಆರುಂಧತಿ ರಾಯ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. ಜೊತೆಗೆ ಸರ್ಕಾರ ಇದಕ್ಕಾಗಿ ನನ್ನನ್ನು ಬಂಧಿಸುವುದಾದರೆ ಬಂಧಿಸಲಿ ಎಂಬ ನೇರ ಸವಾಲನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.ನಕ್ಸಲರು ಯಾರೆಂದು ನೋಡಲು ಹೋದರೆ ಈ ವ್ಯವಸ್ಥೆಯ ದಬ್ಬಾಳಿಕೆಯಿಂದ ನರಳಿ ಕೊನೆಗೆ ಈ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಾಗಿ ಮಾವೋ ಚಿಂತನೆಗೆ ಅನುಸಾರವಾಗಿ ಬಂದೂಕನ್ನು ಕೈಗೆತ್ತಿಕೊಂಡು ಸಮಾಜವನ್ನು ಸರಿದಾರಿಗೆ ತರುತ್ತೇವೆ ಎಂದು ಹೊರಟ ಶೋಷಿತ ಮತ್ತು ದಮನಿತ ಸಮುದಾಯದ ಜನರು. ಆದರೆ ಈ ಹೋರಾಟದಿಂದ ಅವರು ಸಾಧಿಸಿದ್ದೇನು ಎಂದು ನೋಡಿದರೆ ಕಂಡು ಬರುವ ಫಲಿತಾಂಶ ಮಾತ್ರ ಶೂನ್ಯ. ಆದರೆ ಇತ್ತೀಚಿನ ನಕ್ಸಲ್ ಹೋರಾಟದ ದಿಕ್ಕನ್ನು ನೋಡಿದರೆ ಎಲ್ಲೋ ಒಂದು ಕಡೆ ಈ ಹೋರಾಟದ ದಿಕ್ಕು ತಪ್ಪಿದೆ ಮತ್ತು ತಪ್ಪುತ್ತಿದೆ ಎಂದು ಎನಿಸುವುದು ಸಾಮಾನ್ಯ. ಇದಕ್ಕೆ ಇತ್ತೀಚಿಗೆ ನಕ್ಸಲ್ ಹೆಸರಿನಲ್ಲಿ ಮುಗ್ಧ ನಾಗರೀಕರ ಮೇಲೆ ನಡೆಯುತ್ತಿರುವ ದಾಳಿ ಒಂದು ಉದಾಹರಣೆ ಎನ್ನಬಹುದು. ಸಮಾಜವನ್ನು ಸರಿದಾರಿಗೆ ತರಲು ನಕ್ಸಲರು ಎನಿಸಿಕೊಂಡಂತೆ ಬಂದೂಕಿನ ಹೋರಾಟದ ಮೂಲಕ ಖಂಡಿತ ಸಾಧ್ಯವಿಲ್ಲ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಲು ಅನೇಕ ಮಾರ್ಗಗಳಿವೆ.


ಸಂವಿಧಾನ ಶಿಲ್ಪಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಒಂದು ಪುಸ್ತಕದಲ್ಲಿ ಈ ರೀತಿ ಹೇಳಿದ್ದಾರೆ. Ballet is more powerful than bullet. ಅಂದರೆ ಮತಪತ್ರ (ಬ್ಯಾಲೆಟ್) ಬುಲೆಟ್ ಗಿಂತಲೂ ಶಕ್ತಿಶಾಲಿಯಾದದ್ದು ಎಂದು. ಒಂದು ಸರ್ಕಾರದ ಅಥವಾ ಒಂದು ವ್ಯವಸ್ಥೆಯ ವಿರುದ್ಧ ಹೋರಾಡಲು ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುವುದು ಒಂದು ಅತೀ ದೊಡ್ಡ ಅಸ್ತ್ರ . ಈ ಕಾರಣದಿಂದಲೇ ಅಂಬೇಡ್ಕರ್ ತನ್ನ ಅನುಯಾಯಿಗಳಿಗೆ ಮತ್ತು ಶೋಷಿತ ಜನರಿಗೆ ಶಿಕ್ಷಣ, ಸಂಘಟನೆ, ಹೋರಾಟ ಮತ್ತು ರಾಜ್ಯಾಧಿಕಾರದ ಕರೆಯನ್ನು ಕೊಟ್ಟರು. ಅಂಬೇಡ್ಕರ್ ಶೋಷಿತ ಸಮುದಾಯಗಳ ಎಲ್ಲಾ ಸಮಸ್ಯೆಗಳಿಗೆ ರಾಜ್ಯಾಧಿಕಾರದಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ನಂಬಿದ್ದರು.


ಇಂದಿನ ಈ ನಕ್ಸಲ್ ಹೋರಾಟಗಾರರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ ತಮ್ಮ ಬಂದೂಕನ್ನು ಬದಿಗಿಟ್ಟು ತಾವು ಇದುವರೆಗೆ ಬಹಿಷ್ಕರಿಸಿಕೊಂಡು ಬಂದಿದ್ದ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು. ಹಾಗಾದಾಗ ಮಾತ್ರ ನಕ್ಸಲರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇಲ್ಲದಿದ್ದರೆ ಅವರ ಈ ಹೋರಾಟ ಅರ್ಥಹೀನವಾಗಬಹುದು. ನಕ್ಸಲರ ವಿಚಾರಧಾರೆಗಳು ಮಾನವ ಮತ್ತು ಮಾನವೀತೆಯ ಪರ ಇದ್ದರೂ ಅವರ ಕೈಯಲ್ಲಿರುವ ಬಂದೂಕು ಅವರ ಹೋರಾಟವನ್ನು ನಿಷ್ಪ್ರಯೋಜಕಗೊಳಿಸಬಹುದು.ಈ ಕಾರಣದಿಂದಲೇ ಆರುಂಧತಿ ರಾಯ್ ತನ್ನ ಪುಸ್ತಕದಲ್ಲಿ ನಕ್ಸಲೀಯರನ್ನು ಬಂದೂಕು ಹಿಡಿದ ಆಧುನಿಕ ಗಾಂಧಿಗಳು ಎಂದು ವರ್ಣಿಸಿರಬಹುದು. ಒಂದು ಸರ್ಕಾರ ಮನಸ್ಸು ಮಾಡಿದರೆ ನಕ್ಸಲರನ್ನು ಮಣ್ಣು ಮುಕ್ಕಿಸುವುದು ಅಷ್ಟು ಕಷ್ಟವೇನಲ್ಲ. ಆದರೆ ಅದರಿಂದ ಮುಗ್ಧ ನಾಗರೀಕರ ಹತ್ಯೆ ಆಗಬಹುದು ಎಂಬ ಆಘಾತಕಾರಿ ಅಂಶವೂ ಸತ್ಯವೇ ಆಗಿದೆ. ನಕ್ಸಲರು ಸ್ವತಹ ಸಮಾಜದ ಮುಖ್ಯವಾಹಿನಿಗೆ ಬಂದು ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಬೇಕೇ ಹೊರತು ಕಾಡಿನೊಳಗೆ ಕುಳಿತು ಮುಗ್ಧ ನಾಗರೀಕರನ್ನು ಸರ್ಕಾರದ ವಿರುದ್ಧ ದಾಳವಾಗಿ ಬಳಸಿಕೊಳ್ಳುವುದರ ಮೂಲಕ ಅಲ್ಲ.– ಅಶ್ರಫ್ ಮಂಜ್ರಾಬಾದ್.

ಆಶ್ರಮದಲ್ಲಿನ ಗುಂಡಿನ ದಾಳಿಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ.

ಬೆಂಗಳೂರಿನ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆಶ್ರಮದಲ್ಲಿ ನಡೆದ ಗುಂಡಿನ ದಾಳಿ ಮತ್ತು ಆನಂತರ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳು ಸಾರ್ವಜನಿಕ ವಲಯದಲ್ಲಿ ಒಂದು ರೀತಿಯ ಸಂಶಯದ ಮುಳ್ಳನ್ನು ಬಿತ್ತಿದೆ. ರವಿಶಂಕರ ಗುರೂಜಿ ಲಕ್ಷಾಂತರ ಭಕ್ತರನ್ನು ದೇಶ ವಿದೇಶಗಳಲ್ಲಿ ಒಳಗೊಂಡಿರುವಂತಹ ಆಧ್ಯಾತ್ಮಿಕ ಧರ್ಮಗುರುಗಳು. ಅಲ್ಲದೆ ಸದಾ ಯಾವಾಗಲೂ ಶಾಂತಿಯ ಮಂತ್ರವನ್ನು ಜಪಿಸುತ್ತಿರುವಂತಹವರು. ಅಂತಹವರ ಆಶ್ರಮದಲ್ಲಿ ನಡೆದ ಗುಂಡಿನ ದಾಳಿ ಈ ನಾಡಿನ ಶಾಂತಿಯ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ.


ಆದರೆ ಇದಕ್ಕೆ ಕಾರಣವೇನೂ ಎಂಬುವುದು ಇನ್ನೂ ಸ್ಪಷ್ಟವಾಗದಿದ್ದರೂ ಹಲವು ರೀತಿಯ ಸಂಶಯಗಳನ್ನು ಮಾತ್ರ ಹುಟ್ಟು ಹಾಕಿದೆ. ಅದೂ ಅಲ್ಲದೆ ಸ್ವಾಮೀಜಿ ಕಾರಿನಲ್ಲಿ ತೆರಳಿದ ನಂತರ ನಡೆದ ಈ ಗುಂಡು ಹಾರಾಟದ ಉದ್ದೇಶ ಸ್ವಾಮೀಜಿಯನ್ನು ಕೊಲ್ಲುವ ಉದ್ದೇಶದಿಂದ ನಡೆಸಿದ ದಾಳಿ ಅಲ್ಲ ಎಂಬುವುದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಕೊಂಡ ಸತ್ಯ.
ಈಗಂತೂ ಸ್ವತಹ ಸ್ವಾಮೀಜಿಯೇ ಝಡ್‌ಪ್ಲಸ್ ಭದ್ರತೆ ಪಡೆಯಲು ಈ ದಾಳಿಯ ನಾಟಕ ಹಮ್ಮಿಕೊಂಡಿದ್ದರು ಎಂಬುವುದು ಕೆಲ ಮೂಲಗಳಿಂದ ತಿಳಿದು ಬರುತ್ತಿರುವುದು ಒಂದು ರೀತಿಯ ಆಶ್ಚರ್ಯಕರ ಸುದ್ಧಿ . ಹೀಗಾದರೆ ಇದು ಮಾತ್ರ ಅತ್ಯಂತ ಖಂಡನೀಯ.


ಇತ್ತೀಚಿಗೆ ಸ್ವಾಮೀಜಿಗಳಿಗೆ ಝಡ್‌ಪ್ಲಸ್ ಭದ್ರತೆ ಮತ್ತು ಕೆಂಪು ದೀಪದ ಕಾರು ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಅನೇಕ ಸ್ವಾಮೀಜಿಗಳು ಈ ರೀತಿಯ ಕೆಂಪು ದೀಪದ ಕಾರಿನಲ್ಲಿ ಓಡಾಡುತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಅದನ್ನು ಕಂಡೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿದೆ. ಹೀಗಿರುವಾಗ ರವಿಶಂಕರ್ ಗುರೂಜಿ ತನ್ನ ಬಹುದಿನಗಳ ಕೋರಿಕೆಯಾದ ಝಡ್‌ಪ್ಲಸ್ ಭದ್ರತೆ ಪಡೆಯಲು ಈ ರೀತಿ ದಾಳಿಯ ನಾಟಕ ನಡೆಸಿದ್ದಾರೆ ಎಂದು ಕಂಡು ಬಂದರೆ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವೇ ಈ ದಾಳಿ ಬೇರೆ ಯಾರಿಂದಾದರೂ ನಡೆದಿದ್ದಲ್ಲಿ ಅವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಈ ಎಲ್ಲಾ ವಿಷಯ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ. ಸರ್ಕಾರ ಅದನ್ನು ಆದಷ್ಟು ಬೇಗ ಮಾಡಿ ಮುಗಿಸಲಿ.


- ಅಶ್ರಫ್ ಮಂಜ್ರಾಬಾದ್.

ಶುಕ್ರವಾರ, ಮೇ 28, 2010

ಓ ದೇವರೇ ಈ ರೀತಿಯ ದುರಂತದ ಮರಣ ಇನ್ನಾರಿಗೂ ಬರದಿರಲಿ..


ಮಂಗಳೂರಿನಲ್ಲಿ ನಡೆದ ದುಬಾಯಿ - ಮಂಗಳೂರು ನಡುವೆ ಸಂಚರಿಸುವ ಏರ್ ಇಂಡಿಯಾ ವಿಮಾನದ ಅಪಘಾತ ಎಂತಹವರ ಮನಸ್ಸನ್ನೂ ನೋಯಿಸುವಂತಹದ್ದು. ಹಲವಾರು ಕನಸುಗಳನ್ನು ಹೊತ್ತು ಊರಿಗೆ ಹಿಂದಿರುಗುತ್ತಿದ್ದ ಅನಿವಾಸಿ ಭಾರತೀಯರು ಊರು ತಲುಪಿದರೂ ಮನೆ ತಲುಪಲಾಗದೆ ದುರಂತದ ಬೆಂಕಿಯಲ್ಲಿ ಬೆಂದು ತಮ್ಮವರಿಗೂ ತಮ್ಮ ಗುರುತು ಸಿಗಲಾರದಂತೆ ಸುಟ್ಟು ಕರಕಲಾಗಿ ಹೋಗಿದ್ದರು.ಹೇಳಿ ಕೇಳಿ ಮಂಗಳೂರು ವಿಮಾನ ನಿಲ್ದಾಣ ಅಷ್ಟೇನೂ ಸುರಕ್ಷಿತವಲ್ಲದ ಬೆಟ್ಟ ಗುಡ್ಡಗಳ ನಡುವೆ ನಿರ್ಮಿಸಿದ ಕಿರಿದಾದ ರನ್ ವೇ ಯನ್ನು ಒಳಗೊಂಡ ಅಪಾಯಕಾರಿ ವಿಮಾನ ನಿಲ್ದಾಣ. ಇದು ಅಲ್ಲಿ ವಿಮಾನದ ಮೂಲಕ ಬಂದಿಳಿದವರಿಗೆ ಸಾಮಾನ್ಯವಾಗಿ ಅನುಭವವಾಗಿರುತ್ತದೆ. ವಿಮಾನ ಇಳಿಯುತ್ತಿದ್ದಂತೆ ಕಾಣುವ ಬೆಟ್ಟಗುಡ್ಡಗಳನ್ನೊಳಗೊಂಡ ವಿಮಾನ ನಿಲ್ದಾಣದ ನೋಟ ಪ್ರಯಾಣಿಕರ ಎದೆ ಜುಂ ಎನಿಸುತ್ತದೆ. ವಿಮಾನ ಭೂಸ್ಪರ್ಶವಾಗುತ್ತಿದ್ದಂತೆ ಅಲ್ಲಿ ಹಾಕುವ ಬ್ರೇಕ್ ಒಮ್ಮೆಲೇ ವಿಮಾನದ ಒಳಗಿರುವ ಪ್ರಯಾಣಿಕರನ್ನು ಎತ್ತಿನಗಾಡಿಯ ಪ್ರಯಾಣದ ನೆನಪಿಗೆ ಕೊಂಡು ಹೋಗುತ್ತದೆ. ಬ್ರೇಕ್ ಹಾಕುವಾಗ ವಿಮಾನದ ಒಳಗೆ ಅಲುಗಾಡುವ ಪರಿ ಅಂತಹದ್ದು. ಇದು ಈ ರನ್ ವೇ ಎಷ್ಟು ಅಪಾಯಕಾರಿ ಎಂಬುವದನ್ನು ಪ್ರಾಯೋಗಿಕವಾಗಿಯೇ ನಮ್ಮ ಮುಂದೆ ತೆರೆದಿಡುತ್ತದೆ. ನನ್ನ ಅನುಭವದ ಪ್ರಕಾರ ನಾನು ಅಬುಧಾಬಿ, ಶಾರ್ಜಾ, ಬೆಂಗಳೂರು, ಮುಂಬೈ, ರಿಯಾದ್, ತಬೂಕ್, ಮಂಗಳೂರು ವಿಮಾನ ನಿಲ್ದಾಣಗಳ ರನ್ ವೇ ಗಳಲ್ಲಿ ವಿಮಾನದ ಮೂಲಕ ಇಳಿದಿದ್ದೇನೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಗುವಂತಹ ಅನುಭವವೇ ಬೇರೇ.ನನ್ನ ಪ್ರಕಾರ ಇದು ನನ್ನ ಒಬ್ಬನ ಅನುಭವವಲ್ಲ. ಸಾಧಾರಣ ಪ್ರಯಾಣಿಕರಿಗೆ ಇದರ ಅನುಭವವಾಗಿರುತ್ತದೆ. ಮೊನ್ನೆ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಮುಂಬೈ ಮೂಲದ ಗಗನ ಯಾತ್ರಿ ಈ ನಿಲ್ದಾಣದ ಅಪಾಯಕಾರಿ ರನ್ ವೇ ಬಗ್ಗೆ ತನ್ನ ಪೋಷಕರಲ್ಲಿ ಹೇಳಿ ಇಲ್ಲಿ ವಿಮಾನದ ಲ್ಯಾಂಡಿಂಗ್ ಮೊದಲು ಗಗನ ಸಖಿಯರಾದ ನಾವು ವಿಮಾನದ ಸುರಕ್ಷಿತ ಲ್ಯಾಂಡಿಂಗ್ ಗಾಗಿ ದೇವರಲ್ಲಿ ಪ್ರಾರ್ಥಿಸುತಿದ್ದೆವು ಎಂದು ಹೇಳಿದ ವಿಚಾರವನ್ನು ಆಕೆಯ ಶವ ಪಡೆಯಲು ಬಂದ ಆಕೆಯ ಪೋಷಕರು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಇದು ಈ ರನ್ ವೇಯ ಅಪಾಯಕಾರಿ ಮಟ್ಟವನ್ನು ಸೂಚಿಸುತ್ತದೆ.


ದುರಂತ ನಡೆದ ನಂತರ ವಿಮಾನ ನಿಲ್ದಾಣದ ಸುರಕ್ಷತಾ ವಿಭಾಗದ ಅಧಿಕಾರಿಗಳು ಹಾಗೂ ನೌಕರರು ಕೈಗೊಂಡ ಪರಿಹಾರ ಕ್ರಮಗಳು ಸಕಾಲಿಕವಾಗಿ ಜರುಗಿದ್ದರೆ ಇನ್ನೂ ಅನೇಕ ಜೀವಗಳನ್ನು ಉಳಿಸಬಹುದಿತ್ತು ಎಂಬುವುದು ದುರಂತ ನಡೆದ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ದುರಂತ ಸ್ಥಳಕ್ಕೆ ಓಡಿ ಹೋದ ಸ್ಥಳೀಯ ನಾಗರೀಕರ ಅಭಿಪ್ರಾಯ. ಅವರ ಪ್ರಕಾರ ವಿಮಾನ ಬಿದ್ದ ಹತ್ತು ನಿಮಿಷಗಳಲ್ಲಿ ವಿಮಾನ ನಿಲ್ದಾಣದ ರನ್ ವೇ ಮೇಲಿನಿಂದ ಎರಡು ಅಗ್ನಿಶಾಮಕ ವಾಹನಗಳು ನೊರೆಭರಿತ ನೀರನ್ನು ವಿಮಾನದ ಮೇಲೆ ಸಿಂಪಡಿಸಿದವು. ಆದರೆ ಅವು ವಿಮಾನವನ್ನು ತಲುಪಲೇ ಇಲ್ಲ . ಕೊನೆಗೆ ಅವು ಹಿಂತಿರುಗಿ ಹೋಗಿ ಇನ್ನೊಂದು ದಾರಿಯ ಮೂಲಕ ಸುಮಾರು ಇಪ್ಪತ್ತು ನಿಮಿಷದ ದುರ್ಗಮ ಹಾದಿಯ ಮೂಲಕವಾಗಿ ದುರಂತ ಸ್ಥಳಕ್ಕೆ ಬಂದವು. ಆನಂತರ ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಮತ್ತು ಕೆಲವು ಶವಗಳನ್ನು ಹೊರಗೆ ಎಳೆಯಲು ಸಾಧ್ಯವಾಯಿತು. ಇಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಸುರಕ್ಷತಾ ಕ್ರಮಗಳ ಲೋಪ ಮತ್ತು ಅವು ಅಳವಡಿಸಿಕೊಂಡ ಅವೈಜ್ಞಾನಿಕ ರೀತಿಯ ವ್ಯವಸ್ಥೆ ಎದ್ದು ಕಾಣುತ್ತದೆ. ಬೆಟ್ಟ ಗುಡ್ಡಗಳ ನಡುವೆ ಇರುವ ವಿಮಾನ ನಿಲ್ದಾಣ ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವಿಮಾನ ಗುಂಡಿಗೆ ಬೀಳುವ ಸಾಧ್ಯತೆಯೇ ಅಧಿಕ .


ಈ ಮುಂಚೆ ವೀರಪ್ಪ ಮೊಯ್ಲಿ ಪ್ರಯಾಣಿಸಿದ ವಿಮಾನ ಸಹ ಈ ರೀತಿ ಗುಂಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಅವರ ಜೀವ ಉಳಿದಿತ್ತು. ಅಂದು ಕೂಡ ಅದು ತಡೆಗೋಡೆಗೆ ಡಿಕ್ಕಿ ಹೊಡೆಯದಿದ್ದರೆ ಅವರೂ ಕೂಡ ವಿಮಾನದೊಟ್ಟಿಗೆ ಗುಂಡಿಗೆ ಬೀಳುತಿದ್ದರು. ಈ ಎಲ್ಲಾ ಘಟನೆಗಳನ್ನು ಅವರು ಈ ದುರಂತ ನಡೆಯುವ ಒಂದು ವಾರ ಮೊದಲು ನಡೆದ ನೂತನ ರನ್ ವೇಯ ಉದ್ಘಾಟನೆಯಲ್ಲೂ ನೆನಪಿಸಿಕೊಂಡಿದ್ದರು. ಹೀಗಿರುವಾಗ ವಿಮಾನ ನಿಲ್ದಾಣದ ಮೇಲಿನಿಂದ ಅಗ್ನಿಶಾಮಕ ವಾಹನಗಳು ಹಾರಿಸಿದ ನೊರೆಭರಿತ ನೀರು ಕೆಳಗಿದ ವಿಮಾನಕ್ಕೆ ತಲುಪಿಲ್ಲ ಅಂದರೆ ಇಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು ಎಷ್ಟೊಂದು ಅವೈಜ್ಞಾನಿಕ ಎನ್ನುವುದನ್ನು ಸೂಚಿಸುತ್ತದೆ. ಅದಲ್ಲದೆ ಪರ್ಯಾಯ ದಾರಿ ಇಲ್ಲದೆ ಇದ್ದ ಕಚ್ಚಾ ರಸ್ತೆಯನ್ನು ಬಳಸಿಕೊಂಡು ಬರಲು ತೆಗೆದು ಕೊಂಡ ಅಮೂಲ್ಯ ಇಪ್ಪತ್ತು ನಿಮಿಷವೂ ಸಹ ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂಬುವುದು ಪ್ರತ್ಯಕ್ಷದರ್ಶಿಗಳ ಸ್ಪಷ್ಟ ಅಭಿಪ್ರಾಯ.


ದುರಂತವೇನೋ ನಡೆದಿದೆ. ಇದಕ್ಕೆ ಕಾರಣ ಬ್ಲಾಕ್ ಬಾಕ್ಸಿನ ವರದಿ ಬಂದ ನಂತರ ಸ್ಪಷ್ಟವಾಗಿ ತಿಳಿಯಲಿದೆ. ಆದರೆ ಈ ರೀತಿಯ ದುರಂತ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಜೊತೆಗೆ ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ. ದುರಂತದಲ್ಲಿ ಮಡಿದ ಅಮಾಯಕ ನಾಗರೀಕರಿಗೆ ಅಲ್ಲಲ್ಲಿ ಶೋಕ ಸಭೆಗಳು ನಡೆಯುತ್ತಿದೆ. ಸಭೆ ಸಮಾರಂಭಗಳ ಮೂಲಕ ಜನತೆ ಅವರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ದುರಂತದ ಬಗ್ಗೆ ಮತ್ತು ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತವಾದ ತನಿಖೆ ನಡೆದು ಮೃತರ ಕುಟುಂಬಸ್ಥರಿಗೆ ಯಾವುದೇ ಅಡಚಣೆ ಇಲ್ಲದೆ ಪರಿಹಾರ ದೊರಕಿಸಿಕೊಟ್ಟರೆ ಅದು ಮಾತ್ರ ಮೃತರಿಗೆ ಸಲ್ಲಿಸುವ ನೈಜ ಶ್ರದ್ದಾಂಜಲಿಯಾಗಬಹುದು.- ಅಶ್ರಫ್ ಮಂಜ್ರಾಬಾದ್. ಸಕಲೇಶಪುರ.

ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಮತ್ತು ಮುಸ್ಲಿಂ ಮೀಸಲಾತಿ ..


ಆಂಧ್ರ ಹೈಕೋರ್ಟ್ ಆಂಧ್ರ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ನೀಡಲು ಉದ್ದೇಶಿಸಿದ್ದ ಶೇಕಡ ನಾಲ್ಕರ ಮೀಸಲಾತಿಯನ್ನು ರದ್ದು ಪಡಿಸುತಿದ್ದಂತೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟ್ ಸರಕಾರ ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇಕಡ ಹತ್ತರಷ್ಟು ಮೀಸಲಾತಿಯನ್ನು ನೀಡುವುದಾಗಿ ಪ್ರಕಟಿಸಿದೆ. ಸಾಚಾರ್ ಸಮಿತಿಯ ಜಾರಿಗೆ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಕೆಲ ಪ್ರಗತಿಪರ ಮಾನವ ಹಕ್ಕು ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿರುವಂತೆ ಪಶ್ಚಿಮ ಬಂಗಾಳದ ಅಪ್ಪಟ ಧರ್ಮ ನಿರಪೇಕ್ಷ ಕಮ್ಯುನಿಷ್ಟ್ ಸಿದ್ಧಾಂತದ ಸರಕಾರ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಪ್ರಕಟಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಒಂದು ರೀತಿಯ ಕುತೂಹಲದ ಜೊತೆಗೆ ವಿವಾದವನ್ನೂ ಮೂಡಿಸಿದೆ.


ಆಶ್ಚರ್ಯ ಆಗುವುದು ಅದಲ್ಲ. ಇದುವರೆಗೆ ಸುಮಾರು ಮೂರು ದಶಕಗಳ ಕಾಲ ನಿರಂತರವಾಗಿ ಪಶ್ಚಿಮ ಬಂಗಾಳದ ಗದ್ದುಗೆಯನ್ನಾಲಿದ ಈ ಸರ್ಕಾರ ಇದುವರೆಗೆ ಮುಸ್ಲಿಂ ಮೀಸಲಾತಿಯ ಬಗ್ಗೆ ಸೊಲ್ಲೆತ್ತದೆ ಈಗ ಏಕಾಏಕಿ ಮೀಸಲಾತಿ ನೀಡುವುದಾಗಿ ಘೋಷಿಸಿರುವುದು. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿದೆ. ಕಮ್ಯುನಿಷ್ಟರ ಭದ್ರ ಕೋಟೆಗಳು ಮಮತಾ ಬ್ಯಾನರ್ಜಿಯ ವರ್ಚಸ್ಸಿನ ಮುಂದೆ ಈಗಾಗಲೇ ಅಲುಗಾಡತೊಡಗಿವೆ. ಬಂಡವಾಳಶಾಹಿಗಳ ವಿರೋಧಿಗಳಾಗಿದ್ದ ಕಮ್ಯುನಿಷ್ಟರು ನಂದಿ ಗ್ರಾಮದಲ್ಲಿ ಟಾಟಾ ಕಂಪೆನಿಯ ನ್ಯಾನೋ ಘಟಕಕ್ಕೆ ರೈತರ ಫಲವತ್ತಾದ ಜಾಗ ಕೊಡುವ ಭರದಲ್ಲಿ ಅಲ್ಲಿನ ರೈತರ ಮೇಲೆ ನಡೆಸಿದ ಅಧಿಕಾರಿಕ ದಾಳಿ ಇದೆಯಲ್ಲ ಅದು ಇಡೀ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ವಿರೋಧಿ ಅಲೆಯನ್ನು ಎಬ್ಬಿಸಿದೆ. ಅದೂ ಅಲ್ಲದೆ ನಂದಿಗ್ರಾಮ ಮುಸ್ಲಿಂ ಬಾಹುಳ್ಯದ ಪ್ರದೇಶ. ಅಲ್ಲಿ ಪೋಲಿಸ್ ದೌರ್ಜನ್ಯದಿಂದ ಸಂತ್ರಸ್ತರಾದವರು ಮತ್ತು ಸತ್ತವರಲ್ಲಿ ಹೆಚ್ಚಿನವರು ಮುಸ್ಲಿಮರು. ಇದು ಸಹಜವಾಗಿ ಮುಸ್ಲಿಮರನ್ನು ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ. ಜೊತೆಗೆ ಸಾಚಾರ್ ಸಮಿತಿಯ ವರದಿಯಲ್ಲಿ ದೇಶದಲ್ಲೇ ಮುಸ್ಲಿಮರು ಅತೀ ಹೆಚ್ಚು ಹಿಂದುಳಿದಿರುವ ರಾಜ್ಯ ಪಶ್ಚಿಮ ಬಂಗಾಳ ಎಂದು ಸ್ಪಷ್ಟವಾಗಿ ಹೇಳಿರುವುದು ಇದುವರೆಗೆ ಅಲ್ಲಿನ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೈಗೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಅನುಷ್ಠಾನಕ್ಕೆ ವಹಿಸಿದ ಮುತುವರ್ಜಿಯನ್ನು ನೇರವಾಗಿ ಜನರ ಮುಂದೆ ತೆರೆದಿಟ್ಟಿದೆ.


ಇವೆಲ್ಲಾ ಕಳೆದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಕಮ್ಯುನಿಷ್ಟರು ನಿರಂತರವಾಗಿ ಗೆದ್ದು ಬರುತಿದ್ದ ಸ್ಥಾನಗಳಲ್ಲಿ ಕಮ್ಯುನಿಷ್ಟ್ ವಿರೋಧಿಗಳಾದ ಮಮತಾ ಬ್ಯಾನರ್ಜಿಯ ತಂಡ ಭರ್ಜರಿ ಜಯ ದಾಖಲಿಸಿದೆ. ಜೊತೆಗೆ ಮಾವೋವಾದಿಗಳೂ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲಿನ ಭೂಸ್ವಾಧೀನ ಪ್ರಕ್ರಿಯೆ ಸ್ವಲ್ಪ ಮಟ್ಟಿಗೆ ಕಮ್ಯುನಿಷ್ಟ್ ಸಿದ್ಧಾಂತದ ಅಡಿ ಬೇರುಗಳಂತಹ ನಾಯಕರನ್ನೇ ಪಕ್ಷದಿಂದ ದೂರ ಹೋಗುವಂತೆ ಮಾಡಿದೆ. ಹೀಗೆಲ್ಲಾ ಇರುವಾಗ ಪುನಃ ಪಕ್ಷದತ್ತ ಮುಸ್ಲಿಮರನ್ನು ಸೆಳೆಯಲು ಸಿಕ್ಕ ಅಸ್ತ್ರವೇ ಶೇಕಡಾ ಹತ್ತರ ಮೀಸಲಾತಿ.


ಯಾವುದೇ ಸಮುದಾಯಕ್ಕೆ ಮೀಸಲಾತಿ ಕೊಡುವುದು ತಪ್ಪಲ್ಲ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರಿಗೆ ಮೀಸಲಾತಿ ನೀಡುತ್ತಾ ಹೇಳಿದ್ದರು ಮೀಸಲಾತಿ ಶೋಷಿತ ಜನಾಂಗಕ್ಕೆ ಭಿಕ್ಷೆ ಅಲ್ಲ. ಅದು ಅವರ ಹಕ್ಕು ಎಂದು. ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯವನ್ನು ಮೇಲೆತ್ತಲು ಮೀಸಲಾತಿ ಅವಶ್ಯಕ. ಅದು ಆಯಾ ಜನಸಂಖ್ಯೆಯ ಪ್ರಮಾಣಕ್ಕೆ ಅನುಸರಿಸಿ ಆಗಿರಬೇಕು. ಆದರೆ ಅದು ಭಾರತದಲ್ಲಿ ಇದುವರೆಗೆ ಆಗಿಲ್ಲ. ಶೇಕಡಾ ೪೦ ರಷ್ಟಿರುವ ದಲಿತರಿಗೆ ಶೇಕಡಾ ೪೦ ರಷ್ಟು ಮೀಸಲಾತಿ ಕೊಟ್ಟರೆ ಶೇ ೧೩ ರಷ್ಟಿರುವ ಮುಸ್ಲಿಮರಿಗೆ ಶೇ ೧೩ ರಷ್ಟು ಶೇ ೪ ರಷ್ಟಿರುವ ಬ್ರಾಹ್ಮಣರಿಗೆ ಶೇ ೪ ರಷ್ಟು ಶೇ ೨೨ ರಷ್ಟಿರುವ ಹಿಂದುಳಿದವರಿಗೆ ಶೇ ೨೨ ರಷ್ಟು ಶೇ ೨ ರಷ್ಟಿರುವ ಕ್ರೈಸ್ತರಿಗೆ ಶೇ ೨ ರಷ್ಟು ಹೀಗೆ ಆಯಾ ಜಾತಿಯ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಕೊಡಬೇಕು. ಅದು ನ್ಯಾಯ ಕೂಡ. ಆ ಮೂಲಕ ಸಮಾಜದ ಎಲ್ಲಾ ವರ್ಗಗಳು ತಮ್ಮ ಪಾಲನ್ನು ಪಡೆಯಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ಈಗ ನಡೆಯುತ್ತಿರುವ ಮೀಸಲಾತಿ ರಾಜಕೀಯ ಇದೆಯಲ್ಲ ಅದು ನಂದಿ ಗ್ರಾಮ ಘಟನೆಯಿಂದ ದೂರ ಹೋದ ಮುಸ್ಲಿಮರನ್ನು ಪಕ್ಷಕ್ಕೆ ಸೆಳೆಯುವ ತಂತ್ರವೇ ಹೊರತು ಇನ್ನೇನೂ ಅಲ್ಲ.- ಅಶ್ರಫ್ ಮಂಜ್ರಾಬಾದ್.

ಮರುಭೂಮಿಯ ನಡುವಿನಲ್ಲಿ ಕನ್ನಡಿಗನ ಸಾಹಿತ್ಯ ಪ್ರೇಮ ..


ಶ್ರೀ ಎಜಾಸುದ್ದೀನ್. ವಿಶ್ವ ಕನ್ನಡಿಗರ ಒಕ್ಕೂಟದ ಸಕ್ರಿಯ ಸದಸ್ಯ ಮತ್ತು ಉತ್ತಮ ಬರಹಗಾರ ಕೂಡ. ಇವರು ಮೂಲತಃ ಮಂಗಳೂರಿನವರು. ಇವರ ಮಾತೃಭಾಷೆ ಬ್ಯಾರಿ, ಇವರ ಕನ್ನಡದ ಜ್ಞಾನ ಹೈಸ್ಕೂಲು ವರೆಗಿನದ್ದು , ಅರಬೀ ಬಾಷೆಯಲ್ಲಿ ಪದವೀಧರ. ಜೊತೆಗೆ ಉರ್ದು ಭಾಷೆಯಲ್ಲಿ ಉತ್ತಮ ಪಾಂಡಿತ್ಯವನ್ನೂ ಹೊಂದಿದ್ದಾರೆ. ಇವರ ಪ್ರಕಾರ ಕನ್ನಡದ ಜೊತೆಗೆ ಉರ್ದು ಸಹ ಇವರ ಇಷ್ಟದ ಭಾಷೆ.ಉದ್ಯೋಗ ನಿಮಿತ್ತ ಈಗ ಕುವೈತಿನಲ್ಲಿ ನೆಲೆಸಿರುವ ಇವರು ಕುವೈತಿನಿಂದ ಹೊರಡುವ ಒಂದು ಉರ್ದು ಮಾಸಿಕದ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸುತಿದ್ದಾರೆ.
ಇವರು ಹೇಳಿಕೊಳ್ಳುವಂತೆ ಇವರಿಗೆ ಹೆಚ್ಚಾಗಿ ಕನ್ನಡದಲ್ಲಿ ಬರೆಯುವ ಅನುಭವವಿಲ್ಲ .ತೀರಾ ಇತ್ತೀಚೆಗಷ್ಟೇ ಕನ್ನಡದಲ್ಲಿ ಬರೆಯಲಾರಂಭಿಸಿದ್ದು ಅದೂ ಸುಮಾರು ಇಪ್ಪತ್ತು ವರ್ಷಗಳ ವಿಯೋಗದ ಬಳಿಕ ಎಂದು ಹೇಳುವ ಇವರ ಕನ್ನಡ ಬರಹ ಮತ್ತು ಅದರಲ್ಲಿರುವ ಬರವಣಿಗೆಯ ಶೈಲಿಯನ್ನು ನೋಡಿದರೆ ನಿಜಕ್ಕೂ ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಜ್ಞಾನದ ಬೆಳಕಿನಲ್ಲಿ ಅಜ್ಞಾನದ ಕತ್ತಲನ್ನು ದೂರಮಾಡಿ ಒಂದು ಆರೋಗ್ಯಪೂರ್ಣ ಸ್ವಸ್ಥ ಸಮಾಜದ ಸ್ಥಾಪನೆಯಲ್ಲಿ ನನ್ನದೂ ಪಾಲು ಇರಲಿ ಎಂಬ ಉದ್ದೇಶದೊಂದಿಗೆ ಇವರು ದೂತ ಎಂಬ ಬ್ಲಾಗ್ ಒಂದನ್ನು ರಚಿಸಿದ್ದಾರೆ . ಇಂತಹ ಒಂದು ಕನ್ನಡ ಸಾಹಿತ್ಯ ಪ್ರೇಮಿ ನಮ್ಮ ಒಕ್ಕೂಟದ ಸದಸ್ಯನಾಗಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ.ಇವರ ಬರಹಗಳನ್ನು ಓದಲು ಇವರ ಬ್ಲಾಗ್ http://ipcblogger.net/ijaz/ ಗೆ ಭೇಟಿ ಕೊಡಿ

ಬುಧವಾರ, ಜನವರಿ 13, 2010

ರಮ್ಯಾ,ರಾಜು ಶೆಟ್ಟರ ರೊಮ್ಯಾಂಟಿಕ್ ಪ್ರಣಯದಲ್ಲಿ ಅನಾಥೆಯಾದ ಸಫಿಯಾ...
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜೊತೆಗೆ ಹಲವು ರೀತಿಯ ಪ್ರತಿಭಟನೆಗಳಿಗೆ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನರಿಂಗಾನ ಗ್ರಾಮದ ಪೊಟ್ಟೋಲಿಕೆಯ ರಮ್ಯಾ ಶೆಟ್ಟಿ ಮತ್ತು ಮೂರು ಮಕ್ಕಳ ತಂದೆ ಮೇಸ್ತ್ರಿ ಮಹಮ್ಮದ್ ಆಲಿಯಾಸ್ ರಾಜು ಶೆಟ್ಟಿಯವರ ಪ್ರೇಮ ಮತ್ತು ಪಾಲಾಯನ ಪ್ರಕರಣ ಅವರನ್ನು ವಿಚಿತ್ರ ತಿರುವಿನೊಂದಿಗೆ ಪತ್ತೆ ಹಚ್ಚುವುದರೊಂದಿಗೆ ಅಂತ್ಯ ಕಂಡಿದೆ.

ಮುಸಲ್ಮಾನನಾಗಿದ್ದ ಮಹಮ್ಮದ್ ರಮ್ಯಳಿಗಾಗಿ ತನ್ನ ಧರ್ಮವನ್ನು ತ್ಯಜಿಸಿ ಹಿಂದೂ ಆಗಿದ್ದಾನೆ. ಜೊತೆಗೆ ತನ್ನ ಹೆಂಡತಿ ಮಕ್ಕಳನ್ನೂ ತ್ಯಜಿಸಿದ್ದಾನೆ. ಇದು ಪ್ರೀತಿಯ ಮಹಿಮೆಯೋ ಅಥವಾ ಇನ್ನೇನೋ ಗೊತ್ತಿಲ್ಲ. ರಮ್ಯ ನಾನು ಇನ್ನು ಮುಂದೆ ರಾಜು ಶೆಟ್ಟಿಯೊಂದಿಗೆ ಬಾಳ್ವೆ ನಡೆಸುವುದಾಗಿಯೂ ನಾವು ಸುಬ್ರಮಣ್ಯ ದೇವಸ್ಥಾನದಲ್ಲಿ ವಿವಾಹವಾಗಿರುವುದಾಗಿಯೂ ನನಗಾಗಿ ಆತ ಇಸ್ಲಾಂ ಧರ್ಮವನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಿರುವುದಾಗಿಯೂ ಹೇಳಿದ್ದಾಳೆ. ಒಟ್ಟಿನಲ್ಲಿ ಪ್ರಕರಣ ಜನರು ಆರೋಪಿಸಿದ್ದಕ್ಕಿಂತ ನೇರ ಉಲ್ಟಾ ಹೊಡೆದಿದೆ.

ರಮ್ಯಾಳ ಅಪಹರಣದ ಹಿಂದೆ ಕೆಲವು ಧಾರ್ಮಿಕ ಸಂಘಟನೆಗಳ ಕೈವಾಡ ಇದೆ ಎಂದೂ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಕೇರಳದ ಪೋನ್ನಾನಿಗೆ ಕರೆದುಕೊಂಡು ಹೋಗಲಾಗಿದೆಯೆಂದೂ ಇನ್ನಿತರ ಕಟ್ಟು ಕಥೆಗಳನ್ನು ಕಟ್ಟಿ ಒಂದು ಸಮುದಾಯದ ವಿರುದ್ಧ ಆರೋಪ ಮಾಡುತಿದ್ದ ಸಂಘಟನೆಗಳಿಗೆ ಈ ಪ್ರಕರಣ ಮತ್ತೊಮ್ಮೆ ತಿರುಗೇಟು ನೀಡಿದೆ. ಇಲ್ಲಿ ಯಾವ ರಮ್ಯಳನ್ನು ಲವ್ ಜಿಹಾದಿನ ಬಲೆಯಲ್ಲಿ ಬೀಳಿಸಿ ಅವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗುತಿತ್ತೋ ಅದೇ ರಮ್ಯ ಈ ಕಾಮುಕ ಮೇಸ್ತ್ರಿ ಮಹಮ್ಮದ್ ಆಲಿಯಾಸ್ ರಾಜು ಶೆಟ್ಟಿಯನ್ನು ತನ್ನ ಬಲೆಯಲ್ಲಿ ಕೆಡವಿ ಆತನನ್ನು ಹಿಂದೂ ಮಾಡಿಬಿಟ್ಟಿದ್ದಳು. ಈತನನ್ನು ಮದುವೆ ಆಗಿ ಕೈಕೈ ಹಿಡಿದು ಇವರು ಜಾತ್ರೆಗಳಲ್ಲಿ ಸುತ್ತಾಡುತಿದ್ದರೆ ಇವರ ಈ ಪ್ರೇಮ ಪ್ರಕರಣದ ನೈಜ ಬಲಿಪಶುಗಳಾದ ಮಹಮ್ಮದನ ಹೆಂಡತಿ ಸಫಿಯಾ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳು ಒಪ್ಪೊತ್ತಿನ ಊಟಕ್ಕೆ ಹಣವಿಲ್ಲದೆ ಪರಿತಪಿಸುತಿದ್ದರು.

ಲವ್ ಜಿಹಾದ್ ಹೆಸರಿನಲ್ಲಿ ಒಮ್ಮೆ ಲಾಭ ಪಡೆಯಲು ಹೊರಟು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿ ಕಾಮ ಜಿಹಾದಿ ಮೋಹನನ ಬಂಧನದಿಂದ ಮುಖಭಂಗಕ್ಕೀಡಾಗಿದ್ದ ಕೆಲವು ಕೋಮುವಾದಿ ಸಂಘಟನೆಗಳು ಇದನ್ನು ದೊಡ್ಡದು ಮಾಡಿ ಅದರಲ್ಲಿ ಹೋದ ಮಾನವನ್ನು ಈ ಪ್ರಕರಣದಲ್ಲಿ ಪಡೆಯಲು ಯತ್ನಿಸಿದ್ದವು. ಆದರೆ ಈ ಪ್ರಕರಣವೂ ಉಲ್ಟಾ ಹೊಡೆದಿದೆ. ಇತ್ತ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ತಂದ ಈ ಕಾಮುಕ ಮಹಮ್ಮದ್ ಈಗ ಹಿಂದೂ ಆಗಿ ಬದಲಾಗಿರುವುದನ್ನು ಸ್ವಾಭಿಮಾನಿ ಹಿಂದುಗಳೂ ಒಪ್ಪಲು ತಯಾರಿಲ್ಲ.


ಮಹಮ್ಮದ್ ಮಾಡಿದ ಈ ನೀಚ ಕೆಲಸ ಯಾವ ಮನುಷ್ಯನೂ ಒಪ್ಪುವಂತಹದ್ದಲ್ಲ. ಇರುವ ಹೆಂಡತಿ ಮಕ್ಕಳನ್ನು ಸರಿಯಾಗಿ ಸಾಕಲಾರದ ಅಯೋಗ್ಯ ಇನ್ನೊಬ್ಬ ಹುಡುಗಿಯ ಮೇಲೆ ಕಣ್ಣು ಹಾಕಿರುವುದು ಅತ್ಯಂತ ಹೇಯ ಕೆಲಸ. ಆಕೆಯೂ ಸಹ ಅಪ್ರಾಪ್ತ ವಯಸ್ಕಳೇನಲ್ಲ. ಆಕೆಗೂ ಸ್ವಲ್ಪ ಮಟ್ಟಿಗಿನ ಜ್ಞಾನ ಇರಬೇಕಾಗಿತ್ತು. ಈ ಕಾಮುಕನ ಪ್ರೀತಿಯ ಬಲೆಯಲ್ಲಿ ಬಿದ್ದು ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಆತನ ಕೈ ಹಿಡಿದ ಹೆಂಡತಿ ಮತ್ತು ಆತನ ಮೂರು ಮಕ್ಕಳು ಬೀದಿಪಾಲಾಗುವ ಬಗ್ಗೆಯೂ ಯೋಚಿಸಬಹುದಿತ್ತು. ಬಹುಶ ಪ್ರೇಮಕ್ಕೆ ಕಣ್ಣಿಲ್ಲ, ಕಾಮಕ್ಕೆ ಕಣ್ಣಿಲ್ಲ ಎಂಬ ಮಾತು ಇವರ ವಿಚಾರದಲ್ಲಿ ಹೆಚ್ಚು ಅನ್ವಯಿಸಿರಬಹುದು. ಆದರೂ ಇವರು ಮಾಡಿರುವ ಕೆಲಸ ಪ್ರೀತಿ ಪ್ರೇಮ ಎಂಬ ಪದಕ್ಕೇ ಅವಮಾನ. ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಪ್ರೀತಿ ಪ್ರೇಮಕ್ಕೆ ಈ ಪ್ರಕರಣ ಒಂದು ಕಪ್ಪು ಚುಕ್ಕೆ.

ಇನ್ನಾದರೂ ಹುಡುಗಿಯರು ಪ್ರೀತಿ ಪ್ರೇಮ ಎನ್ನುವ ಮುಂಚೆ ತಮ್ಮ ಭವಿಷ್ಯದ ಬಗ್ಗೆ ಜಾಗರೂಕರಾಗಬೇಕಿದೆ. ತಮ್ಮ ಈ ರೀತಿಯ ಪ್ರೀತಿ ತಮ್ಮ ಭವಿಷ್ಯವನ್ನೂ ಹಾಳು ಮಾಡುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸುತ್ತದೆ ಎಂಬ ಸಾಮಾನ್ಯ ಅರಿವು ಅವರಲ್ಲಿ ಮೂಡಬೇಕಿದೆ. ಒಟ್ಟಿನಲ್ಲಿ ಈ ಪ್ರಕರಣವೇನೋ ಅಂತ್ಯ ಕಂಡಿದೆ. ಮಹಮ್ಮದ್ ರಮ್ಯಾ ಶೆಟ್ಟಿಯ ಕೈ ಹಿಡಿದು ರಾಜು ಶೆಟ್ಟಿ ಆಗಿದ್ದಾನೆ. ಕೆಲವು ಪತ್ರಿಕೆಗಳು ಇವರ ಪತ್ತೆಯಿಂದ ಈ ಪ್ರಕರಣ ಸುಖಾಂತ್ಯವಾಯಿತು ಎಂದು ಬರೆದಿವೆ. ಆದರೆ ರಾಜು ಶೆಟ್ಟರಿಗೆ ಮತ್ತು ರಮ್ಯಾಳಿಗೆ ಜೊತೆಗೆ ಸಮಾಜಕ್ಕೆ ಇವರ ಪತ್ತೆ ಸುಖಾಂತ್ಯ ವಾಗಿರಬಹುದು ಆದರೆ ಈತನನ್ನೇ ನಂಬಿ ಈತನ ಕೈಹಿಡಿದ ಸಫಿಯಾ ಜೊತೆಗೆ ಆಕೆಯನ್ನು ಕಿತ್ತು ತಿನ್ನುತ್ತಿರುವ ಬಡತನ ಮತ್ತು ಈತನ ಕಾರಣದಿಂದ ಆಕೆ ಜನ್ಮ ನೀಡಿದ ಆ ಮೂರು ಹೆಣ್ಣು ಮಕ್ಕಳ ಜೀವನದ ನೈಜ ಸಂಕಷ್ಟಗಳು ಈಗಷ್ಟೇ ಆರಂಭವಾಗಿವೆ.

ಭಾನುವಾರ, ಡಿಸೆಂಬರ್ 27, 2009

ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...?


ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...? ಹೀಗೊಂದು ಸಂಶಯ ಮೂಡಿದ್ದು ಮೊನ್ನೆ ಪುತ್ತೂರು ಕ್ಷೇತ್ರದ ಮಾನ್ಯ ಶಾಸಕಿಯಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಯಿಂದ !. ತಾನು ಶಾಸಕಿಯಾಗಿ ಆಯ್ಕೆಯಾದ ನಂತರ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಬಾಯ್ಬಿಟ್ಟ ಮಲ್ಲಿಕಾ ಪ್ರಸಾದ್ ತನ್ನದೇ ಸರ್ಕಾರದ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀ ಮುಮ್ತಾಜ್ ಅಲೀಖಾನ್ ರವರ ಬಳಿ ಕೇಳಿದ್ದು ರಾಜ್ಯದಲ್ಲಿರುವ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯ ಎಷ್ಟು ಎಂದಾಗಿತ್ತು. ತನ್ನ ಕ್ಷೇತ್ರದ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳಿಗೆ ವಿಧಾನ ಮಂಡಲ ಅಧಿವೇಶನ ಒಂದು ಅತ್ತ್ಯುತ್ತಮ ವೇದಿಕೆ. ಆದರೆ ಇಲ್ಲಿ ಒಬ್ಬ ಶಾಸಕಿ ತನ್ನ ದೀರ್ಘಕಾಲದ ಮೌನದ ನಂತರ ಮೊದಲ ಪ್ರಶ್ನೆ ಕೇಳಿದ್ದು ರಾಜ್ಯದ ಮತ್ತು ತನ್ನ ಕ್ಷೇತ್ರದ ಸಮಸ್ಯೆಗಳ ಬದಲು ಈ ರಾಜ್ಯದ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ? ಎಂಬುವುದಾಗಿತ್ತು.

ವಾಸ್ತವವಾಗಿ ನೋಡುವುದಾದರೆ ಈ ಪ್ರಶ್ನೆಯೇ ಬಾಲಿಶವಾದದ್ದು. ರಾಜ್ಯದಲ್ಲಿರುವ ಅಥವಾ ದೇಶದಲ್ಲಿರುವ ಯಾವುದೇ ಮಂದಿರ ಅಥವಾ ಮಸೀದಿಗಳು ಆರ್ಥಿಕ ಲಾಭದ ಉದ್ದೇಶದಿಂದ ನಿರ್ಮಿಸಲ್ಪಟ್ಟವಲ್ಲ. ಅದೂ ಅಲ್ಲದೆ ಇವುಗಳಲ್ಲಿ ಹೆಚ್ಚಿನವು ಸರ್ಕಾರದ ಯಾವುದೇ ಸಹಾಯವಿಲ್ಲದೆ ಭಕ್ತರ ದೇಣಿಗೆಯಿಂದ ನಿರ್ಮಾಣವಾದಂತಹವುಗಳು. ಇಲ್ಲಿ ಭಕ್ತರು ತಮ್ಮಲ್ಲಿರುವ ದೈವಭಕ್ತಿಯಿಂದ ತಮ್ಮ ದುಡಿಮೆಯ ಒಂದು ಪಾಲನ್ನು ದೇಣಿಗೆ ರೂಪದಲ್ಲಿ ಕೊಟ್ಟು ಆರಾಧನಾಲಯಗಳನ್ನು ನಿರ್ಮಿಸಿ ಅಲ್ಲಿ ಪ್ರಾರ್ಥಿಸುವುದರ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇವುಗಳ ನಿರ್ಮಾಣ ಮನುಷ್ಯನ ಧಾರ್ಮಿಕ ನಂಬಿಕೆಗಳಿಗೆ ಸಂಭಂದಿಸಿದೆಯೇ ಹೊರತು ಇಲ್ಲಿ ಯಾವುದೇ ಲಾಭದ ಉದ್ದೇಶವಿರುವುದಿಲ್ಲ.

ಆದರೂ ಕೆಲವು ಪ್ರಭಾವಿ ವ್ಯಕ್ತಿಗಳು ಕೆಲವು ಧಾರ್ಮಿಕ ಸ್ಥಳಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಆ ಮೂಲಕ ಕೋಟ್ಯಾಂತರ ರೂಗಳನ್ನು ಸಂಪಾದಿಸುವುದರ ಜೊತೆಗೆ ಸರ್ಕಾರದ ಕೃಪಾಕಟಾಕ್ಷದಿಂದ ಅನೇಕ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ತೆರೆದು ಆ ಮೂಲಕ ಸರ್ಕಾರದಿಂದ ಮತ್ತು ವಿಧ್ಯಾರ್ಥಿಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಕೊಳ್ಳೆಹೊಡೆಯುತ್ತಿರುವುದನ್ನು ಕಾಣಬಹುದು. ಅದೂ ಅಲ್ಲದೆ ಇವರು ರಾಜ್ಯದಲ್ಲಿ ಪರ್ಯಾಯ ಸರ್ಕಾರದ ಮಾದರಿ ಆಡಳಿತ ನಡೆಸುತ್ತಿರುವುದನ್ನೂ ಕಾಣಬಹುದು. ಇಂತಹ ಆರ್ಥಿಕ ಲಾಭದಾಯಕ ಜೊತೆಗೆ ರಾಜಕೀಯ ಕೃಪಾಕಟಾಕ್ಷವುಳ್ಳ ಧಾರ್ಮಿಕ ಸ್ಥಳಗಳಿಗೆ ನಮ್ಮ ಮುಖ್ಯಮಂತ್ರಿಗಳು ಬಜೆಟ್ಟಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕೊಟ್ಟದ್ದನ್ನೂ ನಾವು ಕಾಣಬಹುದು.

ಇವೆಲ್ಲಾ ನಡೆದದ್ದು ಹೆಚ್ಚಾಗಿ ಮಾನ್ಯ ಮಲ್ಲಿಕಾ ಪ್ರಸಾದರ ಪಕ್ಷದ ಆಡಳಿತದ ಸರ್ಕಾರದಲ್ಲಿ. ಹೀಗಿರುವಾಗ ಮಲ್ಲಿಕಾ ಪ್ರಸಾದ್ ಕೇವಲ ರಾಜ್ಯದಲ್ಲಿರುವ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ಎಂಬ ಅವರ ಪ್ರಶ್ನೆ ಅವರಲ್ಲಿರುವ ಕೋಮುವಾದಿ ಮನಸ್ಥಿತಿಯಿಂದ ಬಂದ ಪ್ರಶ್ನೆಯೇ ಹೊರತು ಇದರಲ್ಲಿ ಇನ್ನಾವ ಸಮಾಜಸೇವಾ ಉದ್ದೇಶವೂ ಇಲ್ಲ.

ಈ ಪ್ರಶ್ನೆ ಎಷ್ಟು ಬಾಲಿಶವಾದುದೆಂದರೆ ಸರ್ಕಾರಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ಎಂದು ಕೇಳಿದ ರೀತಿ ಇದೆ. ಯಾವ ಸಂಸ್ಥೆಗಳು ಜನರ ಹಣದಿಂದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಾಪಿಸಲ್ಪಟ್ಟಿರುತ್ತವೆಯೋ ಅಲ್ಲಿಗೆ ಮತಭೇಧವಿಲ್ಲದೆ ಸಹಾಯ ಮತ್ತು ಸಹಕಾರ ನೀಡಬೇಕಾದುದು ಪ್ರಜ್ಞಾವಂತ ಸರ್ಕಾರದ ಕರ್ತವ್ಯ. ಆದರೆ ಅವುಗಳಲ್ಲಿ ಲಾಭ ಹುಡುಕುವ ಶ್ರೀಮತಿ ಮಲ್ಲಿಕಾ ಪ್ರಸಾದರ ಅರ್ಥಶಾಸ್ತ್ರ ಜ್ಞಾನವನ್ನು ಯಾವ ರೀತಿ ವಿಮರ್ಶಿಸಬೇಕೆಂದು ಬಹುಶ ಖ್ಯಾತ ಅರ್ಥಶಾಸ್ತ್ರಜ್ಞರಿಗೂ ಸಾಧ್ಯವಾಗಲಾರದು. ಕೇವಲ ಒಂದು ಫ್ಯಾಸಿಸ್ಟ್ ಸಂಘಟನೆಯ ಮುಖಂಡನ ಹೆಂಡತಿ ಎಂಬ ಒಂದೇ ಒಂದು ಕಾರಣಕ್ಕಾಗಿ ಶ್ರೀಮತಿ ಶಕುಂತಲಾ ಶೆಟ್ಟಿಯವರ ಟಿಕೆಟ್ ತಪ್ಪಿಸಿ ಪುತ್ತೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಶ್ರೀಮತಿ ಮಲ್ಲಿಕಾ ಪ್ರಸಾದರ ಬಾಯಿಯಿಂದ ಇಂತಹ ಪ್ರಶ್ನೆಗಳನ್ನಲ್ಲದೆ ಇನ್ನ್ಯಾವುದನ್ನು ನಿರೀಕ್ಷಿಸಲು ಸಾಧ್ಯ...

ಮಂಗಳವಾರ, ಡಿಸೆಂಬರ್ 15, 2009

ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ?


ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ? ಹೀಗೊಂದು ಪ್ರಶ್ನೆ ಇತ್ತೀಚಿಗೆ ರಾಜ್ಯದ ರಾಜಕೀಯ ವಲಯಗಳಲ್ಲಿ ಕೇಳಿ ಬರತೊಡಗಿದೆ. ಇದಕ್ಕೆ ರಾಜ್ಯದ ಕೆಲ ಪ್ರಮುಖ ನಾಯಕರುಗಳು ನೀಡುತ್ತಿರುವ ಹೇಳಿಕೆಗಳು ಒಂದು ಕಾರಣವಾದರೆ ಆಡಳಿತಾರೂಢ ಬಿ.ಜೆ.ಪಿಯಲ್ಲಿ ಇನ್ನೂ ಬೂದಿಮುಚ್ಚಿದ ಕೆಂಡದಂತಿರುವ ಭಿನ್ನಮತ ಇದಕ್ಕೆ ಮತ್ತಷ್ಟೂ ಪುಷ್ಟಿನೀಡುತ್ತಿದೆ.


ಇತ್ತೀಚಿನ ಉದಾಹರಣೆ ತೆಗೆದು ಕೊಂಡರೆ ದೇವೇಗೌಡರು ರಾಜಕೀಯವಾಗಿ ತಮ್ಮ ಬದ್ಧ ವೈರಿ ಎಂದೇ ಗುರುತಿಸಿಕೊಂಡ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಂಗ್ರೆಸ್ ಪಾಳಯದಿಂದ ಮುಖ್ಯಮಂತ್ರಿ ಆಗುವುದಾದರೆ ತಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ ಎಂಬ ಹೇಳಿಕೆ ನೀಡಿ ರಾಜ್ಯ ರಾಜಕಾರಣದ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಪ್ರದೇಶ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಈಗಿನ ಸರ್ಕಾರ ತನ್ನ ಸ್ವಯಂಕೃತ ಅಪರಾಧದಿಂದ ಅಧಿಕಾರ ಕಳೆದುಕೊಂಡರೆ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ಸರ್ಕಾರ ರಚನೆಯ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ನೀಡಿರುವ ಹೇಳಿಕೆ ಈ ಬಗೆಗಿನ ಊಹಾಪೋಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.


ಹೇಗಾದರೂ ಮಾಡಿ ಕರ್ನಾಟಕದಲ್ಲಿನ ಬಿ.ಜೆ.ಪಿ. ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಂಕಲ್ಪತೊಟ್ಟಂತೆ ವರ್ತಿಸುತ್ತಿರುವ ಕಾಂಗ್ರೆಸ್ ಹೈಕಮಾಂಡಿನ ವರ್ತನೆ ನೋಡಿದರೆ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಯಲ್ಲಿ ಈಗಾಗಲೇ ತೊಡಗಿರುವಂತೆ ಕಾಣುತ್ತಿದೆ. ಈ ಹಿಂದೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳ ಆಪ್ತರಾಗಿದ್ದ ಗಣಿದೊರೆಗಳ ಮೂಲಕ ಬಿ.ಜೆ.ಪಿ.ಪಕ್ಷದೊಳಗೆ ಬಂಡಾಯವೆಬ್ಬಿಸಿ ಆ ಮೂಲಕ ಬಂಡಾಯವೆದ್ದ ಗುಂಪು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಬಗ್ಗೆ ಯೋಜನೆ ರೂಪುಗೊಂಡಿತ್ತು ಎಂಬುವುದು ರಾಜಕೀಯ ವಲಯದಲ್ಲಿ ಕೇಳಿಬರುವ ಮಾಹಿತಿ. ಆದರೆ ವಿಧಿಯಾಟಕ್ಕೆ ಸಿಕ್ಕಿ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ಅಕಾಲಿಕ ಮರಣಕ್ಕೀಡಾಗದೇ ಹೋಗುತ್ತಿದ್ದರೆ ಈವತ್ತಿಗಾಗಲೇ ಈ ಪ್ರಯತ್ನ ಯಶಸ್ವಿಯಾಗಿರುತಿತ್ತು. ಆದರೆ ಅವರ ಅಕಾಲಿಕ ಮರಣ ಈ ಎಲ್ಲಾ ಯೋಜನೆಗಳನ್ನು ತಲೆಕೆಳಗಾಗಿಸಿತು ಎಂಬುವುದು ಈಗೇನೂ ಗುಟ್ಟಾಗಿ ಉಳಿದ ವಿಷಯವಲ್ಲ.


ಆನಂತರ ಕೆಲದಿನಗಳ ಮಟ್ಟಿಗೆ ಈ ವಿಷಯವನ್ನು ಮುಂದೂಡಲಾಗಿತ್ತು. ಆದರೆ ಈಗ ಮತ್ತೆ ಅದಕ್ಕೆ ಜೀವ ಬರತೊಡಗಿದೆ. ಈಗ ಪ್ರಮುಖ ಪಾತ್ರ ಗಣಿದೊರೆಗಳ ಬದಲು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ನಾಯಕರು ವಹಿಸುತಿದ್ದಾರೆ. ಬಿ.ಜೆ.ಪಿ.ಯಲ್ಲಿನ ಕೆಲವು ಮತ್ತು ಆ ಪಕ್ಷಕ್ಕೆ ಬೆಂಬಲ ನೀಡಿರುವ ಕೆಲವು ಶಾಸಕರನ್ನು ತಮ್ಮತ್ತ ಸೆಳೆಯುವ ಮೂಲಕ ಸರ್ಕಾರ ರಚನೆಗೆ ಸೂಕ್ತ ಸಮಯದಲ್ಲಿ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿಯೇ ದೇವೇಗೌಡರು ಮತ್ತು ದೇಶಪಾಂಡೆಯವರ ಬಾಯಿಯಿಂದ ಈ ರೀತಿಯ ಮಾತುಗಳು ಕೇಳಿಬರುತ್ತಿದೆ ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.


ಗಣಿದೊರೆಗಳ ಅಡ್ಡೆಗಳ ಮೇಲೆ ಮೊನ್ನೆ ಸಿ.ಬಿ.ಐ ನಡೆಸಿದ ದಾಳಿಯ ಹಿಂದೆಯೂ ಇದರ ಕೈವಾಡವಿದೆ. ಯುಡಿಯೂರಪ್ಪನವರೊಂದಿಗೆ ಮುನಿಸಿಕೊಂಡು ಕೊನೆಗೆ ಸುಷ್ಮಾ ಸ್ವರಾಜರ ಒತ್ತಾಯಕ್ಕೆ ಮಣಿದ ಗಣಿದೊರೆಗಳ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರ ತೆಗೆದು ಕೊಂಡ ನಿಲುವುಗಳು ಇದನ್ನು ನೇರವಾಗಿ ಸೂಚಿಸುತ್ತದೆ. ಈಗಾಗಲೇ ಕೇಂದ್ರ ತನಿಖಾ ತಂಡದಿಂದ ಕಂಗಾಲಾಗಿರುವ ರೆಡ್ಡಿಗಳು ಈ ಮೂಲಕವಾದರೂ ಮುಂದಿನ ಸಮ್ಮಿಶ್ರ ಸರ್ಕಾರದ ರಚನೆಯಲ್ಲಿ ತಮ್ಮ ಕಡೆ ಬರಲಿ ಎಂಬ ಗುಪ್ತ ಅಜೆಂಡಾ ಇದ್ದರೂ ಇರಬಹುದು. ಇಲ್ಲದಿದ್ದಲ್ಲಿ ಅದರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂಬ ಎಚ್ಚರಿಕೆಯೂ ಇರಬಹುದು.


ಒಟ್ಟಿನಲ್ಲಿ ಕರ್ನಾಟಕದ ರಾಜಕೀಯದಲ್ಲಿ ಬಿಸಿ ಏರುತ್ತಿದೆ. ಕೆಲವೇ ದಿನಗಳಲ್ಲಿ ಇದರ ಫಲಿತಾಂಶ ಗೊತ್ತಾಗಲಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ, ಹೆಚ್.ಡಿ. ರೇವಣ್ಣ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು. ಗಣಿಧಣಿಗಳು ಸಾತ್ ಕೊಟ್ಟರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಜೊತೆ ಬಳ್ಳಾರಿ ಲೋಕಸಭಾ ಸದಸ್ಯೆ ಶಾಂತಾ ಕೇಂದ್ರ ಮಂತ್ರಿಯೂ ಆಗಬಹುದು. ಇಲ್ಲದಿದ್ದರೆ ಹೆಚ್.ಡಿ. ಕುಮಾರಸ್ವಾಮಿಯವರಂತೂ ಕೇಂದ್ರದಲ್ಲಿ ಮಂತ್ರಿಯಾಗುವ ಸಾಧ್ಯತೆ ಹೆಚ್ಚು. ಹಾಗೇನಾದರೂ ಆಗಿ ಕುಮಾರಸ್ವಾಮಿಯವರಿಗೆ ಗಣಿ ಖಾತೆ ಸಿಕ್ಕರೆ ರೆಡ್ಡಿಗಳ ಬೆವರಿಳಿಯುವುದಂತೂ ಸತ್ಯ...


- ಅಶ್ರಫ್ ಮಂಜ್ರಾಬಾದ್.

ಭಾನುವಾರ, ಡಿಸೆಂಬರ್ 13, 2009

ಹಿಂದಿ ಅನುವಾದಿತ ಕನ್ನಡ ಶಾಯರಿಗಳು...

ಕಣ್ಣೀರಿನ ಪ್ರಶ್ನೆ

ಒಂದು ದಿನ ನನ್ನ ಕಣ್ಣೀರು ನನ್ನನ್ನೇ ಕೇಳಿತು
ಪ್ರತಿದಿನ ನೀನು ನನ್ನನ್ನು ಏಕೆ ಕರೆಯುತ್ತೀಯಾ..?
ನಾನು ಹೇಳಿಯೇ ಬಿಟ್ಟೆ
ಪ್ರತಿದಿನ ನಾನು ಅವಳ ನೆನಪು ಮಾತ್ರ ಮಾಡುತ್ತೇನೆ,
ಆಗ ಕರೆಯದೆ ನೀನೇ ಏಕೆ ಬಂದು ಬಿಡುತ್ತೀಯಾ..?ನನ್ನ ಹೃದಯ

ಅವಳ ಸವಿನೆನಪಿನೊಂದಿಗೆ ನನ್ನ ಹೃದಯವನ್ನು
ಹೇಗೆ ನಾ ಉಲ್ಲಸಿತಗೊಳಿಸಲಿ.....
ಯಾರನ್ನು ನಾ ಮರೆತೇ ಇಲ್ಲವೋ
ಅವಳ ನೆನಪನ್ನು ಪುನಃ ನಾ ಹೇಗೆ ಮಾಡಲಿ...
ನನ್ನ ಹೃದಯವನ್ನು ನನ್ನವಳೇ
ಘಾಸಿಗೊಳಿಸಿದಳು,
ಹೀಗಿರುವಾಗ ಇದರ ಬಗ್ಗೆ ಪರರಲ್ಲಿ
ನಾ ಏನೆಂದು ದೂರು ನೀಡಲಿ....ಪ್ರೀತಿ ಎಂಬ ಮಾಯೆ

ಯಾರ ಮೇಲೆ ಪ್ರೀತಿ ಇತ್ತೋ
ಆ ಹುಡುಗಿ ನನ್ನವಳಾಗಲಿಲ್ಲ,
ಯಾವ ಕ್ಷಣಕ್ಕಾಗಿ ದಿನರಾತ್ರಿ ಕಾದೆನೋ
ಆ ಕ್ಷಣವೂ ನನ್ನದಾಗಲಿಲ್ಲ,
ಪ್ರೀತಿ ಎಂಬ ಈ ಪದ ಒಂದು
ಮಾಯೆಯೇ ಇರಬೇಕು
ಅವಳಿಗೆ ನಾನು ಸಿಗಲಿಲ್ಲ
ನನಗೆ ಯಾರೂ ಸಿಗಲಿಲ್ಲ...ಭರವಸೆ

ಗೆಳೆತನದ ಹೂವು ಎಲ್ಲಾ
ಕಾಲದಲ್ಲೂ ಅರಳುತ್ತದೆ,
ಸ್ನೇಹದ ಮೋಡಗಳು ಎಲ್ಲಾ
ಕಾಲದಲ್ಲೂ ಘರ್ಜಿಸುತ್ತದೆ,
ನೀನು ನನ್ನನ್ನು ಪ್ರೀತಿಸು
ಇಲ್ಲವೇ ಪ್ರೀತಿಸದಿರು
ಇದು ಮಾತ್ರ ಸತ್ಯ
ಎಲ್ಲಾ ಕಾಲದಲ್ಲೂ
ನಿನ್ನ ನೆನಪುಗಳ ನಡುವೆಯೇ
ನನಗೆ ಬದುಕಲು ಬರುತ್ತದೆ....ಆತ್ಮ ವಿಶ್ವಾಸ

ಒಡೆದು ಹೋದ ಕನಸುಗಳನ್ನು
ಪುನಃ ಮರಳಿ ಕಟ್ಟಲು ಬರುತ್ತದೆ,
ಮುನಿಸಿ ಹೋದ ಹೃದಯವನ್ನು
ಪುನಃ ಒಲಿಸಿಕೊಳ್ಳಲೂ ಬರುತ್ತದೆ,
ನೀನು ನನ್ನ ಯಾತನೆ ನೋಡಿ
ಕೊರಗಬೇಡ,
ಯಾತನೆಯ ನಡುವೆಯೂ ನನಗೆ
ಮುಗುಳ್ನಗಳು ಬರುತ್ತದೆ.......

ಮಾಧ್ಯಮ ಲೋಕದ ಆಶಾಕಿರಣ ಶ್ರೀ ಶಂಶೀರ್ ಬುಡೋಳಿ..ಶಂಶೀರ್ ಬುಡೋಳಿ.ಇದು ಈಗ ಕರ್ನಾಟಕದ ಮಾಧ್ಯಮ ಲೋಕದಲ್ಲಿ ಚಿರಪರಿಚಿತ ಹೆಸರು .ಈಗ ಇವರು ವಾರ್ತಾಭಾರತಿ ಕನ್ನಡ ದೈನಿಕದ ಉಪಸಂಪಾದಕ. ಜೊತೆಗೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ(M.C.J)ಯನ್ನು ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಮಾಡುತಿದ್ದಾರೆ. ಹಾಗೆಯೇ ಮಂಗಳೂರಿನ ಖಾಸಗಿ ವಾಹಿನಿ ‘ಚಾನೆಲ್೯’ನ ನ್ಯೂಸ್ ರೀಡರ್. ವಿವಿಧ ಸಾಮಾಜಿಕ, ಸಾಹಿತ್ಯ ಸಂಘಟನೆಗಳಲ್ಲಿ ಗುರುತಿಸುವಿಕೆ. ೧೧ನೇ ಮಂಗಳೂರು ವಿ.ವಿ.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ. ಮರೀಚಿಕೆ ಪೋಟೊ ಕಾಮಿಕ್ಸ್‌ನಲ್ಲಿ ನಟನಾಗಿ ಅಭಿನಯ.ಕಲಾಸತ್ಯ ಪಾಕ್ಷಿಕ, ಪ್ರಸ್ತುತ ಪಾಕ್ಷಿಕದಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುವಿಕೆ. ವಿವಿಧ ಬಹುಮಾನ, ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ.೨೦೦೮ ನೇ ಸಾಲಿನಲ್ಲಿ ಎಸ್.ಡಿ.ಎಂ ಕಾಲೇಜಿನ ಅತ್ತ್ಯುತ್ತಮ ವಿಧ್ಯಾರ್ಥಿ ಪ್ರಶಸ್ತಿ ಪಡೆದಿರುವ ಇವರು ರಾಷ್ಟ ಮಟ್ಟದ ವಿಚಾರಗೋಷ್ಠಿಯಲ್ಲಿ ಬಾಗವಹಿಸಿದ್ದಾರೆ.ಇವರ ಪ್ರಕಾರ ಇವರು ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇಟ್ಟುಕೊಂಡು ಇವರೆಗೆ ಬಂದಂತಹ ಹಾದಿ,ಸೋಲು-ಗೆಲುವಿನ ಹಾದಿ. ಈ ಹಾದಿಯೊಳಗೆ ನಾನು ಬರೆಹದ ಮೂಲಕ ಜನರಿಗೆ ಪರಿಚಯವಾಗುವ ಜೊತೆಗೆ ನನ್ನನ್ನು ಪತ್ರಕರ್ತನಾಗುವಂತೆ ಪ್ರೇರೆಪಿಸಿದ ಊರ ಜನತೆ, ಅಭಿಮಾನಿಗಳ,ಗುರುವರ್ಯರ, ಕುಟುಂಬಿಕರ ಆಶಯ ನನ್ನನ್ನು ಈವರೆಗೆ ಬೆಳೆಸಲು ಕಾರಣ. ಇವರೆಲ್ಲರಿಗೂ ನಾನು ಎಂದೆಂದೂ ಚಿರಋಣಿ ಎನ್ನುತ್ತಾರೆ. ಜೊತೆಗೆ ನಾನು ನನ್ನಷ್ಟಕ್ಕೆ ತಾನು ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಿ ಏನನ್ನಾದರೂ ಸಾಧಿಸುವ ಛಲ, ಇರಾದೆ ನನ್ನದು. ಇವರೆಗೆ ನಾನು ಅನುಭವಿಸಿದರಲ್ಲಿ ಹೆಚ್ಚಿನವು ಸೋಲುಗಳೇ.ಈ ಸೋಲುಗಳೇ ನನ್ನನ್ನು ಬೆಳೆಸುತ್ತಿದೆ ಎನ್ನುವ ಇವರು ಸಮಾಜದಲ್ಲಿನ ವಿರೋಧಾಭಾಸಗಳನ್ನು ವಿರೋಧಿಸುವ, ಪತ್ರಕರ್ತನಾಗಿ ನಾನು ಬರೆದ ಬರೆಹಗಳ ಮೂಲಕ ನನ್ನವರ,ನನ್ನ ರಾಜ್ಯದ, ದೇಶದ ಒಡಲಿನ, ಧಾರ್ಮಿಕತೆ ಹಾಗೂ ಬಡವ, ದಲಿತ,ಅಸ್ಪಶ್ಯರ, ಶೋಷಿತರ ಪರ ಧ್ವನಿಯಾಗಲು ಬಯಸುತ್ತೇನೆ ಎನ್ನುತ್ತಾರೆ. ಇವರು ತಮ್ಮ ಬರವಣಿಗೆಗಳಿಗಾಗಿ http://www.shamsheerbudoli.blogspot.com ಎಂಬ ಬ್ಲಾಗ್ ಒಂದನ್ನು ತೆರೆದಿದ್ದು ಅಲ್ಲಿ ಇವರ ಬರಹಗಳನ್ನು ನೋಡಬಹುದು.- ಅಶ್ರಫ್ ಮಂಜ್ರಾಬಾದ್.

ಟಾಯ್ಲೆಟ್ ರೋಲ್ ಮತ್ತು ಪೀತ ಪತ್ರಿಕೆಗಳು..


ಮೊನ್ನೆ ಪತ್ರಿಕೆಯೊಂದರಲ್ಲಿ ಲವ್ ಜಿಹಾದ್ ಕುರಿತ ಲೇಖನ ಓದುತಿದ್ದಾಗ ಕನ್ನಡದ ಇಂದಿನ ಕೆಲ ಮಾಧ್ಯಮಗಳು ಪಾಶ್ಚಾತ್ಯರ ಶೈಲಿಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಶೌಚಾಲಯಕ್ಕೆ ಪೇಪರ್ ಬಳಸುವ ಪದ್ಧತಿ ಇದ್ದರೆ ಅದಕ್ಕೂ ನಾಲಾಯಕ್ ಆಗಿರುತಿದ್ದವು ಎಂಬ ವಾಖ್ಯಗಳನ್ನು ಓದಿ ನಿಜಕ್ಕೂ ಸರಿ ಎನಿಸಿತು.


ಇಂದಿನ ಕನ್ನಡದ ಕೆಲ ಮಾಧ್ಯಮಗಳು ಯಾವ ಮಟ್ಟಕ್ಕೆ ಬಂದು ತಲುಪಿವೆ ಎಂದರೆ ಒಂದು ವರದಿಯನ್ನು ತನಗೆ ಹೇಗೆ ಬೇಕೋ ಅದರಂತೆ ಪ್ರಕಟಿಸುತ್ತವೆ. ಇಲ್ಲಿ ಸುದ್ಧಿಯ ಮೂಲ ಯಾವುದು? ಆ ಸುದ್ಧಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುವುದನ್ನು ಅರಿಯುವ ಗೊಡವೆಗೆ ಹೋಗದೆ ಬಲ್ಲ ಮೂಲಗಳು ತಿಳಿಸಿವೆ ಎಂಬ ತಮ್ಮ ಕಪಟ ಮೆದುಳಿನ ವರದಿಯನ್ನು ತುರುಕಿ ಅದಕ್ಕೆ ಸ್ವಲ್ಪ ಮಸಾಲೆ ಸೇರಿಸಿ ಪ್ರಕಟಿಸಿಬಿಡುತ್ತದೆ. ಇದರಲ್ಲಿ ತನಗಾಗದ ಸಮುದಾಯದ ವ್ಯಕ್ತಿಗಳು ಒಳಗೊಂಡಿದ್ದಾರೆ ಎಂದು ಗೊತ್ತಾದ ಕೂಡಲೇ ಆ ವರದಿಗೆ ಮತ್ತಷ್ಟು ರೆಕ್ಕೆಪುಕ್ಕ ಸೇರಿಸಿ ಆ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತದೆ. ಈ ಮಾತುಗಳನ್ನು ಹೇಳುತ್ತಿರುವುದು ಕನ್ನಡ ನಾಡಿನ ಎಲ್ಲಾ ಪತ್ರಿಕೆಗಳ ಕುರಿತಲ್ಲ. ಇಂದಿಗೂ ಪತ್ರಿಕಾ ಧರ್ಮವನ್ನು ಗೌರವಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಬಯಸುವ ಪತ್ರಿಕೆಗಳು ನಮ್ಮ ನಡುವೆ ಇದೆ. ಇವುಗಳ ನಡುವೆ ಪತ್ರಿಕಾ ಧರ್ಮದ ಜೊತೆ ತಮ್ಮ ನೈತಿಕ ಮೌಲ್ಯಗಳನ್ನೂ ಗಾಳಿಗೆ ತೂರಿ ಸಮುದಾಯಗಳ ನಡುವೆ ದ್ವೇಷ ಹಚ್ಚುವ ಪತ್ರಿಕೆಗಳೂ ಹೆಚ್ಚಾಗಿವೆ.ಇತ್ತೀಚಿಗೆ ನಡೆದ ಲವ್ ಜಿಹಾದ್ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ತಮ್ಮ ಮನೆಯ ಮಗಳು ಶೈಲಜಾ ಕಾಣೆಯಾಗಿದ್ದಾಳೆ ಎಂದು ಕ್ರೈಸ್ತ ಕುಟುಂಬವೊಂದು ಚಾಮರಾಜ ನಗರದ ಪೊಲೀಸರಿಗೆ ದೂರು ನೀಡಿ ಅವರನ್ನು ಪತ್ತೆ ಹಚ್ಚುವಂತೆ ಕರ್ನಾಟಕ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುತ್ತದೆ. ಅದರಂತೆ ಕರ್ನಾಟಕ ಪೊಲೀಸರು ತನ್ನ ಪ್ರಿಯಕರ ಅಜ್ಗರ್ ನೊಂದಿಗೆ ಪರಾರಿಯಾಗಿ ಆತನನ್ನು ವಿವಾಹವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ. ಭಾರತೀಯ ವಿವಾಹ ನೊಂದಣಿ ಸಂಹಿತೆಯಂತೆ ಅಜ್ಗರ್ 21 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದು ಆತನ ಪ್ರಿಯತಮೆ ಶೈಲಜಾ 18 ವರ್ಷಗಳಿಗಿಂತಲೂ ಮೇಲ್ಪಟ್ಟವಲಾಗಿದ್ದರೂ ಆಕೆ ತನ್ನ ಸ್ವ ಇಚ್ಛೆಯಿಂದ ತಾನು ಅಜ್ಗರ್ ನನ್ನು ಮದುವೆಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದೇನೆ ಎಂದು ಮುಚ್ಚಳಿಕೆ ಬರೆದು ಕೊಟ್ಟರೂ ಸಾಮಾನ್ಯವಾಗಿ ಇಲ್ಲಿ ಇವರ ಪರವಾಗಿ ಬರಬೇಕಿದ್ದ ತೀರ್ಪನ್ನು ಶೈಲಜಾಲ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕಾರಣ ಮುಂದೂಡಲಾಗುತ್ತದೆ. ಅದರಂತೆ ಕೆಲ ದಿನಗಳ ಮಟ್ಟಿಗೆ ಈ ಜೋಡಿ ಜೊತೆಯಾಗಿ ಇರಬಾರದೆಂದೂ ಅಷ್ಟರ ತನಕ ಈಕೆಯು ತನ್ನ ಹೆತ್ತವರೊಂದಿಗೆ ವಾಸಿಸಬೇಕೆಂದೂ ಕೋರ್ಟ್ ಆದೇಶ ನೀಡುತ್ತದೆ. ಜೊತೆಗೆ ಈಕೆಯ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕುರಿತಂತೆ ತನಿಖೆ ನಡೆಸುವಂತೆಯೂ ಆದೇಶಿಸುತ್ತದೆ.ಅಬ್ಬಾ ಇಷ್ಟು ಸಾಕಾಗಿತ್ತು ಕನ್ನಡ ನಾಡಿನ ಕೋಮುವಾದಿ ಪತ್ರಿಕೆಗಳಿಗೆ, ತನಿಖಾ ತಂಡದ ಅಧಿಕಾರಿ ಹೈಕೋರ್ಟಿಗೆ ವರದಿ ನೀಡುವ ಮುನ್ನವೇ ಇಲ್ಲಿನ ಪತ್ರಿಕೆಗಳು ತೀರ್ಪು ನೀಡಿ ಬಿಟ್ಟಿದ್ದವು. ಕರ್ನಾಟಕ ಸೇರಿದಂತೆ ಕೇರಳ ರಾಜ್ಯದಲ್ಲಿ ಲವ್ ಜಿಹಾದಿ ಸಂಘಟನೆಗಳು ಸಕ್ರಿಯವಾಗಿವೆ. ಇವರು ಇಂತಿಷ್ಟು ಅನ್ಯ ಧರ್ಮೀಯ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಗುರಿಯೊಂದಿಗೆ ಕಾರ್ಯಾಚರಣೆಗಿಳಿಯುತ್ತಾರೆ. ಇವರಿಗೆ ಇದಕ್ಕಾಗಿ ವಿದೇಶಗಳಿಂದ ಲಕ್ಷಗಟ್ಟಲೆ ಹಣ ಬರುತ್ತದೆ. ಸ್ಥಳೀಯವಾಗಿ ಇವರಿಗೆ ಬೈಕು ಕಾರು ಮತ್ತು ಉತ್ತಮ ಉಡುಪುಗಳನ್ನು ಒದಗಿಸಲಾಗುತ್ತದೆ. ಹೀಗೆ ಬುಟ್ಟಿಗೆ ಬಿದ್ದ ಹೆಣ್ಣು ಮಕ್ಕಳನ್ನು ಮತಾಂತರಗೊಳಿಸಿ ಅವರಿಗೆ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿಗೊಂಡ ಯುವತಿಯರು ಆತ್ಮಾಹುತಿ ಬಾಂಬರುಗಳಾಗಿ ಮಾರ್ಪಾಡಾಗುತಿದ್ದಾರೆ ಎಂಬ ತಮ್ಮ ಎಂದಿನ ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಎಂಬ ಮಾಹಿತಿಯನ್ನು ಸೇರಿಸಿ ವರದಿ ತಯಾರಿಸಿ ಬಿಟ್ಟವು. ಇದನ್ನೇ ಕಾಯುತಿದ್ದ ಕೆಲವು ನಾಯಕರು ಮತ್ತು ಸಂಘಟನೆಗಳು ಈ ವಿಷಯವನ್ನು ಬೀದಿಗೆ ತಂದವು. ಬೇಟಿ ಬಚಾವೋ ಆಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಬೊಬ್ಬಿಡಲಾರಂಭಿಸಿದವು. ಒಟ್ಟಿನಲ್ಲಿ ಈ ರೀತಿಯ ವರದಿಗಳಿಂದ ನಾಗರೀಕ ಸಮಾಜ ಕಂಗೆಟ್ಟಿತ್ತು. ಇದುವರೆಗೂ ಜಿಹಾದ್ ಎಂದರೆ ಬಾಂಬು ಬಂದೂಕುಗಳನ್ನು ಹಿಡಿದು ಮಾಡುವ ದಾಳಿ ಎಂದು ಕೊಂಡಿದ್ದ ನಾಗರೀಕರೂ ಈ ಹೊಸ ಜಿಹಾದಿನ ಹೆಸರು ಕೇಳಿ ಬೆವೆತು ಹೋದರು. ಈ ಬಗ್ಗೆ ಮೊಬೈಲ್ ಫೋನಿನಲ್ಲಿ ಬಗೆಬಗೆಯ ಎಸ್.ಎಂ.ಎಸ್ ಗಳು ಹರಿದಾಡಿದವು. ಒಟ್ಟಿನಲ್ಲಿ ನಾಗರೀಕ ಸಮಾಜವೇ ಈ ರೀತಿಯ ವರದಿಗಳಿಂದ ಬೆವೆತು ಹೋಗಿದ್ದರೆ ಇದರ ನಿರ್ದೇಶಕರಾದ ಈ ಪೀತ ಪತ್ರಿಕೆಗಳ ಸಂಪಾದಕರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಮಜಾ ನೋಡುತಿದ್ದರು.ಈ ಎಲ್ಲದರ ನಡುವೆ ಮತ್ತೆ ಕೋರ್ಟಿನ ಆದೇಶದಂತೆ ಶೈಲಜಾ ಮತ್ತೆ ಹಾಜರಾದಳು. ಕೋರ್ಟ್ ಆಕೆಯನ್ನು ಪುನಃ ಪ್ರಶ್ನಿಸಲಾಗಿ ಆಕೆ ತಾನು ಅಸ್ಗರಿನೊಂದಿಗೆ ಹೋಗುವುದಾಗಿಯೂ ತನಗೆ ಯಾವುದೇ ರೀತಿಯ ಆಮಿಷ ಒಡ್ಡಿ ಆತ ತನ್ನನ್ನು ಮದುವೆ ಆಗಿಲ್ಲವೆಂದೂ ತಾವಿಬ್ಬರೂ ಪರಸ್ಪರ ಪ್ರೀತಿಸುತಿದ್ದು ಇಬ್ಬರೂ ಇಷ್ಟಪಟ್ಟು ಮದುವೆ ಆಗಿರುವುದಾಗಿಯೂ ತಿಳಿಸಿ ಜೊತೆಗೆ ತನ್ನಿಷ್ಟದಂತೆ ತಾನು ಅಸ್ಗರಿನ ಧರ್ಮಕ್ಕೆ ಮತಾಂತರವಾಗುತ್ತಿರುವುದಾಗಿಯೂ ತಿಳಿಸಿದಳು. ಅದರಂತೆ ಘನವೆತ್ತ ನ್ಯಾಯಾಲಯ ಆಕೆಗೆ ಅಸ್ಗರಿನೊಂದಿಗೆ ಇರುವಂತೆ ತೀರ್ಪು ನೀಡಿತು. ಈ ಮಧ್ಯೆ ತನಿಖೆ ನಡೆಸಿದ ಇಲ್ಲಿನ ಪೋಲಿಸ್ ಅಧಿಕಾರಿಗಳು ಲವ್ ಜಿಹಾದ್ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲವೆಂದೂ ಇದುವರೆಗೆ ಆ ರೀತಿಯ ಯಾವುದೇ ದೂರು ರಾಜ್ಯದ ಯಾವುದೇ ಮೂಲೆಯಲ್ಲಿ ದಾಖಲಾಗಿಲ್ಲವೆಂದು ವರದಿ ನೀಡಿದರು. ಆದರೆ ಇದು ಹೆಚ್ಚಿನ ಯಾವುದೇ ಪತ್ರಿಕೆಗಳ ಮುಖಪುಟ ಸುದ್ಧಿಯಾಗಲಿಲ್ಲ. ಲವ್ ಜಿಹಾದ್ ಬಗ್ಗೆ ತನಗಿಷ್ಟ ಬಂದಂತೆ ಬರೆದ ಈ ಪೀತಪತ್ರಿಕೆಗಳು ಈಗ ಜಾಣ ಮೌನಕ್ಕೆ ಶರಣಾದವು. ಇವೆಲ್ಲರ ಮಧ್ಯೆ ಮೋಹನ್ ಕುಮಾರ್ ಎಂಬ ಕಾಮ ಜಿಹಾದಿಯ ಪತ್ತೆಯ ನಂತರ ಆತನ ಕಾಮ ಲೀಲೆಗಳಿಗೆ ಆತನ ಹತ್ಯೆಗಳಿಗೆ ಯಾವುದೇ ಟೈಟಲ್ ಕೊಡದೆ ಸರಳವಾಗಿ ಸರಣಿ ಹಂತಕ ಮೋಹನ್ ಕುಮಾರ್ ಬಂಧನ ಎಂದು ಪ್ರಕಟಿಸಿ ಕೃತಾರ್ಥವಾದವು. ಇವೆಲ್ಲಾ ನೋಡುವಾಗ ಈ ಪತ್ರಿಕೆಗಳು ಟಾಯ್ಲೆಟ್ ರೋಲ್ ಆಗಿ ಬಳಸಲೂ ನಾಲಾಯಕ್ ಎಂಬ ಮಾತುಗಳು ಅಕ್ಷರಸ ಸತ್ಯ ಎನಿಸುತ್ತದೆ.

ಗುರುವಾರ, ನವೆಂಬರ್ 12, 2009

ಸಂವಿಧಾನದ ಮಾನ ಕಳೆದ ಕಪಾಳಮೋಕ್ಷ


ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತಹದು.ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವೊಂದರ ವಿಧಾನಸಭೆಯಲ್ಲಿ ರಾಷ್ಟ್ರ ಭಾಷೆ ಹಿಂದಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರೆಂಬ ಕಾರಣಕ್ಕಾಗಿ ಪ್ರಜಾಪ್ರತಿನಿಧಿಯೊಬ್ಬನಿಗೆ ವಿಧಾನ ಭವನದ ಒಳಗೆ ಅಧಿವೇಶನ ನಡೆಯುತ್ತಿರುವ ಸಂಧರ್ಭದಲ್ಲಿ ಹಲ್ಲೆ ನಡೆಸಿ ಕೊನೆಗೆ ಆತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕೆಲವು ದುಷ್ಟ ರಾಜಕೀಯ ಪಕ್ಷಗಳಿಂದಾಗಿ ನಮ್ಮ ದೇಶ ಯಾವ ರೀತಿಯ ಸಂಸ್ಕೃತಿಯೆಡೆಗೆ ವಾಲುತ್ತಿದೆ ಎಂಬುವುದನ್ನು ಸೂಚಿಸುತ್ತದೆ. ಈ ಘಟನೆ ಸಮಾಜವಾದಿ ಪಕ್ಷದ ಮುಖಂಡ ಶ್ರೀ ಅಬೂಹಾಶಿಂ ಆಜ್ಮಿ ಮೇಲೆ ನಡೆದ ಹಲ್ಲೆ ಅಲ್ಲ, ಇದು ರಾಷ್ಟ್ರವೊಂದರ ಸಂಸ್ಕೃತಿಯ ಮೇಲೆ, ಅಲ್ಲಿನ ಪ್ರಜಾಪ್ರಭುತ್ವದ ಮೇಲೆ ಅಲ್ಲಿನ ರಾಷ್ಟ್ರಭಾಷೆಯ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ.

ಮೊನ್ನೆ ವಿಧಾನಸಭಾ ಅಧಿವೇಶನ ಆರಂಭವಾಗುವ ಮುನ್ನವೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಎಲ್ಲಾ ಶಾಸಕರೂ ಮರಾಠಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಇಲ್ಲದಿದ್ದರೆ ಅದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ ಎಂದು ಥೇಟ್ ತಾಲಿಬಾನಿಗಳ ತರಹ ಎಚ್ಚರಿಕೆ ನೀಡಿದ್ದರು.ಅದರಂತೆ ಆಡಳಿತ ಪಕ್ಷ ಕಾಂಗ್ರೆಸ್ ಸೇರಿ ಇತರ ಎಲ್ಲಾ ಪಕ್ಷದ ಶಾಸಕರೂ ಮರಾಠಿಯಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜ್ ಠಾಕ್ರೆಯ ಈ ಎಚ್ಚರಿಕೆಯನ್ನು ಮೊದಲೇ ಖಂಡಿಸಿದ್ದ ಮತ್ತು ಸಂವಿಧಾನಾತ್ಮಕವಲ್ಲದ ಶಕ್ತಿಗಳ ಬೆದರಿಕೆಗೆ ತಾನು ಜಗ್ಗುವುದಿಲ್ಲವೆಂದು ಘೋಷಿಸಿದ ಸಮಾಜವಾದಿ ಪಕ್ಷದ ಮುಖಂಡ ಅಬೂಹಾಶಿಂ ಆಜ್ಮಿ ಸಂವಿಧಾನಾತ್ಮಕವಾಗಿ ರಾಷ್ಟ್ರಭಾಷೆ ಹಿಂದಿಯಲ್ಲಿ ಪ್ರತಿಜ್ಞೆ ಸ್ವೀಕರಿಸುವುದಾಗಿ ಹೇಳಿದ್ದರು. ಹೀಗಿದ್ದೂ ಅಲ್ಲಿನ ಸರ್ಕಾರ ವಿಧಾನಸಭೆಯ ಒಳಗೆ ಸೂಕ್ತ ಭದ್ರತಾ ಕ್ರಮಗಳನ್ನು ಏರ್ಪಡಿಸದೆ ಒಬ್ಬ ಜನಪ್ರತಿನಿಧಿಯೊಬ್ಬನ ಮೇಲೆ ಬಹಿರಂಗವಾಗಿ ಹಲ್ಲೆ ನಡೆಸುವಂತಹ ಘಟನೆಗೆ ಪರೋಕ್ಷವಾಗಿ ಕಾರಣವಾಗುವುದರ ಜೊತೆಗೆ ದೇಶದ ಮಾನವನ್ನು ಬಹಿರಂಗವಾಗಿ ವಿಶ್ವದ ಮುಂದೆ ಕಳೆಯಲು ಕಾರಣವಾಯಿತು .ಒಬ್ಬ ಜನಪ್ರತಿನಿಧಿಯೊಬ್ಬನ ಮೇಲಿನ ಹಲ್ಲೆಯನ್ನು ಅದೂ ವಿಧಾನ ಸಭೆಯ ಒಳಗೆ ತಡೆಯಲಾಗದ ನೂತನ ಸರ್ಕಾರ ಮಹಾರಾಷ್ಟ್ರದ ಜನತೆಗೆ ಯಾವ ರೀತಿಯ ರಕ್ಷಣೆ ನೀಡಬಲ್ಲದು ಎಂಬ ಸಂಶಯವನ್ನೂ ಹುಟ್ಟುಹಾಕುವಂತೆ ಮಾಡಿತು.

ಇಲ್ಲಿ ಪ್ರಶ್ನೆ ಇರುವುದು ಭಾಷೆಯದ್ದಲ್ಲ ಮತಬ್ಯಾಂಕಿನದು. ಮರಾಠಿ ಜನಗಳ ಭಾಷಾಪ್ರೇಮವನ್ನು ದುರುಪಯೋಗಪಡಿಸಿಕೊಂಡು ಆಕ್ರಮಣಕಾರಿ ಹೇಳಿಕೆಗಳ ಮೂಲಕ ಮರಾಠಿ ಮತಬ್ಯಾಂಕ್ ಸೃಷ್ಟಿಸಿಕೊಂಡ ರಾಜ್ ಠಾಕ್ರೆ ಮರಾಠಿ ಜನರ ಮನಗೆಲ್ಲಲು ಮತ್ತೆ ಈ ರೀತಿಯ ನೀಚ ತಂತ್ರಗಳನ್ನು ಪ್ರಯೋಗಿಸುತ್ತಿರುವುದು ಅಖಂಡ ಭಾರತವನ್ನು ಭಾಷೆಯ ಹೆಸರಿನಲ್ಲಿ ಒಡೆಯುವ ರಾಷ್ಟ್ರದ್ರೋಹಿ ಕೆಲಸ ಎಂದೇ ಪರಿಗಣಿಸಬೇಕಾಗುತ್ತದೆ. ರಾಜ್ಯ ಮತ್ತು ಭಾಷೆಗಳಿಗಿಂತಲೂ ರಾಷ್ಟ್ರ ಮುಖ್ಯ .ನೆರೆಯಲ್ಲಿ ಚೀನಾ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳು ಭಾರತದ ವಿರುದ್ಧ ಷಡ್ಯಂತ್ರಗಳನ್ನು ರೂಪಿಸುತಿದ್ದರೆ ಭಾರತೀಯರಾದ ನಾವು ಏಕತೆಯಿಂದ ಬಲಿಷ್ಠ ರಾಷ್ಟ್ರ ಕಟ್ಟುವ ಬದಲು ಭಾಷೆಯ ಹೆಸರಿನಲ್ಲಿ ಪರಸ್ಪರ ಜಗಳಕ್ಕೆ ನಿಂತರೆ ಇದರಿಂದ ರಾಷ್ಟಕ್ಕೆ ಅಪಾಯವೇ ಹೆಚ್ಚು.ಸೌಹಾರ್ದ ಭಾರತದ ಕಲ್ಪನೆಯೊಂದಿಗೆ ಸ್ವಾತಂತ್ಯ್ರ ತಂದುಕೊಟ್ಟ ಮಹನೀಯರು ಸುಗಮ ಆಡಳಿತಕ್ಕಾಗಿ ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿದರು. ಅವರಲ್ಲಿ ಅಧಿಕಾರದ ವಿಕೇಂದ್ರೀಕರಣದ ಕಲ್ಪನೆ ಇತ್ತು.ಭಾರತದ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಈ ಮಾದರಿ ಉತ್ತಮವೆಂದೇ ಅವರು ಭಾವಿಸಿದ್ದರು. ಅದು ಸರಿ ಕೂಡಾ ಆಗಿತ್ತು. ಆದರೆ ರಾಜ್ ಠಾಕ್ರೆಯಂತಹ ಪುಂಡರು ಈ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡು ರಾಷ್ಟ್ರವನ್ನು ಭಾಷೆಯ ಆಧಾರದ ಮೇಲೆ ವಿಭಜಿಸುತ್ತಿರುವುದು ಖಂಡನೀಯವಾಗಿದೆ.

ಇದುವರೆಗೆ ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆದು ತಮ್ಮ ಮತಬ್ಯಾಂಕ್ ಸೃಷ್ಠಿಸಿಕೊಳ್ಳುತಿದ್ದ ರಾಜಕಾರಣಿಗಳು ಈಗ ಭಾಷೆಯ ಆಧಾರದ ಮೇಲೆ ರಾಷ್ಟ್ರದ ಏಕತೆಗೆ ದಕ್ಕೆ ತರುತ್ತಿರುವುದು ಶೋಭೆ ತರುವಂತಹದ್ದಲ್ಲ. ಸರ್ಕಾರ ಇಂತಹ ಶಕ್ತಿಗಳನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು. ಇಲ್ಲದಿದ್ದರೆ ಇದು ಮುಂದೆ ಹೆಮ್ಮರವಾಗಿ ಮತ್ತೊಂದು ರೀತಿಯ ಖಾಲಿಸ್ತಾನ್ ಚಳುವಳಿಯನ್ನು ಹುಟ್ಟುಹಾಕಬಹುದು.ಅದಕ್ಕೆ ಅವಕಾಶ ಕೊಡದೆ ರಾಷ್ಟೀಯ ಭದ್ರತಾ ಕಾಯ್ದೆಯಡಿ ಇಂತಹ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಮೂಲಕ ರಾಷ್ಟ್ರ ಒಡೆಯುವ ಶಕ್ತಿಗಳಿಗೆ ಸೂಕ್ತ ಎಚ್ಚರಿಕೆಯನ್ನು ಕೊಡಬೇಕು.


ಹಿಂದೆ ಕರ್ನಾಟಕದ ವಿಧಾನಸಭೆಗೆ ಬೆಳಗಾವಿ ಭಾಗದಿಂದ ಆಯ್ಕೆಯಾಗಿ ಬರುತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಅವರ ಪಕ್ಷದ ರುಮಾಲನ್ನು ತಲೆಗೆ ಸುತ್ತಿಕೊಂಡು ವಿಧಾನಸಭೆಗೆ ಬಂದು ಅಲ್ಲಿ ಮರಾಠಿಯಲ್ಲಿ ಮಾತನಾಡುವುದರ ಜೊತೆಗೆ ಮಹಾರಾಷ್ಟ್ರ ಪರ ಘೋಷಣೆಗಳನ್ನು ಕೂಗುತಿದ್ದರು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಬಹಿರಂಗವಾಗಿ ಕೂಗುತಿದ್ದರು.ಇದು ರಾಜ್ಯ ದ್ರೋಹದ ಕೆಲಸ.ಇಲ್ಲಿ ಅವರು ರಾಜ್ಯದ ಭಾಷೆ ಅಥವಾ ರಾಷ್ಟ್ರದ ಭಾಷೆಯನ್ನು ಬಳಸುದುವುದನ್ನು ಬಿಟ್ಟು ಅನ್ಯ ಸಂಸ್ಥಾನದ ಭಾಷೆಯನ್ನು ಬಳಸುತಿದ್ದರು.ವಿಚಿತ್ರವೆಂದರೆ ಇಂತಹ ರಾಜ್ಯದ್ರೋಹದ ಕೆಲಸಕ್ಕೆ ಬಾಳಾಠಾಕ್ರೆ,ರಾಜ್ ಠಾಕ್ರೆ ಆದಿಯಾಗಿ ಮಹಾರಾಷ್ಟ್ರದ ಇತರ ಪಕ್ಷಗಳ ರಾಜಕಾರಣಿಗಳು ಬೆಂಬಲ ಕೊಡುತಿದ್ದರು.ಆದರೆ ಈಗ ತಮ್ಮ ಸಂಸ್ಥಾನದಲ್ಲಿ ಭಾರತ ದೇಶದ ರಾಷ್ಟ್ರಭಾಷೆಯ ಬಳಕೆ ಅವರಿಗೆ ಬೇಡ.ಇಂತಹ ರಾಜಕಾರಣಿಗಳಿಗೆ ಏನನ್ನಬೇಕು? ಇಂತಹ ಹೊಲಸು ರಾಜಕಾರಣದಿಂದಲೇ ದೇಶ ಇಂದು ಅಧೋಗತಿಗಿಳಿಯುತ್ತಿರುವುದು.


ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರಿಗೆ ಕರ್ನಾಟಕದ ವಿಧಾನಸಭೆಯಲ್ಲಿ ಕಪಾಳಮೊಕ್ಷದಂತಹ ಘಟನೆ ನಡೆಯಲಿಲ್ಲ.ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇವರ ಮಹಾರಾಷ್ಟ್ರ ಪರ ಧೋರಣೆ ಖಂಡಿಸಿ ಸಂವಿಧಾನಾತ್ಮಕವಾಗಿ ಸದನದಲ್ಲಿ ಪ್ರತಿಭಟನೆ ಮಾಡುತಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಆಗಿದ್ದು ಮಾತ್ರ ನಾಚಿಕೆಗೇಡು. ಈ ಘಟನೆ ಭಾರತದ ಏಕತೆಗೆ ಭಂಗ ತರುವಂತಹದ್ದು, ಇದರಿಂದ ದೇಶದ ಘನತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸಿಯುವಂತಾಯಿತು.ನಮ್ಮ ಜನಗಳು ಇಂತಹ ಸಂವಿಧಾನ ವಿರೋಧಿ ಶಕ್ತಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿಕಳುಹಿಸುವ ಮೂಲಕ ತಮಗೆ ತಾವೇ ಅವಮಾನಿಸಿಕೊಂಡಿದ್ದಾರೆ. ಇವರ ಈ ನೀಚ ಕೆಲಸಕ್ಕಾಗಿ ಈ ನಾಲ್ವರು ಶಾಸಕರನ್ನು ಮುಂದಿನ ನಾಲ್ಕು ವರ್ಷಗಳ ಕಾಲ ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ. ಜನಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಡಬೇಕಾಗಿದ್ದ ಶಾಸಕರು ಸ್ವತಹ ಇನ್ನು ನಾಲ್ಕು ವರ್ಷ ವಿಧಾನಸಭೆ ಪ್ರವೇಶಿಸುವಂತಿಲ್ಲ. ಹೀಗಾದಾಗ ಆ ಕ್ಷೇತ್ರದ ಪಾಡೇನಾಗಬೇಕು? ಒಟ್ಟಿನಲ್ಲಿ ಇಂತಹ ಶಾಸಕರನ್ನು ಆಯ್ಕೆ ಮಾಡುವ ನಾವು ಮೊದಲು ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿದೆ.


- ಅಶ್ರಫ್ ಮಂಜ್ರಾಬಾದ್.

ಶನಿವಾರ, ಅಕ್ಟೋಬರ್ 31, 2009

ಯಡ್ಡಿ - ರೆಡ್ಡಿ ಜಗಳದ ನಡುವೆ ಕನ್ನಡಮ್ಮನ ರಾಜ್ಯೋತ್ಸವ....


ನಾಡಿನ ಜನತೆ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ ರಾಜ್ಯದ ರಾಜಕೀಯದಲ್ಲಿ ಉಂಟಾದ ಬಿರುಗಾಳಿಯಿಂದಾಗಿ ರಾಜಕಾರಣಿಗಳು ರಾಜ್ಯೋತ್ಸವಕ್ಕಿಂತಲೂ ಹೆಚ್ಚಾಗಿ ರಾಜಕೀಯ ಬದಲಾವಣೆಗಳ ಬಗ್ಗೆ ಹೆಚ್ಚು ಚಿಂತಿತರಾಗಿರುವುದು ಈ ಬಾರಿಯ ರಾಜ್ಯೋತ್ಸವದ ವೈಶಿಷ್ಟ್ಯ ಅನ್ನಬಹುದು. ಅದು ಕನ್ನಡ ನಾಡಿನ ಜನತೆಯ ಪಾಲಿಗೆ ದುರದೃಷ್ಟಕರವೂ ಹೌದು. ಈಗಾಗಲೇ ರಾಜ್ಯಾದ್ಯಂತ ಉಂಟಾದ ಅಕಾಲಿಕ ಮಳೆ ಮತ್ತು ನೆರೆಯಿಂದಾಗಿ ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಬೀದಿಪಾಲಾಗಿದ್ದರೆ ಅಲ್ಲಿ ಹಬ್ಬುತ್ತಿರುವ ಸಾಂಕ್ರಾಮಿಕ ರೋಗಗಳಿಂದ ಪ್ರತಿದಿನ ನೂರಾರು ಜನರು ರೋಗ ಪೀಡಿತರಾಗುತಿದ್ದಾರೆ. ನೆರೆ ಪೀಡಿತ ಜನರ ಕಷ್ಟ ದುಖಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಕಾರ್ಯೋನ್ಮುಖರಾಗಬೇಕಿದ್ದ ಸರ್ಕಾರ ಮತ್ತು ರಾಜಕಾರಣಿಗಳು ಆ ಬಗ್ಗೆ ಚಿಂತಿಸುವುದನ್ನು ಬಿಟ್ಟು ಈ ಸಂಧರ್ಭದಲ್ಲಿ ಕುರ್ಚಿ ಕಿತ್ತಾಟದಲ್ಲಿ ತೊಡಗಿರುವುದು ಪ್ರಜ್ಞಾವಂತ ನಾಗರಿಕರು ಸರ್ಕಾರದ ಬಗ್ಗೆಯೇ ಅಸಹ್ಯ ಪಡುವಂತಾಗಿದೆ.


ನೆರೆ ಬಂದ ಕೂಡಲೇ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರ ನೀಡುವ ನೆರವಿನ ಬಗ್ಗೆ ವಾದ ವಿವಾದ ನಡೆಸಿದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಆ ಕ್ಷಣ ನಾಡಿನ ಜನರ ಮತ್ತು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾದವು. ಇದೇ ಸಂಧರ್ಭವನ್ನು ರಾಜಕೀಯವಾಗಿ ಬಹು ಚಾಣಾಕ್ಷತೆಯಿಂದ ಉಪಯೋಗಿಸಿಕೊಂಡ ಯಡಿಯೂರಪ್ಪ ಪಾದ ಯಾತ್ರೆ ನಡೆಸುವ ಮೂಲಕ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಮಾಡುವುದರ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಈ ಮೂಲಕ ಜನಾಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಇವರ ಈ ಕಾರ್ಯಕ್ರಮ ಒಂದು ರೀತಿಯಲ್ಲಿ ಜನ ಮನ್ನಣೆಗೂ ಪಾತ್ರವಾಯಿತು. ಅದಕ್ಕೆ ಅಲ್ಲಿ ಹರಿದು ಬಂದ ಕೋಟ್ಯಾಂತರ ರೂಪಾಯಿಗಳೇ ಸಾಕ್ಷಿ. ನಾಡಿನ ಮಾಧ್ಯಮಗಳು ಪೈಪೋಟಿಗಿಳಿದವರಂತೆ ಈ ಪಾದಯಾತ್ರೆಯ ಬಗ್ಗೆ ರಂಗು ರಂಗಿನ ಸುದ್ಧಿಗಳನ್ನು ಪ್ರಕಟಿಸಿದವು. ಆ ಕ್ಷಣಗಳಲ್ಲಿ ಜನತೆಯ ಪಾಲಿಗೆ ಯಡಿಯೂರಪ್ಪ ನಿಜವಾದ ಹೀರೋ ತರಹ ಕಾಣಿಸಿಕೊಂಡರು. ಆದರೆ ಅದೆಲ್ಲಾ ಕೆಲವೇ ದಿನಗಳಲ್ಲಿ ಮಣ್ಣುಪಾಲಾಯಿತು.ಇನ್ನೇನು ನೆರೆ ಪೀಡಿತ ಸಂತ್ರಸ್ತರ ಪುನರ್ವಸತಿ ಆರಂಭವಾಗುತ್ತದೆ ಅಂದು ಕೊಂಡಾಗಲೇ ರಾಜ್ಯದ ರಾಜಕೀಯದಲ್ಲಿ ಯಡ್ಡಿ ಮತ್ತು ರೆಡ್ಡಿಗಳ ನಡುವಿನ ರಾಜಕೀಯ ಕದನ ಆರಂಭವಾಯಿತು. ಯಾವ ಸರ್ಕಾರ ತನ್ನ ಪ್ರಜೆಗಳ ನೆರವಿಗೆ ಧಾವಿಸಬೇಕಿತ್ತೋ ಯಾವ ಮುಖ್ಯಮಂತ್ರಿ ತನ್ನ ಪ್ರಜೆಗಳಿಗಾಗಿ ಬೆಂಗಳೂರಿನ ರಾಜ ಬೀದಿಗಳಲ್ಲಿ ಡಬ್ಬ ಹಿಡಿದು ಸಂತ್ರಸ್ತರ ನೆರವಿಗೆ ಹಣ ಸಂಗ್ರಹ ಮಾಡಿದರೋ ಆ ಮುಖ್ಯಮಂತ್ರಿ ನೆರೆ ಸಂತ್ರಸ್ತ ಜನಗಳ ನಡುವೆ ಹೋಗಿ ಪರಿಹಾರ ಕಾರ್ಯ ಕೈಗೊಳ್ಳುವ ಬದಲು ತನ್ನ ಕುರ್ಚಿ ಉಳಿಸಲಿಕ್ಕಾಗಿ ವಿಧಾನ ಸೌಧ ಮತ್ತು ಖಾಸಗಿ ರೆಸಾರ್ಟುಗಳಲ್ಲಿ ಕುಳಿತು ಸರ್ಕಾರವನ್ನು ಹೇಗೆ ಉಳಿಸಬೇಕು ಎಂದು ಚರ್ಚಿಸತೊಡಗಿದರು. ಪಕ್ಕದ ಆಂಧ್ರದಲ್ಲಿ ಅಲ್ಲಿನ ನೂತನ ಮುಖ್ಯಮಂತ್ರಿ ರೋಸಯ್ಯ ತನ್ನ ಅನುಭವದ ಕೊರತೆಯ ನಡುವೆಯೂ ನೆರೆ ಪರಿಸ್ಥಿತಿಯನ್ನು ಎದುರಿಸಿದ ರೀತಿಯಿದೆಯಲ್ಲ ಅದು ಮೆಚ್ಚುವಂತಹದು. ಬಹುಶ ದಿವಂಗತ ರಾಜಶೇಖರ ರೆಡ್ಡಿಯವರೂ ಇಷ್ಟು ಸಮರ್ಥವಾಗಿ ಈ ನೆರೆ ಪರಿಸ್ಥಿಯನ್ನು ನಿಭಾಯಿಸುತಿದ್ದರೋ ಎಂಬ ಸಂಶಯವೂ ಮೂಡುವಂತೆ ಬಹು ಚಾಣಾಕ್ಷತೆಯಿಂದ ಇಡೀ ಸರ್ಕಾರವನ್ನೇ ನೆರೆ ಪೀಡಿತ ಸಂತ್ರಸ್ತರ ನಡುವೆ ಕೊಂಡೊಯ್ದರು. ಅಲ್ಲಿ ಈ ವಿಷಯದ ಕುರಿತು ಪಾದಯಾತ್ರೆಯಂತಹ ರಾಜಕೀಯ ಗಿಮಿಕ್ ಗಳು ನಡೆಯಲಿಲ್ಲ. ಸರ್ಕಾರದ ಖಜಾನೆಯಲ್ಲಿದ್ದ ಜನರ ಹಣವನ್ನೇ ಜನರ ಕಲ್ಯಾಣಕ್ಕಾಗಿ ಬಳಸಿಕೊಂಡರು.ಆದರೆ ಇಲ್ಲಿ ನಡೆದದ್ದು ಅದಕ್ಕೆ ತದ್ವಿರುದ್ದ.ಇಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಈ ವಿಷಯದಲ್ಲಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಾ ಕಾಲಹರಣ ಮಾಡಿದರೇ ವಿನಹ ನೆರೆ ಪೀಡಿತರ  ಸಂಕಷ್ಟಕ್ಕೆ ನೇರವಾಗಿ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾದರು.ಈ ಎಲ್ಲಾ ರಾಜಕೀಯ ದೊಂಬರಾಟಗಳ ನಡುವೆ ನಿಜವಾದ ರೀತಿಯಲ್ಲಿ ಕನ್ನಡ ನಾಡಿನ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕೆಲ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು. ಮಠ, ಮಸೀದಿ, ಚರ್ಚುಗಳು ಇಂತಿಷ್ಟು ಮನೆ ನಾವು ಕಟ್ಟಿ ಕೊಡುತ್ತೇವೆ ಎಂದು ಹೇಳಿದವು. ನಾಡಿನ ಅನೇಕ ಸಂಘಟನೆಗಳು ತಮ್ಮ ಪ್ರತಿನಿಧಿಗಳನ್ನು ಆ ನೆರೆ ಪೀಡಿತ ಜನರ ಸೇವೆಗೆ ಕಳುಹಿಸಿದವು.ಸರ್ಕಾರ ಕಚ್ಚಾಡುತಿದ್ದಾಗ ಸುಮ್ಮನೆ ಕೂರದ ತಮ್ಮ ಸಹೋದರರ ನೆರವಿಗೆ ಧಾವಿಸಿದ ಈ ಕನ್ನಡ ನಾಡಿನ ಸಂಘಟನೆಗಳ ಕಾರ್ಯ ಮೆಚ್ಚುವಂತಹದ್ದೆ. ಒಂದು ರೀತಿಯಲ್ಲಿ ನಾಡಿನ ಸಂಘಟನೆಗಳು ಮತ್ತು ಮಠ ಮಂದಿರ,ಮಸೀದಿ,ಚರ್ಚುಗಳು ಪರ್ಯಾಯ ಸರ್ಕಾರದ ಮಾದರಿಯಲ್ಲಿ ಜನರ ಸೇವೆಗೆ ಧಾವಿಸಿದವು ಎಂದರೂ ತಪ್ಪಾಗಲಾರದು.


ಈ ಎಲ್ಲಾ ಸಮಸ್ಯೆಗಳ ನಡುವೆ ನಾಳೆ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತಿದ್ದೇವೆ.ಈಗಾಗಲೇ ಹಲವು ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವವನ್ನು ಸರಳವಾಗಿ ಆಚರಿಸುವ ತೀರ್ಮಾನ ಕೈಗೊಂಡಿವೆ. ಉತ್ತರ ಕನ್ನಡ ಜನರು ಮನೆ ಮಠ ಕಳೆದು ಕೊಂದು ಆಕಾಶದ ಕೆಳಗೆ ಮಲಗಿರುವಾಗ ಸಂಗೀತ ರಸಮಂಜರಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಹಣ ಪೋಲು ಮಾಡುವ ಬದಲು ಅದನ್ನು ನಮ್ಮ ಸಹೋದರರ ಪುನರ್ವಸತಿಗೆ ನೀಡುವ ನಿರ್ಧಾರಗಳನ್ನು ಕೈಗೊಂಡಿವೆ. ಈ ತೀರ್ಮಾನಗಳು ಈ ಸಂಧರ್ಭದಲ್ಲಿ ಸಮಂಜಸವಾಗಿದ್ದು ಸಕಾಲಿಕವಾದುದಾಗಿದೆ. ಜೊತೆಗೆ ಆಂತರಿಕ ಕಿತ್ತಾಟದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತು ಕೊಂಡು ಉತ್ತರ ಕನ್ನಡದ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದೆ.

ಲವ್+ ಕಾಮ ಜಿಹಾದ್ + ಹತ್ಯೆಯ ಸುತ್ತ ಒಂದು ಸುತ್ತು.ಜಗತ್ತಿನ ಯಾವುದೇ ಗ್ರಂಥದಲ್ಲೂ ಸಿಗದಂತಹ ಪದವನ್ನು ಇತ್ತೀಚಿಗೆ ಕೇರಳ ಮತ್ತು ಕರ್ನಾಟಕದ ಕೆಲ ಮಾಧ್ಯಮಗಳು ಸೃಷ್ಟಿಸಿದವು. ಅದುವೇ ಲವ್ ಜಿಹಾದ್. ಇದುವರೆಗೆ ಜಿಹಾದ್ ಎಂದರೆ ಕೇವಲ ಬಾಂಬು, ಬಂದೂಕುಗಳನ್ನು ಹಿಡಿದು ಮಾಡುವ ದಾಳಿ ಎಂದು ಜಗತ್ತಿಗೆ ಸಾರಿದ ಈ ಮಾಧ್ಯಮಗಳು ಈಗ ಅದರ ಮುಂದೆ ಪ್ರೀತಿಯನ್ನು ಸೇರಿಸುವುದರ ಮೂಲಕ ಇದಕ್ಕೊಂದು ವಿಚಿತ್ರ ತಿರುವು ನೀಡಲು ಪ್ರಾರಂಭಿಸಿದವು.


ಏನಿದು ಲವ್ ಜಿಹಾದ್... ಕೆಲ ಸಂಘಟನೆಗಳ ಪ್ರಕಾರ ಮುಸ್ಲಿಂ ಸಮುದಾಯದ ಯುವಕರು ಹಣ ಮತ್ತು ಪ್ರೀತಿಯ ಆಮಿಷವೊಡ್ಡಿ ಅನ್ಯ ಸಮುದಾಯದ ಯುವತಿಯರನ್ನು ಮರಳು ಮಾಡಿ ತಮ್ಮ ಬುಟ್ಟಿಗೆ ಹಾಕಿಕೊಂಡು ಆನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳಿಸುತಿದ್ದಾರೆ. ಹೀಗೆ ಮತಾಂತರ ಗೊಂಡ ಯುವತಿಯರಿಗೆ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ. ಇದನ್ನೇ ಲವ್ ಜಿಹಾದ್ ಎನ್ನಲಾಗುತ್ತದೆ.ಇದು ಈ ಸಂಘಟನೆಗಳು ಲವ್ ಜಿಹಾದಿಗೆ ನೀಡಿದ ವ್ಯಾಖ್ಯಾನ.
ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಲವ್ ಜಿಹಾದಿಗಳ ಬಂಧನ ಆಗಬೇಕು ಎಂದು ಕೆಲ ಸಂಘಟನೆಗಳು ನಿದ್ರೆ ಮಾಡುತಿದ್ದ ಕರ್ನಾಟಕದ ಪೋಲೀಸರ ಮುಂದೆ ಪ್ರತಿಭಟನೆ ನಡೆಸಿ ನೀವು ನಿದ್ರೆ ಮಾಡಿದ್ದು ಸಾಕು ಇನ್ನಾದರೂ ಎಚ್ಚರಗೊಳ್ಳಿ ಎಂದು ಬೊಬ್ಬಿಟ್ಟವು.ಇದೇ ವಿಷಯದ ಕುರಿತು ಕೆಲ ಮಾಧ್ಯಮಗಳು ಕಪೋಕಲ್ಪಿತ ಕೆಲ ವರದಿಗಳನ್ನು ಪ್ರಕಟಿಸಿದವು. ಈ ರೀತಿಯಾಗಿ ಒಂದು ಸಮುದಾಯವನ್ನು ಗುರಿಯಾಗಿಸಿ ಅವರ ಮೇಲೆ ಆರೋಪ ಹೊರಿಸುತಿದ್ದ ಸಂಧರ್ಭದಲ್ಲಿ ಸಿಕ್ಕಿ ಬಿದ್ದವನೇ ಲವ್+ಕಾಮ ಜಿಹಾದಿ ಮೋಹನ ಆಲಿಯಾಸ್ ಮೋಹನ ಮೊಗೆರ.


ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿದ್ದ ಈತ ಪ್ರವೃತ್ತಿಯಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಹೆಣ್ಣು ಮಕ್ಕಳ ಪಾಲಿಗೆ ಕಾಮ ಪಿಶಾಚಿಯಾಗಿದ್ದ. ತನ್ನ ಮೋಹಕ ನಗು ಮತ್ತು ವರಸೆಯ ಮಾತುಗಳಿಂದ ಬಡ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿ ಕೊಳ್ಳುತಿದ್ದ ಈತ ಆನಂತರ ಅವರನ್ನು ಲೈಂಗಿಕ ಕ್ರಿಯೆಗೆ ಬಳಸಿ ಕೊನೆಗೆ ದೂರದ ಊರಿನಲ್ಲಿ ಸಯನೈಡ್ ಕೊಟ್ಟು ಕೊಲ್ಲುತಿದ್ದ. ಹೀಗೆ ಬಲಿಯಾದವರ ಸಂಖ್ಯೆ ಪೊಲೀಸರಿಗೆ ದೊರೆತ ಮಾಹಿತಿ ಪ್ರಕಾರ ೨೩. ಅದರಲ್ಲಿ ೧೯ ಪ್ರಕರಣಗಳನ್ನು ಈತ ಒಪ್ಪಿಕೊಂಡಿದ್ದಾನೆ. ಪುಣ್ಯಾತ್ಮ ಮೋಹನನ ಕಾಮ ಪೀಪಾಸಿಗೆ ಬಲಿಯಾದ ಹೆಣ್ಣು ಮಕ್ಕಳು ಎಷ್ಟು ಎಂಬ ಲೆಕ್ಕ ಖುದ್ದು ಆತನಿಗೇ ಗೊತ್ತಿಲ್ಲವಂತೆ. ಹೀಗೆ ಅಮಾಯಕ ಹೆಣ್ಣು ಮಕ್ಕಳು ಈತನ ಕಾಮ ಜಿಹಾದಿಗೆ ದೂರದ ಊರುಗಳಿಗೆ ಹೋಗಿ ಬಲಿಯಾಗುತಿದ್ದರೆ ಇತ್ತ ಕೆಲ ಸಂಘಟನೆಗಳು ಇದರ ಬಗ್ಗೆ ಬೇರೆಯೇ ರೀತಿಯ ವ್ಯಾಖ್ಯಾನ ನೀಡಿ ಇದಕ್ಕೆ ಲವ್ ಜಿಹಾದ್ ಎಂಬ ಹೆಸರು ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತಿದ್ದವು.ಅದುವರೆಗೂ ಸುಮ್ಮನಿದ್ದ ಪೊಲೀಸರು ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ಆರಂಭವಾದ ನಂತರ ಒಮ್ಮೆಲೇ ಮೈಮೇಲೆ ದೇವರು ಬಂದವರಂತೆ ಎಚ್ಚರಗೊಂಡು ಈ ಬಗ್ಗೆ ತನಿಖೆಯನ್ನು ಆರಂಭಿಸಿಯೇ ಬಿಟ್ಟರು. ಆಗ ಸಿಕ್ಕವನೇ ಈ ಮೋಹನ ಎಂಬ ಕಾಮದ ಕ್ರಿಮಿ. ಈತನ ಬಂಧನದಿಂದ ಹುಡುಗಿಯರು ಕಾಣೆಯಾಗಿ ಎಲ್ಲಿ ಹೋದರು ಎಂಬ ಪ್ರಶ್ನೆಗೆ ಉತ್ತರ ಅದಾಗಲೇ ಸಿಕ್ಕಿತ್ತು. ತಮ್ಮ ಮಕ್ಕಳು ಯಾವನೊಂದಿಗೋ ಓಡಿ ಹೋಗಿ ಜಾತಿ ಕೆಟ್ಟವಲಾಗಿ ಜೀವಿಸಿರಬಹುದು ಎಂದು ಕೊಂಡ ಮಾತಾಪಿತರಿಗೆ ಈತನ ಬಂಧನದ ನಂತರ ತಮ್ಮ ಮಕ್ಕಳು ಜಾತಿಯ ಬದಲು ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದದ್ದು.ಕರ್ನಾಟಕ ಪೊಲೀಸರು ತಡವಾಗಿಯಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದಾಗಿ ಅನೇಕ ಹೆಣ್ಣು ಮಕ್ಕಳ ಮಾನ ಮತ್ತು ಪ್ರಾಣ ಉಳಿದಿದೆ. ಜೊತೆಗೆ ಈ ವಿಷಯವನ್ನು ದೊಡ್ಡದು ಮಾಡಿ ಇದಕ್ಕೊಂದು ಹೆಸರು ಕೊಟ್ಟು ಕೋಮು ಬಣ್ಣ ಕೊಡಲು ಹೊರಟಿದ್ದ ಕೊಮುವಾದಿಗಳಿಗೂ ಪೊಲೀಸರು ಈ ಬಂಧನದ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ.
ಇನ್ನು ಬಾಕಿ ಇರುವುದು ಕಾನೂನು ಪ್ರಕ್ರಿಯೆ. ಒಂದೋ ಈತನಿಗೆ ಗಲ್ಲಾಗಬಹುದು ಇಲ್ಲವೇ ಈತ ನಿರಪರಾಧಿ ಎಂದು ಬಿಡುಗಡೆ ಹೊಂದಲೂ ಬಹುದು. ಇದಕ್ಕೆ ಕೆಲವು ಕರಿಕೋಟು ತೊಟ್ಟ ವಕೀಲರಿದ್ದಾರೆ. ನ್ಯಾಯದ ಕಣ್ಣಿಗೆ ಮಣ್ಣೆರಚಿ ಇಂತಹ ಹಲವಾರು ದುಷ್ಟರು ಬಿಡುಗಡೆ ಹೊಂದಿದ್ದಾರೆ. ಆದರೆ ಈ ವಿಷಯದಲ್ಲಿ ಹಾಗಾಗಲು ಬಿಡಬಾರದು. ಈತನಿಗೆ ಸೂಕ್ತ ಶಿಕ್ಷೆ ಆದಾಗಲೇ ಈತನ ಕಾಮ ಜಿಹಾದಿಗೆ ಬಲಿಯಾದ ಆ ಹೆಣ್ಣು ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ.

ಶನಿವಾರ, ಅಕ್ಟೋಬರ್ 24, 2009

ಮಮತೆಯ ಮಡಿಲು

ತಾಯ್ನಾಡಿನಿಂದ ಮಿತ್ರನೊಬ್ಬ ಕಳುಹಿಸಿದ್ದ ಎಸ್.ಎಂ.ಎಸ್. ಕೆಲ ಕ್ಷಣ ಮನಸ್ಸನ್ನು ತಾಯಿಯ ಮಡಿಲಲ್ಲಿ ಕಳೆದ ಬಾಲ್ಯದ ನೆನಪುಗಳೆಡೆಗೆ ಕೊಂಡೊಯ್ದಿತ್ತು. ಆ ಎಸ್.ಎಂ.ಎಸ್.ತಾಯಿಯ ಮಮತೆಯ ಕುರಿತಾಗಿದ್ದು ಅದರಲ್ಲಿ ತಾಯಿಯ ಮಮತೆಯ ಕುರಿತು ಹೀಗೆ ಬರೆದಿತ್ತು.

ಒಮ್ಮೆ ಮಳೆಗಾಲದ ಸಮಯದಲ್ಲಿ ಪುಟ್ಟ ಮಗಳು ಮಳೆಯಲ್ಲಿ ನೆನೆದು ಕೊಂಡು ಮನೆಗೆ ಬರುತ್ತಾಳೆ. ಇದನ್ನು ನೋಡಿದ ಆಕೆಯ ಅಣ್ಣ ಆಕೆಗೆ ಏಕೆ ನೀನು ಛತ್ರಿ ತೆಗೆದುಕೊಂಡು ಹೋಗಿಲ್ಲ. ನೋಡು ಆದ ಕಾರಣ ನೀನು ಮಳೆಯಲ್ಲಿ ನೆನೆದು ಕೊಂಡು ಬರಬೇಕಾಯಿತು ಎಂದು ಗದರಿಸುತ್ತಾನೆ. ಅಲ್ಲೇ ಪಕ್ಕದಲ್ಲಿದ್ದ ಆಕೆಯ ಅಕ್ಕ ಸಹ ಅವನ ಮಾತಿಗೆ ದನಿಗೂಡಿಸಿ ಮಳೆ ನಿಲ್ಲುವ ವರೆಗೆ ರಸ್ತೆಯ ಬದಿಯ ಯಾವುದಾದರೊಂದು ಸ್ಥಳದಲ್ಲಿ ನಿಂತು ಮಳೆ ನಿಂತ ನಂತರ ಬರಬೇಕಾಗಿತ್ತು ಎಂದು ಇವಳ ವಿರುದ್ಧ ಹರಿಹಾಯ್ದರೆ ಇವಳ ತಂದೆಯೂ ಸಹ ಮಳೆಯಲ್ಲಿ ನೆನೆದು ಒಮ್ಮೆ ನಿನಗೆ ಶೀತ ಆಗಿ ಜ್ವರ ಬಂದು ಮಲಗಿದರೆ ನಿನಗೆ ಗೊತ್ತಾಗುತ್ತದೆ ಎಂದು ಇವಳನ್ನು ಹಿಯಾಲಿಸುತ್ತಾನೆ. ಆದರೆ ಅದೇ ಸಂಧರ್ಭದಲ್ಲಿ ಅಲ್ಲಿದ್ದ ಆಕೆಯ ತಾಯಿ ತನ್ನ ತನ್ನ ಸೆರಗಿನಿಂದ ಮಗಳ ತಲೆಯನ್ನು ಒರೆಸುತ್ತಾ ಮಗಳ ವಿರುದ್ಧ ಹರಿಹಾಯದೆ ಮಗಳು ನೆನೆಯಲು ಕಾರಣವಾದ ಮಳೆಯ ವಿರುದ್ಧವೇ ಹರಿಹಾಯುತ್ತಾಳೆ. ಇದುವೇ ತಾಯಿಯ ಪ್ರೀತಿ. ಇದುವೇ ತಾಯಿಯ ಮಮತೆ.

ನಿಜ.. ತಾಯಿಯ ಪ್ರೀತಿಯೇ ಅಂತಹದ್ದು. ತಾಯಿಯ ಪ್ರೀತಿಯ ಮುಂದೆ ಇನ್ನಾರ ಪ್ರೀತಿಯೂ ಸರಿಸಾಟಿಯಾಗಿ ನಿಲ್ಲಲಾರದು. ತನ್ನ ಪುಟ್ಟ ಕಂದಮ್ಮನನ್ನು ತನ್ನ ಒಡಲಲ್ಲಿ ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಯವ್ವನದ ಬಹುಪಾಲು ಜೀವನವನ್ನು ತನ್ನ ಮಕ್ಕಳ ಆರೈಕೆಯಲ್ಲಿ ಕಳೆಯುವ ತಾಯಿಯ ತ್ಯಾಗ ಬಹುದೊಡ್ಡದು. ತನಗೆ ತನ್ನ ಮನೆಯಲ್ಲಿ ಸಂಕಷ್ಟ ಇದ್ದರೂ ಅದನ್ನು ಮಕ್ಕಳ ಬಳಿ ತೋರಿಸದೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಆಹಾರ ತಯಾರಿಸಿ ಅದನ್ನು ತನ್ನ ಮಕ್ಕಳಿಗೆ ಕೊಟ್ಟು ಮಿಕ್ಕುಳಿದರೆ ತಾನು ತಿಂದು ಇಲ್ಲದಿದ್ದರೆ ಹಸಿದ ಹೊಟ್ಟೆಯಲ್ಲೇ ಮಲಗುವ ತಾಯಂದಿರೇ ಹೆಚ್ಚು. ತಾಯಿಯ ಜೀವನವೇ ಅಂತಹದ್ದು. ತಾಯಿಯ ಕುರಿತು ಮತ್ತು ಆಕೆಯ ತ್ಯಾಗದ ಕುರಿತು ಸಂಪೂರ್ಣವಾಗಿ ಬರೆಯಲು ಅಸಾಧ್ಯ ಎಂಬ ನಂಬಿಕೆ ನನ್ನದು. ತಾಯಿಯ ಮಹಿಮೆ ಹಾಗೆ ಇದೆ. ಇದನ್ನು ಪದಗಳಿಂದ ಬರೆದು ಅಥವಾ ಮಾತುಗಳಿಂದ ವರ್ಣಿಸಿ ಹೇಳಲು ಅಸಾಧ್ಯ ಎಂದು ನಾನು ಭಾವಿಸಿದ್ದೇನೆ.

ತನ್ನ ಜೀವನದ ಬಹುಪಾಲು ಸಮಯವನ್ನು ಮಕ್ಕಳ ಆರೈಕೆಯಲ್ಲಿ ಕಳೆದ ತಾಯಿ ತನ್ನ ಮಕ್ಕಳು ಬೆಳೆದು ದೊಡ್ಡವರಾಗಿ ಸಮಾಜದಲ್ಲಿ ಹೆಸರು ಮಾಡಬೇಕು. ಒಳ್ಳೆಯವರಾಗಿ ಬಾಳಬೇಕು ಎಂದು ಕನಸು ಕಾಣುವುದು ಸ್ವಾಭಾವಿಕ. ಆದರೆ ಆ ತಾಯಿಯ ಮಕ್ಕಳು ಬೆಳೆದು ದೊಡ್ಡವರಾದ ನಂತರ ಆಕೆಯ ಬೇಕು ಬೇಡಗಳಿಗೆ ಸ್ಪಂದಿಸದೇ ಆಕೆ ಇವರಿಗೆ ಒಂದು ಭಾರ ಎಂಬ ಕಲ್ಪನೆ ಇಂದಿನ ಆಧುನಿಕ ಮನುಷ್ಯರೆನಿಸಿಕೊಂಡ ಕೆಲವರಿಗೆ ಬರುತ್ತಿರುದನ್ನು ನಾವು ಕಾಣಬಹುದಾಗಿದೆ. ಇದರ ಪರಿಣಾಮವೇ ಇಂದು ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ದಾಶ್ರಮಗಳು. ತಮ್ಮನ್ನು ತನ್ನ ಮಡಿಲಲ್ಲಿ ಹೊತ್ತು ಬೆಳೆಸಿದ ತಾಯಿ ಇಂದು ಹೈಟೆಕ್ ಸಿಟಿಗಳಲ್ಲಿ ಫ್ಯಾನ್ಸಿ ಹೆಂಡತಿ ಮಕ್ಕಳೊಂದಿಗೆ ವಾಸಿಸುವ ಆಕೆಯ ಮಗನಿಗೆ ಒಂದು ರೀತಿಯ ಭಾರವಾಗಿ ಕಾಣುತ್ತಾಳೆ. ಆದ ಕಾರಣ ಆಕೆಯ ಆರೈಕೆಯನ್ನು ತಾನು ನೋಡಿ ಕೊಳ್ಳುವ ಬದಲು ಯಾವುದಾರೊಂದು ವೃದ್ದಾಶ್ರಮಕ್ಕೆ ಆಕೆಯನ್ನು ಸೇರಿಸಿ ಆತ ತನ್ನ ಕೈತೊಳೆದು ಕೊಳ್ಳುತ್ತಾನೆ. ಇದು ಇಂದು ಸಮಾಜದಲ್ಲಿ ಉನ್ನತರೆನಿಸಿಕೊಂಡ ಕೆಲವು ವ್ಯಕ್ತಿಗಳು ಮಾಡುತ್ತಿರುವ ಮಾತೃ ಸೇವೆ.. ನಿಜಕ್ಕೂ ನಾಚಿಕೆಯಾಗಬೇಕು ಇವರಿಗೆ.

ಯಾವ ತಾಯಿಯನ್ನು ನಮ್ಮ ಸಮಾಜ ಗೌರವ ಆದರಗಳಿಂದ ಕಾಣುತಿತ್ತೋ ಅದೇ ತಾಯಿಯನ್ನು ಇಂದಿನ ಬಹುಪಾಲು ಮಕ್ಕಳು ಬೆಳೆದು ದೊಡ್ಡವರಾದ ನಂತರ ತಿರಸ್ಕರಿಸುವ ಪರಿಸ್ಥಿತಿ ಬಂದಿರುವುದು ಸಮಾಜದ ಅಧಪತನಕ್ಕೆ ಸಾಕ್ಷಿ ಎಂದೇ ಹೇಳಬಹುದು. ವೃದ್ದಾಶ್ರಮದಲ್ಲಿರುವ ತಾಯಿಯನ್ನು ಹಬ್ಬ ಹರಿದಿನಗಳಂದು ಹೆಂಡತಿ ಮಕ್ಕಳ ಜೊತೆ ಹೋಗಿ ಕಂಡು ಬಂದು ತಾವು ಏನೋ ಮಹಾನ್ ಮಾತೃ ಸೇವೆ ಮಾಡಿದ್ದೇವೆ ಎಂದು ಭಾವಿಸುವವರೂ ನಮ್ಮಲ್ಲಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳ ಹುಟ್ಟಿದ ಹಬ್ಬ ಮತ್ತು ಇನ್ನಿತರ ಆಚರಣೆಗಳ ನೆಪದಲ್ಲಿ ತಾಯಿ ಇರುವ ವೃದ್ದಾಶ್ರಮದಲ್ಲಿ ಅನ್ನದಾನ ಏರ್ಪಡಿಸಿ ತಾಯಿಯ ಮೇಲಿನ ಕಪಟ ಪ್ರೀತಿ ತೋರ್ಪಡಿಸುವವರೂ ಇದ್ದಾರೆ. ಯಾವ ತಾಯಿ ಇವರಿಗೆ ನಡೆಯಲು ಆಶಕ್ತರಾದಾಗ ಹೊತ್ತು ಕೊಂಡು ಇವರ ಆರೈಕೆ ಮಾಡಿದಲೋ ಅದೇ ತಾಯಿ ಆಕೆ ನಡೆಯಲು ಆಶಕ್ತರಾದಾಗ ಆಕೆಯ ಸೇವೆ ಮಾಡದೆ ಆಕೆಯನ್ನು ವೃದ್ದಾಶ್ರಮಕ್ಕೆ ಸೇರಿಸುವ ಇಂದಿನ ಅಧುನಿಕ ಜನರ ಆಧುನಿಕ ಕಲ್ಪನೆ ತಾಯ್ತನಕ್ಕೆ ಮಾಡುತ್ತಿರುವ ಅಪಮಾನ ಎಂದೇ ಹೇಳಬಹುದು.

ತಾಯಿಯ ಕುರಿತು ಎಲ್ಲಾ ಧರ್ಮದ ಧರ್ಮ ಗ್ರಂಥಗಳಲ್ಲೂ ಆಕೆಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ವೈದಿಕ ಧರ್ಮದಲ್ಲಿ ಮಾತೃ ದೇವೋಭವ ಎಂದರೆ ಇಸ್ಲಾಂ ಧರ್ಮ ನಿನ್ನ ತಾಯಿಯ ಪಾದದಡಿ ನಿನಗೆ ಸ್ವರ್ಗವಿದೆ ಎಂದು ಹೇಳುತ್ತದೆ. ಇನ್ನಿತರ ಧರ್ಮಗಳಲ್ಲೂ ತಾಯಿಯ ಕುರಿತಾದ ಈ ರೀತಿಯ ವ್ಯಾಖ್ಯೆಗಳಿವೆ. ತಾಯಿಗಿಂತ ಬಂಧುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬ ನಾಣ್ಣುಡಿ ನಮ್ಮ ನಡುವೆ ಇಂದಿಗೂ ಜನಪ್ರಿಯ. ನಿಜಕ್ಕೂ ತಾಯಿಯನ್ನು ಪ್ರೀತಿಸದ ಜನ ಆಕೆಯ ವೃದ್ದಾಪ್ಯದಲ್ಲಿ ಆಕೆಯನ್ನು ಆರೈಕೆ ಮಾಡದ ಜನ ಮನುಷ್ಯರಾಗಿದ್ದರೂ ಮನುಷ್ಯರೆನಿಸಿಕೊಳ್ಳಲು ಸಾಧ್ಯವಿಲ್ಲ.

ಅಳಬೇಕೋ ಅಥವಾ ನಗಬೇಕೋ

ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಆಪ್ತ ಮಿತ್ರನೊಬ್ಬನ ತಂದೆ ಆರೋಗ್ಯ ಹದಗೆಟ್ಟು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೊದಲೇ ಸ್ವಲ್ಪ ವಯಸ್ಸಾದ ವ್ಯಕ್ತಿ. ಸ್ವಲ್ಪ ಮಟ್ಟಿನ ಎದೆನೋವು ಕಾಣಿಸಿಕೊಂಡ ಕಾರಣ ಸ್ಥಳೀಯ ವೈದ್ಯರಲ್ಲಿ ತೋರಿಸಲಾಗಿ ಅವರು ದೊಡ್ಡ ಡಾಕ್ಟರಿಗೆ ತೋರಿಸಲು ಶಿಫಾರಸು ಮಾಡಿದ ಕಾರಣ ಮಂಗಳೂರಿನ ಖ್ಯಾತ ಆಸ್ಪತ್ರೆಯ ಖ್ಯಾತ ವೈದ್ಯರಿಗೆ ತೋರಿಸಲಾಗಿತ್ತು. ಅವರು ಕೆಲವು ದಿನಗಳ ಮಟ್ಟಿಗೆ ಒಳರೋಗಿಯಾಗಿ ದಾಖಲಾಗಲು ಶಿಫಾರಸು ಮಾಡಿದರು. ಅದರಂತೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.


ಯಾರಾದರೂ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ಅಂತ ಗೊತ್ತಾದ ಕೂಡಲೇ ಸಹೃದಯಿ ನೆಂಟರಿಷ್ಟರು, ಆಪ್ತ ಮಿತ್ರರು ರೋಗಿಯ ಸಂದರ್ಶನಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡುವುದು ವಾಡಿಕೆ. ಅದೇ ರೀತಿ ಇಲ್ಲಿಯೂ ನಡೆಯುತ್ತಿತ್ತು. ಬಹುಪಾಲು ನೆಂಟರಿಷ್ಟರು ಆಗಲೇ ಭೇಟಿ ಕೊಟ್ಟು ಹೋಗಿದ್ದರು. ರೋಗಿಗೆ ಮತ್ತು ಅವರ ಸೇವೆ ಮಾಡಲು ಆಸ್ಪತ್ರೆಯಲ್ಲಿ ಉಳಿದಿದ್ದ ಅವರ ಪತ್ನಿಗೆ ಬೇಕಾದ ಊಟ, ತಿಂಡಿಗಳನ್ನು ಮಂಗಳೂರಿನಿಂದ ಕೆಲವು ಕಿ.ಮೀ. ದೂರದಲ್ಲಿದ್ದ ಅವರ ನೆಂಟರ ಮನೆಯಿಂದ ತರಲಾಗುತ್ತಿತ್ತು. ಅದಕ್ಕಾಗಿ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಂಧುವೊಬ್ಬನಿಗೆ ಈ ಜವಾಬ್ಧಾರಿ ವಹಿಸಲಾಗಿತ್ತು. ಆತ ಯಥಾಪ್ರಕಾರ ಪ್ರತಿದಿನ ತಿಂಡಿ, ಊಟ ತೆಗೆದು ಕೊಂಡು ಹೋಗಿ ಕೊಟ್ಟು ಬಂದು ಅವರ ಯೋಗಕ್ಷೇಮದ ಬಗ್ಗೆ ಮನೆಯವರಿಗೆ ಮಾಹಿತಿ ನೀಡುತಿದ್ದ.


ಹೀಗಿರುವಾಗ ಒಂದು ದಿನ ಬೆಳಗಿನ ತಿಂಡಿ ಕೊಡಲು ಹೋದವನು ಮನೆಗೆ ಬಂದು ಹೇಳಿದ.. ಮಾವನನ್ನು ಯಾರಾದರೂ ನೋಡಲಿಕ್ಕೆ ಬಾಕಿ ಇದ್ದವರು ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ನೋಡಲಿ ಅಂತ ಮಾವ ಹೇಳಿ ಕಳುಹಿಸಿದ್ದಾರೆ ಎಂದು. ಈ ಮಾತು ಕೇಳಿ ನಿನ್ನೆ ತಾನೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಅವರ ಪತ್ನಿ, ಜೊತೆಗೆ ಅವರ ನೆಂಟರಿಷ್ಟರಿಗೆಲ್ಲಾ ಒಂದು ರೀತಿಯ ಶಾಕ್. ಇವರಿಗೆ ಏನಾಯಿತು? ಆರೋಗ್ಯದಲ್ಲಿ ಏನಾದರೂ ಏರುಪೆರಾಗಿರಬಹುದೇ ಎಂಬ ಸಂಶಯವೂ ಆಗಿತ್ತು. ಇಲ್ಲದಿದ್ದರೆ ಈ ಮಾತು ಏಕೆ ಹೇಳಿ ಕಳುಹಿಸಿಯಾರು? ಈ ರೀತಿಯ ಮಾತುಗಳನ್ನು ಅನಾರೋಗ್ಯದಲ್ಲಿ ನರಳುತ್ತಿರುವವರಂತೂ ಹೇಳಿದರೆ ಅದು ಅಶುಭ ಘಟನೆಯ ಸಂಕೇತ ಎಂಬ ಭಾವನೆ ಬರುವುದೂ ಸ್ವಾಭಾವಿಕ. ಆಗ ವಿಚಾರಿಸಲು ಈಗಿನಂತೆ ಮೊಬೈಲ್ ಫೋನ್ ಸಹ ಇಲ್ಲ. ಆಗಲೇ ಅವರ ಮನೆಯಲ್ಲಿ ಅವರ ಪತ್ನಿಯ ಅಳು ತಾರಕಕ್ಕೆ ಏರಿತ್ತು. ಪೇಟೆಯಿಂದ ಕಾರೊಂದನ್ನು ಬಾಡಿಗೆಗೆ ತಂದು ಆಗಲೇ ಎಲ್ಲರೂ ಆಸ್ಪತ್ರೆಗೆ ಹೊರಟರು.

ಆಸ್ಪತ್ರೆಯಲ್ಲಿ ರೋಗಿ ಆರಾಮವಾಗಿಯೇ ಇದ್ದರು. ಅವರ ಮುಖದಲ್ಲಿ ಅಂತಹ ದುಗುಡವೇನೂ ಇರಲಿಲ್ಲ. ಮನೆಯವರ ಗಾಬರಿ ಕಂಡು ಅವರೇ ನೀವೆಲ್ಲಾ ಏಕಿಷ್ಟು ಗಾಬರಿಯಾಗಿದ್ದೀರಿ ಎಂದು ಪ್ರಶ್ನಿಸಲಾಗಿ ಅವರು ನೀವು ಊಟ ತರುವ ಹುಡುಗನ ಕೈಯಲ್ಲಿ ಯಾರಾದರೂ ನೋಡಲಿಕ್ಕೆ ಬಾಕಿ ಇದ್ದವರು ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ನೋಡಲಿ ಅಂತ ಹೇಳಿ ಕಳುಹಿಸಿದ ವಿಷಯ ತಿಳಿದು ಗಾಬರಿಯಾಗಿ ಓಡಿ ಬಂದೆವು ಎಂದು ಹೇಳಿದರು. ಇದನ್ನು ಕೇಳಿ ನಕ್ಕ ರೋಗಿ ನಾನು ಹೇಳಿದ್ದು ಆ ಉದ್ದೇಶದಿಂದಲ್ಲ. ಬೆಳಗ್ಗೆಯೇ ಡಾಕ್ಟರ್ ಬಂದಿದ್ದರು. ಪರೀಕ್ಷಿಸಿ ಇಂದು ಸಂಜೆ ಡಿಸ್ಚಾರ್ಜ್ ಆಗಲು ಹೇಳಿದ್ದಾರೆ. ಹೀಗಿರುವಾಗ ನೋಡಲು ಬಾಕಿ ಇರುವವರು ಅದರ ಮುಂಚೆ ಬಂದು ನೋಡಿದರೆ ಒಳ್ಳೆಯದಲ್ಲವ ಎಂಬ ಉದ್ದೇಶದಿಂದ ಹೇಳಿದೆ ಎಂದು ಹೇಳಿದಾಗ ಅಲ್ಲಿದ್ದವರಿಗೊಮ್ಮೆ ಪಿತ್ತ ನೆತ್ತಿಗೇರಿ ಇಳಿದಿತ್ತು. ಇವರ ಒಂದು ಮಾತಿನಿಂದ ಒಮ್ಮೆ ಅಲ್ಲೋಲಕಲ್ಲೋಲವಾಗಿದ್ದ ಇವರ ಮನೆ ಮಂದಿ ಈಗಿನ ಇವರ ಮಾತು ಕೇಳಿ ಅಳಬೇಕೋ ಅಥವಾ ನಗಬೇಕೋ ಎಂದು ತಿಳಿಯದಾದರು. ಕೊನೆಗೆ ಸಂಜೆ ವರೆಗೆ ನಿಂತು ಬಂದ ಅದೇ ಕಾರಿನಲ್ಲಿ ಇವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದು ಕೊಂಡು ಹೋದರು.

ಅಮಾಯಕನ ಕೊಲೆ...


ಯಾವಾಗಲಾದರೊಮ್ಮೆ ಮಂಗಳೂರಿನ ಬಂದರು ರಸ್ತೆಗೆ ಭೇಟಿ ಕೊಟ್ಟರೆ ಆ ಮುಖವನ್ನೊಮ್ಮೆ ನೋಡಲು ಸಿಗುತ್ತಿತ್ತು. ಸ್ವಲ್ಪ ವಯಸ್ಸಾಗಿರುವ ಶಾಂತ ಸ್ವಭಾವದ ವ್ಯಕ್ತಿ ಅವರು. ಧಾರ್ಮಿಕವಾಗಿಯೂ ನಂಬಿಕೆಯುಳ್ಳವರು. ದೈವ ಭಕ್ತರೂ ಕೂಡ. ಬಂದರು ರಸ್ತೆಯಲ್ಲಿ ನನ್ನ ಚಿಕ್ಕಪ್ಪನ ಮಗನ ಅಂಗಡಿ ಇತ್ತು . ಅದರ ಮುಂದೆ ಮಂಗಳೂರಿನ ಪ್ರತಿಷ್ಠಿತ ಬದ್ರಿಯಾ ಕಾಲೇಜು ಇರುವುದು. ಅಲ್ಲಿ ಯಾವಾಗಲಾದರೊಮ್ಮೆ ಇವರನ್ನು ಕಾಣಸಿಗುತ್ತಿತ್ತು. ಸರಳ, ಶಾಂತ ಸ್ವಾಭಾವದ ವ್ಯಕ್ತಿಯಾದ ಇವರ ವೈಯುಕ್ತಿಕ ಪರಿಚಯ ಇಲ್ಲದಿದ್ದರೂ ಮುಖ ಪರಿಚಯವಿತ್ತು. ಆದರೆ ಅವರ ಹೆಸರು ಗೊತ್ತಿರಲಿಲ್ಲ. ಆದರೆ ಮೊನ್ನೆ ಅಂತರ್ಜಾಲದಲ್ಲಿ ವಾರ್ತೆಗಳನ್ನು ಓದುತಿದ್ದಾಗಲೇ ಆ ವ್ಯಕ್ತಿಯ ಹೆಸರು ಗೊತ್ತಾದದ್ದು.ಹೆಸರು ಹಸನ್ ಸಾಹೇಬ್. ಸರಿ ಸುಮಾರು ಅರವತ್ತು ವರ್ಷದ ವಯಸ್ಸಿನವರು.ಬದ್ರಿಯಾ ಕಾಲೇಜಿನ ಕಾವಲುಗಾರ. ಅವರನ್ನು ಯಾರೋ ದುಷ್ಕರ್ಮಿಗಳು ಕಬ್ಬಿಣದ ರಾಡ್ ಮತ್ತಿತರ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಿದ್ದರು. ಮೇಲ್ನೋಟಕ್ಕೆ ಕೊಲೆಯ ಉದ್ದೇಶ ಪಕ್ಕದ ಅಂಗಡಿಯೊಂದನ್ನು ಕಳ್ಳರು ಲೂಟಿ ಮಾಡುವಾಗ ಇವರು ತಡೆಯಲು ಹೋದ ಕಾರಣದಿಂದ ನಡೆದಿರಬಹುದು ಎಂಬುವುದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಬಂದ ಸತ್ಯ . ಆದರೆ ಇದರ ನಿಜವಾದ ಹಿನ್ನಲೆ ಆರೋಪಿಗಳನ್ನು ಬಂಧಿಸಿದ ನಂತರವಷ್ಟೇ ಗೊತ್ತಾಗಬಹುದು .ಆದರೆ ಅಷ್ಟೇನೂ ದೃಢ ಕಾಯರಲ್ಲದ ಈ ವ್ಯಕ್ತಿಯನ್ನು ಆ ದುಷ್ಟರು ಕೊಲೆ ಮಾಡಬೇಕಿರಲಿಲ್ಲ . ಸ್ವಲ್ಪ ದೂಡಿದರೆ ಆಚೆ ಕಡೆ ಬಿದ್ದು ಬಿಡುತ್ತಿದ್ದರು. ತನ್ನ ಜೀವನದ ಸಂಧ್ಯಾ ಕಾಲದಲ್ಲಿದ್ದ ಈ ವ್ಯಕ್ತಿಯ ಕೊಲೆ ನಿಜಕ್ಕೂ ಮನನೋಯಿಸುವಂತಹದ್ದು. ಆದರೆ ವಿಧಿ ಈ ರೀತಿ ಇತ್ತೇನೋ...? ಇನ್ನು ಮುಂದೆ ಬದ್ರಿಯಾ ಕಾಲೇಜಿನ ಮುಂದೆ ಕಾಣುತಿದ್ದ ಆ ಹಸನ್ಮುಖಿ ಹಸನ್ ಸಾಹೇಬರ ಮುಖ ಮಾತ್ರ ಯಾವಾಗಲೂ ಕಾಣಸಿಗಲಾರದು.

ಶುಭಾಶಯ ವಿನಿಮಯ ಸಾಂಕೇತಿಕವಾಗುತ್ತಿದೆಯೇ.....

ಕಳೆದ ವರ್ಷದ ವ್ಯಾಲಂಟೈನ್ ದಿನದ ವಿವಾದದ ಬಗ್ಗೆ ತಮಗೆ ಗೊತ್ತಿರಬಹುದು. ಒಂದು ಕಡೆ ವಿರೋಧಿಸುವವರಿದ್ದರೆ ಮತ್ತೊಂದೆಡೆ ಪ್ರೀತಿಸಲು ಬೆಂಬಲಿಸುವವರೂ ಸಾಕಷ್ಟಿದ್ದರು.ಈ ಎಲ್ಲಾ ಪ್ರಹಸನಗಳ ನಡುವೆ ಕೊನೆಗೂ ಪ್ರೀತಿ ಗೆದ್ದಿತು ಅಂತ ನಾಡಿನ ಪತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳು ಬಿಂಬಿಸಿದವು.ಅದು ನಿಜವೇ ಆಗಿದ್ದು ಇದುವರೆಗೆ ಹಿಂಸೆ ಮತ್ತು ಅಹಿಂಸೆಗಳ ನಡುವೆ ಜಗತ್ತಿನಲ್ಲಿ ಕೊನೆಗೆ ಗೆಲುವು ಕಂಡಿದ್ದು ಅಹಿಂಸೆಯೇ.ಪ್ರೇಮಿಗಳಿಗೆ ಬೆಂಬಲ ಸೂಚಿಸಲು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸೇರಿದ್ದ ನಾಡಿನ ಕೆಲ ಪ್ರಗತಿಪರರು,ರೈತ ಮತ್ತು ಕನ್ನಡ ಹೋರಾಟಗಾರರು ವ್ಯಾಲಂಟೈನ್ ದಿನಕ್ಕೆ ವಿಶೇಷ ಅರ್ಥ ನೀಡಿ ಈ ದಿನ ಕೇವಲ ಹುಡುಗ ಹುಡುಗಿಯರು ಪ್ರೀತಿಸುವ ದಿನವಲ್ಲ.ತಂದೆ,ತಾಯಿ.ಅಣ್ಣ,ತಮ್ಮ,ತಂಗಿ, ಗೆಳೆಯರು ಹೀಗೆ ಯಾರು ಬೇಕಾದರೂ ಈ ದಿನವನ್ನು ಆಚರಿಸಬಹುದು ಎಂದು ಹೇಳುವ ಮೂಲಕ ಈ ದಿನಕ್ಕೊಂದು ಹೊಸ ವ್ಯಾಖ್ಯೆಯನ್ನೇ ನೀಡಿಬಿಟ್ಟರು.

ಇದರಿಂದ ಉತ್ತೇಜಿತರಾಗಿಯೋ ಏನೋ ನನ್ನ ಮಿತ್ರರೊಬ್ಬರು ನನಗೊಂದು ವ್ಯಾಲಂಟೈನ್ ದಿನದ ಶುಭಾಶಯ ಕೋರಿ ಪುಟ್ಟ ಎಸ್.ಎಂ.ಎಸ್. ಒಂದನ್ನು ಕಳುಹಿಸಿದರು. ಈಗಂತೂ ಭಾರತದಲ್ಲಿ ದೂರವಾಣಿ ಸಂಸ್ಥೆಗಳು ಎಸ್.ಎಂ.ಎಸ್. ಸೇವೆಯನ್ನು ಉಚಿತವಾಗಿ ನೀಡುತ್ತಿರುವುದರಿಂದ ದಿನಕ್ಕೆ ಮೊಬೈಲಿಗೆ ಬರುವ ಎಸ್.ಎಂ.ಎಸ್.ಗಳಿಗೇನೂ ಬರವಿಲ್ಲ.ಅದೂ ಅಲ್ಲದೆ ಈಗಿನ ಜನರಂತೂ ತಿಂಗಳಿಗೆ ಆಗಾಗ ಬರುವ ವಿಶೇಷ ದಿನಗಳಂದು ಒಂದೊಂದು ಉಚಿತ ಎಸ್.ಎಂ.ಎಸ್.ಕಳುಹಿಸಿ ಶುಭ ಕೋರುವುದು ಒಂದು ಸಂಪ್ರದಾಯವೇ ಆಗಿಬಿಟ್ಟಂತಿದೆ.ಏನೇ ಆಗಲೀ ಶುಭಾಶಯ ಕೋರಿದ ಮಿತ್ರನಿಗೆ ನಾನು ಋಣಿ.
ಆದರೆ ಈ ಶುಭಾಶಯ ವಿನಿಮಯ ಭಾವನಾತ್ಮಕ ಸಂಬ್ಹಂಧಗಲಿಲ್ಲಧ ಕೇವಲ ಒಂದು ಸಾಂಕೇತಿಕವಾದ ಕ್ರಿಯೆಯಾಗಿ ಮಾರ್ಪಾಡಾಗಿದೆಯೇ ಎಂಬ ಸಂಶಯ ಮೂಡುತ್ತದೆ.


ಏಕೆಂದರೆ ನನಗೆ ಗೊತ್ತಿರುವಂತೆ ಕೇವಲ 10 ರಿಂದ 12ವರ್ಷಗಳ ಹಿಂದಿನ ಮಾತು. ಆಗ ನಾವು ಹೊಸ ವರುಷದ ಸ್ವಾಗತಕ್ಕೆ ಡಿಸೆಂಬರ್ ತಿಂಗಳಿನಲ್ಲೇ ಸಜ್ಜಾಗುತಿದ್ದೆವು. ಆಗಲೇ ನಾವು ಶುಭಾಶಯ ಕೋರಬೇಕಾದ ಗೆಳೆಯರ, ಕುಟುಂಬಿಕರ ಪಟ್ಟಿ ಸಿದ್ಧವಾಗಿಬಿಡುತಿತ್ತು.ಡಿಸೆಂಬರ್ ತಿಂಗಳ ಮಧ್ಯದಲ್ಲೇ ನಗರದ ಗ್ರೀಟಿಂಗ್ ಕಾರ್ಡ್ ಅಂಗಡಿಗಳಿಗೆ ಹೋಗಿ ಅಲ್ಲಿ ನಮಗೆ ಬೇಕಾದ ಗ್ರೀಟಿಂಗ್ ಕಾರ್ಡುಗಳನ್ನು ಆಯ್ಕೆ ಮಾಡಿ ಅದನ್ನು ಮನೆಗೆ ತಂದು ಅದರಲ್ಲಿ ಕಳುಹಿಸಬೇಕಾದವರಿಗೆ ಶುಭಾಶಯಗಳನ್ನು ಮತ್ತು ಅವರ ವಿಳಾಸವನ್ನು ಬರೆದು ಅದನ್ನು ಜೋಪಾನವಾಗಿ ಪೋಸ್ಟ್ ಮಾಡುತಿದ್ದೆವು.ಈ ಪ್ರಕ್ರಿಯೆಗೆ ಸಾಮಾನ್ಯವಾಗಿ ಕನಿಷ್ಠ 10 ರಿಂದ 15 ದಿನಗಳನ್ನು ತೆಗೆದುಕೊಳ್ಳುತಿತ್ತು.ಈ ದಿನಗಳಲ್ಲಿ ನಮ್ಮ ಮನದಲ್ಲಿ ನಾವು ಕಾರ್ಡ್ ಕಳುಹಿಸಬೇಕಾದ ಗೆಳೆಯರು ಮತ್ತು ಕುಟುಂಬಿಕರು ಮನೆ ಮಾಡಿರುತಿದ್ದರು.ಕಾರ್ಡ್ ಕೊಳ್ಳುವಾಗಿನಿಂದ ಹಿಡಿದು ಅದನ್ನು ಪೋಸ್ಟ್ ಮಾಡುವವರೆಗೆ ನಮ್ಮ ಮನಸ್ಸಿನಲ್ಲಿ ಅವರ ನೆನಪುಗಳು ಆಗಾಗ ಬರುತಿತ್ತು.ಆದರೆ ಈಗ ಕಾಲ ಬದಲಾಗಿದೆ.ಗ್ರೀಟಿಂಗ್ ಕಾರ್ಡುಗಳ ಬಳಕೆ ಕಡಿಮೆ ಆಗಿದೆ.ಈಗಂತೂ ಮೊಬೈಲ್ ಯುಗ. ವಿಶೇಷ ದಿನದಂದು ಬೆಳಗೆದ್ದು ಆಯಾ ದಿನದ ಶುಭಾಶಯ ಕೋರಿ ಒಂದು ಎಸ್.ಎಂ.ಎಸ್. ಮಾಡಿದರಾಯಿತು.ಇಲ್ಲದಿದ್ದರೆ ಇನ್ನಾರೋ ಕಳುಹಿಸಿದ ಎಸ್.ಎಂ.ಎಸ್. ಅನ್ನು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಿದರಾಯಿತು.ಈ ರೀತಿಯ ಶುಭಾಶಯ ವಿನಿಮಯದಿಂದ ಸಿಗುವ ಆನಂದ ಕ್ಷಣಿಕವಾಗಿದ್ದು ಇದೊಂದು ಯಾಂತ್ರಿಕ ಕ್ರಿಯೆಯಂತೆ ನಡೆದು ಹೋಗುತ್ತದೆ.ಕಾಲ ಬದಲಾದಂತೆ ಜನಗಳೂ ಬದಲಾಗಿದ್ದಾರೆ. ಇದು ವೇಗದ ಕಾಲ. ಜನಗಳಿಗೆ ಸಮಯವೇ ಇಲ್ಲ...ಎಲ್ಲವೂ ಫಾಸ್ಟ್ ...ಜನಗಳ ನಡುವೆ ಕುಟುಂಬಿಕರ ನಡುವೆ ಈ ಹಿಂದೆ ಇದ್ದ ಭಾಂಧವ್ಯ ಈಗಿಲ್ಲ.ಹಿಂದಿನಂತೆ ಹಬ್ಬ ಹರಿದಿನಗಳಂದು ನೆಂಟರಿಷ್ಟರ, ಗೆಳೆಯರ ಮನೆಗಳಿಗೆ ಭೇಟಿ ಕೊಡುವ ಸಂಪ್ರದಾಯವಂತೂ ಹಳೆಯದಾಗಿಬಿಟ್ಟಿದೆ. ಇತರ ದಿನಗಳಲ್ಲಿ ಹೋಗಲಿ ಹಬ್ಬದಂದೂ ವಿಶೇಷ ಆಹಾರದ ತಯಾರಿಯೂ ಕಡಿಮೆ. ಅದಕ್ಕೂ ಫಾಸ್ಟ್ ಫುಡ್.ಹೇಗೆ ಈಗಿನ ಜನಗಳು ವೇಗದ ಜೀವನದ ಅನುಕೂಲಕ್ಕಾಗಿ ಸತ್ವರಹಿತವಾದ ಜಂಕ್ ಫುಡ್, ಫಾಸ್ಟ್ ಫುಡ್ ಗಳನ್ನು ನೆಚ್ಚಿ ಕೊಂಡಿದ್ದಾರೋ ಅದೇ ರೀತಿ ಈಗಿನ ವೇಗದ ಶುಭಾಶಯಗಳೂ ಹಿಂದಿನ ಗ್ರೀಟಿಂಗ್ ಕಾರ್ಡುಗಳ ಶುಭಾಶಯಗಳಂತೆ ಸತ್ವಭರಿತವಾಗಿರದೆ ಸತ್ವರಹಿತವಾಗಿರುವುದಂತೂ ಸತ್ಯ..

ಮರುಭೂಮಿಯ ಮಲೆನಾಡು ತಬೂಕ್ ...

ಸೌದಿ ಅರೇಬಿಯಾ ಎಂದೊಡನೆ ನೆನಪಾಗುವುದು ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರಗಳಾದ ಮಕ್ಕಾ, ಮದೀನ ಜೊತೆಗೆ ಇಲ್ಲಿನ ಮರಳುಗಾಡುಪ್ರದೇಶ, ಸುಡುಬಿಸಿಲಿನ ವಾತಾವರಣ ಹಾಗೂ ಸಾಧಾರಣ ಗಲ್ಫ್ ರಾಷ್ಟ್ರಗಳಲ್ಲಿರುವಂತೆ ಕೆಲ ಗಗನಚುಂಬಿ ಕಟ್ಟಡಗಳು.


ಇದೇ ರೀತಿಯ ಕಲ್ಪನೆಯೊಂದಿಗೆ ಉದ್ಯೋಗದ ನಿಮಿತ್ತ ತವರು ನಾಡಿನಿಂದ ಹೊರಟ ನಾನು ರಿಯಾದ್ ಮಾರ್ಗವಾಗಿ ವಿಮಾನದ ಮೂಲಕ ಸೌದಿ ಅರೇಬಿಯಾದ ತಬೂಕ್ ನಗರಕ್ಕೆ ಬಂದಾಗ ವಿಮಾನದ ಕಿಟಕಿಗಳಿಂದ ಒಣಮರುಭೂಮಿಯ ಬದಲು ಹಸಿರಿನ ದೃಶ್ಯಗಳು ಗೋಚರಿಸುತ್ತಿದ್ದವು. ನಾನಂದುಕೊಂಡಂತೆ ತಬೂಕ್ ನಗರ ಒಣಮರುಭೂಮಿಯಾಗಿರದೆ ಫಲವತ್ತಾದ ಫಲಪುಷ್ಪಗಳಿಂದ ಕಂಗೊಳಿಸುವ ಹಸಿರು ಪ್ರದೇಶವಾಗಿತ್ತು.ಇದುವೇ ಈ ನಗರದ ವಿಶೇಷ.ಇಲ್ಲಿನ ಜನ ಈ ಮರುಭೂಮಿಯಲ್ಲಿ ಖರ್ಜೂರದ ಜೊತೆಗೆ ಟೊಮ್ಯಾಟೋ, ಸೌತೆಕಾಯಿ, ಬದನೆ, ಹಸಿರುಮೆಣಸು, ದ್ರಾಕ್ಷಿ, ಸೇಬು ಸೇರಿದಂತೆ ಹಲವು ಬಗೆಯ ತರಕಾರಿಗಳ ಜೊತೆಗೆ ಕೆಲವು ನಮೂನೆಯ ಪುಷ್ಪಗಳನ್ನೂ ಬೆಳೆದು ತಬೂಕ್ ನಗರವನ್ನು ಕೃಷಿ ಪ್ರದೇಶವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು.ಹೀಗಾಗಿ ಈ ನಗರದ ಬಗ್ಗೆ ಕೆಲವು ಮಾಹಿತಿಯನ್ನು ಜೊತೆಗೆ ಇಲ್ಲಿನ ವೈಶಿಷ್ಟತೆಯನ್ನು ಓದುಗರೊಂದಿಗೆ ಹಂಚಿಕೊಳ್ಳುತಿದ್ದೇನೆ.


ಈ ನಗರದ ಪ್ರಮುಖ ವಾಣಿಜ್ಯ ವ್ಯವಹಾರ ಕೃಷಿ ಆಧಾರಿತವಾಗಿದ್ದರೂ ಇಲ್ಲಿನ ಬೇಸಾಯ ಮಳೆ ಆಧಾರಿತವಾಗಿಲ್ಲ.ಇಲ್ಲಿ ವರ್ಷದಲ್ಲಿ ಕೇವಲ 5 ರಿಂದ 6 ಬಾರಿ ಮಾತ್ರ ಮಳೆ ಬರುತ್ತದೆ.ಆದ ಕಾರಣ ಇಲ್ಲಿನ ಕೃಷಿಕರು ಅಂತರ್ಜಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು ಪಂಪುಸೆಟ್ಟುಗಳ ಮೂಲಕ ತಮ್ಮ ಬೆಳೆಗೆ ನೀರುಣಿಸುತ್ತಾರೆ.ಹೀಗಾಗಿ ಇಲ್ಲಿ ಅಲ್ಲಲ್ಲಿ ಹೆಚ್ಚಾಗಿ ನೀರಿನ ಕೊಳವೆ ಬಾವಿಗಳು ಕಾಣಸಿಗುತ್ತವೆ.ಇಲ್ಲಿ ಬೆಳೆದ ತರಕಾರಿಗಳು ಸೌದಿಯ ವಿವಿಧ ಪ್ರದೇಶಗಳಿಗೆ ಜೊತೆಗೆ ಕೆಲ ಪುಷ್ಪಗಳು ವಿದೇಶಗಳಿಗೂ ರವಾನೆಯಾಗುತ್ತದೆ.ಇಲ್ಲಿನ ಜನ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡಿದ್ದು ಕುರಿ,ಆಡು,ಒಂಟೆ ಮತ್ತು ಕೋಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕುತ್ತಾರೆ.


ಇಲ್ಲಿನ ಕೃಷಿಕರು ಬೆಳೆದ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವ ವ್ಯವಸ್ಥೆಯಿದ್ದು ಇದಕ್ಕೆಂದೇ ಪ್ರತ್ಯೇಕ ಮಾರುಕಟ್ಟೆಗಳಿವೆ.ಅಲ್ಲಿ ರೈತರು ತಾವು ಬೆಳೆದ ವಸ್ತುಗಳನ್ನು ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.ಅದೂ ಅಲ್ಲದೆ ಪ್ರತೀ ಶುಕ್ರವಾರ ನಮಾಜಿನ ನಂತರ ಮಸೀದಿಯ ಹೊರಭಾಗದಲ್ಲಿ ಕೃಷಿಕರು ತಾವು ಬೆಳೆದ ವಸ್ತುಗಳನ್ನು ವಾಹನಗಳಲ್ಲಿ ತುಂಬಿ ತಂದು ಮಾರಾಟ ಮಾಡುವ ದೃಶ್ಯವೂ ಇಲ್ಲಿ ಸಾಮಾನ್ಯ.
ರಾಜಧಾನಿ ರಿಯಾದಿನಿಂದ ಸುಮಾರು 1400 ಕಿ.ಮೀ.ದೂರ ಇರುವ ತಬೂಕ್ ನಗರ ಸೌದಿ ಅರೇಬಿಯಾದ ಗಡಿಪ್ರದೇಶವಾಗಿದ್ದು ಇದಕ್ಕೆ ಹೊಂದಿಕೊಂಡಂತೆ ಜೋರ್ಡಾನ್ ಹಾಗೂ ಈಜಿಪ್ಟ್ ದೇಶಗಳಿವೆ.ಅದಲ್ಲದೆ ಈ ನಗರ ಈ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿದ್ದು ಆದ ಕಾರಣ ಇಲ್ಲಿನ ರಸ್ತೆಗಳಲ್ಲಿ ಸೇನಾಪಡೆಯ ಸಮವಸ್ತ್ರ ಧರಿಸಿದ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.ಇಲ್ಲಿನ ಸೈನಿಕರಿಗೆ ಮತ್ತು ನಾಗರಿಕರಿಗೆ ಪರ್ಯಾಯ ಆದಾಯಕ್ಕಾಗಿ ಇಲ್ಲಿನ ಸರ್ಕಾರ ಸ್ಥಳೀಯವಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಮಿನಿಗೂಡ್ಸ್ ಟೆಂಪೋಗಳನ್ನು ಸಾಲದ ರೂಪದಲ್ಲಿ ನೀಡುತ್ತದೆ.ಆದ ಕಾರಣ ಇಲ್ಲಿ ಟ್ಯಾಕ್ಸಿಗಳು ಕಾಣಸಿಗುವುದಿಲ್ಲ. ಇಲ್ಲಿನ ನಾಗರೀಕರು ಸ್ಥಳೀಯ ಪ್ರಯಾಣಕ್ಕಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಈ ಟೆಂಪೋಗಳನ್ನು ಆಶ್ರಯಿಸಬೇಕಾಗುತ್ತದೆ.


ಇಲ್ಲಿಂದ ಸುಮಾರು 160 ಕಿ.ಮೀ.ದೂರದಲ್ಲಿ ದುಬಾ ಎಂದು ಕರೆಯಲ್ಪಡುವ ಸಮುದ್ರತೀರ ಪ್ರದೇಶವಿದ್ದು ಅದು ಇಲ್ಲಿನ ನೆಚ್ಚಿನ ಪ್ರವಾಸಿ ತಾಣ.ಇಲ್ಲಿನ ಬೀಚ್ ಸುಂದರವಾಗಿದ್ದು ಸಮುದ್ರವೂ ಸಹ ಅಷ್ಟೆ ಶಾಂತವಾಗಿದೆ.ಹಾಗಾಗಿ ಈ ಬೀಚಿನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ.ಇಲ್ಲಿ ರಜಾದಿನದ ಮಜಾ ಸವಿಯುವುದೇ ಒಂದು ಅವಿಸ್ಮರಣೀಯವಾದ ಅನುಭವವಾಗಿದ್ದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.ಇಲ್ಲಿನ ಸಮುದ್ರ ತೀರದಿಂದ ಈಜಿಪ್ಟ್ ದೇಶಕ್ಕೆ ನಾಗರಿಕ ಹಡಗು ಸಾರಿಗೆ ವ್ಯವಸ್ಥೆಯಿದ್ದು ಸಾವಿರಾರು ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳ ಜೊತೆ ಈಜಿಪ್ಟಿಗೆ ಪ್ರಯಾಣಿಸಲು ಸಿದ್ಧರಾಗಿ ನಿಂತಿರುವ ದೃಶ್ಯ ಇಲ್ಲಿ ಸಾಮಾನ್ಯ.


ಪೂರ್ತಿ ಸೌದಿ ಅರೇಬಿಯಾ ಕಡು ಬಿಸಿಲಿಂದ ಧಗಧಗಿಸುತ್ತಿರುವಾಗಲೂ ತಬೂಕಿನ ಹವಾಮಾನ ಇದಕ್ಕೆ ವ್ಯತಿರಿಕ್ತವಾಗಿ ತಂಪಾಗಿರುತ್ತದೆ.ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಇಲ್ಲಿನ ನೈಸರ್ಗಿಕವಾದ ತಂಪು ಹವೆಯನ್ನು ಸವಿಯಲು ಇಲ್ಲಿಗೆ ಬರುವವರೂ ಬಹಳಷ್ಟಿದ್ದಾರೆ.ಈ ರೀತಿಯ ಕಾರಣಗಳಿಂದಾಗಿ ಇದು ಸೌದಿ ನಾಗರೀಕರ ನೆಚ್ಚಿನ ತಾಣವಾಗಿದ್ದು ತಾವು ಕೂಡ ಸೌದಿ ಅರೇಬಿಯಾಕ್ಕೆ ಬಂದರೆ ತಬೂಕ್ ಸಂದರ್ಶಿಸಲು ಮರೆಯದಿರಿ.

ಬಾಡದಿರು ಸ್ನೇಹದ ಹೂವೇ.....

ಪ್ರೀತಿ,ಪ್ರೇಮ,ಸ್ನೇಹ,ಕರುಣೆ ಇವು ಮಾನವನ ಪ್ರತ್ಯೇಕವಾದ ಗುಣಗಳು. ಇವುಗಳ ಸಮ್ಮಿಲನವನ್ನೇ ಮಾನವೀಯತೆ ಎಂದು ಕರೆದರೆ ತಪ್ಪಾಗಲಾರದು ಎಂಬುವುದು ನನ್ನ ಅಭಿಪ್ರಾಯ. ಪ್ರೀತಿ,ಪ್ರೇಮ,ವಿಶ್ವಾಸದಿಂದಲೇ ಒಂದು ಸುಭದ್ರ ಸಮಾಜವನ್ನು ಕಟ್ಟಲು ಸಾಧ್ಯವಿದ್ದು ಒಂದು ನಾಡಿನ ಅಭಿವೃದ್ಧಿಯಲ್ಲಿ ಇವು ಮಹತ್ತರ ಪಾತ್ರವನ್ನು ವಹಿಸುತ್ತದೆ ಮತ್ತು ವಹಿಸಿದ ಉದಾಹರಣೆಗಳೂ ಸಾಕಷ್ಟಿವೆ.ಆದರೆ ಏಕೋ ಏನೋ ಈ 2009 ನೇ ವರ್ಷದಲ್ಲಿ ಎಲ್ಲೋ ಒಂದು ಕಡೆ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಕೆಟ್ಟ ದಿನಗಳು ಬರುತ್ತಿದೆಯೇ ಎಂಬ ಭಾವನೆಯನ್ನು ಇತ್ತೀಚೆಗೆ ಕನ್ನಡ ನಾಡಿನಾದ್ಯಂತ ನಡೆಯುತ್ತಿರುವ ಘಟನೆಗಳು ಮನಸ್ಸಿನಲ್ಲಿ ಮೂಡಿಸುತ್ತಿರುವುದಂತೂ ಸತ್ಯ.ಪ್ರೀತಿ ಪ್ರೇಮ ಸೌಹಾರ್ದಕ್ಕೆ ಹೆಸರಾಗಿದ್ದ, ಕುವೆಂಪುರಂತಹ ಮಾನವತಾವಾದಿಗಳು, ಬಸವಣ್ಣನವರಂತಹ ವಚನಕಾರರು, ಸಂತ ಶಿಶುನಾಳಶರೀಫರಂಥ ಸೌಹಾರ್ದಪ್ರಿಯರು ಜನ್ಮತಳೆದ ಈ ನಾಡಿನಲ್ಲಿ ಇಂದು ಮಾನವೀಯತೆಯ ವಿರೋಧಿ ಶಕ್ತಿಗಳು ವಿಜ್ರಂಭಿಸುತ್ತಿರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ನಾವು ಮಾನವೀಯತೆಯನ್ನು ಮರೆಯುತ್ತಿದ್ದೇವೆಯೇ ಎಂಬ ಸಂಶಯವನ್ನು ಮೂಡಿಸುತ್ತದೆ.ನಿಜ.. ಇತ್ತೀಚಿಗೆ ಕನ್ನಡ ನಾಡಿನಲ್ಲಿ ನಡೆದ ಘಟನೆಗಳು ಮಾನವನ ಸ್ವಭಾವಕ್ಕೆ ತಕ್ಕುದಾದುದಲ್ಲ. ಮಹಿಳೆಯರ ಮೇಲೆ ನಡೆದ ದಾಳಿ, ಧರ್ಮದ ಹೆಸರಿನಲ್ಲಿ ಧಾರ್ಮಿಕ ಮತಾಂಧರು ನಡೆಸುತ್ತಿರುವ ಧರ್ಮ ವಿರೋಧಿ ಪುಂಡಾಟಗಳು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರನ್ನು ಕಳಂಕಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಮನುಷ್ಯನ ನಡುವೆ ಶಾಂತಿ ಹಾಗೂ ಸೌಹಾರ್ದತೆಯನ್ನು ಮೂಡಿಸಬೇಕಾದ ಧರ್ಮಗಳು ಇದು ಮಾನವರ ನಡುವೆ ಕಂದಕ ಮೂಡಿಸುತ್ತಿದೆ. ಪರಸ್ಪರ ಒಟ್ಟಿಗೆ ಜೀವಿಸುತಿದ್ದ ಜನ ಧರ್ಮದ ಹೆಸರಿನಲ್ಲಿ ವಿಭಜನೆಗೊಳ್ಳುತ್ತಿರುವುದು ಧಾರ್ಮಿಕ ಅಧಃಪತನದ ಸಂಕೇತ ಎಂದರೂ ತಪ್ಪಾಗಲಾರದು.ಧರ್ಮಗಳು ಮಾನವನ ಕಲ್ಯಾಣಕ್ಕಾಗಿ ಸ್ಥಾಪಿತವಾಗಿವೆ. ಯಾವುದೇ ಧರ್ಮ ದ್ವೇಷವನ್ನು ಬಿತ್ತುವುದಿಲ್ಲ. ದ್ವೇಷವನ್ನು ಪ್ರೀತಿಯಿಂದ ಗೆಲ್ಲು ಎಂದೇ ಜಗತ್ತಿನ ಎಲ್ಲಾ ಧರ್ಮಗಳು ಅದರ ಅನುಯಾಯಿಗಳಿಗೆ ಕರೆ ಕೊಡುತ್ತದೆ. ಆದರೆ ಧರ್ಮಗಳಲ್ಲಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಮತಾಂಧ ಶಕ್ತಿಗಳು ಧರ್ಮದ ವ್ಯಾಖ್ಯಾನವನ್ನೇ ತಿರುಚಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವುದನ್ನು ಕಾಣಬಹುದು. ಮನುಷ್ಯ ಮನುಷ್ಯನ ನಡುವೆ ಭಾಂದವ್ಯ ಮೂಡಿಸಬೆಕಿದ್ದ ಬೇಕಿದ್ದ ಧಾರ್ಮಿಕ ಆಚರಣೆಗಳು ಇಂದು ಒಡಕನ್ನು ಮೂಡಿಸುತ್ತಿದೆ. ದೀಪಾವಳಿಯ ದಿನದಲ್ಲಿ ಹಿಂದೂಗಳ ಜೊತೆ ಸೇರಿ ಹಬ್ಬ ಆಚರಿಸುತ್ತಾ ಪಟಾಕಿ ಹೊಡೆಯುತಿದ್ದ ಮುಸ್ಲಿಮರು, ಈದ್ ಹಬ್ಬಗಳಂದು ಮುಸ್ಲಿಮರ ಮನೆಗಳಲ್ಲಿ ಬಂದು ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತಿದ್ದ ಹಿಂದೂಗಳು, ಕ್ರೈಸ್ತರ ಸಾಂತ್ ಮೇರಿ ಹಬ್ಬದ ದಿನ ಇಗರ್ಜಿಗಳಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಲ್ಲುತಿದ್ದ ಎಲ್ಲಾ ಧರ್ಮದ ಜನರು ಈ ರೀತಿಯ ದೃಶ್ಯಗಳು ಇಂದು ಕ್ರಮೇಣ ಕಣ್ಮರೆಯಾಗುತ್ತಿವೆ. ಮನುಷ್ಯ ನಿಧಾನವಾಗಿ ಧರ್ಮದ ಅಮಲಿನಲ್ಲಿ ಮಾನವೀಯತೆಯನ್ನು ಮರೆಯುತ್ತಿರುವುದು ಈ ನಾಡಿನ ದುರಂತ ಎಂದೇ ಹೇಳಬಹುದು.ಆದರೂ ಒಡೆದು ಹೋಗುತ್ತಿರುವ ಸಮಾಜವನ್ನು ರಕ್ಷಿಸಲು ಬೇಕಾದಷ್ಟು ಜನರು ಅಂದರೆ ಸೌಹಾರ್ದ ಪ್ರಿಯರು ಇಂದಿಗೂ ನಮ್ಮ ನಡುವೆ ಇದ್ದಾರೆ. ಜೊತೆಗೆ ಕನ್ನಡ ಖ್ಯಾತ ಕವಿಗಳೂ, ದಾರ್ಶನಿಕರೂ, ವಚನಕಾರರೂ ಬರೆದ ಸೌಹಾರ್ದ ಸಾಹಿತ್ಯಗಳೂ ಬೇಕಾದಷ್ಟಿವೆ. ಆದರೆ ಇವುಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಪ್ರಯತ್ನಗಳು ನಿರೀಕ್ಷಿತ ಮಟ್ಟದ ವೇಗದಲ್ಲಿ ನಡೆಯುತ್ತಿಲ್ಲ ಎಂಬುವುದು ನಿಜವೇ ಆಗಿದ್ದರೂ ಅದಕ್ಕೆ ಬೇಕಾದಂತಹ ಪ್ರಯತ್ನಗಳನ್ನು ಮಾನವ ಪ್ರೇಮಿಗಳು ಮಾಡುತ್ತಿರುವುದಂತೂ ಸತ್ಯ. ಕ್ರಮೇಣ ಕನ್ನಡ ನಾಡು ಕವಿಗಳು ಕಂಡ ಚೆಲುವ ಕನ್ನಡ ನಾಡಾಗಲಿ. ಸರ್ವ ಜನಾಂಗದ ಶಾಂತಿಯ ತೋಟವಾಗಲಿ. ಬಾಡುತ್ತಿರುವ ಸ್ನೇಹದ ಹೂವು ಮತ್ತೆ ಅರಳಲಿ ಎಂದು ಹಾರೈಸೋಣ. ಜೊತೆ ಜೊತೆಗೆ ನಾವುಗಳೂ ಕನ್ನಡ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಮುಂದಾಗೋಣ... ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ...

ನಮ್ಮನ್ನಗಲಿದ ಖ್ಯಾತ ಚಿತ್ರಕಲಾ ಶಿಕ್ಷಕ ಬಿ.ಜಿ.ಮಹಮ್ಮದ್.. (ಒಂದು ನೆನಪು)

ಬಿ.ಜಿ.ಮಹಮ್ಮದ್ ದಕ್ಷಿಣ ಕನ್ನಡ ಜಿಲ್ಲೆಯ ಕಲಾಲೋಕದಲ್ಲೊಂದು ಚಿರಪರಿಚಿತ ಹೆಸರು.ಚಿತ್ರಕಲೆಯನ್ನು ತನ್ನ ಹವ್ಯಾಸವನ್ನಾಗಿಸಿ ಜೊತೆಗೆ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ಎಂಬ ಚಿತ್ರಕಲಾ ಶಾಲೆಯನ್ನು ಮಂಗಳೂರಿನ ಕದ್ರಿಯಲ್ಲಿ ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿಯನ್ನು ನೀಡಿ ಅಸಂಖ್ಯಾತ ಶಿಷ್ಯರನ್ನು ಸಂಪಾದಿಸಿದ ಬಿ.ಜಿ.ಮಹಮ್ಮದರು ಇತ್ತೀಚಿಗೆ ಅಂದರೆ ಕೆಲವು ತಿಂಗಳ ಹಿಂದೆ ನಿಧನರಾದರು. ಅವರ ಕುರಿತು ಕಿರು ಮಾಹಿತಿ ನೀಡುವ ಉದ್ದೇಶದಿಂದ ಈ ಲೇಖನ ಬರೆದಿದ್ದೇನೆ .ಮಂಗಳೂರಿನ ಸರ್ಕಾರಿ ವೈದ್ಯರಾಗಿದ್ದ ಡಾ: ಮಹಮ್ಮದಾಲಿ ಮತ್ತು ರಹೀಮಾಬಿಯವರ ಮಗನಾಗಿ ಅಕ್ಟೋಬರ್ 11ನೆಯ ತಾರೀಖು 1920 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಬಿ.ಜಿ.ಮಹಮ್ಮದರ ಪೂರ್ಣ ಹೆಸರು ಬೋಳೂರು ಗುಲಾಂ ಮಹಮ್ಮದ್.ಚಿಕ್ಕಂದಿನಿದಲೂ ಚಿತ್ರಕಲೆಯಡೆಗೆ ಆಕರ್ಷಿತರಾಗಿದ್ದ ಬಿ.ಜಿ.ಮಹಮ್ಮದರು ಎಸ್.ಎಸ್.ಎಲ್.ಸಿ.ವಿಧ್ಯಾಬ್ಯಾಸದ ನಂತರ ಉಡುಪಿಯ ಖ್ಯಾತ ಚಿತ್ರಕಲಾ ಗುರುಗಳಾಗಿದ್ದ ಪಡುಕೋಣೆ ಶ್ರೀನಿವಾಸ ರಾವ್ ರವರ ಕಲಾಶಾಲೆಯಲ್ಲಿ ತರಬೇತಿ ಪಡೆದು ಅವರ ಅಚ್ಚುಮೆಚ್ಚಿನ ಶಿಷ್ಯರಾದರು.ಆನಂತರ ಚಿತ್ರಕಲಾ ಲೋಕದಲ್ಲಿ ತನ್ನ ಛಾಪು ಮೂಡಿಸತೊಡಗಿದ ಬಿ.ಜಿ.ಮಹಮ್ಮದರು ಅಸಂಖ್ಯಾತ ಚಿತ್ರಗಳನ್ನು ಬಿಡಿಸುವುದರ ಮೂಲಕ ತನ್ನ ಜೀವನವನ್ನು ಕಲಾ ಸೇವೆಗೆ ಮುಡಿಪಾಗಿಟ್ಟರು.
1967ರಲ್ಲಿ ಮೈಸೂರಿನ ಅಖ್ತರ್ ಬೇಗಂ ಎಂಬುವವರನ್ನು ವಿವಾಹವಾದ ಇವರಿಗೆ ಮೂವರು ಗಂಡು ಮಕ್ಕಳು.ಹಿರಿಯ ಮಗ ಶಬ್ಬಿರ್ ಅಲಿ ಚಿಲಿಂಬಿ ಎಂಬಲ್ಲಿ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಚಿತ್ರಕಲಾ ತರಬೇತಿ ನೀಡುತಿದ್ದರೆ ಮತ್ತೊಬ್ಬ ಮಗ ಸಮೀರ್ ಅಲಿ ಕದ್ರಿಯ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ಅನ್ನು ಮುನ್ನಡೆಸುತಿದ್ದಾರೆ.ಇವರ ಮತ್ತೊಬ್ಬ ಮಗ ಕಬೀರ್ ಅಲಿ ಆರ್ಕಿಟೆಕ್ ಡಿಸೈನರ್ ಆಗಿದ್ದಾರೆ.


ತುಂಬು ಸಂಸಾರದಲ್ಲಿ ಬಾಳಿ ಬದುಕಿದ ಬಿ.ಜಿ.ಮಹಮ್ಮದರು ಚಿತ್ರಕಲಾ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ಇದುವರೆಗೆ 40,000 ಕ್ಕಿಂತಲೂ ಹೆಚ್ಚು ವಿಧ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿ ನೀಡಿದ್ದು ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ.ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಲಾವಿದರಲ್ಲೊಬ್ಬರಾದ ಬಿ.ಜಿ.ಮಹಮ್ಮದರ ನಿಧನ ಚಿತ್ರ ಕಲಾಲೋಕಕ್ಕೊಂದು ತುಂಬಲಾರದ ನಷ್ಟ ಎಂದೇ ಹೇಳಬಹುದು.

ಶುಕ್ರವಾರ, ಅಕ್ಟೋಬರ್ 23, 2009

ನಿಯ್ಯತ್ತು .....

ಮೊನ್ನೆ ನಾನಿರುವ ತಬೂಕ್ ಊರಿನಲ್ಲಿ ನಡೆದ ಘಟನೆ. ಬ್ಯಾಂಕಿನ ಎ.ಟಿ.ಎಂ. ಯಂತ್ರದ ಮುಂದೆ ಅನಾತವಾಗಿ ಬಿದ್ದಿದ್ದ ಬ್ಯಾಗೊಂದು ಒಬ್ಬ ಪಿಲಿಫೀನ್ಸಿನ ಹುಡುಗನಿಗೆ ಸಿಕ್ಕಿತು. ಒಂದು ರೀತಿಯ ಕುತೂಹಲದಿಂದ ಆ ಬ್ಯಾಗನ್ನು ತೆರೆದ ಆತ ಒಂದು ಕ್ಷಣ ಗಾಬರಿಯಾದರೂ ತಕ್ಷಣವೇ ಸುಧಾರಿಸಿಕೊಂಡಿದ್ದ. ಆ ಬ್ಯಾಗಿನಲ್ಲಿ ಹಣದ ಕಟ್ಟುಗಲಿತ್ತು. ಫಿಲಿಫೀನಿ ಹುಡುಗ ಆ ಬ್ಯಾಗನ್ನು ನೇರವಾಗಿ ತನ್ನ ರೂಮಿಗೆ ತೆಗೆದು ಕೊಂಡು ಹೋದವನೇ ಅದರಲಿದ್ದ ವಸ್ತುಗಳನ್ನೆಲ್ಲಾ ಜಾಲಾಡಿದ. ಅದರಲ್ಲಿ ಸಿಕ್ಕ ಮೊಬೈಲ್ ನಂಬರ್ ಒಂದಕ್ಕೆ ಕಾಲ್ ಮಾಡಿದ ಆತ ಅದರ ಮಾಲೀಕನಿಗೆ ಈ ವಿಷಯ ತಿಳಿಸಿದ. ಜೊತೆಗೆ ಪೊಲೀಸರಿಗೂ ಮಾಹಿತಿ ಕೊಟ್ಟ .


ಹಾಗೂ ಹೀಗೂ ಮಾಲಿಕನನ್ನು ಹುಡುಕಿದ ಮೇಲೆ ಪೋಲೀಸರ ಮಧ್ಯಸ್ಥಿಕೆಯಲ್ಲಿ ಆ ಹಣವನ್ನು ಅದರ ಮಾಲೀಕನಿಗೆ ಹಿಂದಿರುಗಿಸಿದ. ಅದರಲ್ಲಿ ಬರೋಬ್ಬರಿ ಒಂದೂವರೆ ಲಕ್ಷ ಸೌದಿ ರಿಯಾಲ್ ಹಣ ಇತ್ತು. ಹಣ ಪಡೆದ ಮಾಲೀಕ ಧನ್ಯವಾದ ಹೇಳಿದ. ಸಿಕ್ಕಿದ್ದನ್ನೆಲ್ಲಾ ದೋಚುವ ಇಂದಿನ ಕಾಲದಲ್ಲಿ ಆ ಹುಡುಗ ನಿಯತ್ತಿಗೆ ಒಂದು ಮಾದರಿಯಾಗಿದ್ದ. ಈ ವಿಷಯ ಇಲ್ಲಿನ ಸ್ಥಳೀಯ ಪತ್ರಿಕೆಗಳಲ್ಲಿ ಬಂತು. ಫಿಲಿಫೀನ್ಸಿನ ಕೆಲ ಸಂಘಟನೆಗಳು ಆತನನ್ನು ಸನ್ಮಾನಿಸಿದವು. ಸನ್ಮಾನ ಸಮಾರಂಭದಲ್ಲಿ ಆತನನ್ನು ಹೊಗಳಿದರು. ಅದರ ನಂತರ ಕೆಲವರು ಆತನ ಜೊತೆಗಿನ ಖಾಸಗಿ ಮಾತು ಕತೆಯಲ್ಲಿ ಏಕೆ ಹಣ ವಾಪಾಸು ಕೊಟ್ಟೆ ಎಂಬ ತಮ್ಮ ದುರ್ಬುದ್ದಿಯನ್ನು ಆತನ ಜೊತೆ ಹೇಳಿದರು. ಆದರೆ ಆ ಹುಡುಗ ಈ ರೀತಿಯ ಮಾತುಗಳಿಗೆ ನಗು ಮುಖದಿಂದಲೇ ತಲೆ ಅಲ್ಲಾಡಿಸುತಿದ್ದ. ಅವನನ್ನು ನೋಡಿದಾಗ ಆತನ ಮುಖದಲ್ಲಿನ ಮುಗ್ಧತೆಯೇ ಹೇಳುತಿತ್ತು

 ಆತ ಒಂದೂವರೆ ಲಕ್ಷ ಅಲ್ಲ ಒಂದೂವರೆ ಕೋಟಿ ಸಿಕ್ಕರೂ ವಾಪಾಸ್ಸು ಕೊಡುತಿದ್ದ ಅಂತ.....