ಬುಧವಾರ, ಜನವರಿ 13, 2010

ರಮ್ಯಾ,ರಾಜು ಶೆಟ್ಟರ ರೊಮ್ಯಾಂಟಿಕ್ ಪ್ರಣಯದಲ್ಲಿ ಅನಾಥೆಯಾದ ಸಫಿಯಾ...




ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜೊತೆಗೆ ಹಲವು ರೀತಿಯ ಪ್ರತಿಭಟನೆಗಳಿಗೆ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನರಿಂಗಾನ ಗ್ರಾಮದ ಪೊಟ್ಟೋಲಿಕೆಯ ರಮ್ಯಾ ಶೆಟ್ಟಿ ಮತ್ತು ಮೂರು ಮಕ್ಕಳ ತಂದೆ ಮೇಸ್ತ್ರಿ ಮಹಮ್ಮದ್ ಆಲಿಯಾಸ್ ರಾಜು ಶೆಟ್ಟಿಯವರ ಪ್ರೇಮ ಮತ್ತು ಪಾಲಾಯನ ಪ್ರಕರಣ ಅವರನ್ನು ವಿಚಿತ್ರ ತಿರುವಿನೊಂದಿಗೆ ಪತ್ತೆ ಹಚ್ಚುವುದರೊಂದಿಗೆ ಅಂತ್ಯ ಕಂಡಿದೆ.

ಮುಸಲ್ಮಾನನಾಗಿದ್ದ ಮಹಮ್ಮದ್ ರಮ್ಯಳಿಗಾಗಿ ತನ್ನ ಧರ್ಮವನ್ನು ತ್ಯಜಿಸಿ ಹಿಂದೂ ಆಗಿದ್ದಾನೆ. ಜೊತೆಗೆ ತನ್ನ ಹೆಂಡತಿ ಮಕ್ಕಳನ್ನೂ ತ್ಯಜಿಸಿದ್ದಾನೆ. ಇದು ಪ್ರೀತಿಯ ಮಹಿಮೆಯೋ ಅಥವಾ ಇನ್ನೇನೋ ಗೊತ್ತಿಲ್ಲ. ರಮ್ಯ ನಾನು ಇನ್ನು ಮುಂದೆ ರಾಜು ಶೆಟ್ಟಿಯೊಂದಿಗೆ ಬಾಳ್ವೆ ನಡೆಸುವುದಾಗಿಯೂ ನಾವು ಸುಬ್ರಮಣ್ಯ ದೇವಸ್ಥಾನದಲ್ಲಿ ವಿವಾಹವಾಗಿರುವುದಾಗಿಯೂ ನನಗಾಗಿ ಆತ ಇಸ್ಲಾಂ ಧರ್ಮವನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಿರುವುದಾಗಿಯೂ ಹೇಳಿದ್ದಾಳೆ. ಒಟ್ಟಿನಲ್ಲಿ ಪ್ರಕರಣ ಜನರು ಆರೋಪಿಸಿದ್ದಕ್ಕಿಂತ ನೇರ ಉಲ್ಟಾ ಹೊಡೆದಿದೆ.

ರಮ್ಯಾಳ ಅಪಹರಣದ ಹಿಂದೆ ಕೆಲವು ಧಾರ್ಮಿಕ ಸಂಘಟನೆಗಳ ಕೈವಾಡ ಇದೆ ಎಂದೂ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಕೇರಳದ ಪೋನ್ನಾನಿಗೆ ಕರೆದುಕೊಂಡು ಹೋಗಲಾಗಿದೆಯೆಂದೂ ಇನ್ನಿತರ ಕಟ್ಟು ಕಥೆಗಳನ್ನು ಕಟ್ಟಿ ಒಂದು ಸಮುದಾಯದ ವಿರುದ್ಧ ಆರೋಪ ಮಾಡುತಿದ್ದ ಸಂಘಟನೆಗಳಿಗೆ ಈ ಪ್ರಕರಣ ಮತ್ತೊಮ್ಮೆ ತಿರುಗೇಟು ನೀಡಿದೆ. ಇಲ್ಲಿ ಯಾವ ರಮ್ಯಳನ್ನು ಲವ್ ಜಿಹಾದಿನ ಬಲೆಯಲ್ಲಿ ಬೀಳಿಸಿ ಅವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗುತಿತ್ತೋ ಅದೇ ರಮ್ಯ ಈ ಕಾಮುಕ ಮೇಸ್ತ್ರಿ ಮಹಮ್ಮದ್ ಆಲಿಯಾಸ್ ರಾಜು ಶೆಟ್ಟಿಯನ್ನು ತನ್ನ ಬಲೆಯಲ್ಲಿ ಕೆಡವಿ ಆತನನ್ನು ಹಿಂದೂ ಮಾಡಿಬಿಟ್ಟಿದ್ದಳು. ಈತನನ್ನು ಮದುವೆ ಆಗಿ ಕೈಕೈ ಹಿಡಿದು ಇವರು ಜಾತ್ರೆಗಳಲ್ಲಿ ಸುತ್ತಾಡುತಿದ್ದರೆ ಇವರ ಈ ಪ್ರೇಮ ಪ್ರಕರಣದ ನೈಜ ಬಲಿಪಶುಗಳಾದ ಮಹಮ್ಮದನ ಹೆಂಡತಿ ಸಫಿಯಾ ಮತ್ತು ಆಕೆಯ ಮೂವರು ಹೆಣ್ಣು ಮಕ್ಕಳು ಒಪ್ಪೊತ್ತಿನ ಊಟಕ್ಕೆ ಹಣವಿಲ್ಲದೆ ಪರಿತಪಿಸುತಿದ್ದರು.

ಲವ್ ಜಿಹಾದ್ ಹೆಸರಿನಲ್ಲಿ ಒಮ್ಮೆ ಲಾಭ ಪಡೆಯಲು ಹೊರಟು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿ ಕಾಮ ಜಿಹಾದಿ ಮೋಹನನ ಬಂಧನದಿಂದ ಮುಖಭಂಗಕ್ಕೀಡಾಗಿದ್ದ ಕೆಲವು ಕೋಮುವಾದಿ ಸಂಘಟನೆಗಳು ಇದನ್ನು ದೊಡ್ಡದು ಮಾಡಿ ಅದರಲ್ಲಿ ಹೋದ ಮಾನವನ್ನು ಈ ಪ್ರಕರಣದಲ್ಲಿ ಪಡೆಯಲು ಯತ್ನಿಸಿದ್ದವು. ಆದರೆ ಈ ಪ್ರಕರಣವೂ ಉಲ್ಟಾ ಹೊಡೆದಿದೆ. ಇತ್ತ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ತಂದ ಈ ಕಾಮುಕ ಮಹಮ್ಮದ್ ಈಗ ಹಿಂದೂ ಆಗಿ ಬದಲಾಗಿರುವುದನ್ನು ಸ್ವಾಭಿಮಾನಿ ಹಿಂದುಗಳೂ ಒಪ್ಪಲು ತಯಾರಿಲ್ಲ.


ಮಹಮ್ಮದ್ ಮಾಡಿದ ಈ ನೀಚ ಕೆಲಸ ಯಾವ ಮನುಷ್ಯನೂ ಒಪ್ಪುವಂತಹದ್ದಲ್ಲ. ಇರುವ ಹೆಂಡತಿ ಮಕ್ಕಳನ್ನು ಸರಿಯಾಗಿ ಸಾಕಲಾರದ ಅಯೋಗ್ಯ ಇನ್ನೊಬ್ಬ ಹುಡುಗಿಯ ಮೇಲೆ ಕಣ್ಣು ಹಾಕಿರುವುದು ಅತ್ಯಂತ ಹೇಯ ಕೆಲಸ. ಆಕೆಯೂ ಸಹ ಅಪ್ರಾಪ್ತ ವಯಸ್ಕಳೇನಲ್ಲ. ಆಕೆಗೂ ಸ್ವಲ್ಪ ಮಟ್ಟಿಗಿನ ಜ್ಞಾನ ಇರಬೇಕಾಗಿತ್ತು. ಈ ಕಾಮುಕನ ಪ್ರೀತಿಯ ಬಲೆಯಲ್ಲಿ ಬಿದ್ದು ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಆತನ ಕೈ ಹಿಡಿದ ಹೆಂಡತಿ ಮತ್ತು ಆತನ ಮೂರು ಮಕ್ಕಳು ಬೀದಿಪಾಲಾಗುವ ಬಗ್ಗೆಯೂ ಯೋಚಿಸಬಹುದಿತ್ತು. ಬಹುಶ ಪ್ರೇಮಕ್ಕೆ ಕಣ್ಣಿಲ್ಲ, ಕಾಮಕ್ಕೆ ಕಣ್ಣಿಲ್ಲ ಎಂಬ ಮಾತು ಇವರ ವಿಚಾರದಲ್ಲಿ ಹೆಚ್ಚು ಅನ್ವಯಿಸಿರಬಹುದು. ಆದರೂ ಇವರು ಮಾಡಿರುವ ಕೆಲಸ ಪ್ರೀತಿ ಪ್ರೇಮ ಎಂಬ ಪದಕ್ಕೇ ಅವಮಾನ. ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಪ್ರೀತಿ ಪ್ರೇಮಕ್ಕೆ ಈ ಪ್ರಕರಣ ಒಂದು ಕಪ್ಪು ಚುಕ್ಕೆ.

ಇನ್ನಾದರೂ ಹುಡುಗಿಯರು ಪ್ರೀತಿ ಪ್ರೇಮ ಎನ್ನುವ ಮುಂಚೆ ತಮ್ಮ ಭವಿಷ್ಯದ ಬಗ್ಗೆ ಜಾಗರೂಕರಾಗಬೇಕಿದೆ. ತಮ್ಮ ಈ ರೀತಿಯ ಪ್ರೀತಿ ತಮ್ಮ ಭವಿಷ್ಯವನ್ನೂ ಹಾಳು ಮಾಡುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಕೆಡಿಸುತ್ತದೆ ಎಂಬ ಸಾಮಾನ್ಯ ಅರಿವು ಅವರಲ್ಲಿ ಮೂಡಬೇಕಿದೆ. ಒಟ್ಟಿನಲ್ಲಿ ಈ ಪ್ರಕರಣವೇನೋ ಅಂತ್ಯ ಕಂಡಿದೆ. ಮಹಮ್ಮದ್ ರಮ್ಯಾ ಶೆಟ್ಟಿಯ ಕೈ ಹಿಡಿದು ರಾಜು ಶೆಟ್ಟಿ ಆಗಿದ್ದಾನೆ. ಕೆಲವು ಪತ್ರಿಕೆಗಳು ಇವರ ಪತ್ತೆಯಿಂದ ಈ ಪ್ರಕರಣ ಸುಖಾಂತ್ಯವಾಯಿತು ಎಂದು ಬರೆದಿವೆ. ಆದರೆ ರಾಜು ಶೆಟ್ಟರಿಗೆ ಮತ್ತು ರಮ್ಯಾಳಿಗೆ ಜೊತೆಗೆ ಸಮಾಜಕ್ಕೆ ಇವರ ಪತ್ತೆ ಸುಖಾಂತ್ಯ ವಾಗಿರಬಹುದು ಆದರೆ ಈತನನ್ನೇ ನಂಬಿ ಈತನ ಕೈಹಿಡಿದ ಸಫಿಯಾ ಜೊತೆಗೆ ಆಕೆಯನ್ನು ಕಿತ್ತು ತಿನ್ನುತ್ತಿರುವ ಬಡತನ ಮತ್ತು ಈತನ ಕಾರಣದಿಂದ ಆಕೆ ಜನ್ಮ ನೀಡಿದ ಆ ಮೂರು ಹೆಣ್ಣು ಮಕ್ಕಳ ಜೀವನದ ನೈಜ ಸಂಕಷ್ಟಗಳು ಈಗಷ್ಟೇ ಆರಂಭವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ