ಶನಿವಾರ, ಮೇ 03, 2014

ಮೋದಿ ನರಹಂತಕನಾದರೆ ಕಾಂಗ್ರೆಸ್ಸಿನ ತರುಣ್ ಗಗೋಯ್ ಯಾರು ?

ಅಸ್ಸಾಮಿನಲ್ಲಿ ಮತ್ತೆ ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ಮಾರಣಹೋಮ ಮುಂದುವರೆದಿದೆ . ಕಾಂಗ್ರೆಸ್ ಆಡಳಿತ ನಡೆಸುತ್ತಿರುವ , ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪ್ರತಿನಿಧಿಸುತ್ತಿರುವ ಅಸ್ಸಾಂ ರಾಜ್ಯದಲ್ಲಿ ಶಸ್ತ್ರ ಸಜ್ಜಿತ ಬೋಡೋ ಉಗ್ರರು ಕಳೆದರೆಡು ದಿನಗಳಲ್ಲಿ ಸುಮಾರು ಮೂವತ್ತೆರಡು ಮಂದಿ ನಿರಾಯುಧಧಾರಿ ಮುಸ್ಲಿಮರನ್ನು ಮಾರಣಹೋಮ ಮಾಡಿ ಕೊಂದು ಹಾಕಿದ್ದಾರೆ . ಮೃತರಲ್ಲಿ ಮಹಿಳೆಯರು ಮತ್ತು ಪುಟ್ಟ ಮಕ್ಕಳ ಸಂಖ್ಯೆ ಹೆಚ್ಚಿದ್ದು ಬೋಡೋ ಉಗ್ರರ ಆಕ್ರಮಣದ ಭೀತಿಯಿಂದ ಸಾವಿರಾರು ಮಂದಿ ಮನೆತೊರೆದಿದ್ದಾರೆ . ಇವೆಲ್ಲಾ ನಡೆಯುತ್ತಿರುವುದು ತರುಣ್ ಗಗೋಯ್  ನೇತೃತ್ವದಲ್ಲಿ  ಕಾಂಗ್ರೆಸ್ ಸರ್ಕಾರ  ಆಡಳಿತ ನಡೆಸುತ್ತಿರುವ ಅಸ್ಸಾಮಿನಲ್ಲಿ ! ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ನರಹಂತಕ , ಮೌತ್ ಕಾ ಸೌದಾಗರ್ ಎನ್ನುವ ಕಾಂಗ್ರೆಸ್ ಹೈಕಮಾಂಡ್  ತನ್ನದೇ ಪಕ್ಷ ಆಡಳಿತ  ನಡೆಸುತ್ತಿರುವ ಅಸ್ಸಾಮಿನಲ್ಲಿ ೨೦೧೨ ರಲ್ಲಿ   ನೂರಕ್ಕೂ ಅಧಿಕ ಮುಸ್ಲಿಮರು ಬೋಡೋ  ಜನಾಂಗ  ನಡೆಸಿದ ದಾಳಿಯಲ್ಲಿ ಮೃತಪಟ್ಟಾಗ , ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಾಗ ಅಲ್ಲಿನ ಆಡಳಿತದ ನೇತೃತ್ವ ವಹಿಸಿದ್ದ ತರುಣ್ ಗಗೋಯ್ ವಿರುದ್ಧ ತುಟಿ ಬಿಚ್ಚದೇ  ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೇ  ಮೌನ ಪಾಲಿಸಿತ್ತು . ಅದರ ಪರಿಣಾಮವಾಗಿ ಬೋಡೋ ಉಗ್ರರ ಅಟ್ಟಹಾಸ ಈಗ ಮತ್ತೆ ಮುಂದುವರೆದಿದ್ದು ಎರಡೇ ದಿನಗಳಲ್ಲಿ ಮೂವತ್ತೆರಡು ಜನರನ್ನು ಬಲಿ ತೆಗೆದುಕೊಂಡಿದೆ . ಸಾವಿನ ಸಂಖ್ಯೆ ಪ್ರತೀ ಗಂಟೆಗೆ ಹೆಚ್ಚಾಗುತ್ತಾ ಹೋಗುತ್ತಿದೆ . ಮಾತು ಮಾತಿಗೆ ಗುಜರಾತಿನಲ್ಲಿ ನಡೆದ ಅಲ್ಪಸಂಖ್ಯಾತರ ಹತ್ಯಾಕಾಂಡದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಅಸ್ಸಾಮಿನ ಮುಸ್ಲಿಮರ ಮಾರಣ ಹೋಮದ ಬಗ್ಗೆ ಜಾಣ ಮೌನರಾಗಿದ್ದಾರೆ . ತಮ್ಮದೇ ಪಕ್ಷದ ಮುಖ್ಯಮಂತ್ರಿ  ತರುಣ್ ಗಗೋಯ್ ರಾಜಿನಾಮೆ ಪಡೆಯದೇ , ಆತನನ್ನು ನರಹಂತಕ ಅನ್ನದೇ ಬಿಜೆಪಿಯತ್ತ ಬೆರಳು ತೋರಿಸುತ್ತಿದ್ದಾರೆ .


ಈಗ ನಡೆದಿರುವ ಹತ್ಯಾಕಾಂಡಕ್ಕೆ ಕಾರಣ ಈ ಭಾಗದ ಮುಸ್ಲಿಮರು ಬೋಡೋ ನಾಯಕನಿಗೆ ಮತದಾನ ಮಾಡಿಲ್ಲ ಎಂಬ ಕಾರಣಕ್ಕೆ ಎನ್ನಲಾಗಿದೆ . ಅದೇನಿದ್ದರೂ ಈ ಭಾಗದಲ್ಲಿ ಇಲ್ಲಿನ ಬೋಡೋ  ಜನಾಂಗದ ಮಧ್ಯೆ ಮತ್ತು ಬಂಗಾಳಿ ಮಾತನಾಡುವ ಮುಸ್ಲಿಮರ ಮಧ್ಯೆ ನಿರಂತರ ಸಣ್ಣ ಪುಟ್ಟ ವೈಷಮ್ಯಗಳು ಆಗಾಗ ಭುಗಿಲೇಳುತ್ತಲೇ ಇವೆ .  ಇಲ್ಲಿರುವ ಮುಸ್ಲಿಮರು ಮೂಲತಃ ಬಾಂಗ್ಲಾ ವಲಸಿಗರಾಗಿದ್ದು ಅವರನ್ನು ಇಲ್ಲಿಂದ  ಓಡಿಸಬೇಕು ಎಂಬ ಉದ್ದೇಶವನ್ನು ಮುಂದಿಟ್ಟುಕೊಂಡು ಬೋಡೋ ಜನಾಂಗದ ಕೆಲ ಉಗ್ರರು ಸೇರಿಕೊಂಡು ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎಂಬ ಶಸ್ತ್ರ ಸಜ್ಜಿತ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ . ಈ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಲು ಇಲ್ಲಿನ ಮುಖ್ಯಮಂತ್ರಿ ತರುಣ್ ಗಗೋಯ್  ವಿಫಲರಾಗಿದ್ದಾರೆ . ಅಷ್ಟಕ್ಕೂ ಈ ಉಗ್ರರ ರಾಜಕೀಯ ಪಕ್ಷ ಬೋಡೋ  ಲ್ಯಾಂಡ್ ಪೀಪಲ್ಸ್ ಪಾರ್ಟಿ ತರುಣ್ ಗಗೋಯ್ ಸರ್ಕಾರವನ್ನು ಬೆಂಬಲಿಸುತ್ತಿದೆ . ಈ ಕಾರಣಕ್ಕೆ ಗಗೋಯ್  ಇವರ ವಿರುದ್ಧ ಮೃದು ಧೋರಣೆ ತಳೆಯುತ್ತಿದ್ದಾರೆ ಎನ್ನುವುದು ಇಲ್ಲಿನ ಮುಸ್ಲಿಮರ ಆರೋಪ . ಇದನ್ನು ಬಳಸಿಕೊಂಡ ಈ ದುಷ್ಕರ್ಮಿಗಳು ೨೦೧೨ ರಲ್ಲಿ ನಡೆದ ಮುಸ್ಲಿಮರ ಮಾರಣಹೋಮದಲ್ಲಿ ಸುಮಾರು ನೂರಕ್ಕೂ ಅಧಿಕ ಜನರನ್ನು ಕೊಂದು ಹಾಕಿದ್ದರು . ಈಗ ಮತ್ತೆ ಇದೇ  ಉಗ್ರರ ಸಂಘಟನೆ ಬಂದೂಕು ಹಿಡಿದು ಮುಸ್ಲಿಮರ ಹತ್ಯಾಕಾಂಡ ನಡೆಸುತ್ತಿದೆ . ತರುಣ್ ಗಗೋಯ್ ಮಾತ್ರ ಎಂದಿನಂತೆ ಕೇಂದ್ರ ಪಡೆಗಳು ಬಂದಿದ್ದು ಪರಿಸ್ಥಿತಿಯ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂಬ ಹೇಳಿಕೆ ನೀಡಿ ಕೈತೊಳೆದುಕೊಂಡಿದ್ದಾರೆ .


ಅಸ್ಸಾಮಿನ ಕೊಕ್ರಜಾರ್ , ಬಕ್ಸಾ , ಚಿರಾಂಗ್ ಜಿಲ್ಲೆಗಳಲ್ಲಿ ಬೋಡೋ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಕರ್ಫ್ಯೂ ಹಾಕಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೂ ಸಾಮೂಹಿಕವಾಗಿ ಕೊಂದು ಹಾಕಿದ ಮೃತದೇಹಗಳು ಈಗಲೂ ಪತ್ತೆಯಾಗುತ್ತಿವೆ . ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಅಸ್ಸಾಂ ಸರ್ಕಾರದ ಗಡಿ ವ್ಯವಹಾರಗಳ ಸಚಿವ ಸಿದ್ದೀಕ್ ಅಹಮದ್ ಗಲಭೆ ತರುಣ್ ಗಗೋಯ್ ಅವರ ವೈಫಲ್ಯ ಕಾರಣ ಎಂದು ನೇರವಾಗಿ ಹೇಳಿದ್ದಾರೆ  . ರಾಜ್ಯ ಸರ್ಕಾರ ಇಲ್ಲಿನ ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ವಿಫಲವಾಗಿದ್ದು ಸರ್ಕಾರ ಬೋಡೋ  ಲ್ಯಾಂಡ್ ಪೀಪಲ್ಸ್ ಪಕ್ಷದ ಜೊತೆಗಿನ ಮೈತ್ರಿಯನ್ನು ಬಿಟ್ಟು ಅವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದ್ದಾರೆ . ಇಲ್ಲಿನ ಮುಸ್ಲಿಮರು ಬೋಡೋ ಲ್ಯಾಂಡ್ ಪಕ್ಷಕ್ಕೆ ಮತಹಾಕಿಲ್ಲ ಎಂಬ ಸಂದೇಶವನ್ನು ಸಾಮಾಜಿಕ ತಾಣಗಳ ಮೂಲಕ ರವಾನಿಸಿ ಗಲಭೆ ಆರಂಭವಾಗಲು ಕಾರಣರಾದ ಇಲ್ಲಿನ ಆ ಪಕ್ಷದ ಎಂ.ಎಲ್.ಎ ಪ್ರಮೀಳಾ ರಾಣಿ ಬ್ರಹ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ . ಆದರೆ ಇಲ್ಲಿನ ಮುಖ್ಯಮಂತ್ರಿ ತರುಣ್ ಗಗೋಯ್ ಮತ್ತು ಕಾಂಗ್ರೆಸ್ ಹೈಕಮಾಂಡ್  ಈ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಂಡಂತೆ ಕಾಣುತ್ತಿಲ್ಲ . ಮತ್ತದೇ ಕೇಂದ್ರ ಪಡೆಗಳು ಬಂದಿವೆ , ಶಾಂತಿಗಾಗಿ ಶ್ರಮಿಸಲಿದೆ ಎಂಬ ಮಾತುಗಳನ್ನು ಗಗೋಯ್   ಹೇಳಿದ್ದಾರೆ . ಕೇಂದ್ರ ಸರ್ಕಾರ ಹತ್ಯಾಕಾಂಡದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿ ಕೈತೊಳೆದುಕೊಂಡಿದೆ .  ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿ ಗುಜರಾತಿನಲ್ಲಿ ಮುಸ್ಲಿಮರ ನರಮೇಧ ಮಾಡಿಸಿದರು ಎನ್ನುವ ಕಾಂಗ್ರೆಸ್ ಪಕ್ಷ ಮಾತ್ರ ತನ್ನದೇ ಪಕ್ಷದ ಮುಖ್ಯಮಂತ್ರಿ ಬೋಡೋ ಉಗ್ರರ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಆಡಳಿತದ ಸವಿ ಅನುಭವಿಸುತ್ತಾ ಈಗ ನಡೆಯುತ್ತಿರುವ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ಮೌನವಾಗಿರುವಾಗ ಕಣ್ಣು ಕಾಣದಂತೆ ವರ್ತಿಸುತ್ತಿದೆ .ಹೀಗಿರುವಾಗ ಮೋದಿ ಹಾಗೂ ತರುಣ್ ಗಗೋಯ್  ನಡುವೆ ಕಂಡು ಬರುವ ವ್ಯತ್ಯಾಸವೇನು ? ಬಹುಶಃ ಮೋದಿ ಅಲ್ಪಸಂಖ್ಯಾತರ ವಿರೋಧಿ ಪಕ್ಷ ಎಂದು ಬಿಂಬಿಸಲ್ಪಡುವ ಪಕ್ಷದ ಮುಖ್ಯಮಂತ್ರಿಯಾದರೆ ತರುಣ್  ಗಗೋಯ್ ಸ್ವಯಂ ಘೋಷಿತ ಅಲ್ಪಸಂಖ್ಯಾತರ ರಕ್ಷಕ ಎನ್ನುವ ಪಕ್ಷದ ಮುಖ್ಯಮಂತ್ರಿ ಎನ್ನುವುದು ಮಾತ್ರ ಇವರಿಬ್ಬರ ನಡುವಿನ ವ್ಯತ್ಯಾಸ ! ಮೋದಿ ನರಹಂತಕ ಎನ್ನುವುದಾದರೆ ತರುಣ್ ಗಗೋಯ್ ಕೂಡಾ ನರಹಂತಕ ....






ಬುಧವಾರ, ಏಪ್ರಿಲ್ 30, 2014

ಕಬೀರ್ ಎನ್ಕೌಂಟರ್ ಮತ್ತು ಆನಂತರದ ರಾಜಕೀಯ



ಶೃಂಗೇರಿಯಲ್ಲಿ  ನಕ್ಸಲ್ ನಿಗ್ರಹ ಪಡೆಯ ಪೇದೆಯೊಬ್ಬನ ಗುಂಡಿಗೆ ಬಲಿಯಾದ ಮಂಗಳೂರಿನ ದನದ ವ್ಯಾಪಾರಿ ಕಬೀರ್ ಸಾವಿನ ನಂತರ ದಕ್ಷಿಣ ಕನ್ನಡ , ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತನ ಪರ  ಮತ್ತು ವಿರೋಧದ ಹೋರಾಟ ರಾಜಕೀಯ ಜೋರಾಗಿದ್ದು ಕಬೀರ್ ಸಾವಿಗೆ ನ್ಯಾಯ ಸಿಗಬೇಕೆಂದು ಹಲವು ಸಂಘಟನೆಗಳು ಹೋರಾಟ ನಡೆಸುತ್ತಿದ್ದರೆ ಕಬೀರ್ ನನ್ನು ಎನ್ಕೌಂಟರ್ ಮಾಡಿದ ಪೇದೆ ನವೀನ್ ನಾಯಕ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದನ್ನು ವಿರೋಧಿಸಿ ಕೆಲ ಸಂಘಟನೆಗಳು ಸಹ ಬೀದಿಗಿಳಿದಿದೆ. ಸಾವಿನ ಮುಂಚೆ ಜಗತ್ತಿಗೆ ತೀರಾ ಅಪರಿಚಿತನಾಗಿದ್ದ ಕಬೀರ್ ಸಾವಿನ ನಂತರ ಈ ಭಾಗದ ಜನರ ಮನೆ ಮಾತಾಗಿದ್ದಾನೆ . ಕಬೀರ್  ನನ್ನು ಹುತಾತ್ಮ ಎನ್ನುವವರಿದ್ದರೆ ಆತ ಓರ್ವ ಅಕ್ರಮ ದನ ಸಾಗಾಟಗಾರನಾಗಿದ್ದು ಈ
ಕೃತ್ಯಕ್ಕಾಗಿ ಆತನಿಗೆ ಸರಿಯಾದ ಶಿಕ್ಷೆ ಸಿಕ್ಕಿದೆ ಎನ್ನುವವರೂ ಇದ್ದಾರೆ . ಕಬೀರ್ ಸಾವಿನ ನಂತರ ಆತನ ಸಾವನ್ನು ತಮಗೆ ಬೇಕಾದ ಹಾಗೆ ಅಂದರ ಪರ ಮತ್ತು ವಿರೋಧವಾಗಿ  ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿದ್ದು ಅದು ಮುಂದುವರಿಯುತ್ತಲೂ ಇದೆ .

ಕಬೀರ್ ಕುಟುಂಬ ಹಲವು ತಲೆಮಾರುಗಳಿಂದ ದನದ ವ್ಯಾಪಾರವನ್ನೇ ತನ್ನ ಕುಲಕಸುಬಾಗಿ ಮಾಡಿಕೊಂಡು ಬಂದಿತ್ತು . ಮಲೆನಾಡಿನ ಭಾಗದಲ್ಲಿ ರೈತರು ಮಾರುವ ಅನುಪಯುಕ್ತ ದನಗಳನ್ನು ಹಣ ಕೊಟ್ಟು ಖರೀದಿಸಿ ತಂದು ಮಾರುವ ಕಸುಬನ್ನು ಈತನ ತಂದೆಯೂ ನಡೆಸಿಕೊಂಡು ಬರುತ್ತಿದ್ದರು . ಅವರಿಗೆ ವಯಸ್ಸಾದ ನಂತರ ಈ ವೃತ್ತಿಯನ್ನು ಕಬೀರ್ ಮುಂದುವರೆಸಿಕೊಂಡು ಬಂದಿದ್ದ .  ಇದರಿಂದ ಈತನ ಕುಟುಂಬದ ಜೀವನವೂ ನಡೆಯುತ್ತಿತ್ತು . ಹಣ ಕೊಟ್ಟು ರೈತರಿಂದ
ದನಗಳನ್ನು ಖರೀದಿಸಿದರೂ ಅದನ್ನು ಸಾಗಿಸುವ ಕೆಲಸ ಮಾತ್ರ ಅಷ್ಟು ಸುಲಭವಲ್ಲ . ಮಲೆನಾಡಿನ ಗಡಿ ಭಾಗಗಳಲ್ಲಿ ರಾತ್ರಿ ಸಮಯದಲ್ಲಿ ಪೊಲೀಸರಿಗೆ ಮತ್ತು ಕೆಲ ಕೋಮುವಾದಿ ಸಂಘಟನೆಗಳ ಪ್ರಮುಖರಿಗೆ ಮಾಮೂಲಿ ಕೊಟ್ಟು ದನಗಳನ್ನು ತುಂಬಿದ ವಾಹನವನ್ನು ಸಾಗಿಸುವುದು ಈ ವೃತ್ತಿಯಲ್ಲಿ ಮಾಮೂಲಿಯಾದ ಸಂಗತಿ . ರಾತ್ರಿ ವೇಳೆಯಲ್ಲಿ ಇಂತಹ ವಾಹನಗಳನ್ನು ಕಾದು
ಅವರಿಂದ ಮಾಮೂಲಿ ಪಡೆದು ವಾಹನ ತೆರಳಲು ಅನುವು ಮಾಡಿಕೊಡುವ ಕೆಲ ಕೇಸರಿ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಯುವಕರ ಗುಂಪನ್ನು ಮಲೆನಾಡಿನಲ್ಲಿ ಅಲ್ಲಲ್ಲಿ ಕಾಣಲು ಸಾಧ್ಯ . ದನ ಸಾಗಾಟಕ್ಕೆ ಸಂಘ ಪರಿವಾರದ ವಿರೋಧ ಇರುವ ಕಾರಣಕ್ಕಾಗಿಯೇ ಅದರಲ್ಲಿರುವ ಕೆಲವರಿಗೆ ಮಾಮೂಲಿ ಫಿಕ್ಸ್ ಮಾಡಿ ದನ ಸಾಗಿಸುವುದು ಈ ವೃತ್ತಿಯಲ್ಲಿ ಪಳಗಿರುವ ಕೆಲವರ
ವ್ಯವಹಾರ ರಹಸ್ಯ  . ಇನ್ನು ಪೊಲೀಸರಿಗೆ ಇಂತಿಷ್ಟು ಅಂತ ಎಲ್ಲಾ ಕಡೆ ಮಾಮೂಲಿ ಫಿಕ್ಸ್ ಆಗಿರುತ್ತದೆ . ಹೀಗಾಗಿ  ಸಕ್ರಮವಾಗಿ ಖರೀದಿಸಿದ ದನಗಳನ್ನು ಸಾಗಿಸಲು ರಾತ್ರಿ ವೇಳೆಯಲ್ಲಿ ಸರ್ಕಾರಿ ಪೊಲೀಸರು ಮತ್ತು ನೈತಿಕ ಪೋಲೀಸರ ಕೃಪಾಕಟಾಕ್ಷದ ಅವಶ್ಯಕತೆ ಈ ದನದ ವ್ಯಾಪಾರಿಗಳಿಗೆ ಇರುತ್ತದೆ .

ಕಬೀರ್ ಈ ವೃತ್ತಿಯಲ್ಲಿ ಪಳಗಿದ ಕಾರಣಕ್ಕಾಗಿಯೇ ಆತನಿಗೆ ಎಲ್ಲೆಲ್ಲಿ ಮಾಮೂಲಿ ಕೊಡಬೇಕು ಎನ್ನುವ ಮಾಹಿತಿಯಿತ್ತು . ಜೊತೆಗೆ ವ್ಯಾಪಾರದ ಹಿತದೃಷ್ಟಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಹಿಂದುಳಿದ ಜನಾಂಗದ ಯುವಕ ಪ್ರಮೋದ್ ಪೂಜಾರಿಯನ್ನೂ ತನ್ನ ಜೊತೆ ವ್ಯವಹಾರದಲ್ಲಿ ಸೇರಿಸಿಕೊಂಡಿದ್ದ . ಪ್ರಮೋದ್ ಪೂಜಾರಿಯಂತಹ ಯುವಕರು ಈ ಭಾಗದಲ್ಲಿ
ದನದ  ವ್ಯಾಪಾರಿಗಳ ಜೊತೆಯಲ್ಲಿ ಸಾಮಾನ್ಯವಾಗಿ  ಕಾಣ ಸಿಗುತ್ತಾರೆ . ಇದಕ್ಕಾಗಿ ಅವರಿಗೆ ಉತ್ತಮ ಮೊತ್ತದ ಸಂಭಾವನೆ ಮತ್ತು  ಲಾಭದಲ್ಲಿ ಪಾಲನ್ನು ನೀಡಲಾಗುತ್ತದೆ . ಇವರು ಒಂದು ರೀತಿಯಲ್ಲಿ ಸುರಕ್ಷತೆಗಾಗಿ ಬಳಸಲ್ಪಡುವ ಗುರಾಣಿಯ ತರಹ . ಇವರನ್ನು ಮುಂದಿಟ್ಟುಕೊಂಡೇ ದನದ ವ್ಯಾಪಾರವನ್ನು ಕುದುರಿಸಲಾಗುತ್ತದೆ. ಇವರ ಮೂಲಕವೇ ದನ ಸಾಗಾಟಕ್ಕೆ ಅಡ್ಡಿ ಮಾಡುವವರ ಜೊತೆ ವ್ಯವಹಾರವನ್ನೂ ಕುದುರಿಸಲಾಗುತ್ತದೆ .  ಇಂತಹ ವೃತ್ತಿಯಲ್ಲಿ ಪಳಗಿದ ಪ್ರಮೋದ್ ಪೂಜಾರಿಯ ಮೇಲೂ ಕೆಲ ಪ್ರಕರಣಗಳು ದಾಖಲಾದ ಬಗ್ಗೆ ಮಾಹಿತಿಯಿದೆ .

ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ನಲ್ಲಿ ನಡೆದ ಕಬೀರ್ ಎನ್ಕೌಂಟರ್ ಸಮಯದಲ್ಲಿ ಇದೇ ಪ್ರಮೋದ್ ಪೂಜಾರಿ ದನಗಳನ್ನು ಹೊತ್ತ ವಾಹನ ಚಲಾಯಿಸುತ್ತಿದ್ದ . ಈತ ಆರಂಭಿಕ ಹಂತದಲ್ಲಿ ನೀಡಿದ ಮಾಹಿತಿಯಂತೆ ದನ ಸಾಗಾಟದ ವಾಹನ ನಿಲ್ಲಿಸಿದ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಹಿಂಬದಿಯಲ್ಲಿ ದನಗಳ ಜೊತೆ ಇದ್ದ ಕಬೀರ್ ಎದೆಗೆ ಗುಂಡು ಹಾರಿಸಿ ಆತನನ್ನು ಕೊಲೆ ಮಾಡಿದ್ದರು . ಆದರೆ ಈಗ ಪ್ರಮೋದ್ ಪೂಜಾರಿ ಉಲ್ಟಾ ಹೊಡೆದಿದ್ದಾನೆ . ಕಬೀರ್ ಎ.ಎನ್.ಎಫ್ ಸಿಬ್ಬಂದಿಯ ಮೇಲೆ ಕಲ್ಲು ತೋರಿದ ಕಾರಣಕ್ಕಾಗಿ ಎನ್ಕೌಂಟರ್ ನಡೆದಿದ್ದು ತನ್ನನ್ನು ಬೇರೆ ಕಾರಣಕ್ಕೆ ಪುಸಲಾಯಿಸಿ ಕರೆದುಕೊಂಡು ಹೋಗಿ ಆ ನಂತರ ಬೆದರಿಸಿ ದನ ಸಾಗಾಟದ ವಾಹನವನ್ನು ಚಲಾಯಿಸುವಂತೆ ಮಾಡಲಾಗಿದೆ ಎಂಬ ಹೇಳಿಕೆಯನ್ನು ಸ್ಥಳೀಯ ಟಿವಿ
ಚಾನೆಲ್ ಒಂದರಲ್ಲಿ ಹೇಳಿಕೊಂಡಿದ್ದಾನೆ . ಕಬೀರ್ ಸಾವು ನಡೆದ ಸಮಯದಲ್ಲಿ ಒಂದು ರೀತಿಯ ಹೇಳಿಕೆ ನೀಡಿದ್ದ ಪ್ರಮೋದ್ ಪೂಜಾರಿಯ ಮೇಲೆ ಸ್ಥಳೀಯ ಸಂಘ ಪರಿವಾರದ ನಾಯಕರು ಕೆಂಗಣ್ಣು ಬೀರಿದ್ದರು . ಆತನ ಮನೆಯವರಿಗೂ ಬೆದರಿಕೆಗಳು ಹೋಗಿತ್ತು .ಈ ಕುರಿತು ಪತ್ರಿಕೆಗಳಲ್ಲೂ ವರದಿಯಾಗಿತ್ತು . ಆ ನಂತರ ಭೂಗತನಾಗಿದ್ದ ಪ್ರಮೋದ್ ಪೂಜಾರಿ ಈಗ ಮತ್ತೆ
ಕಾಣಿಸಿಕೊಂಡಿದ್ದು ಘಟನೆಯ ಕುರಿತಂತೆ ತಾನೇ ಈ ಹಿಂದೆ ನೀಡಿದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಹೊಸ ಹೇಳಿಕೆಗಳನ್ನು ನೀಡಿದ್ದಾನೆ . ಇಲ್ಲಿ ಪ್ರಮೋದ್ ಪೂಜಾರಿ ಸಂಘ ಪರಿವಾರದ ಬೆದರಿಕೆಗೆ ಹೆದರಿ ಸ್ನೇಹಿತನಿಗೆ ಮೋಸ ಮಾಡಿದ್ದಾನೆ ಅನ್ನುವವರೂ ಇದ್ದಾರೆ . ಅದೇನಿದ್ದರೂ  ನಿಷ್ಪಕ್ಷಪಾತ   ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ .

ಇನ್ನುಕಬೀರ್ ದನ ಕಳ್ಳ ಎನ್ನುವವರ ಬಳಿ ಆತ ದನಗಳನ್ನು ಕದ್ದು  ಸಾಗಿಸಿರುವುದಕ್ಕೆ ಯಾವ ದಾಖಲೆಯೂ ಇಲ್ಲ . ಶೃಂಗೇರಿ ಆಸುಪಾಸಿನ ಪೋಲಿಸ್ ಠಾಣೆಗಳಲ್ಲಿ ಈ ಸಮಯದಲ್ಲಿ ದನ ಕಳ್ಳತನ ನಡೆದ ಪ್ರಕರಣವೂ ದಾಖಲಾಗಿಲ್ಲ . ಹೀಗಿದ್ದರೂ ಸಂಘಪರಿವಾರ ಆತನನ್ನು ದನ ಕಳ್ಳ ಅನ್ನುತ್ತಿದೆ . ವಾಹನದಲ್ಲಿ ಐದು ದನಗಳನ್ನು ಸಾಗಿಸುವ ಜಾಗದಲ್ಲಿ ಇಪ್ಪತ್ತಕ್ಕೂ
ಹೆಚ್ಚು ದನಗಳನ್ನು ಅಮಾನವೀಯವಾಗಿ ಸಾಗಿಸಿದ್ದ ಎಂದು ಹೇಳುತ್ತಿವೆ . ಆದರೆ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದ ಕಬೀರ್ ಇದೇ ವಾಹನದ ಹಿಂಬದಿಯಲ್ಲಿ ಇದೇ ಇಪ್ಪತ್ತಕ್ಕೂ ಹೆಚ್ಚು ದನಗಳ ಮಧ್ಯದಲ್ಲಿ ಇದ್ದ ಎನ್ನುವ ಸತ್ಯವನ್ನು ಮರೆಮಾಚುತ್ತಿವೆ. ಕಬೀರ್ ಬಗ್ಗೆ ದ್ವೇಷ ಮೂಡಿಸಿ ದನಗಳ ಬಗ್ಗೆ ಅನುಕಂಪ ಮೂಡಿಸುತ್ತಿವೆ . ಸರ್ಕಾರ ಘೋಷಿಸಿದ
ಪರಿಹಾರಕ್ಕೆ ಖಂಡನೆ ಮಾಡಿ ಗುಂಡು ಹೊಡೆದ ಪೇದೆಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಕಾವಿಧಾರಿಯೊಬ್ಬ ಘೋಷಣೆ ಮಾಡಿದ್ದಾನೆ . ಇನ್ನು ಪರ ವಿರೋಧದ ಪ್ರತಿಭಟನೆಯಲ್ಲಿ ಧರ್ಮದ ವಾಸನೆ ಬರ  ತೊಡಗಿದೆ . ಧರ್ಮದ ಕಾರಣಕ್ಕಾಗಿಯೇ ಕಬೀರ್ ಕೊಲೆಯನ್ನು ಸಮರ್ಥಿಸುವವರೂ ಮತ್ತು ವಿರೋಧಿಸುವವರೂ ಇದ್ದಾರೆ .  ಆದರೆ ಹಾಗಾದಂತೆ ಎಚ್ಚರ ವಹಿಸಬೇಕಾಗಿರುವುದು ಈ ಭಾಗದ ಪ್ರಗತಿಪರ ಮತ್ತು ಜಾತ್ಯಾತೀತ ನಾಯಕರ ಕರ್ತವ್ಯ ಕೂಡ . ಕಬೀರ್ ಕೊಲೆ ಖಂಡಿಸಿ ನಡೆಸುವ ಪ್ರತಿಭಟನೆ ಪ್ರಭುತ್ವದ ದೌರ್ಜನ್ಯದ ವಿರುದ್ಧದ ಹೋರಾಟವಾಗಬೇಕೇ  ಹೊರತು ಆತ ಮುಸ್ಲಿಮನೆಂಬ ಕಾರಣಕ್ಕಾಗಿ ಹೋರಾಟ ಎಂಬಂತೆ ಆಗದ ರೀತಿಯಲ್ಲಿ  ನೋಡಿಕೊಳ್ಳಬೇಕಾಗಿರುವುದು ಈ ಭಾಗದಲ್ಲಿ ಪ್ರಭುತ್ವದ ದೌರ್ಜನ್ಯಕ್ಕೆ ಒಳಗಾಗಿ ಪ್ರಾಣ ತೆತ್ತ ಅಮಾಯಕರಿಗೆ ಸಲ್ಲಿಸುವ ನಿಜವಾದ ಶ್ರದ್ದಾಂಜಲಿ .