ಭಾನುವಾರ, ಡಿಸೆಂಬರ್ 13, 2009

ಹಿಂದಿ ಅನುವಾದಿತ ಕನ್ನಡ ಶಾಯರಿಗಳು...

ಕಣ್ಣೀರಿನ ಪ್ರಶ್ನೆ

ಒಂದು ದಿನ ನನ್ನ ಕಣ್ಣೀರು ನನ್ನನ್ನೇ ಕೇಳಿತು
ಪ್ರತಿದಿನ ನೀನು ನನ್ನನ್ನು ಏಕೆ ಕರೆಯುತ್ತೀಯಾ..?
ನಾನು ಹೇಳಿಯೇ ಬಿಟ್ಟೆ
ಪ್ರತಿದಿನ ನಾನು ಅವಳ ನೆನಪು ಮಾತ್ರ ಮಾಡುತ್ತೇನೆ,
ಆಗ ಕರೆಯದೆ ನೀನೇ ಏಕೆ ಬಂದು ಬಿಡುತ್ತೀಯಾ..?



ನನ್ನ ಹೃದಯ

ಅವಳ ಸವಿನೆನಪಿನೊಂದಿಗೆ ನನ್ನ ಹೃದಯವನ್ನು
ಹೇಗೆ ನಾ ಉಲ್ಲಸಿತಗೊಳಿಸಲಿ.....
ಯಾರನ್ನು ನಾ ಮರೆತೇ ಇಲ್ಲವೋ
ಅವಳ ನೆನಪನ್ನು ಪುನಃ ನಾ ಹೇಗೆ ಮಾಡಲಿ...
ನನ್ನ ಹೃದಯವನ್ನು ನನ್ನವಳೇ
ಘಾಸಿಗೊಳಿಸಿದಳು,
ಹೀಗಿರುವಾಗ ಇದರ ಬಗ್ಗೆ ಪರರಲ್ಲಿ
ನಾ ಏನೆಂದು ದೂರು ನೀಡಲಿ....



ಪ್ರೀತಿ ಎಂಬ ಮಾಯೆ

ಯಾರ ಮೇಲೆ ಪ್ರೀತಿ ಇತ್ತೋ
ಆ ಹುಡುಗಿ ನನ್ನವಳಾಗಲಿಲ್ಲ,
ಯಾವ ಕ್ಷಣಕ್ಕಾಗಿ ದಿನರಾತ್ರಿ ಕಾದೆನೋ
ಆ ಕ್ಷಣವೂ ನನ್ನದಾಗಲಿಲ್ಲ,
ಪ್ರೀತಿ ಎಂಬ ಈ ಪದ ಒಂದು
ಮಾಯೆಯೇ ಇರಬೇಕು
ಅವಳಿಗೆ ನಾನು ಸಿಗಲಿಲ್ಲ
ನನಗೆ ಯಾರೂ ಸಿಗಲಿಲ್ಲ...



ಭರವಸೆ

ಗೆಳೆತನದ ಹೂವು ಎಲ್ಲಾ
ಕಾಲದಲ್ಲೂ ಅರಳುತ್ತದೆ,
ಸ್ನೇಹದ ಮೋಡಗಳು ಎಲ್ಲಾ
ಕಾಲದಲ್ಲೂ ಘರ್ಜಿಸುತ್ತದೆ,
ನೀನು ನನ್ನನ್ನು ಪ್ರೀತಿಸು
ಇಲ್ಲವೇ ಪ್ರೀತಿಸದಿರು
ಇದು ಮಾತ್ರ ಸತ್ಯ
ಎಲ್ಲಾ ಕಾಲದಲ್ಲೂ
ನಿನ್ನ ನೆನಪುಗಳ ನಡುವೆಯೇ
ನನಗೆ ಬದುಕಲು ಬರುತ್ತದೆ....



ಆತ್ಮ ವಿಶ್ವಾಸ

ಒಡೆದು ಹೋದ ಕನಸುಗಳನ್ನು
ಪುನಃ ಮರಳಿ ಕಟ್ಟಲು ಬರುತ್ತದೆ,
ಮುನಿಸಿ ಹೋದ ಹೃದಯವನ್ನು
ಪುನಃ ಒಲಿಸಿಕೊಳ್ಳಲೂ ಬರುತ್ತದೆ,
ನೀನು ನನ್ನ ಯಾತನೆ ನೋಡಿ
ಕೊರಗಬೇಡ,
ಯಾತನೆಯ ನಡುವೆಯೂ ನನಗೆ
ಮುಗುಳ್ನಗಳು ಬರುತ್ತದೆ.......

ಮಾಧ್ಯಮ ಲೋಕದ ಆಶಾಕಿರಣ ಶ್ರೀ ಶಂಶೀರ್ ಬುಡೋಳಿ..



ಶಂಶೀರ್ ಬುಡೋಳಿ.ಇದು ಈಗ ಕರ್ನಾಟಕದ ಮಾಧ್ಯಮ ಲೋಕದಲ್ಲಿ ಚಿರಪರಿಚಿತ ಹೆಸರು .ಈಗ ಇವರು ವಾರ್ತಾಭಾರತಿ ಕನ್ನಡ ದೈನಿಕದ ಉಪಸಂಪಾದಕ. ಜೊತೆಗೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ(M.C.J)ಯನ್ನು ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಮಾಡುತಿದ್ದಾರೆ. ಹಾಗೆಯೇ ಮಂಗಳೂರಿನ ಖಾಸಗಿ ವಾಹಿನಿ ‘ಚಾನೆಲ್೯’ನ ನ್ಯೂಸ್ ರೀಡರ್. ವಿವಿಧ ಸಾಮಾಜಿಕ, ಸಾಹಿತ್ಯ ಸಂಘಟನೆಗಳಲ್ಲಿ ಗುರುತಿಸುವಿಕೆ. ೧೧ನೇ ಮಂಗಳೂರು ವಿ.ವಿ.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ. ಮರೀಚಿಕೆ ಪೋಟೊ ಕಾಮಿಕ್ಸ್‌ನಲ್ಲಿ ನಟನಾಗಿ ಅಭಿನಯ.ಕಲಾಸತ್ಯ ಪಾಕ್ಷಿಕ, ಪ್ರಸ್ತುತ ಪಾಕ್ಷಿಕದಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುವಿಕೆ. ವಿವಿಧ ಬಹುಮಾನ, ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ.



೨೦೦೮ ನೇ ಸಾಲಿನಲ್ಲಿ ಎಸ್.ಡಿ.ಎಂ ಕಾಲೇಜಿನ ಅತ್ತ್ಯುತ್ತಮ ವಿಧ್ಯಾರ್ಥಿ ಪ್ರಶಸ್ತಿ ಪಡೆದಿರುವ ಇವರು ರಾಷ್ಟ ಮಟ್ಟದ ವಿಚಾರಗೋಷ್ಠಿಯಲ್ಲಿ ಬಾಗವಹಿಸಿದ್ದಾರೆ.ಇವರ ಪ್ರಕಾರ ಇವರು ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇಟ್ಟುಕೊಂಡು ಇವರೆಗೆ ಬಂದಂತಹ ಹಾದಿ,ಸೋಲು-ಗೆಲುವಿನ ಹಾದಿ. ಈ ಹಾದಿಯೊಳಗೆ ನಾನು ಬರೆಹದ ಮೂಲಕ ಜನರಿಗೆ ಪರಿಚಯವಾಗುವ ಜೊತೆಗೆ ನನ್ನನ್ನು ಪತ್ರಕರ್ತನಾಗುವಂತೆ ಪ್ರೇರೆಪಿಸಿದ ಊರ ಜನತೆ, ಅಭಿಮಾನಿಗಳ,ಗುರುವರ್ಯರ, ಕುಟುಂಬಿಕರ ಆಶಯ ನನ್ನನ್ನು ಈವರೆಗೆ ಬೆಳೆಸಲು ಕಾರಣ. ಇವರೆಲ್ಲರಿಗೂ ನಾನು ಎಂದೆಂದೂ ಚಿರಋಣಿ ಎನ್ನುತ್ತಾರೆ. ಜೊತೆಗೆ ನಾನು ನನ್ನಷ್ಟಕ್ಕೆ ತಾನು ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಿ ಏನನ್ನಾದರೂ ಸಾಧಿಸುವ ಛಲ, ಇರಾದೆ ನನ್ನದು. ಇವರೆಗೆ ನಾನು ಅನುಭವಿಸಿದರಲ್ಲಿ ಹೆಚ್ಚಿನವು ಸೋಲುಗಳೇ.ಈ ಸೋಲುಗಳೇ ನನ್ನನ್ನು ಬೆಳೆಸುತ್ತಿದೆ ಎನ್ನುವ ಇವರು ಸಮಾಜದಲ್ಲಿನ ವಿರೋಧಾಭಾಸಗಳನ್ನು ವಿರೋಧಿಸುವ, ಪತ್ರಕರ್ತನಾಗಿ ನಾನು ಬರೆದ ಬರೆಹಗಳ ಮೂಲಕ ನನ್ನವರ,ನನ್ನ ರಾಜ್ಯದ, ದೇಶದ ಒಡಲಿನ, ಧಾರ್ಮಿಕತೆ ಹಾಗೂ ಬಡವ, ದಲಿತ,ಅಸ್ಪಶ್ಯರ, ಶೋಷಿತರ ಪರ ಧ್ವನಿಯಾಗಲು ಬಯಸುತ್ತೇನೆ ಎನ್ನುತ್ತಾರೆ. ಇವರು ತಮ್ಮ ಬರವಣಿಗೆಗಳಿಗಾಗಿ http://www.shamsheerbudoli.blogspot.com ಎಂಬ ಬ್ಲಾಗ್ ಒಂದನ್ನು ತೆರೆದಿದ್ದು ಅಲ್ಲಿ ಇವರ ಬರಹಗಳನ್ನು ನೋಡಬಹುದು.



- ಅಶ್ರಫ್ ಮಂಜ್ರಾಬಾದ್.

ಟಾಯ್ಲೆಟ್ ರೋಲ್ ಮತ್ತು ಪೀತ ಪತ್ರಿಕೆಗಳು..


ಮೊನ್ನೆ ಪತ್ರಿಕೆಯೊಂದರಲ್ಲಿ ಲವ್ ಜಿಹಾದ್ ಕುರಿತ ಲೇಖನ ಓದುತಿದ್ದಾಗ ಕನ್ನಡದ ಇಂದಿನ ಕೆಲ ಮಾಧ್ಯಮಗಳು ಪಾಶ್ಚಾತ್ಯರ ಶೈಲಿಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಶೌಚಾಲಯಕ್ಕೆ ಪೇಪರ್ ಬಳಸುವ ಪದ್ಧತಿ ಇದ್ದರೆ ಅದಕ್ಕೂ ನಾಲಾಯಕ್ ಆಗಿರುತಿದ್ದವು ಎಂಬ ವಾಖ್ಯಗಳನ್ನು ಓದಿ ನಿಜಕ್ಕೂ ಸರಿ ಎನಿಸಿತು.


ಇಂದಿನ ಕನ್ನಡದ ಕೆಲ ಮಾಧ್ಯಮಗಳು ಯಾವ ಮಟ್ಟಕ್ಕೆ ಬಂದು ತಲುಪಿವೆ ಎಂದರೆ ಒಂದು ವರದಿಯನ್ನು ತನಗೆ ಹೇಗೆ ಬೇಕೋ ಅದರಂತೆ ಪ್ರಕಟಿಸುತ್ತವೆ. ಇಲ್ಲಿ ಸುದ್ಧಿಯ ಮೂಲ ಯಾವುದು? ಆ ಸುದ್ಧಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುವುದನ್ನು ಅರಿಯುವ ಗೊಡವೆಗೆ ಹೋಗದೆ ಬಲ್ಲ ಮೂಲಗಳು ತಿಳಿಸಿವೆ ಎಂಬ ತಮ್ಮ ಕಪಟ ಮೆದುಳಿನ ವರದಿಯನ್ನು ತುರುಕಿ ಅದಕ್ಕೆ ಸ್ವಲ್ಪ ಮಸಾಲೆ ಸೇರಿಸಿ ಪ್ರಕಟಿಸಿಬಿಡುತ್ತದೆ. ಇದರಲ್ಲಿ ತನಗಾಗದ ಸಮುದಾಯದ ವ್ಯಕ್ತಿಗಳು ಒಳಗೊಂಡಿದ್ದಾರೆ ಎಂದು ಗೊತ್ತಾದ ಕೂಡಲೇ ಆ ವರದಿಗೆ ಮತ್ತಷ್ಟು ರೆಕ್ಕೆಪುಕ್ಕ ಸೇರಿಸಿ ಆ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತದೆ. ಈ ಮಾತುಗಳನ್ನು ಹೇಳುತ್ತಿರುವುದು ಕನ್ನಡ ನಾಡಿನ ಎಲ್ಲಾ ಪತ್ರಿಕೆಗಳ ಕುರಿತಲ್ಲ. ಇಂದಿಗೂ ಪತ್ರಿಕಾ ಧರ್ಮವನ್ನು ಗೌರವಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಬಯಸುವ ಪತ್ರಿಕೆಗಳು ನಮ್ಮ ನಡುವೆ ಇದೆ. ಇವುಗಳ ನಡುವೆ ಪತ್ರಿಕಾ ಧರ್ಮದ ಜೊತೆ ತಮ್ಮ ನೈತಿಕ ಮೌಲ್ಯಗಳನ್ನೂ ಗಾಳಿಗೆ ತೂರಿ ಸಮುದಾಯಗಳ ನಡುವೆ ದ್ವೇಷ ಹಚ್ಚುವ ಪತ್ರಿಕೆಗಳೂ ಹೆಚ್ಚಾಗಿವೆ.



ಇತ್ತೀಚಿಗೆ ನಡೆದ ಲವ್ ಜಿಹಾದ್ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ತಮ್ಮ ಮನೆಯ ಮಗಳು ಶೈಲಜಾ ಕಾಣೆಯಾಗಿದ್ದಾಳೆ ಎಂದು ಕ್ರೈಸ್ತ ಕುಟುಂಬವೊಂದು ಚಾಮರಾಜ ನಗರದ ಪೊಲೀಸರಿಗೆ ದೂರು ನೀಡಿ ಅವರನ್ನು ಪತ್ತೆ ಹಚ್ಚುವಂತೆ ಕರ್ನಾಟಕ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುತ್ತದೆ. ಅದರಂತೆ ಕರ್ನಾಟಕ ಪೊಲೀಸರು ತನ್ನ ಪ್ರಿಯಕರ ಅಜ್ಗರ್ ನೊಂದಿಗೆ ಪರಾರಿಯಾಗಿ ಆತನನ್ನು ವಿವಾಹವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ. ಭಾರತೀಯ ವಿವಾಹ ನೊಂದಣಿ ಸಂಹಿತೆಯಂತೆ ಅಜ್ಗರ್ 21 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದು ಆತನ ಪ್ರಿಯತಮೆ ಶೈಲಜಾ 18 ವರ್ಷಗಳಿಗಿಂತಲೂ ಮೇಲ್ಪಟ್ಟವಲಾಗಿದ್ದರೂ ಆಕೆ ತನ್ನ ಸ್ವ ಇಚ್ಛೆಯಿಂದ ತಾನು ಅಜ್ಗರ್ ನನ್ನು ಮದುವೆಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದೇನೆ ಎಂದು ಮುಚ್ಚಳಿಕೆ ಬರೆದು ಕೊಟ್ಟರೂ ಸಾಮಾನ್ಯವಾಗಿ ಇಲ್ಲಿ ಇವರ ಪರವಾಗಿ ಬರಬೇಕಿದ್ದ ತೀರ್ಪನ್ನು ಶೈಲಜಾಲ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕಾರಣ ಮುಂದೂಡಲಾಗುತ್ತದೆ. ಅದರಂತೆ ಕೆಲ ದಿನಗಳ ಮಟ್ಟಿಗೆ ಈ ಜೋಡಿ ಜೊತೆಯಾಗಿ ಇರಬಾರದೆಂದೂ ಅಷ್ಟರ ತನಕ ಈಕೆಯು ತನ್ನ ಹೆತ್ತವರೊಂದಿಗೆ ವಾಸಿಸಬೇಕೆಂದೂ ಕೋರ್ಟ್ ಆದೇಶ ನೀಡುತ್ತದೆ. ಜೊತೆಗೆ ಈಕೆಯ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕುರಿತಂತೆ ತನಿಖೆ ನಡೆಸುವಂತೆಯೂ ಆದೇಶಿಸುತ್ತದೆ.



ಅಬ್ಬಾ ಇಷ್ಟು ಸಾಕಾಗಿತ್ತು ಕನ್ನಡ ನಾಡಿನ ಕೋಮುವಾದಿ ಪತ್ರಿಕೆಗಳಿಗೆ, ತನಿಖಾ ತಂಡದ ಅಧಿಕಾರಿ ಹೈಕೋರ್ಟಿಗೆ ವರದಿ ನೀಡುವ ಮುನ್ನವೇ ಇಲ್ಲಿನ ಪತ್ರಿಕೆಗಳು ತೀರ್ಪು ನೀಡಿ ಬಿಟ್ಟಿದ್ದವು. ಕರ್ನಾಟಕ ಸೇರಿದಂತೆ ಕೇರಳ ರಾಜ್ಯದಲ್ಲಿ ಲವ್ ಜಿಹಾದಿ ಸಂಘಟನೆಗಳು ಸಕ್ರಿಯವಾಗಿವೆ. ಇವರು ಇಂತಿಷ್ಟು ಅನ್ಯ ಧರ್ಮೀಯ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಗುರಿಯೊಂದಿಗೆ ಕಾರ್ಯಾಚರಣೆಗಿಳಿಯುತ್ತಾರೆ. ಇವರಿಗೆ ಇದಕ್ಕಾಗಿ ವಿದೇಶಗಳಿಂದ ಲಕ್ಷಗಟ್ಟಲೆ ಹಣ ಬರುತ್ತದೆ. ಸ್ಥಳೀಯವಾಗಿ ಇವರಿಗೆ ಬೈಕು ಕಾರು ಮತ್ತು ಉತ್ತಮ ಉಡುಪುಗಳನ್ನು ಒದಗಿಸಲಾಗುತ್ತದೆ. ಹೀಗೆ ಬುಟ್ಟಿಗೆ ಬಿದ್ದ ಹೆಣ್ಣು ಮಕ್ಕಳನ್ನು ಮತಾಂತರಗೊಳಿಸಿ ಅವರಿಗೆ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿಗೊಂಡ ಯುವತಿಯರು ಆತ್ಮಾಹುತಿ ಬಾಂಬರುಗಳಾಗಿ ಮಾರ್ಪಾಡಾಗುತಿದ್ದಾರೆ ಎಂಬ ತಮ್ಮ ಎಂದಿನ ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಎಂಬ ಮಾಹಿತಿಯನ್ನು ಸೇರಿಸಿ ವರದಿ ತಯಾರಿಸಿ ಬಿಟ್ಟವು. ಇದನ್ನೇ ಕಾಯುತಿದ್ದ ಕೆಲವು ನಾಯಕರು ಮತ್ತು ಸಂಘಟನೆಗಳು ಈ ವಿಷಯವನ್ನು ಬೀದಿಗೆ ತಂದವು. ಬೇಟಿ ಬಚಾವೋ ಆಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಬೊಬ್ಬಿಡಲಾರಂಭಿಸಿದವು. ಒಟ್ಟಿನಲ್ಲಿ ಈ ರೀತಿಯ ವರದಿಗಳಿಂದ ನಾಗರೀಕ ಸಮಾಜ ಕಂಗೆಟ್ಟಿತ್ತು. ಇದುವರೆಗೂ ಜಿಹಾದ್ ಎಂದರೆ ಬಾಂಬು ಬಂದೂಕುಗಳನ್ನು ಹಿಡಿದು ಮಾಡುವ ದಾಳಿ ಎಂದು ಕೊಂಡಿದ್ದ ನಾಗರೀಕರೂ ಈ ಹೊಸ ಜಿಹಾದಿನ ಹೆಸರು ಕೇಳಿ ಬೆವೆತು ಹೋದರು. ಈ ಬಗ್ಗೆ ಮೊಬೈಲ್ ಫೋನಿನಲ್ಲಿ ಬಗೆಬಗೆಯ ಎಸ್.ಎಂ.ಎಸ್ ಗಳು ಹರಿದಾಡಿದವು. ಒಟ್ಟಿನಲ್ಲಿ ನಾಗರೀಕ ಸಮಾಜವೇ ಈ ರೀತಿಯ ವರದಿಗಳಿಂದ ಬೆವೆತು ಹೋಗಿದ್ದರೆ ಇದರ ನಿರ್ದೇಶಕರಾದ ಈ ಪೀತ ಪತ್ರಿಕೆಗಳ ಸಂಪಾದಕರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಮಜಾ ನೋಡುತಿದ್ದರು.



ಈ ಎಲ್ಲದರ ನಡುವೆ ಮತ್ತೆ ಕೋರ್ಟಿನ ಆದೇಶದಂತೆ ಶೈಲಜಾ ಮತ್ತೆ ಹಾಜರಾದಳು. ಕೋರ್ಟ್ ಆಕೆಯನ್ನು ಪುನಃ ಪ್ರಶ್ನಿಸಲಾಗಿ ಆಕೆ ತಾನು ಅಸ್ಗರಿನೊಂದಿಗೆ ಹೋಗುವುದಾಗಿಯೂ ತನಗೆ ಯಾವುದೇ ರೀತಿಯ ಆಮಿಷ ಒಡ್ಡಿ ಆತ ತನ್ನನ್ನು ಮದುವೆ ಆಗಿಲ್ಲವೆಂದೂ ತಾವಿಬ್ಬರೂ ಪರಸ್ಪರ ಪ್ರೀತಿಸುತಿದ್ದು ಇಬ್ಬರೂ ಇಷ್ಟಪಟ್ಟು ಮದುವೆ ಆಗಿರುವುದಾಗಿಯೂ ತಿಳಿಸಿ ಜೊತೆಗೆ ತನ್ನಿಷ್ಟದಂತೆ ತಾನು ಅಸ್ಗರಿನ ಧರ್ಮಕ್ಕೆ ಮತಾಂತರವಾಗುತ್ತಿರುವುದಾಗಿಯೂ ತಿಳಿಸಿದಳು. ಅದರಂತೆ ಘನವೆತ್ತ ನ್ಯಾಯಾಲಯ ಆಕೆಗೆ ಅಸ್ಗರಿನೊಂದಿಗೆ ಇರುವಂತೆ ತೀರ್ಪು ನೀಡಿತು. ಈ ಮಧ್ಯೆ ತನಿಖೆ ನಡೆಸಿದ ಇಲ್ಲಿನ ಪೋಲಿಸ್ ಅಧಿಕಾರಿಗಳು ಲವ್ ಜಿಹಾದ್ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲವೆಂದೂ ಇದುವರೆಗೆ ಆ ರೀತಿಯ ಯಾವುದೇ ದೂರು ರಾಜ್ಯದ ಯಾವುದೇ ಮೂಲೆಯಲ್ಲಿ ದಾಖಲಾಗಿಲ್ಲವೆಂದು ವರದಿ ನೀಡಿದರು. ಆದರೆ ಇದು ಹೆಚ್ಚಿನ ಯಾವುದೇ ಪತ್ರಿಕೆಗಳ ಮುಖಪುಟ ಸುದ್ಧಿಯಾಗಲಿಲ್ಲ. ಲವ್ ಜಿಹಾದ್ ಬಗ್ಗೆ ತನಗಿಷ್ಟ ಬಂದಂತೆ ಬರೆದ ಈ ಪೀತಪತ್ರಿಕೆಗಳು ಈಗ ಜಾಣ ಮೌನಕ್ಕೆ ಶರಣಾದವು. ಇವೆಲ್ಲರ ಮಧ್ಯೆ ಮೋಹನ್ ಕುಮಾರ್ ಎಂಬ ಕಾಮ ಜಿಹಾದಿಯ ಪತ್ತೆಯ ನಂತರ ಆತನ ಕಾಮ ಲೀಲೆಗಳಿಗೆ ಆತನ ಹತ್ಯೆಗಳಿಗೆ ಯಾವುದೇ ಟೈಟಲ್ ಕೊಡದೆ ಸರಳವಾಗಿ ಸರಣಿ ಹಂತಕ ಮೋಹನ್ ಕುಮಾರ್ ಬಂಧನ ಎಂದು ಪ್ರಕಟಿಸಿ ಕೃತಾರ್ಥವಾದವು. ಇವೆಲ್ಲಾ ನೋಡುವಾಗ ಈ ಪತ್ರಿಕೆಗಳು ಟಾಯ್ಲೆಟ್ ರೋಲ್ ಆಗಿ ಬಳಸಲೂ ನಾಲಾಯಕ್ ಎಂಬ ಮಾತುಗಳು ಅಕ್ಷರಸ ಸತ್ಯ ಎನಿಸುತ್ತದೆ.