ಭಾನುವಾರ, ಡಿಸೆಂಬರ್ 13, 2009

ಟಾಯ್ಲೆಟ್ ರೋಲ್ ಮತ್ತು ಪೀತ ಪತ್ರಿಕೆಗಳು..


ಮೊನ್ನೆ ಪತ್ರಿಕೆಯೊಂದರಲ್ಲಿ ಲವ್ ಜಿಹಾದ್ ಕುರಿತ ಲೇಖನ ಓದುತಿದ್ದಾಗ ಕನ್ನಡದ ಇಂದಿನ ಕೆಲ ಮಾಧ್ಯಮಗಳು ಪಾಶ್ಚಾತ್ಯರ ಶೈಲಿಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಶೌಚಾಲಯಕ್ಕೆ ಪೇಪರ್ ಬಳಸುವ ಪದ್ಧತಿ ಇದ್ದರೆ ಅದಕ್ಕೂ ನಾಲಾಯಕ್ ಆಗಿರುತಿದ್ದವು ಎಂಬ ವಾಖ್ಯಗಳನ್ನು ಓದಿ ನಿಜಕ್ಕೂ ಸರಿ ಎನಿಸಿತು.


ಇಂದಿನ ಕನ್ನಡದ ಕೆಲ ಮಾಧ್ಯಮಗಳು ಯಾವ ಮಟ್ಟಕ್ಕೆ ಬಂದು ತಲುಪಿವೆ ಎಂದರೆ ಒಂದು ವರದಿಯನ್ನು ತನಗೆ ಹೇಗೆ ಬೇಕೋ ಅದರಂತೆ ಪ್ರಕಟಿಸುತ್ತವೆ. ಇಲ್ಲಿ ಸುದ್ಧಿಯ ಮೂಲ ಯಾವುದು? ಆ ಸುದ್ಧಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುವುದನ್ನು ಅರಿಯುವ ಗೊಡವೆಗೆ ಹೋಗದೆ ಬಲ್ಲ ಮೂಲಗಳು ತಿಳಿಸಿವೆ ಎಂಬ ತಮ್ಮ ಕಪಟ ಮೆದುಳಿನ ವರದಿಯನ್ನು ತುರುಕಿ ಅದಕ್ಕೆ ಸ್ವಲ್ಪ ಮಸಾಲೆ ಸೇರಿಸಿ ಪ್ರಕಟಿಸಿಬಿಡುತ್ತದೆ. ಇದರಲ್ಲಿ ತನಗಾಗದ ಸಮುದಾಯದ ವ್ಯಕ್ತಿಗಳು ಒಳಗೊಂಡಿದ್ದಾರೆ ಎಂದು ಗೊತ್ತಾದ ಕೂಡಲೇ ಆ ವರದಿಗೆ ಮತ್ತಷ್ಟು ರೆಕ್ಕೆಪುಕ್ಕ ಸೇರಿಸಿ ಆ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತದೆ. ಈ ಮಾತುಗಳನ್ನು ಹೇಳುತ್ತಿರುವುದು ಕನ್ನಡ ನಾಡಿನ ಎಲ್ಲಾ ಪತ್ರಿಕೆಗಳ ಕುರಿತಲ್ಲ. ಇಂದಿಗೂ ಪತ್ರಿಕಾ ಧರ್ಮವನ್ನು ಗೌರವಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಬಯಸುವ ಪತ್ರಿಕೆಗಳು ನಮ್ಮ ನಡುವೆ ಇದೆ. ಇವುಗಳ ನಡುವೆ ಪತ್ರಿಕಾ ಧರ್ಮದ ಜೊತೆ ತಮ್ಮ ನೈತಿಕ ಮೌಲ್ಯಗಳನ್ನೂ ಗಾಳಿಗೆ ತೂರಿ ಸಮುದಾಯಗಳ ನಡುವೆ ದ್ವೇಷ ಹಚ್ಚುವ ಪತ್ರಿಕೆಗಳೂ ಹೆಚ್ಚಾಗಿವೆ.



ಇತ್ತೀಚಿಗೆ ನಡೆದ ಲವ್ ಜಿಹಾದ್ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ತಮ್ಮ ಮನೆಯ ಮಗಳು ಶೈಲಜಾ ಕಾಣೆಯಾಗಿದ್ದಾಳೆ ಎಂದು ಕ್ರೈಸ್ತ ಕುಟುಂಬವೊಂದು ಚಾಮರಾಜ ನಗರದ ಪೊಲೀಸರಿಗೆ ದೂರು ನೀಡಿ ಅವರನ್ನು ಪತ್ತೆ ಹಚ್ಚುವಂತೆ ಕರ್ನಾಟಕ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುತ್ತದೆ. ಅದರಂತೆ ಕರ್ನಾಟಕ ಪೊಲೀಸರು ತನ್ನ ಪ್ರಿಯಕರ ಅಜ್ಗರ್ ನೊಂದಿಗೆ ಪರಾರಿಯಾಗಿ ಆತನನ್ನು ವಿವಾಹವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ. ಭಾರತೀಯ ವಿವಾಹ ನೊಂದಣಿ ಸಂಹಿತೆಯಂತೆ ಅಜ್ಗರ್ 21 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದು ಆತನ ಪ್ರಿಯತಮೆ ಶೈಲಜಾ 18 ವರ್ಷಗಳಿಗಿಂತಲೂ ಮೇಲ್ಪಟ್ಟವಲಾಗಿದ್ದರೂ ಆಕೆ ತನ್ನ ಸ್ವ ಇಚ್ಛೆಯಿಂದ ತಾನು ಅಜ್ಗರ್ ನನ್ನು ಮದುವೆಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದೇನೆ ಎಂದು ಮುಚ್ಚಳಿಕೆ ಬರೆದು ಕೊಟ್ಟರೂ ಸಾಮಾನ್ಯವಾಗಿ ಇಲ್ಲಿ ಇವರ ಪರವಾಗಿ ಬರಬೇಕಿದ್ದ ತೀರ್ಪನ್ನು ಶೈಲಜಾಲ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕಾರಣ ಮುಂದೂಡಲಾಗುತ್ತದೆ. ಅದರಂತೆ ಕೆಲ ದಿನಗಳ ಮಟ್ಟಿಗೆ ಈ ಜೋಡಿ ಜೊತೆಯಾಗಿ ಇರಬಾರದೆಂದೂ ಅಷ್ಟರ ತನಕ ಈಕೆಯು ತನ್ನ ಹೆತ್ತವರೊಂದಿಗೆ ವಾಸಿಸಬೇಕೆಂದೂ ಕೋರ್ಟ್ ಆದೇಶ ನೀಡುತ್ತದೆ. ಜೊತೆಗೆ ಈಕೆಯ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕುರಿತಂತೆ ತನಿಖೆ ನಡೆಸುವಂತೆಯೂ ಆದೇಶಿಸುತ್ತದೆ.



ಅಬ್ಬಾ ಇಷ್ಟು ಸಾಕಾಗಿತ್ತು ಕನ್ನಡ ನಾಡಿನ ಕೋಮುವಾದಿ ಪತ್ರಿಕೆಗಳಿಗೆ, ತನಿಖಾ ತಂಡದ ಅಧಿಕಾರಿ ಹೈಕೋರ್ಟಿಗೆ ವರದಿ ನೀಡುವ ಮುನ್ನವೇ ಇಲ್ಲಿನ ಪತ್ರಿಕೆಗಳು ತೀರ್ಪು ನೀಡಿ ಬಿಟ್ಟಿದ್ದವು. ಕರ್ನಾಟಕ ಸೇರಿದಂತೆ ಕೇರಳ ರಾಜ್ಯದಲ್ಲಿ ಲವ್ ಜಿಹಾದಿ ಸಂಘಟನೆಗಳು ಸಕ್ರಿಯವಾಗಿವೆ. ಇವರು ಇಂತಿಷ್ಟು ಅನ್ಯ ಧರ್ಮೀಯ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಗುರಿಯೊಂದಿಗೆ ಕಾರ್ಯಾಚರಣೆಗಿಳಿಯುತ್ತಾರೆ. ಇವರಿಗೆ ಇದಕ್ಕಾಗಿ ವಿದೇಶಗಳಿಂದ ಲಕ್ಷಗಟ್ಟಲೆ ಹಣ ಬರುತ್ತದೆ. ಸ್ಥಳೀಯವಾಗಿ ಇವರಿಗೆ ಬೈಕು ಕಾರು ಮತ್ತು ಉತ್ತಮ ಉಡುಪುಗಳನ್ನು ಒದಗಿಸಲಾಗುತ್ತದೆ. ಹೀಗೆ ಬುಟ್ಟಿಗೆ ಬಿದ್ದ ಹೆಣ್ಣು ಮಕ್ಕಳನ್ನು ಮತಾಂತರಗೊಳಿಸಿ ಅವರಿಗೆ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿಗೊಂಡ ಯುವತಿಯರು ಆತ್ಮಾಹುತಿ ಬಾಂಬರುಗಳಾಗಿ ಮಾರ್ಪಾಡಾಗುತಿದ್ದಾರೆ ಎಂಬ ತಮ್ಮ ಎಂದಿನ ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಎಂಬ ಮಾಹಿತಿಯನ್ನು ಸೇರಿಸಿ ವರದಿ ತಯಾರಿಸಿ ಬಿಟ್ಟವು. ಇದನ್ನೇ ಕಾಯುತಿದ್ದ ಕೆಲವು ನಾಯಕರು ಮತ್ತು ಸಂಘಟನೆಗಳು ಈ ವಿಷಯವನ್ನು ಬೀದಿಗೆ ತಂದವು. ಬೇಟಿ ಬಚಾವೋ ಆಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಬೊಬ್ಬಿಡಲಾರಂಭಿಸಿದವು. ಒಟ್ಟಿನಲ್ಲಿ ಈ ರೀತಿಯ ವರದಿಗಳಿಂದ ನಾಗರೀಕ ಸಮಾಜ ಕಂಗೆಟ್ಟಿತ್ತು. ಇದುವರೆಗೂ ಜಿಹಾದ್ ಎಂದರೆ ಬಾಂಬು ಬಂದೂಕುಗಳನ್ನು ಹಿಡಿದು ಮಾಡುವ ದಾಳಿ ಎಂದು ಕೊಂಡಿದ್ದ ನಾಗರೀಕರೂ ಈ ಹೊಸ ಜಿಹಾದಿನ ಹೆಸರು ಕೇಳಿ ಬೆವೆತು ಹೋದರು. ಈ ಬಗ್ಗೆ ಮೊಬೈಲ್ ಫೋನಿನಲ್ಲಿ ಬಗೆಬಗೆಯ ಎಸ್.ಎಂ.ಎಸ್ ಗಳು ಹರಿದಾಡಿದವು. ಒಟ್ಟಿನಲ್ಲಿ ನಾಗರೀಕ ಸಮಾಜವೇ ಈ ರೀತಿಯ ವರದಿಗಳಿಂದ ಬೆವೆತು ಹೋಗಿದ್ದರೆ ಇದರ ನಿರ್ದೇಶಕರಾದ ಈ ಪೀತ ಪತ್ರಿಕೆಗಳ ಸಂಪಾದಕರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಮಜಾ ನೋಡುತಿದ್ದರು.



ಈ ಎಲ್ಲದರ ನಡುವೆ ಮತ್ತೆ ಕೋರ್ಟಿನ ಆದೇಶದಂತೆ ಶೈಲಜಾ ಮತ್ತೆ ಹಾಜರಾದಳು. ಕೋರ್ಟ್ ಆಕೆಯನ್ನು ಪುನಃ ಪ್ರಶ್ನಿಸಲಾಗಿ ಆಕೆ ತಾನು ಅಸ್ಗರಿನೊಂದಿಗೆ ಹೋಗುವುದಾಗಿಯೂ ತನಗೆ ಯಾವುದೇ ರೀತಿಯ ಆಮಿಷ ಒಡ್ಡಿ ಆತ ತನ್ನನ್ನು ಮದುವೆ ಆಗಿಲ್ಲವೆಂದೂ ತಾವಿಬ್ಬರೂ ಪರಸ್ಪರ ಪ್ರೀತಿಸುತಿದ್ದು ಇಬ್ಬರೂ ಇಷ್ಟಪಟ್ಟು ಮದುವೆ ಆಗಿರುವುದಾಗಿಯೂ ತಿಳಿಸಿ ಜೊತೆಗೆ ತನ್ನಿಷ್ಟದಂತೆ ತಾನು ಅಸ್ಗರಿನ ಧರ್ಮಕ್ಕೆ ಮತಾಂತರವಾಗುತ್ತಿರುವುದಾಗಿಯೂ ತಿಳಿಸಿದಳು. ಅದರಂತೆ ಘನವೆತ್ತ ನ್ಯಾಯಾಲಯ ಆಕೆಗೆ ಅಸ್ಗರಿನೊಂದಿಗೆ ಇರುವಂತೆ ತೀರ್ಪು ನೀಡಿತು. ಈ ಮಧ್ಯೆ ತನಿಖೆ ನಡೆಸಿದ ಇಲ್ಲಿನ ಪೋಲಿಸ್ ಅಧಿಕಾರಿಗಳು ಲವ್ ಜಿಹಾದ್ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲವೆಂದೂ ಇದುವರೆಗೆ ಆ ರೀತಿಯ ಯಾವುದೇ ದೂರು ರಾಜ್ಯದ ಯಾವುದೇ ಮೂಲೆಯಲ್ಲಿ ದಾಖಲಾಗಿಲ್ಲವೆಂದು ವರದಿ ನೀಡಿದರು. ಆದರೆ ಇದು ಹೆಚ್ಚಿನ ಯಾವುದೇ ಪತ್ರಿಕೆಗಳ ಮುಖಪುಟ ಸುದ್ಧಿಯಾಗಲಿಲ್ಲ. ಲವ್ ಜಿಹಾದ್ ಬಗ್ಗೆ ತನಗಿಷ್ಟ ಬಂದಂತೆ ಬರೆದ ಈ ಪೀತಪತ್ರಿಕೆಗಳು ಈಗ ಜಾಣ ಮೌನಕ್ಕೆ ಶರಣಾದವು. ಇವೆಲ್ಲರ ಮಧ್ಯೆ ಮೋಹನ್ ಕುಮಾರ್ ಎಂಬ ಕಾಮ ಜಿಹಾದಿಯ ಪತ್ತೆಯ ನಂತರ ಆತನ ಕಾಮ ಲೀಲೆಗಳಿಗೆ ಆತನ ಹತ್ಯೆಗಳಿಗೆ ಯಾವುದೇ ಟೈಟಲ್ ಕೊಡದೆ ಸರಳವಾಗಿ ಸರಣಿ ಹಂತಕ ಮೋಹನ್ ಕುಮಾರ್ ಬಂಧನ ಎಂದು ಪ್ರಕಟಿಸಿ ಕೃತಾರ್ಥವಾದವು. ಇವೆಲ್ಲಾ ನೋಡುವಾಗ ಈ ಪತ್ರಿಕೆಗಳು ಟಾಯ್ಲೆಟ್ ರೋಲ್ ಆಗಿ ಬಳಸಲೂ ನಾಲಾಯಕ್ ಎಂಬ ಮಾತುಗಳು ಅಕ್ಷರಸ ಸತ್ಯ ಎನಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ