ಶುಕ್ರವಾರ, ಮೇ 28, 2010

ಓ ದೇವರೇ ಈ ರೀತಿಯ ದುರಂತದ ಮರಣ ಇನ್ನಾರಿಗೂ ಬರದಿರಲಿ..


ಮಂಗಳೂರಿನಲ್ಲಿ ನಡೆದ ದುಬಾಯಿ - ಮಂಗಳೂರು ನಡುವೆ ಸಂಚರಿಸುವ ಏರ್ ಇಂಡಿಯಾ ವಿಮಾನದ ಅಪಘಾತ ಎಂತಹವರ ಮನಸ್ಸನ್ನೂ ನೋಯಿಸುವಂತಹದ್ದು. ಹಲವಾರು ಕನಸುಗಳನ್ನು ಹೊತ್ತು ಊರಿಗೆ ಹಿಂದಿರುಗುತ್ತಿದ್ದ ಅನಿವಾಸಿ ಭಾರತೀಯರು ಊರು ತಲುಪಿದರೂ ಮನೆ ತಲುಪಲಾಗದೆ ದುರಂತದ ಬೆಂಕಿಯಲ್ಲಿ ಬೆಂದು ತಮ್ಮವರಿಗೂ ತಮ್ಮ ಗುರುತು ಸಿಗಲಾರದಂತೆ ಸುಟ್ಟು ಕರಕಲಾಗಿ ಹೋಗಿದ್ದರು.



ಹೇಳಿ ಕೇಳಿ ಮಂಗಳೂರು ವಿಮಾನ ನಿಲ್ದಾಣ ಅಷ್ಟೇನೂ ಸುರಕ್ಷಿತವಲ್ಲದ ಬೆಟ್ಟ ಗುಡ್ಡಗಳ ನಡುವೆ ನಿರ್ಮಿಸಿದ ಕಿರಿದಾದ ರನ್ ವೇ ಯನ್ನು ಒಳಗೊಂಡ ಅಪಾಯಕಾರಿ ವಿಮಾನ ನಿಲ್ದಾಣ. ಇದು ಅಲ್ಲಿ ವಿಮಾನದ ಮೂಲಕ ಬಂದಿಳಿದವರಿಗೆ ಸಾಮಾನ್ಯವಾಗಿ ಅನುಭವವಾಗಿರುತ್ತದೆ. ವಿಮಾನ ಇಳಿಯುತ್ತಿದ್ದಂತೆ ಕಾಣುವ ಬೆಟ್ಟಗುಡ್ಡಗಳನ್ನೊಳಗೊಂಡ ವಿಮಾನ ನಿಲ್ದಾಣದ ನೋಟ ಪ್ರಯಾಣಿಕರ ಎದೆ ಜುಂ ಎನಿಸುತ್ತದೆ. ವಿಮಾನ ಭೂಸ್ಪರ್ಶವಾಗುತ್ತಿದ್ದಂತೆ ಅಲ್ಲಿ ಹಾಕುವ ಬ್ರೇಕ್ ಒಮ್ಮೆಲೇ ವಿಮಾನದ ಒಳಗಿರುವ ಪ್ರಯಾಣಿಕರನ್ನು ಎತ್ತಿನಗಾಡಿಯ ಪ್ರಯಾಣದ ನೆನಪಿಗೆ ಕೊಂಡು ಹೋಗುತ್ತದೆ. ಬ್ರೇಕ್ ಹಾಕುವಾಗ ವಿಮಾನದ ಒಳಗೆ ಅಲುಗಾಡುವ ಪರಿ ಅಂತಹದ್ದು. ಇದು ಈ ರನ್ ವೇ ಎಷ್ಟು ಅಪಾಯಕಾರಿ ಎಂಬುವದನ್ನು ಪ್ರಾಯೋಗಿಕವಾಗಿಯೇ ನಮ್ಮ ಮುಂದೆ ತೆರೆದಿಡುತ್ತದೆ. ನನ್ನ ಅನುಭವದ ಪ್ರಕಾರ ನಾನು ಅಬುಧಾಬಿ, ಶಾರ್ಜಾ, ಬೆಂಗಳೂರು, ಮುಂಬೈ, ರಿಯಾದ್, ತಬೂಕ್, ಮಂಗಳೂರು ವಿಮಾನ ನಿಲ್ದಾಣಗಳ ರನ್ ವೇ ಗಳಲ್ಲಿ ವಿಮಾನದ ಮೂಲಕ ಇಳಿದಿದ್ದೇನೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಗುವಂತಹ ಅನುಭವವೇ ಬೇರೇ.



ನನ್ನ ಪ್ರಕಾರ ಇದು ನನ್ನ ಒಬ್ಬನ ಅನುಭವವಲ್ಲ. ಸಾಧಾರಣ ಪ್ರಯಾಣಿಕರಿಗೆ ಇದರ ಅನುಭವವಾಗಿರುತ್ತದೆ. ಮೊನ್ನೆ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಮುಂಬೈ ಮೂಲದ ಗಗನ ಯಾತ್ರಿ ಈ ನಿಲ್ದಾಣದ ಅಪಾಯಕಾರಿ ರನ್ ವೇ ಬಗ್ಗೆ ತನ್ನ ಪೋಷಕರಲ್ಲಿ ಹೇಳಿ ಇಲ್ಲಿ ವಿಮಾನದ ಲ್ಯಾಂಡಿಂಗ್ ಮೊದಲು ಗಗನ ಸಖಿಯರಾದ ನಾವು ವಿಮಾನದ ಸುರಕ್ಷಿತ ಲ್ಯಾಂಡಿಂಗ್ ಗಾಗಿ ದೇವರಲ್ಲಿ ಪ್ರಾರ್ಥಿಸುತಿದ್ದೆವು ಎಂದು ಹೇಳಿದ ವಿಚಾರವನ್ನು ಆಕೆಯ ಶವ ಪಡೆಯಲು ಬಂದ ಆಕೆಯ ಪೋಷಕರು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಇದು ಈ ರನ್ ವೇಯ ಅಪಾಯಕಾರಿ ಮಟ್ಟವನ್ನು ಸೂಚಿಸುತ್ತದೆ.


ದುರಂತ ನಡೆದ ನಂತರ ವಿಮಾನ ನಿಲ್ದಾಣದ ಸುರಕ್ಷತಾ ವಿಭಾಗದ ಅಧಿಕಾರಿಗಳು ಹಾಗೂ ನೌಕರರು ಕೈಗೊಂಡ ಪರಿಹಾರ ಕ್ರಮಗಳು ಸಕಾಲಿಕವಾಗಿ ಜರುಗಿದ್ದರೆ ಇನ್ನೂ ಅನೇಕ ಜೀವಗಳನ್ನು ಉಳಿಸಬಹುದಿತ್ತು ಎಂಬುವುದು ದುರಂತ ನಡೆದ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ದುರಂತ ಸ್ಥಳಕ್ಕೆ ಓಡಿ ಹೋದ ಸ್ಥಳೀಯ ನಾಗರೀಕರ ಅಭಿಪ್ರಾಯ. ಅವರ ಪ್ರಕಾರ ವಿಮಾನ ಬಿದ್ದ ಹತ್ತು ನಿಮಿಷಗಳಲ್ಲಿ ವಿಮಾನ ನಿಲ್ದಾಣದ ರನ್ ವೇ ಮೇಲಿನಿಂದ ಎರಡು ಅಗ್ನಿಶಾಮಕ ವಾಹನಗಳು ನೊರೆಭರಿತ ನೀರನ್ನು ವಿಮಾನದ ಮೇಲೆ ಸಿಂಪಡಿಸಿದವು. ಆದರೆ ಅವು ವಿಮಾನವನ್ನು ತಲುಪಲೇ ಇಲ್ಲ . ಕೊನೆಗೆ ಅವು ಹಿಂತಿರುಗಿ ಹೋಗಿ ಇನ್ನೊಂದು ದಾರಿಯ ಮೂಲಕ ಸುಮಾರು ಇಪ್ಪತ್ತು ನಿಮಿಷದ ದುರ್ಗಮ ಹಾದಿಯ ಮೂಲಕವಾಗಿ ದುರಂತ ಸ್ಥಳಕ್ಕೆ ಬಂದವು. ಆನಂತರ ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಮತ್ತು ಕೆಲವು ಶವಗಳನ್ನು ಹೊರಗೆ ಎಳೆಯಲು ಸಾಧ್ಯವಾಯಿತು. ಇಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಸುರಕ್ಷತಾ ಕ್ರಮಗಳ ಲೋಪ ಮತ್ತು ಅವು ಅಳವಡಿಸಿಕೊಂಡ ಅವೈಜ್ಞಾನಿಕ ರೀತಿಯ ವ್ಯವಸ್ಥೆ ಎದ್ದು ಕಾಣುತ್ತದೆ. ಬೆಟ್ಟ ಗುಡ್ಡಗಳ ನಡುವೆ ಇರುವ ವಿಮಾನ ನಿಲ್ದಾಣ ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವಿಮಾನ ಗುಂಡಿಗೆ ಬೀಳುವ ಸಾಧ್ಯತೆಯೇ ಅಧಿಕ .


ಈ ಮುಂಚೆ ವೀರಪ್ಪ ಮೊಯ್ಲಿ ಪ್ರಯಾಣಿಸಿದ ವಿಮಾನ ಸಹ ಈ ರೀತಿ ಗುಂಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಅವರ ಜೀವ ಉಳಿದಿತ್ತು. ಅಂದು ಕೂಡ ಅದು ತಡೆಗೋಡೆಗೆ ಡಿಕ್ಕಿ ಹೊಡೆಯದಿದ್ದರೆ ಅವರೂ ಕೂಡ ವಿಮಾನದೊಟ್ಟಿಗೆ ಗುಂಡಿಗೆ ಬೀಳುತಿದ್ದರು. ಈ ಎಲ್ಲಾ ಘಟನೆಗಳನ್ನು ಅವರು ಈ ದುರಂತ ನಡೆಯುವ ಒಂದು ವಾರ ಮೊದಲು ನಡೆದ ನೂತನ ರನ್ ವೇಯ ಉದ್ಘಾಟನೆಯಲ್ಲೂ ನೆನಪಿಸಿಕೊಂಡಿದ್ದರು. ಹೀಗಿರುವಾಗ ವಿಮಾನ ನಿಲ್ದಾಣದ ಮೇಲಿನಿಂದ ಅಗ್ನಿಶಾಮಕ ವಾಹನಗಳು ಹಾರಿಸಿದ ನೊರೆಭರಿತ ನೀರು ಕೆಳಗಿದ ವಿಮಾನಕ್ಕೆ ತಲುಪಿಲ್ಲ ಅಂದರೆ ಇಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು ಎಷ್ಟೊಂದು ಅವೈಜ್ಞಾನಿಕ ಎನ್ನುವುದನ್ನು ಸೂಚಿಸುತ್ತದೆ. ಅದಲ್ಲದೆ ಪರ್ಯಾಯ ದಾರಿ ಇಲ್ಲದೆ ಇದ್ದ ಕಚ್ಚಾ ರಸ್ತೆಯನ್ನು ಬಳಸಿಕೊಂಡು ಬರಲು ತೆಗೆದು ಕೊಂಡ ಅಮೂಲ್ಯ ಇಪ್ಪತ್ತು ನಿಮಿಷವೂ ಸಹ ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂಬುವುದು ಪ್ರತ್ಯಕ್ಷದರ್ಶಿಗಳ ಸ್ಪಷ್ಟ ಅಭಿಪ್ರಾಯ.


ದುರಂತವೇನೋ ನಡೆದಿದೆ. ಇದಕ್ಕೆ ಕಾರಣ ಬ್ಲಾಕ್ ಬಾಕ್ಸಿನ ವರದಿ ಬಂದ ನಂತರ ಸ್ಪಷ್ಟವಾಗಿ ತಿಳಿಯಲಿದೆ. ಆದರೆ ಈ ರೀತಿಯ ದುರಂತ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಜೊತೆಗೆ ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ. ದುರಂತದಲ್ಲಿ ಮಡಿದ ಅಮಾಯಕ ನಾಗರೀಕರಿಗೆ ಅಲ್ಲಲ್ಲಿ ಶೋಕ ಸಭೆಗಳು ನಡೆಯುತ್ತಿದೆ. ಸಭೆ ಸಮಾರಂಭಗಳ ಮೂಲಕ ಜನತೆ ಅವರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ದುರಂತದ ಬಗ್ಗೆ ಮತ್ತು ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತವಾದ ತನಿಖೆ ನಡೆದು ಮೃತರ ಕುಟುಂಬಸ್ಥರಿಗೆ ಯಾವುದೇ ಅಡಚಣೆ ಇಲ್ಲದೆ ಪರಿಹಾರ ದೊರಕಿಸಿಕೊಟ್ಟರೆ ಅದು ಮಾತ್ರ ಮೃತರಿಗೆ ಸಲ್ಲಿಸುವ ನೈಜ ಶ್ರದ್ದಾಂಜಲಿಯಾಗಬಹುದು.



- ಅಶ್ರಫ್ ಮಂಜ್ರಾಬಾದ್. ಸಕಲೇಶಪುರ.

ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಮತ್ತು ಮುಸ್ಲಿಂ ಮೀಸಲಾತಿ ..


ಆಂಧ್ರ ಹೈಕೋರ್ಟ್ ಆಂಧ್ರ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ನೀಡಲು ಉದ್ದೇಶಿಸಿದ್ದ ಶೇಕಡ ನಾಲ್ಕರ ಮೀಸಲಾತಿಯನ್ನು ರದ್ದು ಪಡಿಸುತಿದ್ದಂತೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟ್ ಸರಕಾರ ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇಕಡ ಹತ್ತರಷ್ಟು ಮೀಸಲಾತಿಯನ್ನು ನೀಡುವುದಾಗಿ ಪ್ರಕಟಿಸಿದೆ. ಸಾಚಾರ್ ಸಮಿತಿಯ ಜಾರಿಗೆ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಕೆಲ ಪ್ರಗತಿಪರ ಮಾನವ ಹಕ್ಕು ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿರುವಂತೆ ಪಶ್ಚಿಮ ಬಂಗಾಳದ ಅಪ್ಪಟ ಧರ್ಮ ನಿರಪೇಕ್ಷ ಕಮ್ಯುನಿಷ್ಟ್ ಸಿದ್ಧಾಂತದ ಸರಕಾರ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಪ್ರಕಟಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಒಂದು ರೀತಿಯ ಕುತೂಹಲದ ಜೊತೆಗೆ ವಿವಾದವನ್ನೂ ಮೂಡಿಸಿದೆ.


ಆಶ್ಚರ್ಯ ಆಗುವುದು ಅದಲ್ಲ. ಇದುವರೆಗೆ ಸುಮಾರು ಮೂರು ದಶಕಗಳ ಕಾಲ ನಿರಂತರವಾಗಿ ಪಶ್ಚಿಮ ಬಂಗಾಳದ ಗದ್ದುಗೆಯನ್ನಾಲಿದ ಈ ಸರ್ಕಾರ ಇದುವರೆಗೆ ಮುಸ್ಲಿಂ ಮೀಸಲಾತಿಯ ಬಗ್ಗೆ ಸೊಲ್ಲೆತ್ತದೆ ಈಗ ಏಕಾಏಕಿ ಮೀಸಲಾತಿ ನೀಡುವುದಾಗಿ ಘೋಷಿಸಿರುವುದು. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿದೆ. ಕಮ್ಯುನಿಷ್ಟರ ಭದ್ರ ಕೋಟೆಗಳು ಮಮತಾ ಬ್ಯಾನರ್ಜಿಯ ವರ್ಚಸ್ಸಿನ ಮುಂದೆ ಈಗಾಗಲೇ ಅಲುಗಾಡತೊಡಗಿವೆ. ಬಂಡವಾಳಶಾಹಿಗಳ ವಿರೋಧಿಗಳಾಗಿದ್ದ ಕಮ್ಯುನಿಷ್ಟರು ನಂದಿ ಗ್ರಾಮದಲ್ಲಿ ಟಾಟಾ ಕಂಪೆನಿಯ ನ್ಯಾನೋ ಘಟಕಕ್ಕೆ ರೈತರ ಫಲವತ್ತಾದ ಜಾಗ ಕೊಡುವ ಭರದಲ್ಲಿ ಅಲ್ಲಿನ ರೈತರ ಮೇಲೆ ನಡೆಸಿದ ಅಧಿಕಾರಿಕ ದಾಳಿ ಇದೆಯಲ್ಲ ಅದು ಇಡೀ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ವಿರೋಧಿ ಅಲೆಯನ್ನು ಎಬ್ಬಿಸಿದೆ. ಅದೂ ಅಲ್ಲದೆ ನಂದಿಗ್ರಾಮ ಮುಸ್ಲಿಂ ಬಾಹುಳ್ಯದ ಪ್ರದೇಶ. ಅಲ್ಲಿ ಪೋಲಿಸ್ ದೌರ್ಜನ್ಯದಿಂದ ಸಂತ್ರಸ್ತರಾದವರು ಮತ್ತು ಸತ್ತವರಲ್ಲಿ ಹೆಚ್ಚಿನವರು ಮುಸ್ಲಿಮರು. ಇದು ಸಹಜವಾಗಿ ಮುಸ್ಲಿಮರನ್ನು ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ. ಜೊತೆಗೆ ಸಾಚಾರ್ ಸಮಿತಿಯ ವರದಿಯಲ್ಲಿ ದೇಶದಲ್ಲೇ ಮುಸ್ಲಿಮರು ಅತೀ ಹೆಚ್ಚು ಹಿಂದುಳಿದಿರುವ ರಾಜ್ಯ ಪಶ್ಚಿಮ ಬಂಗಾಳ ಎಂದು ಸ್ಪಷ್ಟವಾಗಿ ಹೇಳಿರುವುದು ಇದುವರೆಗೆ ಅಲ್ಲಿನ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೈಗೊಂಡ ಕಾರ್ಯಕ್ರಮಗಳು ಮತ್ತು ಅವುಗಳ ಅನುಷ್ಠಾನಕ್ಕೆ ವಹಿಸಿದ ಮುತುವರ್ಜಿಯನ್ನು ನೇರವಾಗಿ ಜನರ ಮುಂದೆ ತೆರೆದಿಟ್ಟಿದೆ.


ಇವೆಲ್ಲಾ ಕಳೆದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಕಮ್ಯುನಿಷ್ಟರು ನಿರಂತರವಾಗಿ ಗೆದ್ದು ಬರುತಿದ್ದ ಸ್ಥಾನಗಳಲ್ಲಿ ಕಮ್ಯುನಿಷ್ಟ್ ವಿರೋಧಿಗಳಾದ ಮಮತಾ ಬ್ಯಾನರ್ಜಿಯ ತಂಡ ಭರ್ಜರಿ ಜಯ ದಾಖಲಿಸಿದೆ. ಜೊತೆಗೆ ಮಾವೋವಾದಿಗಳೂ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲಿನ ಭೂಸ್ವಾಧೀನ ಪ್ರಕ್ರಿಯೆ ಸ್ವಲ್ಪ ಮಟ್ಟಿಗೆ ಕಮ್ಯುನಿಷ್ಟ್ ಸಿದ್ಧಾಂತದ ಅಡಿ ಬೇರುಗಳಂತಹ ನಾಯಕರನ್ನೇ ಪಕ್ಷದಿಂದ ದೂರ ಹೋಗುವಂತೆ ಮಾಡಿದೆ. ಹೀಗೆಲ್ಲಾ ಇರುವಾಗ ಪುನಃ ಪಕ್ಷದತ್ತ ಮುಸ್ಲಿಮರನ್ನು ಸೆಳೆಯಲು ಸಿಕ್ಕ ಅಸ್ತ್ರವೇ ಶೇಕಡಾ ಹತ್ತರ ಮೀಸಲಾತಿ.


ಯಾವುದೇ ಸಮುದಾಯಕ್ಕೆ ಮೀಸಲಾತಿ ಕೊಡುವುದು ತಪ್ಪಲ್ಲ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರಿಗೆ ಮೀಸಲಾತಿ ನೀಡುತ್ತಾ ಹೇಳಿದ್ದರು ಮೀಸಲಾತಿ ಶೋಷಿತ ಜನಾಂಗಕ್ಕೆ ಭಿಕ್ಷೆ ಅಲ್ಲ. ಅದು ಅವರ ಹಕ್ಕು ಎಂದು. ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯವನ್ನು ಮೇಲೆತ್ತಲು ಮೀಸಲಾತಿ ಅವಶ್ಯಕ. ಅದು ಆಯಾ ಜನಸಂಖ್ಯೆಯ ಪ್ರಮಾಣಕ್ಕೆ ಅನುಸರಿಸಿ ಆಗಿರಬೇಕು. ಆದರೆ ಅದು ಭಾರತದಲ್ಲಿ ಇದುವರೆಗೆ ಆಗಿಲ್ಲ. ಶೇಕಡಾ ೪೦ ರಷ್ಟಿರುವ ದಲಿತರಿಗೆ ಶೇಕಡಾ ೪೦ ರಷ್ಟು ಮೀಸಲಾತಿ ಕೊಟ್ಟರೆ ಶೇ ೧೩ ರಷ್ಟಿರುವ ಮುಸ್ಲಿಮರಿಗೆ ಶೇ ೧೩ ರಷ್ಟು ಶೇ ೪ ರಷ್ಟಿರುವ ಬ್ರಾಹ್ಮಣರಿಗೆ ಶೇ ೪ ರಷ್ಟು ಶೇ ೨೨ ರಷ್ಟಿರುವ ಹಿಂದುಳಿದವರಿಗೆ ಶೇ ೨೨ ರಷ್ಟು ಶೇ ೨ ರಷ್ಟಿರುವ ಕ್ರೈಸ್ತರಿಗೆ ಶೇ ೨ ರಷ್ಟು ಹೀಗೆ ಆಯಾ ಜಾತಿಯ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಕೊಡಬೇಕು. ಅದು ನ್ಯಾಯ ಕೂಡ. ಆ ಮೂಲಕ ಸಮಾಜದ ಎಲ್ಲಾ ವರ್ಗಗಳು ತಮ್ಮ ಪಾಲನ್ನು ಪಡೆಯಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ಈಗ ನಡೆಯುತ್ತಿರುವ ಮೀಸಲಾತಿ ರಾಜಕೀಯ ಇದೆಯಲ್ಲ ಅದು ನಂದಿ ಗ್ರಾಮ ಘಟನೆಯಿಂದ ದೂರ ಹೋದ ಮುಸ್ಲಿಮರನ್ನು ಪಕ್ಷಕ್ಕೆ ಸೆಳೆಯುವ ತಂತ್ರವೇ ಹೊರತು ಇನ್ನೇನೂ ಅಲ್ಲ.



- ಅಶ್ರಫ್ ಮಂಜ್ರಾಬಾದ್.

ಮರುಭೂಮಿಯ ನಡುವಿನಲ್ಲಿ ಕನ್ನಡಿಗನ ಸಾಹಿತ್ಯ ಪ್ರೇಮ ..


ಶ್ರೀ ಎಜಾಸುದ್ದೀನ್. ವಿಶ್ವ ಕನ್ನಡಿಗರ ಒಕ್ಕೂಟದ ಸಕ್ರಿಯ ಸದಸ್ಯ ಮತ್ತು ಉತ್ತಮ ಬರಹಗಾರ ಕೂಡ. ಇವರು ಮೂಲತಃ ಮಂಗಳೂರಿನವರು. ಇವರ ಮಾತೃಭಾಷೆ ಬ್ಯಾರಿ, ಇವರ ಕನ್ನಡದ ಜ್ಞಾನ ಹೈಸ್ಕೂಲು ವರೆಗಿನದ್ದು , ಅರಬೀ ಬಾಷೆಯಲ್ಲಿ ಪದವೀಧರ. ಜೊತೆಗೆ ಉರ್ದು ಭಾಷೆಯಲ್ಲಿ ಉತ್ತಮ ಪಾಂಡಿತ್ಯವನ್ನೂ ಹೊಂದಿದ್ದಾರೆ. ಇವರ ಪ್ರಕಾರ ಕನ್ನಡದ ಜೊತೆಗೆ ಉರ್ದು ಸಹ ಇವರ ಇಷ್ಟದ ಭಾಷೆ.ಉದ್ಯೋಗ ನಿಮಿತ್ತ ಈಗ ಕುವೈತಿನಲ್ಲಿ ನೆಲೆಸಿರುವ ಇವರು ಕುವೈತಿನಿಂದ ಹೊರಡುವ ಒಂದು ಉರ್ದು ಮಾಸಿಕದ ಉಪಸಂಪಾದಕರಾಗಿಯೂ ಸೇವೆ ಸಲ್ಲಿಸುತಿದ್ದಾರೆ.




ಇವರು ಹೇಳಿಕೊಳ್ಳುವಂತೆ ಇವರಿಗೆ ಹೆಚ್ಚಾಗಿ ಕನ್ನಡದಲ್ಲಿ ಬರೆಯುವ ಅನುಭವವಿಲ್ಲ .ತೀರಾ ಇತ್ತೀಚೆಗಷ್ಟೇ ಕನ್ನಡದಲ್ಲಿ ಬರೆಯಲಾರಂಭಿಸಿದ್ದು ಅದೂ ಸುಮಾರು ಇಪ್ಪತ್ತು ವರ್ಷಗಳ ವಿಯೋಗದ ಬಳಿಕ ಎಂದು ಹೇಳುವ ಇವರ ಕನ್ನಡ ಬರಹ ಮತ್ತು ಅದರಲ್ಲಿರುವ ಬರವಣಿಗೆಯ ಶೈಲಿಯನ್ನು ನೋಡಿದರೆ ನಿಜಕ್ಕೂ ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಜ್ಞಾನದ ಬೆಳಕಿನಲ್ಲಿ ಅಜ್ಞಾನದ ಕತ್ತಲನ್ನು ದೂರಮಾಡಿ ಒಂದು ಆರೋಗ್ಯಪೂರ್ಣ ಸ್ವಸ್ಥ ಸಮಾಜದ ಸ್ಥಾಪನೆಯಲ್ಲಿ ನನ್ನದೂ ಪಾಲು ಇರಲಿ ಎಂಬ ಉದ್ದೇಶದೊಂದಿಗೆ ಇವರು ದೂತ ಎಂಬ ಬ್ಲಾಗ್ ಒಂದನ್ನು ರಚಿಸಿದ್ದಾರೆ . ಇಂತಹ ಒಂದು ಕನ್ನಡ ಸಾಹಿತ್ಯ ಪ್ರೇಮಿ ನಮ್ಮ ಒಕ್ಕೂಟದ ಸದಸ್ಯನಾಗಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ.ಇವರ ಬರಹಗಳನ್ನು ಓದಲು ಇವರ ಬ್ಲಾಗ್ http://ipcblogger.net/ijaz/ ಗೆ ಭೇಟಿ ಕೊಡಿ