ಶನಿವಾರ, ಅಕ್ಟೋಬರ್ 24, 2009

ಅಮಾಯಕನ ಕೊಲೆ...


ಯಾವಾಗಲಾದರೊಮ್ಮೆ ಮಂಗಳೂರಿನ ಬಂದರು ರಸ್ತೆಗೆ ಭೇಟಿ ಕೊಟ್ಟರೆ ಆ ಮುಖವನ್ನೊಮ್ಮೆ ನೋಡಲು ಸಿಗುತ್ತಿತ್ತು. ಸ್ವಲ್ಪ ವಯಸ್ಸಾಗಿರುವ ಶಾಂತ ಸ್ವಭಾವದ ವ್ಯಕ್ತಿ ಅವರು. ಧಾರ್ಮಿಕವಾಗಿಯೂ ನಂಬಿಕೆಯುಳ್ಳವರು. ದೈವ ಭಕ್ತರೂ ಕೂಡ. ಬಂದರು ರಸ್ತೆಯಲ್ಲಿ ನನ್ನ ಚಿಕ್ಕಪ್ಪನ ಮಗನ ಅಂಗಡಿ ಇತ್ತು . ಅದರ ಮುಂದೆ ಮಂಗಳೂರಿನ ಪ್ರತಿಷ್ಠಿತ ಬದ್ರಿಯಾ ಕಾಲೇಜು ಇರುವುದು. ಅಲ್ಲಿ ಯಾವಾಗಲಾದರೊಮ್ಮೆ ಇವರನ್ನು ಕಾಣಸಿಗುತ್ತಿತ್ತು. ಸರಳ, ಶಾಂತ ಸ್ವಾಭಾವದ ವ್ಯಕ್ತಿಯಾದ ಇವರ ವೈಯುಕ್ತಿಕ ಪರಿಚಯ ಇಲ್ಲದಿದ್ದರೂ ಮುಖ ಪರಿಚಯವಿತ್ತು. ಆದರೆ ಅವರ ಹೆಸರು ಗೊತ್ತಿರಲಿಲ್ಲ. ಆದರೆ ಮೊನ್ನೆ ಅಂತರ್ಜಾಲದಲ್ಲಿ ವಾರ್ತೆಗಳನ್ನು ಓದುತಿದ್ದಾಗಲೇ ಆ ವ್ಯಕ್ತಿಯ ಹೆಸರು ಗೊತ್ತಾದದ್ದು.



ಹೆಸರು ಹಸನ್ ಸಾಹೇಬ್. ಸರಿ ಸುಮಾರು ಅರವತ್ತು ವರ್ಷದ ವಯಸ್ಸಿನವರು.ಬದ್ರಿಯಾ ಕಾಲೇಜಿನ ಕಾವಲುಗಾರ. ಅವರನ್ನು ಯಾರೋ ದುಷ್ಕರ್ಮಿಗಳು ಕಬ್ಬಿಣದ ರಾಡ್ ಮತ್ತಿತರ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಿದ್ದರು. ಮೇಲ್ನೋಟಕ್ಕೆ ಕೊಲೆಯ ಉದ್ದೇಶ ಪಕ್ಕದ ಅಂಗಡಿಯೊಂದನ್ನು ಕಳ್ಳರು ಲೂಟಿ ಮಾಡುವಾಗ ಇವರು ತಡೆಯಲು ಹೋದ ಕಾರಣದಿಂದ ನಡೆದಿರಬಹುದು ಎಂಬುವುದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಬಂದ ಸತ್ಯ . ಆದರೆ ಇದರ ನಿಜವಾದ ಹಿನ್ನಲೆ ಆರೋಪಿಗಳನ್ನು ಬಂಧಿಸಿದ ನಂತರವಷ್ಟೇ ಗೊತ್ತಾಗಬಹುದು .ಆದರೆ ಅಷ್ಟೇನೂ ದೃಢ ಕಾಯರಲ್ಲದ ಈ ವ್ಯಕ್ತಿಯನ್ನು ಆ ದುಷ್ಟರು ಕೊಲೆ ಮಾಡಬೇಕಿರಲಿಲ್ಲ . ಸ್ವಲ್ಪ ದೂಡಿದರೆ ಆಚೆ ಕಡೆ ಬಿದ್ದು ಬಿಡುತ್ತಿದ್ದರು. ತನ್ನ ಜೀವನದ ಸಂಧ್ಯಾ ಕಾಲದಲ್ಲಿದ್ದ ಈ ವ್ಯಕ್ತಿಯ ಕೊಲೆ ನಿಜಕ್ಕೂ ಮನನೋಯಿಸುವಂತಹದ್ದು. ಆದರೆ ವಿಧಿ ಈ ರೀತಿ ಇತ್ತೇನೋ...? ಇನ್ನು ಮುಂದೆ ಬದ್ರಿಯಾ ಕಾಲೇಜಿನ ಮುಂದೆ ಕಾಣುತಿದ್ದ ಆ ಹಸನ್ಮುಖಿ ಹಸನ್ ಸಾಹೇಬರ ಮುಖ ಮಾತ್ರ ಯಾವಾಗಲೂ ಕಾಣಸಿಗಲಾರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ