ಶನಿವಾರ, ಅಕ್ಟೋಬರ್ 24, 2009

ನಮ್ಮನ್ನಗಲಿದ ಖ್ಯಾತ ಚಿತ್ರಕಲಾ ಶಿಕ್ಷಕ ಬಿ.ಜಿ.ಮಹಮ್ಮದ್.. (ಒಂದು ನೆನಪು)

ಬಿ.ಜಿ.ಮಹಮ್ಮದ್ ದಕ್ಷಿಣ ಕನ್ನಡ ಜಿಲ್ಲೆಯ ಕಲಾಲೋಕದಲ್ಲೊಂದು ಚಿರಪರಿಚಿತ ಹೆಸರು.ಚಿತ್ರಕಲೆಯನ್ನು ತನ್ನ ಹವ್ಯಾಸವನ್ನಾಗಿಸಿ ಜೊತೆಗೆ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ಎಂಬ ಚಿತ್ರಕಲಾ ಶಾಲೆಯನ್ನು ಮಂಗಳೂರಿನ ಕದ್ರಿಯಲ್ಲಿ ತೆರೆದು ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿಯನ್ನು ನೀಡಿ ಅಸಂಖ್ಯಾತ ಶಿಷ್ಯರನ್ನು ಸಂಪಾದಿಸಿದ ಬಿ.ಜಿ.ಮಹಮ್ಮದರು ಇತ್ತೀಚಿಗೆ ಅಂದರೆ ಕೆಲವು ತಿಂಗಳ ಹಿಂದೆ ನಿಧನರಾದರು. ಅವರ ಕುರಿತು ಕಿರು ಮಾಹಿತಿ ನೀಡುವ ಉದ್ದೇಶದಿಂದ ಈ ಲೇಖನ ಬರೆದಿದ್ದೇನೆ .



ಮಂಗಳೂರಿನ ಸರ್ಕಾರಿ ವೈದ್ಯರಾಗಿದ್ದ ಡಾ: ಮಹಮ್ಮದಾಲಿ ಮತ್ತು ರಹೀಮಾಬಿಯವರ ಮಗನಾಗಿ ಅಕ್ಟೋಬರ್ 11ನೆಯ ತಾರೀಖು 1920 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಬಿ.ಜಿ.ಮಹಮ್ಮದರ ಪೂರ್ಣ ಹೆಸರು ಬೋಳೂರು ಗುಲಾಂ ಮಹಮ್ಮದ್.ಚಿಕ್ಕಂದಿನಿದಲೂ ಚಿತ್ರಕಲೆಯಡೆಗೆ ಆಕರ್ಷಿತರಾಗಿದ್ದ ಬಿ.ಜಿ.ಮಹಮ್ಮದರು ಎಸ್.ಎಸ್.ಎಲ್.ಸಿ.ವಿಧ್ಯಾಬ್ಯಾಸದ ನಂತರ ಉಡುಪಿಯ ಖ್ಯಾತ ಚಿತ್ರಕಲಾ ಗುರುಗಳಾಗಿದ್ದ ಪಡುಕೋಣೆ ಶ್ರೀನಿವಾಸ ರಾವ್ ರವರ ಕಲಾಶಾಲೆಯಲ್ಲಿ ತರಬೇತಿ ಪಡೆದು ಅವರ ಅಚ್ಚುಮೆಚ್ಚಿನ ಶಿಷ್ಯರಾದರು.ಆನಂತರ ಚಿತ್ರಕಲಾ ಲೋಕದಲ್ಲಿ ತನ್ನ ಛಾಪು ಮೂಡಿಸತೊಡಗಿದ ಬಿ.ಜಿ.ಮಹಮ್ಮದರು ಅಸಂಖ್ಯಾತ ಚಿತ್ರಗಳನ್ನು ಬಿಡಿಸುವುದರ ಮೂಲಕ ತನ್ನ ಜೀವನವನ್ನು ಕಲಾ ಸೇವೆಗೆ ಮುಡಿಪಾಗಿಟ್ಟರು.
1967ರಲ್ಲಿ ಮೈಸೂರಿನ ಅಖ್ತರ್ ಬೇಗಂ ಎಂಬುವವರನ್ನು ವಿವಾಹವಾದ ಇವರಿಗೆ ಮೂವರು ಗಂಡು ಮಕ್ಕಳು.ಹಿರಿಯ ಮಗ ಶಬ್ಬಿರ್ ಅಲಿ ಚಿಲಿಂಬಿ ಎಂಬಲ್ಲಿ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಚಿತ್ರಕಲಾ ತರಬೇತಿ ನೀಡುತಿದ್ದರೆ ಮತ್ತೊಬ್ಬ ಮಗ ಸಮೀರ್ ಅಲಿ ಕದ್ರಿಯ ಬಿ.ಜಿ.ಎಂ.ಸ್ಕೂಲ್ ಆಫ್ ಆರ್ಟ್ಸ್ ಅನ್ನು ಮುನ್ನಡೆಸುತಿದ್ದಾರೆ.ಇವರ ಮತ್ತೊಬ್ಬ ಮಗ ಕಬೀರ್ ಅಲಿ ಆರ್ಕಿಟೆಕ್ ಡಿಸೈನರ್ ಆಗಿದ್ದಾರೆ.


ತುಂಬು ಸಂಸಾರದಲ್ಲಿ ಬಾಳಿ ಬದುಕಿದ ಬಿ.ಜಿ.ಮಹಮ್ಮದರು ಚಿತ್ರಕಲಾ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ಇದುವರೆಗೆ 40,000 ಕ್ಕಿಂತಲೂ ಹೆಚ್ಚು ವಿಧ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿ ನೀಡಿದ್ದು ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ.ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಲಾವಿದರಲ್ಲೊಬ್ಬರಾದ ಬಿ.ಜಿ.ಮಹಮ್ಮದರ ನಿಧನ ಚಿತ್ರ ಕಲಾಲೋಕಕ್ಕೊಂದು ತುಂಬಲಾರದ ನಷ್ಟ ಎಂದೇ ಹೇಳಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ