ಶನಿವಾರ, ಅಕ್ಟೋಬರ್ 24, 2009

ಬಾಡದಿರು ಸ್ನೇಹದ ಹೂವೇ.....

ಪ್ರೀತಿ,ಪ್ರೇಮ,ಸ್ನೇಹ,ಕರುಣೆ ಇವು ಮಾನವನ ಪ್ರತ್ಯೇಕವಾದ ಗುಣಗಳು. ಇವುಗಳ ಸಮ್ಮಿಲನವನ್ನೇ ಮಾನವೀಯತೆ ಎಂದು ಕರೆದರೆ ತಪ್ಪಾಗಲಾರದು ಎಂಬುವುದು ನನ್ನ ಅಭಿಪ್ರಾಯ. ಪ್ರೀತಿ,ಪ್ರೇಮ,ವಿಶ್ವಾಸದಿಂದಲೇ ಒಂದು ಸುಭದ್ರ ಸಮಾಜವನ್ನು ಕಟ್ಟಲು ಸಾಧ್ಯವಿದ್ದು ಒಂದು ನಾಡಿನ ಅಭಿವೃದ್ಧಿಯಲ್ಲಿ ಇವು ಮಹತ್ತರ ಪಾತ್ರವನ್ನು ವಹಿಸುತ್ತದೆ ಮತ್ತು ವಹಿಸಿದ ಉದಾಹರಣೆಗಳೂ ಸಾಕಷ್ಟಿವೆ.ಆದರೆ ಏಕೋ ಏನೋ ಈ 2009 ನೇ ವರ್ಷದಲ್ಲಿ ಎಲ್ಲೋ ಒಂದು ಕಡೆ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಕೆಟ್ಟ ದಿನಗಳು ಬರುತ್ತಿದೆಯೇ ಎಂಬ ಭಾವನೆಯನ್ನು ಇತ್ತೀಚೆಗೆ ಕನ್ನಡ ನಾಡಿನಾದ್ಯಂತ ನಡೆಯುತ್ತಿರುವ ಘಟನೆಗಳು ಮನಸ್ಸಿನಲ್ಲಿ ಮೂಡಿಸುತ್ತಿರುವುದಂತೂ ಸತ್ಯ.ಪ್ರೀತಿ ಪ್ರೇಮ ಸೌಹಾರ್ದಕ್ಕೆ ಹೆಸರಾಗಿದ್ದ, ಕುವೆಂಪುರಂತಹ ಮಾನವತಾವಾದಿಗಳು, ಬಸವಣ್ಣನವರಂತಹ ವಚನಕಾರರು, ಸಂತ ಶಿಶುನಾಳಶರೀಫರಂಥ ಸೌಹಾರ್ದಪ್ರಿಯರು ಜನ್ಮತಳೆದ ಈ ನಾಡಿನಲ್ಲಿ ಇಂದು ಮಾನವೀಯತೆಯ ವಿರೋಧಿ ಶಕ್ತಿಗಳು ವಿಜ್ರಂಭಿಸುತ್ತಿರುವುದನ್ನು ನೋಡಿದರೆ ಎಲ್ಲೋ ಒಂದು ಕಡೆ ನಾವು ಮಾನವೀಯತೆಯನ್ನು ಮರೆಯುತ್ತಿದ್ದೇವೆಯೇ ಎಂಬ ಸಂಶಯವನ್ನು ಮೂಡಿಸುತ್ತದೆ.



ನಿಜ.. ಇತ್ತೀಚಿಗೆ ಕನ್ನಡ ನಾಡಿನಲ್ಲಿ ನಡೆದ ಘಟನೆಗಳು ಮಾನವನ ಸ್ವಭಾವಕ್ಕೆ ತಕ್ಕುದಾದುದಲ್ಲ. ಮಹಿಳೆಯರ ಮೇಲೆ ನಡೆದ ದಾಳಿ, ಧರ್ಮದ ಹೆಸರಿನಲ್ಲಿ ಧಾರ್ಮಿಕ ಮತಾಂಧರು ನಡೆಸುತ್ತಿರುವ ಧರ್ಮ ವಿರೋಧಿ ಪುಂಡಾಟಗಳು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹೆಸರನ್ನು ಕಳಂಕಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಮನುಷ್ಯನ ನಡುವೆ ಶಾಂತಿ ಹಾಗೂ ಸೌಹಾರ್ದತೆಯನ್ನು ಮೂಡಿಸಬೇಕಾದ ಧರ್ಮಗಳು ಇದು ಮಾನವರ ನಡುವೆ ಕಂದಕ ಮೂಡಿಸುತ್ತಿದೆ. ಪರಸ್ಪರ ಒಟ್ಟಿಗೆ ಜೀವಿಸುತಿದ್ದ ಜನ ಧರ್ಮದ ಹೆಸರಿನಲ್ಲಿ ವಿಭಜನೆಗೊಳ್ಳುತ್ತಿರುವುದು ಧಾರ್ಮಿಕ ಅಧಃಪತನದ ಸಂಕೇತ ಎಂದರೂ ತಪ್ಪಾಗಲಾರದು.



ಧರ್ಮಗಳು ಮಾನವನ ಕಲ್ಯಾಣಕ್ಕಾಗಿ ಸ್ಥಾಪಿತವಾಗಿವೆ. ಯಾವುದೇ ಧರ್ಮ ದ್ವೇಷವನ್ನು ಬಿತ್ತುವುದಿಲ್ಲ. ದ್ವೇಷವನ್ನು ಪ್ರೀತಿಯಿಂದ ಗೆಲ್ಲು ಎಂದೇ ಜಗತ್ತಿನ ಎಲ್ಲಾ ಧರ್ಮಗಳು ಅದರ ಅನುಯಾಯಿಗಳಿಗೆ ಕರೆ ಕೊಡುತ್ತದೆ. ಆದರೆ ಧರ್ಮಗಳಲ್ಲಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಮತಾಂಧ ಶಕ್ತಿಗಳು ಧರ್ಮದ ವ್ಯಾಖ್ಯಾನವನ್ನೇ ತಿರುಚಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವುದನ್ನು ಕಾಣಬಹುದು. ಮನುಷ್ಯ ಮನುಷ್ಯನ ನಡುವೆ ಭಾಂದವ್ಯ ಮೂಡಿಸಬೆಕಿದ್ದ ಬೇಕಿದ್ದ ಧಾರ್ಮಿಕ ಆಚರಣೆಗಳು ಇಂದು ಒಡಕನ್ನು ಮೂಡಿಸುತ್ತಿದೆ. ದೀಪಾವಳಿಯ ದಿನದಲ್ಲಿ ಹಿಂದೂಗಳ ಜೊತೆ ಸೇರಿ ಹಬ್ಬ ಆಚರಿಸುತ್ತಾ ಪಟಾಕಿ ಹೊಡೆಯುತಿದ್ದ ಮುಸ್ಲಿಮರು, ಈದ್ ಹಬ್ಬಗಳಂದು ಮುಸ್ಲಿಮರ ಮನೆಗಳಲ್ಲಿ ಬಂದು ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತಿದ್ದ ಹಿಂದೂಗಳು, ಕ್ರೈಸ್ತರ ಸಾಂತ್ ಮೇರಿ ಹಬ್ಬದ ದಿನ ಇಗರ್ಜಿಗಳಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಲ್ಲುತಿದ್ದ ಎಲ್ಲಾ ಧರ್ಮದ ಜನರು ಈ ರೀತಿಯ ದೃಶ್ಯಗಳು ಇಂದು ಕ್ರಮೇಣ ಕಣ್ಮರೆಯಾಗುತ್ತಿವೆ. ಮನುಷ್ಯ ನಿಧಾನವಾಗಿ ಧರ್ಮದ ಅಮಲಿನಲ್ಲಿ ಮಾನವೀಯತೆಯನ್ನು ಮರೆಯುತ್ತಿರುವುದು ಈ ನಾಡಿನ ದುರಂತ ಎಂದೇ ಹೇಳಬಹುದು.



ಆದರೂ ಒಡೆದು ಹೋಗುತ್ತಿರುವ ಸಮಾಜವನ್ನು ರಕ್ಷಿಸಲು ಬೇಕಾದಷ್ಟು ಜನರು ಅಂದರೆ ಸೌಹಾರ್ದ ಪ್ರಿಯರು ಇಂದಿಗೂ ನಮ್ಮ ನಡುವೆ ಇದ್ದಾರೆ. ಜೊತೆಗೆ ಕನ್ನಡ ಖ್ಯಾತ ಕವಿಗಳೂ, ದಾರ್ಶನಿಕರೂ, ವಚನಕಾರರೂ ಬರೆದ ಸೌಹಾರ್ದ ಸಾಹಿತ್ಯಗಳೂ ಬೇಕಾದಷ್ಟಿವೆ. ಆದರೆ ಇವುಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ಪ್ರಯತ್ನಗಳು ನಿರೀಕ್ಷಿತ ಮಟ್ಟದ ವೇಗದಲ್ಲಿ ನಡೆಯುತ್ತಿಲ್ಲ ಎಂಬುವುದು ನಿಜವೇ ಆಗಿದ್ದರೂ ಅದಕ್ಕೆ ಬೇಕಾದಂತಹ ಪ್ರಯತ್ನಗಳನ್ನು ಮಾನವ ಪ್ರೇಮಿಗಳು ಮಾಡುತ್ತಿರುವುದಂತೂ ಸತ್ಯ. ಕ್ರಮೇಣ ಕನ್ನಡ ನಾಡು ಕವಿಗಳು ಕಂಡ ಚೆಲುವ ಕನ್ನಡ ನಾಡಾಗಲಿ. ಸರ್ವ ಜನಾಂಗದ ಶಾಂತಿಯ ತೋಟವಾಗಲಿ. ಬಾಡುತ್ತಿರುವ ಸ್ನೇಹದ ಹೂವು ಮತ್ತೆ ಅರಳಲಿ ಎಂದು ಹಾರೈಸೋಣ. ಜೊತೆ ಜೊತೆಗೆ ನಾವುಗಳೂ ಕನ್ನಡ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಮುಂದಾಗೋಣ... ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ