ಶನಿವಾರ, ಅಕ್ಟೋಬರ್ 24, 2009

ಶುಭಾಶಯ ವಿನಿಮಯ ಸಾಂಕೇತಿಕವಾಗುತ್ತಿದೆಯೇ.....

ಕಳೆದ ವರ್ಷದ ವ್ಯಾಲಂಟೈನ್ ದಿನದ ವಿವಾದದ ಬಗ್ಗೆ ತಮಗೆ ಗೊತ್ತಿರಬಹುದು. ಒಂದು ಕಡೆ ವಿರೋಧಿಸುವವರಿದ್ದರೆ ಮತ್ತೊಂದೆಡೆ ಪ್ರೀತಿಸಲು ಬೆಂಬಲಿಸುವವರೂ ಸಾಕಷ್ಟಿದ್ದರು.ಈ ಎಲ್ಲಾ ಪ್ರಹಸನಗಳ ನಡುವೆ ಕೊನೆಗೂ ಪ್ರೀತಿ ಗೆದ್ದಿತು ಅಂತ ನಾಡಿನ ಪತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳು ಬಿಂಬಿಸಿದವು.ಅದು ನಿಜವೇ ಆಗಿದ್ದು ಇದುವರೆಗೆ ಹಿಂಸೆ ಮತ್ತು ಅಹಿಂಸೆಗಳ ನಡುವೆ ಜಗತ್ತಿನಲ್ಲಿ ಕೊನೆಗೆ ಗೆಲುವು ಕಂಡಿದ್ದು ಅಹಿಂಸೆಯೇ.ಪ್ರೇಮಿಗಳಿಗೆ ಬೆಂಬಲ ಸೂಚಿಸಲು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸೇರಿದ್ದ ನಾಡಿನ ಕೆಲ ಪ್ರಗತಿಪರರು,ರೈತ ಮತ್ತು ಕನ್ನಡ ಹೋರಾಟಗಾರರು ವ್ಯಾಲಂಟೈನ್ ದಿನಕ್ಕೆ ವಿಶೇಷ ಅರ್ಥ ನೀಡಿ ಈ ದಿನ ಕೇವಲ ಹುಡುಗ ಹುಡುಗಿಯರು ಪ್ರೀತಿಸುವ ದಿನವಲ್ಲ.ತಂದೆ,ತಾಯಿ.ಅಣ್ಣ,ತಮ್ಮ,ತಂಗಿ, ಗೆಳೆಯರು ಹೀಗೆ ಯಾರು ಬೇಕಾದರೂ ಈ ದಿನವನ್ನು ಆಚರಿಸಬಹುದು ಎಂದು ಹೇಳುವ ಮೂಲಕ ಈ ದಿನಕ್ಕೊಂದು ಹೊಸ ವ್ಯಾಖ್ಯೆಯನ್ನೇ ನೀಡಿಬಿಟ್ಟರು.

ಇದರಿಂದ ಉತ್ತೇಜಿತರಾಗಿಯೋ ಏನೋ ನನ್ನ ಮಿತ್ರರೊಬ್ಬರು ನನಗೊಂದು ವ್ಯಾಲಂಟೈನ್ ದಿನದ ಶುಭಾಶಯ ಕೋರಿ ಪುಟ್ಟ ಎಸ್.ಎಂ.ಎಸ್. ಒಂದನ್ನು ಕಳುಹಿಸಿದರು. ಈಗಂತೂ ಭಾರತದಲ್ಲಿ ದೂರವಾಣಿ ಸಂಸ್ಥೆಗಳು ಎಸ್.ಎಂ.ಎಸ್. ಸೇವೆಯನ್ನು ಉಚಿತವಾಗಿ ನೀಡುತ್ತಿರುವುದರಿಂದ ದಿನಕ್ಕೆ ಮೊಬೈಲಿಗೆ ಬರುವ ಎಸ್.ಎಂ.ಎಸ್.ಗಳಿಗೇನೂ ಬರವಿಲ್ಲ.ಅದೂ ಅಲ್ಲದೆ ಈಗಿನ ಜನರಂತೂ ತಿಂಗಳಿಗೆ ಆಗಾಗ ಬರುವ ವಿಶೇಷ ದಿನಗಳಂದು ಒಂದೊಂದು ಉಚಿತ ಎಸ್.ಎಂ.ಎಸ್.ಕಳುಹಿಸಿ ಶುಭ ಕೋರುವುದು ಒಂದು ಸಂಪ್ರದಾಯವೇ ಆಗಿಬಿಟ್ಟಂತಿದೆ.ಏನೇ ಆಗಲೀ ಶುಭಾಶಯ ಕೋರಿದ ಮಿತ್ರನಿಗೆ ನಾನು ಋಣಿ.
ಆದರೆ ಈ ಶುಭಾಶಯ ವಿನಿಮಯ ಭಾವನಾತ್ಮಕ ಸಂಬ್ಹಂಧಗಲಿಲ್ಲಧ ಕೇವಲ ಒಂದು ಸಾಂಕೇತಿಕವಾದ ಕ್ರಿಯೆಯಾಗಿ ಮಾರ್ಪಾಡಾಗಿದೆಯೇ ಎಂಬ ಸಂಶಯ ಮೂಡುತ್ತದೆ.


ಏಕೆಂದರೆ ನನಗೆ ಗೊತ್ತಿರುವಂತೆ ಕೇವಲ 10 ರಿಂದ 12ವರ್ಷಗಳ ಹಿಂದಿನ ಮಾತು. ಆಗ ನಾವು ಹೊಸ ವರುಷದ ಸ್ವಾಗತಕ್ಕೆ ಡಿಸೆಂಬರ್ ತಿಂಗಳಿನಲ್ಲೇ ಸಜ್ಜಾಗುತಿದ್ದೆವು. ಆಗಲೇ ನಾವು ಶುಭಾಶಯ ಕೋರಬೇಕಾದ ಗೆಳೆಯರ, ಕುಟುಂಬಿಕರ ಪಟ್ಟಿ ಸಿದ್ಧವಾಗಿಬಿಡುತಿತ್ತು.ಡಿಸೆಂಬರ್ ತಿಂಗಳ ಮಧ್ಯದಲ್ಲೇ ನಗರದ ಗ್ರೀಟಿಂಗ್ ಕಾರ್ಡ್ ಅಂಗಡಿಗಳಿಗೆ ಹೋಗಿ ಅಲ್ಲಿ ನಮಗೆ ಬೇಕಾದ ಗ್ರೀಟಿಂಗ್ ಕಾರ್ಡುಗಳನ್ನು ಆಯ್ಕೆ ಮಾಡಿ ಅದನ್ನು ಮನೆಗೆ ತಂದು ಅದರಲ್ಲಿ ಕಳುಹಿಸಬೇಕಾದವರಿಗೆ ಶುಭಾಶಯಗಳನ್ನು ಮತ್ತು ಅವರ ವಿಳಾಸವನ್ನು ಬರೆದು ಅದನ್ನು ಜೋಪಾನವಾಗಿ ಪೋಸ್ಟ್ ಮಾಡುತಿದ್ದೆವು.ಈ ಪ್ರಕ್ರಿಯೆಗೆ ಸಾಮಾನ್ಯವಾಗಿ ಕನಿಷ್ಠ 10 ರಿಂದ 15 ದಿನಗಳನ್ನು ತೆಗೆದುಕೊಳ್ಳುತಿತ್ತು.ಈ ದಿನಗಳಲ್ಲಿ ನಮ್ಮ ಮನದಲ್ಲಿ ನಾವು ಕಾರ್ಡ್ ಕಳುಹಿಸಬೇಕಾದ ಗೆಳೆಯರು ಮತ್ತು ಕುಟುಂಬಿಕರು ಮನೆ ಮಾಡಿರುತಿದ್ದರು.ಕಾರ್ಡ್ ಕೊಳ್ಳುವಾಗಿನಿಂದ ಹಿಡಿದು ಅದನ್ನು ಪೋಸ್ಟ್ ಮಾಡುವವರೆಗೆ ನಮ್ಮ ಮನಸ್ಸಿನಲ್ಲಿ ಅವರ ನೆನಪುಗಳು ಆಗಾಗ ಬರುತಿತ್ತು.



ಆದರೆ ಈಗ ಕಾಲ ಬದಲಾಗಿದೆ.ಗ್ರೀಟಿಂಗ್ ಕಾರ್ಡುಗಳ ಬಳಕೆ ಕಡಿಮೆ ಆಗಿದೆ.ಈಗಂತೂ ಮೊಬೈಲ್ ಯುಗ. ವಿಶೇಷ ದಿನದಂದು ಬೆಳಗೆದ್ದು ಆಯಾ ದಿನದ ಶುಭಾಶಯ ಕೋರಿ ಒಂದು ಎಸ್.ಎಂ.ಎಸ್. ಮಾಡಿದರಾಯಿತು.ಇಲ್ಲದಿದ್ದರೆ ಇನ್ನಾರೋ ಕಳುಹಿಸಿದ ಎಸ್.ಎಂ.ಎಸ್. ಅನ್ನು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಿದರಾಯಿತು.ಈ ರೀತಿಯ ಶುಭಾಶಯ ವಿನಿಮಯದಿಂದ ಸಿಗುವ ಆನಂದ ಕ್ಷಣಿಕವಾಗಿದ್ದು ಇದೊಂದು ಯಾಂತ್ರಿಕ ಕ್ರಿಯೆಯಂತೆ ನಡೆದು ಹೋಗುತ್ತದೆ.



ಕಾಲ ಬದಲಾದಂತೆ ಜನಗಳೂ ಬದಲಾಗಿದ್ದಾರೆ. ಇದು ವೇಗದ ಕಾಲ. ಜನಗಳಿಗೆ ಸಮಯವೇ ಇಲ್ಲ...ಎಲ್ಲವೂ ಫಾಸ್ಟ್ ...ಜನಗಳ ನಡುವೆ ಕುಟುಂಬಿಕರ ನಡುವೆ ಈ ಹಿಂದೆ ಇದ್ದ ಭಾಂಧವ್ಯ ಈಗಿಲ್ಲ.ಹಿಂದಿನಂತೆ ಹಬ್ಬ ಹರಿದಿನಗಳಂದು ನೆಂಟರಿಷ್ಟರ, ಗೆಳೆಯರ ಮನೆಗಳಿಗೆ ಭೇಟಿ ಕೊಡುವ ಸಂಪ್ರದಾಯವಂತೂ ಹಳೆಯದಾಗಿಬಿಟ್ಟಿದೆ. ಇತರ ದಿನಗಳಲ್ಲಿ ಹೋಗಲಿ ಹಬ್ಬದಂದೂ ವಿಶೇಷ ಆಹಾರದ ತಯಾರಿಯೂ ಕಡಿಮೆ. ಅದಕ್ಕೂ ಫಾಸ್ಟ್ ಫುಡ್.ಹೇಗೆ ಈಗಿನ ಜನಗಳು ವೇಗದ ಜೀವನದ ಅನುಕೂಲಕ್ಕಾಗಿ ಸತ್ವರಹಿತವಾದ ಜಂಕ್ ಫುಡ್, ಫಾಸ್ಟ್ ಫುಡ್ ಗಳನ್ನು ನೆಚ್ಚಿ ಕೊಂಡಿದ್ದಾರೋ ಅದೇ ರೀತಿ ಈಗಿನ ವೇಗದ ಶುಭಾಶಯಗಳೂ ಹಿಂದಿನ ಗ್ರೀಟಿಂಗ್ ಕಾರ್ಡುಗಳ ಶುಭಾಶಯಗಳಂತೆ ಸತ್ವಭರಿತವಾಗಿರದೆ ಸತ್ವರಹಿತವಾಗಿರುವುದಂತೂ ಸತ್ಯ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ