ಶನಿವಾರ, ಅಕ್ಟೋಬರ್ 24, 2009

ಮಮತೆಯ ಮಡಿಲು

ತಾಯ್ನಾಡಿನಿಂದ ಮಿತ್ರನೊಬ್ಬ ಕಳುಹಿಸಿದ್ದ ಎಸ್.ಎಂ.ಎಸ್. ಕೆಲ ಕ್ಷಣ ಮನಸ್ಸನ್ನು ತಾಯಿಯ ಮಡಿಲಲ್ಲಿ ಕಳೆದ ಬಾಲ್ಯದ ನೆನಪುಗಳೆಡೆಗೆ ಕೊಂಡೊಯ್ದಿತ್ತು. ಆ ಎಸ್.ಎಂ.ಎಸ್.ತಾಯಿಯ ಮಮತೆಯ ಕುರಿತಾಗಿದ್ದು ಅದರಲ್ಲಿ ತಾಯಿಯ ಮಮತೆಯ ಕುರಿತು ಹೀಗೆ ಬರೆದಿತ್ತು.

ಒಮ್ಮೆ ಮಳೆಗಾಲದ ಸಮಯದಲ್ಲಿ ಪುಟ್ಟ ಮಗಳು ಮಳೆಯಲ್ಲಿ ನೆನೆದು ಕೊಂಡು ಮನೆಗೆ ಬರುತ್ತಾಳೆ. ಇದನ್ನು ನೋಡಿದ ಆಕೆಯ ಅಣ್ಣ ಆಕೆಗೆ ಏಕೆ ನೀನು ಛತ್ರಿ ತೆಗೆದುಕೊಂಡು ಹೋಗಿಲ್ಲ. ನೋಡು ಆದ ಕಾರಣ ನೀನು ಮಳೆಯಲ್ಲಿ ನೆನೆದು ಕೊಂಡು ಬರಬೇಕಾಯಿತು ಎಂದು ಗದರಿಸುತ್ತಾನೆ. ಅಲ್ಲೇ ಪಕ್ಕದಲ್ಲಿದ್ದ ಆಕೆಯ ಅಕ್ಕ ಸಹ ಅವನ ಮಾತಿಗೆ ದನಿಗೂಡಿಸಿ ಮಳೆ ನಿಲ್ಲುವ ವರೆಗೆ ರಸ್ತೆಯ ಬದಿಯ ಯಾವುದಾದರೊಂದು ಸ್ಥಳದಲ್ಲಿ ನಿಂತು ಮಳೆ ನಿಂತ ನಂತರ ಬರಬೇಕಾಗಿತ್ತು ಎಂದು ಇವಳ ವಿರುದ್ಧ ಹರಿಹಾಯ್ದರೆ ಇವಳ ತಂದೆಯೂ ಸಹ ಮಳೆಯಲ್ಲಿ ನೆನೆದು ಒಮ್ಮೆ ನಿನಗೆ ಶೀತ ಆಗಿ ಜ್ವರ ಬಂದು ಮಲಗಿದರೆ ನಿನಗೆ ಗೊತ್ತಾಗುತ್ತದೆ ಎಂದು ಇವಳನ್ನು ಹಿಯಾಲಿಸುತ್ತಾನೆ. ಆದರೆ ಅದೇ ಸಂಧರ್ಭದಲ್ಲಿ ಅಲ್ಲಿದ್ದ ಆಕೆಯ ತಾಯಿ ತನ್ನ ತನ್ನ ಸೆರಗಿನಿಂದ ಮಗಳ ತಲೆಯನ್ನು ಒರೆಸುತ್ತಾ ಮಗಳ ವಿರುದ್ಧ ಹರಿಹಾಯದೆ ಮಗಳು ನೆನೆಯಲು ಕಾರಣವಾದ ಮಳೆಯ ವಿರುದ್ಧವೇ ಹರಿಹಾಯುತ್ತಾಳೆ. ಇದುವೇ ತಾಯಿಯ ಪ್ರೀತಿ. ಇದುವೇ ತಾಯಿಯ ಮಮತೆ.

ನಿಜ.. ತಾಯಿಯ ಪ್ರೀತಿಯೇ ಅಂತಹದ್ದು. ತಾಯಿಯ ಪ್ರೀತಿಯ ಮುಂದೆ ಇನ್ನಾರ ಪ್ರೀತಿಯೂ ಸರಿಸಾಟಿಯಾಗಿ ನಿಲ್ಲಲಾರದು. ತನ್ನ ಪುಟ್ಟ ಕಂದಮ್ಮನನ್ನು ತನ್ನ ಒಡಲಲ್ಲಿ ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಯವ್ವನದ ಬಹುಪಾಲು ಜೀವನವನ್ನು ತನ್ನ ಮಕ್ಕಳ ಆರೈಕೆಯಲ್ಲಿ ಕಳೆಯುವ ತಾಯಿಯ ತ್ಯಾಗ ಬಹುದೊಡ್ಡದು. ತನಗೆ ತನ್ನ ಮನೆಯಲ್ಲಿ ಸಂಕಷ್ಟ ಇದ್ದರೂ ಅದನ್ನು ಮಕ್ಕಳ ಬಳಿ ತೋರಿಸದೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಆಹಾರ ತಯಾರಿಸಿ ಅದನ್ನು ತನ್ನ ಮಕ್ಕಳಿಗೆ ಕೊಟ್ಟು ಮಿಕ್ಕುಳಿದರೆ ತಾನು ತಿಂದು ಇಲ್ಲದಿದ್ದರೆ ಹಸಿದ ಹೊಟ್ಟೆಯಲ್ಲೇ ಮಲಗುವ ತಾಯಂದಿರೇ ಹೆಚ್ಚು. ತಾಯಿಯ ಜೀವನವೇ ಅಂತಹದ್ದು. ತಾಯಿಯ ಕುರಿತು ಮತ್ತು ಆಕೆಯ ತ್ಯಾಗದ ಕುರಿತು ಸಂಪೂರ್ಣವಾಗಿ ಬರೆಯಲು ಅಸಾಧ್ಯ ಎಂಬ ನಂಬಿಕೆ ನನ್ನದು. ತಾಯಿಯ ಮಹಿಮೆ ಹಾಗೆ ಇದೆ. ಇದನ್ನು ಪದಗಳಿಂದ ಬರೆದು ಅಥವಾ ಮಾತುಗಳಿಂದ ವರ್ಣಿಸಿ ಹೇಳಲು ಅಸಾಧ್ಯ ಎಂದು ನಾನು ಭಾವಿಸಿದ್ದೇನೆ.

ತನ್ನ ಜೀವನದ ಬಹುಪಾಲು ಸಮಯವನ್ನು ಮಕ್ಕಳ ಆರೈಕೆಯಲ್ಲಿ ಕಳೆದ ತಾಯಿ ತನ್ನ ಮಕ್ಕಳು ಬೆಳೆದು ದೊಡ್ಡವರಾಗಿ ಸಮಾಜದಲ್ಲಿ ಹೆಸರು ಮಾಡಬೇಕು. ಒಳ್ಳೆಯವರಾಗಿ ಬಾಳಬೇಕು ಎಂದು ಕನಸು ಕಾಣುವುದು ಸ್ವಾಭಾವಿಕ. ಆದರೆ ಆ ತಾಯಿಯ ಮಕ್ಕಳು ಬೆಳೆದು ದೊಡ್ಡವರಾದ ನಂತರ ಆಕೆಯ ಬೇಕು ಬೇಡಗಳಿಗೆ ಸ್ಪಂದಿಸದೇ ಆಕೆ ಇವರಿಗೆ ಒಂದು ಭಾರ ಎಂಬ ಕಲ್ಪನೆ ಇಂದಿನ ಆಧುನಿಕ ಮನುಷ್ಯರೆನಿಸಿಕೊಂಡ ಕೆಲವರಿಗೆ ಬರುತ್ತಿರುದನ್ನು ನಾವು ಕಾಣಬಹುದಾಗಿದೆ. ಇದರ ಪರಿಣಾಮವೇ ಇಂದು ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ದಾಶ್ರಮಗಳು. ತಮ್ಮನ್ನು ತನ್ನ ಮಡಿಲಲ್ಲಿ ಹೊತ್ತು ಬೆಳೆಸಿದ ತಾಯಿ ಇಂದು ಹೈಟೆಕ್ ಸಿಟಿಗಳಲ್ಲಿ ಫ್ಯಾನ್ಸಿ ಹೆಂಡತಿ ಮಕ್ಕಳೊಂದಿಗೆ ವಾಸಿಸುವ ಆಕೆಯ ಮಗನಿಗೆ ಒಂದು ರೀತಿಯ ಭಾರವಾಗಿ ಕಾಣುತ್ತಾಳೆ. ಆದ ಕಾರಣ ಆಕೆಯ ಆರೈಕೆಯನ್ನು ತಾನು ನೋಡಿ ಕೊಳ್ಳುವ ಬದಲು ಯಾವುದಾರೊಂದು ವೃದ್ದಾಶ್ರಮಕ್ಕೆ ಆಕೆಯನ್ನು ಸೇರಿಸಿ ಆತ ತನ್ನ ಕೈತೊಳೆದು ಕೊಳ್ಳುತ್ತಾನೆ. ಇದು ಇಂದು ಸಮಾಜದಲ್ಲಿ ಉನ್ನತರೆನಿಸಿಕೊಂಡ ಕೆಲವು ವ್ಯಕ್ತಿಗಳು ಮಾಡುತ್ತಿರುವ ಮಾತೃ ಸೇವೆ.. ನಿಜಕ್ಕೂ ನಾಚಿಕೆಯಾಗಬೇಕು ಇವರಿಗೆ.

ಯಾವ ತಾಯಿಯನ್ನು ನಮ್ಮ ಸಮಾಜ ಗೌರವ ಆದರಗಳಿಂದ ಕಾಣುತಿತ್ತೋ ಅದೇ ತಾಯಿಯನ್ನು ಇಂದಿನ ಬಹುಪಾಲು ಮಕ್ಕಳು ಬೆಳೆದು ದೊಡ್ಡವರಾದ ನಂತರ ತಿರಸ್ಕರಿಸುವ ಪರಿಸ್ಥಿತಿ ಬಂದಿರುವುದು ಸಮಾಜದ ಅಧಪತನಕ್ಕೆ ಸಾಕ್ಷಿ ಎಂದೇ ಹೇಳಬಹುದು. ವೃದ್ದಾಶ್ರಮದಲ್ಲಿರುವ ತಾಯಿಯನ್ನು ಹಬ್ಬ ಹರಿದಿನಗಳಂದು ಹೆಂಡತಿ ಮಕ್ಕಳ ಜೊತೆ ಹೋಗಿ ಕಂಡು ಬಂದು ತಾವು ಏನೋ ಮಹಾನ್ ಮಾತೃ ಸೇವೆ ಮಾಡಿದ್ದೇವೆ ಎಂದು ಭಾವಿಸುವವರೂ ನಮ್ಮಲ್ಲಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳ ಹುಟ್ಟಿದ ಹಬ್ಬ ಮತ್ತು ಇನ್ನಿತರ ಆಚರಣೆಗಳ ನೆಪದಲ್ಲಿ ತಾಯಿ ಇರುವ ವೃದ್ದಾಶ್ರಮದಲ್ಲಿ ಅನ್ನದಾನ ಏರ್ಪಡಿಸಿ ತಾಯಿಯ ಮೇಲಿನ ಕಪಟ ಪ್ರೀತಿ ತೋರ್ಪಡಿಸುವವರೂ ಇದ್ದಾರೆ. ಯಾವ ತಾಯಿ ಇವರಿಗೆ ನಡೆಯಲು ಆಶಕ್ತರಾದಾಗ ಹೊತ್ತು ಕೊಂಡು ಇವರ ಆರೈಕೆ ಮಾಡಿದಲೋ ಅದೇ ತಾಯಿ ಆಕೆ ನಡೆಯಲು ಆಶಕ್ತರಾದಾಗ ಆಕೆಯ ಸೇವೆ ಮಾಡದೆ ಆಕೆಯನ್ನು ವೃದ್ದಾಶ್ರಮಕ್ಕೆ ಸೇರಿಸುವ ಇಂದಿನ ಅಧುನಿಕ ಜನರ ಆಧುನಿಕ ಕಲ್ಪನೆ ತಾಯ್ತನಕ್ಕೆ ಮಾಡುತ್ತಿರುವ ಅಪಮಾನ ಎಂದೇ ಹೇಳಬಹುದು.

ತಾಯಿಯ ಕುರಿತು ಎಲ್ಲಾ ಧರ್ಮದ ಧರ್ಮ ಗ್ರಂಥಗಳಲ್ಲೂ ಆಕೆಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ವೈದಿಕ ಧರ್ಮದಲ್ಲಿ ಮಾತೃ ದೇವೋಭವ ಎಂದರೆ ಇಸ್ಲಾಂ ಧರ್ಮ ನಿನ್ನ ತಾಯಿಯ ಪಾದದಡಿ ನಿನಗೆ ಸ್ವರ್ಗವಿದೆ ಎಂದು ಹೇಳುತ್ತದೆ. ಇನ್ನಿತರ ಧರ್ಮಗಳಲ್ಲೂ ತಾಯಿಯ ಕುರಿತಾದ ಈ ರೀತಿಯ ವ್ಯಾಖ್ಯೆಗಳಿವೆ. ತಾಯಿಗಿಂತ ಬಂಧುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬ ನಾಣ್ಣುಡಿ ನಮ್ಮ ನಡುವೆ ಇಂದಿಗೂ ಜನಪ್ರಿಯ. ನಿಜಕ್ಕೂ ತಾಯಿಯನ್ನು ಪ್ರೀತಿಸದ ಜನ ಆಕೆಯ ವೃದ್ದಾಪ್ಯದಲ್ಲಿ ಆಕೆಯನ್ನು ಆರೈಕೆ ಮಾಡದ ಜನ ಮನುಷ್ಯರಾಗಿದ್ದರೂ ಮನುಷ್ಯರೆನಿಸಿಕೊಳ್ಳಲು ಸಾಧ್ಯವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ