ಶನಿವಾರ, ಅಕ್ಟೋಬರ್ 31, 2009

ಲವ್+ ಕಾಮ ಜಿಹಾದ್ + ಹತ್ಯೆಯ ಸುತ್ತ ಒಂದು ಸುತ್ತು.



ಜಗತ್ತಿನ ಯಾವುದೇ ಗ್ರಂಥದಲ್ಲೂ ಸಿಗದಂತಹ ಪದವನ್ನು ಇತ್ತೀಚಿಗೆ ಕೇರಳ ಮತ್ತು ಕರ್ನಾಟಕದ ಕೆಲ ಮಾಧ್ಯಮಗಳು ಸೃಷ್ಟಿಸಿದವು. ಅದುವೇ ಲವ್ ಜಿಹಾದ್. ಇದುವರೆಗೆ ಜಿಹಾದ್ ಎಂದರೆ ಕೇವಲ ಬಾಂಬು, ಬಂದೂಕುಗಳನ್ನು ಹಿಡಿದು ಮಾಡುವ ದಾಳಿ ಎಂದು ಜಗತ್ತಿಗೆ ಸಾರಿದ ಈ ಮಾಧ್ಯಮಗಳು ಈಗ ಅದರ ಮುಂದೆ ಪ್ರೀತಿಯನ್ನು ಸೇರಿಸುವುದರ ಮೂಲಕ ಇದಕ್ಕೊಂದು ವಿಚಿತ್ರ ತಿರುವು ನೀಡಲು ಪ್ರಾರಂಭಿಸಿದವು.


ಏನಿದು ಲವ್ ಜಿಹಾದ್... ಕೆಲ ಸಂಘಟನೆಗಳ ಪ್ರಕಾರ ಮುಸ್ಲಿಂ ಸಮುದಾಯದ ಯುವಕರು ಹಣ ಮತ್ತು ಪ್ರೀತಿಯ ಆಮಿಷವೊಡ್ಡಿ ಅನ್ಯ ಸಮುದಾಯದ ಯುವತಿಯರನ್ನು ಮರಳು ಮಾಡಿ ತಮ್ಮ ಬುಟ್ಟಿಗೆ ಹಾಕಿಕೊಂಡು ಆನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳಿಸುತಿದ್ದಾರೆ. ಹೀಗೆ ಮತಾಂತರ ಗೊಂಡ ಯುವತಿಯರಿಗೆ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ. ಇದನ್ನೇ ಲವ್ ಜಿಹಾದ್ ಎನ್ನಲಾಗುತ್ತದೆ.ಇದು ಈ ಸಂಘಟನೆಗಳು ಲವ್ ಜಿಹಾದಿಗೆ ನೀಡಿದ ವ್ಯಾಖ್ಯಾನ.
ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಲವ್ ಜಿಹಾದಿಗಳ ಬಂಧನ ಆಗಬೇಕು ಎಂದು ಕೆಲ ಸಂಘಟನೆಗಳು ನಿದ್ರೆ ಮಾಡುತಿದ್ದ ಕರ್ನಾಟಕದ ಪೋಲೀಸರ ಮುಂದೆ ಪ್ರತಿಭಟನೆ ನಡೆಸಿ ನೀವು ನಿದ್ರೆ ಮಾಡಿದ್ದು ಸಾಕು ಇನ್ನಾದರೂ ಎಚ್ಚರಗೊಳ್ಳಿ ಎಂದು ಬೊಬ್ಬಿಟ್ಟವು.ಇದೇ ವಿಷಯದ ಕುರಿತು ಕೆಲ ಮಾಧ್ಯಮಗಳು ಕಪೋಕಲ್ಪಿತ ಕೆಲ ವರದಿಗಳನ್ನು ಪ್ರಕಟಿಸಿದವು. ಈ ರೀತಿಯಾಗಿ ಒಂದು ಸಮುದಾಯವನ್ನು ಗುರಿಯಾಗಿಸಿ ಅವರ ಮೇಲೆ ಆರೋಪ ಹೊರಿಸುತಿದ್ದ ಸಂಧರ್ಭದಲ್ಲಿ ಸಿಕ್ಕಿ ಬಿದ್ದವನೇ ಲವ್+ಕಾಮ ಜಿಹಾದಿ ಮೋಹನ ಆಲಿಯಾಸ್ ಮೋಹನ ಮೊಗೆರ.


ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿದ್ದ ಈತ ಪ್ರವೃತ್ತಿಯಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಹೆಣ್ಣು ಮಕ್ಕಳ ಪಾಲಿಗೆ ಕಾಮ ಪಿಶಾಚಿಯಾಗಿದ್ದ. ತನ್ನ ಮೋಹಕ ನಗು ಮತ್ತು ವರಸೆಯ ಮಾತುಗಳಿಂದ ಬಡ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿ ಕೊಳ್ಳುತಿದ್ದ ಈತ ಆನಂತರ ಅವರನ್ನು ಲೈಂಗಿಕ ಕ್ರಿಯೆಗೆ ಬಳಸಿ ಕೊನೆಗೆ ದೂರದ ಊರಿನಲ್ಲಿ ಸಯನೈಡ್ ಕೊಟ್ಟು ಕೊಲ್ಲುತಿದ್ದ. ಹೀಗೆ ಬಲಿಯಾದವರ ಸಂಖ್ಯೆ ಪೊಲೀಸರಿಗೆ ದೊರೆತ ಮಾಹಿತಿ ಪ್ರಕಾರ ೨೩. ಅದರಲ್ಲಿ ೧೯ ಪ್ರಕರಣಗಳನ್ನು ಈತ ಒಪ್ಪಿಕೊಂಡಿದ್ದಾನೆ. ಪುಣ್ಯಾತ್ಮ ಮೋಹನನ ಕಾಮ ಪೀಪಾಸಿಗೆ ಬಲಿಯಾದ ಹೆಣ್ಣು ಮಕ್ಕಳು ಎಷ್ಟು ಎಂಬ ಲೆಕ್ಕ ಖುದ್ದು ಆತನಿಗೇ ಗೊತ್ತಿಲ್ಲವಂತೆ. ಹೀಗೆ ಅಮಾಯಕ ಹೆಣ್ಣು ಮಕ್ಕಳು ಈತನ ಕಾಮ ಜಿಹಾದಿಗೆ ದೂರದ ಊರುಗಳಿಗೆ ಹೋಗಿ ಬಲಿಯಾಗುತಿದ್ದರೆ ಇತ್ತ ಕೆಲ ಸಂಘಟನೆಗಳು ಇದರ ಬಗ್ಗೆ ಬೇರೆಯೇ ರೀತಿಯ ವ್ಯಾಖ್ಯಾನ ನೀಡಿ ಇದಕ್ಕೆ ಲವ್ ಜಿಹಾದ್ ಎಂಬ ಹೆಸರು ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತಿದ್ದವು.



ಅದುವರೆಗೂ ಸುಮ್ಮನಿದ್ದ ಪೊಲೀಸರು ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ಆರಂಭವಾದ ನಂತರ ಒಮ್ಮೆಲೇ ಮೈಮೇಲೆ ದೇವರು ಬಂದವರಂತೆ ಎಚ್ಚರಗೊಂಡು ಈ ಬಗ್ಗೆ ತನಿಖೆಯನ್ನು ಆರಂಭಿಸಿಯೇ ಬಿಟ್ಟರು. ಆಗ ಸಿಕ್ಕವನೇ ಈ ಮೋಹನ ಎಂಬ ಕಾಮದ ಕ್ರಿಮಿ. ಈತನ ಬಂಧನದಿಂದ ಹುಡುಗಿಯರು ಕಾಣೆಯಾಗಿ ಎಲ್ಲಿ ಹೋದರು ಎಂಬ ಪ್ರಶ್ನೆಗೆ ಉತ್ತರ ಅದಾಗಲೇ ಸಿಕ್ಕಿತ್ತು. ತಮ್ಮ ಮಕ್ಕಳು ಯಾವನೊಂದಿಗೋ ಓಡಿ ಹೋಗಿ ಜಾತಿ ಕೆಟ್ಟವಲಾಗಿ ಜೀವಿಸಿರಬಹುದು ಎಂದು ಕೊಂಡ ಮಾತಾಪಿತರಿಗೆ ಈತನ ಬಂಧನದ ನಂತರ ತಮ್ಮ ಮಕ್ಕಳು ಜಾತಿಯ ಬದಲು ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದದ್ದು.



ಕರ್ನಾಟಕ ಪೊಲೀಸರು ತಡವಾಗಿಯಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದಾಗಿ ಅನೇಕ ಹೆಣ್ಣು ಮಕ್ಕಳ ಮಾನ ಮತ್ತು ಪ್ರಾಣ ಉಳಿದಿದೆ. ಜೊತೆಗೆ ಈ ವಿಷಯವನ್ನು ದೊಡ್ಡದು ಮಾಡಿ ಇದಕ್ಕೊಂದು ಹೆಸರು ಕೊಟ್ಟು ಕೋಮು ಬಣ್ಣ ಕೊಡಲು ಹೊರಟಿದ್ದ ಕೊಮುವಾದಿಗಳಿಗೂ ಪೊಲೀಸರು ಈ ಬಂಧನದ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ.
ಇನ್ನು ಬಾಕಿ ಇರುವುದು ಕಾನೂನು ಪ್ರಕ್ರಿಯೆ. ಒಂದೋ ಈತನಿಗೆ ಗಲ್ಲಾಗಬಹುದು ಇಲ್ಲವೇ ಈತ ನಿರಪರಾಧಿ ಎಂದು ಬಿಡುಗಡೆ ಹೊಂದಲೂ ಬಹುದು. ಇದಕ್ಕೆ ಕೆಲವು ಕರಿಕೋಟು ತೊಟ್ಟ ವಕೀಲರಿದ್ದಾರೆ. ನ್ಯಾಯದ ಕಣ್ಣಿಗೆ ಮಣ್ಣೆರಚಿ ಇಂತಹ ಹಲವಾರು ದುಷ್ಟರು ಬಿಡುಗಡೆ ಹೊಂದಿದ್ದಾರೆ. ಆದರೆ ಈ ವಿಷಯದಲ್ಲಿ ಹಾಗಾಗಲು ಬಿಡಬಾರದು. ಈತನಿಗೆ ಸೂಕ್ತ ಶಿಕ್ಷೆ ಆದಾಗಲೇ ಈತನ ಕಾಮ ಜಿಹಾದಿಗೆ ಬಲಿಯಾದ ಆ ಹೆಣ್ಣು ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ