ಶನಿವಾರ, ಅಕ್ಟೋಬರ್ 31, 2009

ಯಡ್ಡಿ - ರೆಡ್ಡಿ ಜಗಳದ ನಡುವೆ ಕನ್ನಡಮ್ಮನ ರಾಜ್ಯೋತ್ಸವ....


ನಾಡಿನ ಜನತೆ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ ರಾಜ್ಯದ ರಾಜಕೀಯದಲ್ಲಿ ಉಂಟಾದ ಬಿರುಗಾಳಿಯಿಂದಾಗಿ ರಾಜಕಾರಣಿಗಳು ರಾಜ್ಯೋತ್ಸವಕ್ಕಿಂತಲೂ ಹೆಚ್ಚಾಗಿ ರಾಜಕೀಯ ಬದಲಾವಣೆಗಳ ಬಗ್ಗೆ ಹೆಚ್ಚು ಚಿಂತಿತರಾಗಿರುವುದು ಈ ಬಾರಿಯ ರಾಜ್ಯೋತ್ಸವದ ವೈಶಿಷ್ಟ್ಯ ಅನ್ನಬಹುದು. ಅದು ಕನ್ನಡ ನಾಡಿನ ಜನತೆಯ ಪಾಲಿಗೆ ದುರದೃಷ್ಟಕರವೂ ಹೌದು. ಈಗಾಗಲೇ ರಾಜ್ಯಾದ್ಯಂತ ಉಂಟಾದ ಅಕಾಲಿಕ ಮಳೆ ಮತ್ತು ನೆರೆಯಿಂದಾಗಿ ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಬೀದಿಪಾಲಾಗಿದ್ದರೆ ಅಲ್ಲಿ ಹಬ್ಬುತ್ತಿರುವ ಸಾಂಕ್ರಾಮಿಕ ರೋಗಗಳಿಂದ ಪ್ರತಿದಿನ ನೂರಾರು ಜನರು ರೋಗ ಪೀಡಿತರಾಗುತಿದ್ದಾರೆ. ನೆರೆ ಪೀಡಿತ ಜನರ ಕಷ್ಟ ದುಖಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಕಾರ್ಯೋನ್ಮುಖರಾಗಬೇಕಿದ್ದ ಸರ್ಕಾರ ಮತ್ತು ರಾಜಕಾರಣಿಗಳು ಆ ಬಗ್ಗೆ ಚಿಂತಿಸುವುದನ್ನು ಬಿಟ್ಟು ಈ ಸಂಧರ್ಭದಲ್ಲಿ ಕುರ್ಚಿ ಕಿತ್ತಾಟದಲ್ಲಿ ತೊಡಗಿರುವುದು ಪ್ರಜ್ಞಾವಂತ ನಾಗರಿಕರು ಸರ್ಕಾರದ ಬಗ್ಗೆಯೇ ಅಸಹ್ಯ ಪಡುವಂತಾಗಿದೆ.


ನೆರೆ ಬಂದ ಕೂಡಲೇ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರ ನೀಡುವ ನೆರವಿನ ಬಗ್ಗೆ ವಾದ ವಿವಾದ ನಡೆಸಿದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಆ ಕ್ಷಣ ನಾಡಿನ ಜನರ ಮತ್ತು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾದವು. ಇದೇ ಸಂಧರ್ಭವನ್ನು ರಾಜಕೀಯವಾಗಿ ಬಹು ಚಾಣಾಕ್ಷತೆಯಿಂದ ಉಪಯೋಗಿಸಿಕೊಂಡ ಯಡಿಯೂರಪ್ಪ ಪಾದ ಯಾತ್ರೆ ನಡೆಸುವ ಮೂಲಕ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಮಾಡುವುದರ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಈ ಮೂಲಕ ಜನಾಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಇವರ ಈ ಕಾರ್ಯಕ್ರಮ ಒಂದು ರೀತಿಯಲ್ಲಿ ಜನ ಮನ್ನಣೆಗೂ ಪಾತ್ರವಾಯಿತು. ಅದಕ್ಕೆ ಅಲ್ಲಿ ಹರಿದು ಬಂದ ಕೋಟ್ಯಾಂತರ ರೂಪಾಯಿಗಳೇ ಸಾಕ್ಷಿ. ನಾಡಿನ ಮಾಧ್ಯಮಗಳು ಪೈಪೋಟಿಗಿಳಿದವರಂತೆ ಈ ಪಾದಯಾತ್ರೆಯ ಬಗ್ಗೆ ರಂಗು ರಂಗಿನ ಸುದ್ಧಿಗಳನ್ನು ಪ್ರಕಟಿಸಿದವು. ಆ ಕ್ಷಣಗಳಲ್ಲಿ ಜನತೆಯ ಪಾಲಿಗೆ ಯಡಿಯೂರಪ್ಪ ನಿಜವಾದ ಹೀರೋ ತರಹ ಕಾಣಿಸಿಕೊಂಡರು. ಆದರೆ ಅದೆಲ್ಲಾ ಕೆಲವೇ ದಿನಗಳಲ್ಲಿ ಮಣ್ಣುಪಾಲಾಯಿತು.



ಇನ್ನೇನು ನೆರೆ ಪೀಡಿತ ಸಂತ್ರಸ್ತರ ಪುನರ್ವಸತಿ ಆರಂಭವಾಗುತ್ತದೆ ಅಂದು ಕೊಂಡಾಗಲೇ ರಾಜ್ಯದ ರಾಜಕೀಯದಲ್ಲಿ ಯಡ್ಡಿ ಮತ್ತು ರೆಡ್ಡಿಗಳ ನಡುವಿನ ರಾಜಕೀಯ ಕದನ ಆರಂಭವಾಯಿತು. ಯಾವ ಸರ್ಕಾರ ತನ್ನ ಪ್ರಜೆಗಳ ನೆರವಿಗೆ ಧಾವಿಸಬೇಕಿತ್ತೋ ಯಾವ ಮುಖ್ಯಮಂತ್ರಿ ತನ್ನ ಪ್ರಜೆಗಳಿಗಾಗಿ ಬೆಂಗಳೂರಿನ ರಾಜ ಬೀದಿಗಳಲ್ಲಿ ಡಬ್ಬ ಹಿಡಿದು ಸಂತ್ರಸ್ತರ ನೆರವಿಗೆ ಹಣ ಸಂಗ್ರಹ ಮಾಡಿದರೋ ಆ ಮುಖ್ಯಮಂತ್ರಿ ನೆರೆ ಸಂತ್ರಸ್ತ ಜನಗಳ ನಡುವೆ ಹೋಗಿ ಪರಿಹಾರ ಕಾರ್ಯ ಕೈಗೊಳ್ಳುವ ಬದಲು ತನ್ನ ಕುರ್ಚಿ ಉಳಿಸಲಿಕ್ಕಾಗಿ ವಿಧಾನ ಸೌಧ ಮತ್ತು ಖಾಸಗಿ ರೆಸಾರ್ಟುಗಳಲ್ಲಿ ಕುಳಿತು ಸರ್ಕಾರವನ್ನು ಹೇಗೆ ಉಳಿಸಬೇಕು ಎಂದು ಚರ್ಚಿಸತೊಡಗಿದರು. ಪಕ್ಕದ ಆಂಧ್ರದಲ್ಲಿ ಅಲ್ಲಿನ ನೂತನ ಮುಖ್ಯಮಂತ್ರಿ ರೋಸಯ್ಯ ತನ್ನ ಅನುಭವದ ಕೊರತೆಯ ನಡುವೆಯೂ ನೆರೆ ಪರಿಸ್ಥಿತಿಯನ್ನು ಎದುರಿಸಿದ ರೀತಿಯಿದೆಯಲ್ಲ ಅದು ಮೆಚ್ಚುವಂತಹದು. ಬಹುಶ ದಿವಂಗತ ರಾಜಶೇಖರ ರೆಡ್ಡಿಯವರೂ ಇಷ್ಟು ಸಮರ್ಥವಾಗಿ ಈ ನೆರೆ ಪರಿಸ್ಥಿಯನ್ನು ನಿಭಾಯಿಸುತಿದ್ದರೋ ಎಂಬ ಸಂಶಯವೂ ಮೂಡುವಂತೆ ಬಹು ಚಾಣಾಕ್ಷತೆಯಿಂದ ಇಡೀ ಸರ್ಕಾರವನ್ನೇ ನೆರೆ ಪೀಡಿತ ಸಂತ್ರಸ್ತರ ನಡುವೆ ಕೊಂಡೊಯ್ದರು. ಅಲ್ಲಿ ಈ ವಿಷಯದ ಕುರಿತು ಪಾದಯಾತ್ರೆಯಂತಹ ರಾಜಕೀಯ ಗಿಮಿಕ್ ಗಳು ನಡೆಯಲಿಲ್ಲ. ಸರ್ಕಾರದ ಖಜಾನೆಯಲ್ಲಿದ್ದ ಜನರ ಹಣವನ್ನೇ ಜನರ ಕಲ್ಯಾಣಕ್ಕಾಗಿ ಬಳಸಿಕೊಂಡರು.ಆದರೆ ಇಲ್ಲಿ ನಡೆದದ್ದು ಅದಕ್ಕೆ ತದ್ವಿರುದ್ದ.ಇಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಈ ವಿಷಯದಲ್ಲಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುತ್ತಾ ಕಾಲಹರಣ ಮಾಡಿದರೇ ವಿನಹ ನೆರೆ ಪೀಡಿತರ  ಸಂಕಷ್ಟಕ್ಕೆ ನೇರವಾಗಿ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾದರು.



ಈ ಎಲ್ಲಾ ರಾಜಕೀಯ ದೊಂಬರಾಟಗಳ ನಡುವೆ ನಿಜವಾದ ರೀತಿಯಲ್ಲಿ ಕನ್ನಡ ನಾಡಿನ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕೆಲ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು. ಮಠ, ಮಸೀದಿ, ಚರ್ಚುಗಳು ಇಂತಿಷ್ಟು ಮನೆ ನಾವು ಕಟ್ಟಿ ಕೊಡುತ್ತೇವೆ ಎಂದು ಹೇಳಿದವು. ನಾಡಿನ ಅನೇಕ ಸಂಘಟನೆಗಳು ತಮ್ಮ ಪ್ರತಿನಿಧಿಗಳನ್ನು ಆ ನೆರೆ ಪೀಡಿತ ಜನರ ಸೇವೆಗೆ ಕಳುಹಿಸಿದವು.ಸರ್ಕಾರ ಕಚ್ಚಾಡುತಿದ್ದಾಗ ಸುಮ್ಮನೆ ಕೂರದ ತಮ್ಮ ಸಹೋದರರ ನೆರವಿಗೆ ಧಾವಿಸಿದ ಈ ಕನ್ನಡ ನಾಡಿನ ಸಂಘಟನೆಗಳ ಕಾರ್ಯ ಮೆಚ್ಚುವಂತಹದ್ದೆ. ಒಂದು ರೀತಿಯಲ್ಲಿ ನಾಡಿನ ಸಂಘಟನೆಗಳು ಮತ್ತು ಮಠ ಮಂದಿರ,ಮಸೀದಿ,ಚರ್ಚುಗಳು ಪರ್ಯಾಯ ಸರ್ಕಾರದ ಮಾದರಿಯಲ್ಲಿ ಜನರ ಸೇವೆಗೆ ಧಾವಿಸಿದವು ಎಂದರೂ ತಪ್ಪಾಗಲಾರದು.


ಈ ಎಲ್ಲಾ ಸಮಸ್ಯೆಗಳ ನಡುವೆ ನಾಳೆ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತಿದ್ದೇವೆ.ಈಗಾಗಲೇ ಹಲವು ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವವನ್ನು ಸರಳವಾಗಿ ಆಚರಿಸುವ ತೀರ್ಮಾನ ಕೈಗೊಂಡಿವೆ. ಉತ್ತರ ಕನ್ನಡ ಜನರು ಮನೆ ಮಠ ಕಳೆದು ಕೊಂದು ಆಕಾಶದ ಕೆಳಗೆ ಮಲಗಿರುವಾಗ ಸಂಗೀತ ರಸಮಂಜರಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಹಣ ಪೋಲು ಮಾಡುವ ಬದಲು ಅದನ್ನು ನಮ್ಮ ಸಹೋದರರ ಪುನರ್ವಸತಿಗೆ ನೀಡುವ ನಿರ್ಧಾರಗಳನ್ನು ಕೈಗೊಂಡಿವೆ. ಈ ತೀರ್ಮಾನಗಳು ಈ ಸಂಧರ್ಭದಲ್ಲಿ ಸಮಂಜಸವಾಗಿದ್ದು ಸಕಾಲಿಕವಾದುದಾಗಿದೆ. ಜೊತೆಗೆ ಆಂತರಿಕ ಕಿತ್ತಾಟದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತು ಕೊಂಡು ಉತ್ತರ ಕನ್ನಡದ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ