ಶನಿವಾರ, ಅಕ್ಟೋಬರ್ 24, 2009

ಅಳಬೇಕೋ ಅಥವಾ ನಗಬೇಕೋ

ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಆಪ್ತ ಮಿತ್ರನೊಬ್ಬನ ತಂದೆ ಆರೋಗ್ಯ ಹದಗೆಟ್ಟು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮೊದಲೇ ಸ್ವಲ್ಪ ವಯಸ್ಸಾದ ವ್ಯಕ್ತಿ. ಸ್ವಲ್ಪ ಮಟ್ಟಿನ ಎದೆನೋವು ಕಾಣಿಸಿಕೊಂಡ ಕಾರಣ ಸ್ಥಳೀಯ ವೈದ್ಯರಲ್ಲಿ ತೋರಿಸಲಾಗಿ ಅವರು ದೊಡ್ಡ ಡಾಕ್ಟರಿಗೆ ತೋರಿಸಲು ಶಿಫಾರಸು ಮಾಡಿದ ಕಾರಣ ಮಂಗಳೂರಿನ ಖ್ಯಾತ ಆಸ್ಪತ್ರೆಯ ಖ್ಯಾತ ವೈದ್ಯರಿಗೆ ತೋರಿಸಲಾಗಿತ್ತು. ಅವರು ಕೆಲವು ದಿನಗಳ ಮಟ್ಟಿಗೆ ಒಳರೋಗಿಯಾಗಿ ದಾಖಲಾಗಲು ಶಿಫಾರಸು ಮಾಡಿದರು. ಅದರಂತೆ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.


ಯಾರಾದರೂ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ಅಂತ ಗೊತ್ತಾದ ಕೂಡಲೇ ಸಹೃದಯಿ ನೆಂಟರಿಷ್ಟರು, ಆಪ್ತ ಮಿತ್ರರು ರೋಗಿಯ ಸಂದರ್ಶನಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡುವುದು ವಾಡಿಕೆ. ಅದೇ ರೀತಿ ಇಲ್ಲಿಯೂ ನಡೆಯುತ್ತಿತ್ತು. ಬಹುಪಾಲು ನೆಂಟರಿಷ್ಟರು ಆಗಲೇ ಭೇಟಿ ಕೊಟ್ಟು ಹೋಗಿದ್ದರು. ರೋಗಿಗೆ ಮತ್ತು ಅವರ ಸೇವೆ ಮಾಡಲು ಆಸ್ಪತ್ರೆಯಲ್ಲಿ ಉಳಿದಿದ್ದ ಅವರ ಪತ್ನಿಗೆ ಬೇಕಾದ ಊಟ, ತಿಂಡಿಗಳನ್ನು ಮಂಗಳೂರಿನಿಂದ ಕೆಲವು ಕಿ.ಮೀ. ದೂರದಲ್ಲಿದ್ದ ಅವರ ನೆಂಟರ ಮನೆಯಿಂದ ತರಲಾಗುತ್ತಿತ್ತು. ಅದಕ್ಕಾಗಿ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಬಂಧುವೊಬ್ಬನಿಗೆ ಈ ಜವಾಬ್ಧಾರಿ ವಹಿಸಲಾಗಿತ್ತು. ಆತ ಯಥಾಪ್ರಕಾರ ಪ್ರತಿದಿನ ತಿಂಡಿ, ಊಟ ತೆಗೆದು ಕೊಂಡು ಹೋಗಿ ಕೊಟ್ಟು ಬಂದು ಅವರ ಯೋಗಕ್ಷೇಮದ ಬಗ್ಗೆ ಮನೆಯವರಿಗೆ ಮಾಹಿತಿ ನೀಡುತಿದ್ದ.


ಹೀಗಿರುವಾಗ ಒಂದು ದಿನ ಬೆಳಗಿನ ತಿಂಡಿ ಕೊಡಲು ಹೋದವನು ಮನೆಗೆ ಬಂದು ಹೇಳಿದ.. ಮಾವನನ್ನು ಯಾರಾದರೂ ನೋಡಲಿಕ್ಕೆ ಬಾಕಿ ಇದ್ದವರು ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ನೋಡಲಿ ಅಂತ ಮಾವ ಹೇಳಿ ಕಳುಹಿಸಿದ್ದಾರೆ ಎಂದು. ಈ ಮಾತು ಕೇಳಿ ನಿನ್ನೆ ತಾನೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಅವರ ಪತ್ನಿ, ಜೊತೆಗೆ ಅವರ ನೆಂಟರಿಷ್ಟರಿಗೆಲ್ಲಾ ಒಂದು ರೀತಿಯ ಶಾಕ್. ಇವರಿಗೆ ಏನಾಯಿತು? ಆರೋಗ್ಯದಲ್ಲಿ ಏನಾದರೂ ಏರುಪೆರಾಗಿರಬಹುದೇ ಎಂಬ ಸಂಶಯವೂ ಆಗಿತ್ತು. ಇಲ್ಲದಿದ್ದರೆ ಈ ಮಾತು ಏಕೆ ಹೇಳಿ ಕಳುಹಿಸಿಯಾರು? ಈ ರೀತಿಯ ಮಾತುಗಳನ್ನು ಅನಾರೋಗ್ಯದಲ್ಲಿ ನರಳುತ್ತಿರುವವರಂತೂ ಹೇಳಿದರೆ ಅದು ಅಶುಭ ಘಟನೆಯ ಸಂಕೇತ ಎಂಬ ಭಾವನೆ ಬರುವುದೂ ಸ್ವಾಭಾವಿಕ. ಆಗ ವಿಚಾರಿಸಲು ಈಗಿನಂತೆ ಮೊಬೈಲ್ ಫೋನ್ ಸಹ ಇಲ್ಲ. ಆಗಲೇ ಅವರ ಮನೆಯಲ್ಲಿ ಅವರ ಪತ್ನಿಯ ಅಳು ತಾರಕಕ್ಕೆ ಏರಿತ್ತು. ಪೇಟೆಯಿಂದ ಕಾರೊಂದನ್ನು ಬಾಡಿಗೆಗೆ ತಂದು ಆಗಲೇ ಎಲ್ಲರೂ ಆಸ್ಪತ್ರೆಗೆ ಹೊರಟರು.

ಆಸ್ಪತ್ರೆಯಲ್ಲಿ ರೋಗಿ ಆರಾಮವಾಗಿಯೇ ಇದ್ದರು. ಅವರ ಮುಖದಲ್ಲಿ ಅಂತಹ ದುಗುಡವೇನೂ ಇರಲಿಲ್ಲ. ಮನೆಯವರ ಗಾಬರಿ ಕಂಡು ಅವರೇ ನೀವೆಲ್ಲಾ ಏಕಿಷ್ಟು ಗಾಬರಿಯಾಗಿದ್ದೀರಿ ಎಂದು ಪ್ರಶ್ನಿಸಲಾಗಿ ಅವರು ನೀವು ಊಟ ತರುವ ಹುಡುಗನ ಕೈಯಲ್ಲಿ ಯಾರಾದರೂ ನೋಡಲಿಕ್ಕೆ ಬಾಕಿ ಇದ್ದವರು ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ನೋಡಲಿ ಅಂತ ಹೇಳಿ ಕಳುಹಿಸಿದ ವಿಷಯ ತಿಳಿದು ಗಾಬರಿಯಾಗಿ ಓಡಿ ಬಂದೆವು ಎಂದು ಹೇಳಿದರು. ಇದನ್ನು ಕೇಳಿ ನಕ್ಕ ರೋಗಿ ನಾನು ಹೇಳಿದ್ದು ಆ ಉದ್ದೇಶದಿಂದಲ್ಲ. ಬೆಳಗ್ಗೆಯೇ ಡಾಕ್ಟರ್ ಬಂದಿದ್ದರು. ಪರೀಕ್ಷಿಸಿ ಇಂದು ಸಂಜೆ ಡಿಸ್ಚಾರ್ಜ್ ಆಗಲು ಹೇಳಿದ್ದಾರೆ. ಹೀಗಿರುವಾಗ ನೋಡಲು ಬಾಕಿ ಇರುವವರು ಅದರ ಮುಂಚೆ ಬಂದು ನೋಡಿದರೆ ಒಳ್ಳೆಯದಲ್ಲವ ಎಂಬ ಉದ್ದೇಶದಿಂದ ಹೇಳಿದೆ ಎಂದು ಹೇಳಿದಾಗ ಅಲ್ಲಿದ್ದವರಿಗೊಮ್ಮೆ ಪಿತ್ತ ನೆತ್ತಿಗೇರಿ ಇಳಿದಿತ್ತು. ಇವರ ಒಂದು ಮಾತಿನಿಂದ ಒಮ್ಮೆ ಅಲ್ಲೋಲಕಲ್ಲೋಲವಾಗಿದ್ದ ಇವರ ಮನೆ ಮಂದಿ ಈಗಿನ ಇವರ ಮಾತು ಕೇಳಿ ಅಳಬೇಕೋ ಅಥವಾ ನಗಬೇಕೋ ಎಂದು ತಿಳಿಯದಾದರು. ಕೊನೆಗೆ ಸಂಜೆ ವರೆಗೆ ನಿಂತು ಬಂದ ಅದೇ ಕಾರಿನಲ್ಲಿ ಇವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದು ಕೊಂಡು ಹೋದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ