ಶನಿವಾರ, ಅಕ್ಟೋಬರ್ 24, 2009

ಮರುಭೂಮಿಯ ಮಲೆನಾಡು ತಬೂಕ್ ...

ಸೌದಿ ಅರೇಬಿಯಾ ಎಂದೊಡನೆ ನೆನಪಾಗುವುದು ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರಗಳಾದ ಮಕ್ಕಾ, ಮದೀನ ಜೊತೆಗೆ ಇಲ್ಲಿನ ಮರಳುಗಾಡುಪ್ರದೇಶ, ಸುಡುಬಿಸಿಲಿನ ವಾತಾವರಣ ಹಾಗೂ ಸಾಧಾರಣ ಗಲ್ಫ್ ರಾಷ್ಟ್ರಗಳಲ್ಲಿರುವಂತೆ ಕೆಲ ಗಗನಚುಂಬಿ ಕಟ್ಟಡಗಳು.


ಇದೇ ರೀತಿಯ ಕಲ್ಪನೆಯೊಂದಿಗೆ ಉದ್ಯೋಗದ ನಿಮಿತ್ತ ತವರು ನಾಡಿನಿಂದ ಹೊರಟ ನಾನು ರಿಯಾದ್ ಮಾರ್ಗವಾಗಿ ವಿಮಾನದ ಮೂಲಕ ಸೌದಿ ಅರೇಬಿಯಾದ ತಬೂಕ್ ನಗರಕ್ಕೆ ಬಂದಾಗ ವಿಮಾನದ ಕಿಟಕಿಗಳಿಂದ ಒಣಮರುಭೂಮಿಯ ಬದಲು ಹಸಿರಿನ ದೃಶ್ಯಗಳು ಗೋಚರಿಸುತ್ತಿದ್ದವು. ನಾನಂದುಕೊಂಡಂತೆ ತಬೂಕ್ ನಗರ ಒಣಮರುಭೂಮಿಯಾಗಿರದೆ ಫಲವತ್ತಾದ ಫಲಪುಷ್ಪಗಳಿಂದ ಕಂಗೊಳಿಸುವ ಹಸಿರು ಪ್ರದೇಶವಾಗಿತ್ತು.ಇದುವೇ ಈ ನಗರದ ವಿಶೇಷ.ಇಲ್ಲಿನ ಜನ ಈ ಮರುಭೂಮಿಯಲ್ಲಿ ಖರ್ಜೂರದ ಜೊತೆಗೆ ಟೊಮ್ಯಾಟೋ, ಸೌತೆಕಾಯಿ, ಬದನೆ, ಹಸಿರುಮೆಣಸು, ದ್ರಾಕ್ಷಿ, ಸೇಬು ಸೇರಿದಂತೆ ಹಲವು ಬಗೆಯ ತರಕಾರಿಗಳ ಜೊತೆಗೆ ಕೆಲವು ನಮೂನೆಯ ಪುಷ್ಪಗಳನ್ನೂ ಬೆಳೆದು ತಬೂಕ್ ನಗರವನ್ನು ಕೃಷಿ ಪ್ರದೇಶವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು.ಹೀಗಾಗಿ ಈ ನಗರದ ಬಗ್ಗೆ ಕೆಲವು ಮಾಹಿತಿಯನ್ನು ಜೊತೆಗೆ ಇಲ್ಲಿನ ವೈಶಿಷ್ಟತೆಯನ್ನು ಓದುಗರೊಂದಿಗೆ ಹಂಚಿಕೊಳ್ಳುತಿದ್ದೇನೆ.


ಈ ನಗರದ ಪ್ರಮುಖ ವಾಣಿಜ್ಯ ವ್ಯವಹಾರ ಕೃಷಿ ಆಧಾರಿತವಾಗಿದ್ದರೂ ಇಲ್ಲಿನ ಬೇಸಾಯ ಮಳೆ ಆಧಾರಿತವಾಗಿಲ್ಲ.ಇಲ್ಲಿ ವರ್ಷದಲ್ಲಿ ಕೇವಲ 5 ರಿಂದ 6 ಬಾರಿ ಮಾತ್ರ ಮಳೆ ಬರುತ್ತದೆ.ಆದ ಕಾರಣ ಇಲ್ಲಿನ ಕೃಷಿಕರು ಅಂತರ್ಜಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು ಪಂಪುಸೆಟ್ಟುಗಳ ಮೂಲಕ ತಮ್ಮ ಬೆಳೆಗೆ ನೀರುಣಿಸುತ್ತಾರೆ.ಹೀಗಾಗಿ ಇಲ್ಲಿ ಅಲ್ಲಲ್ಲಿ ಹೆಚ್ಚಾಗಿ ನೀರಿನ ಕೊಳವೆ ಬಾವಿಗಳು ಕಾಣಸಿಗುತ್ತವೆ.ಇಲ್ಲಿ ಬೆಳೆದ ತರಕಾರಿಗಳು ಸೌದಿಯ ವಿವಿಧ ಪ್ರದೇಶಗಳಿಗೆ ಜೊತೆಗೆ ಕೆಲ ಪುಷ್ಪಗಳು ವಿದೇಶಗಳಿಗೂ ರವಾನೆಯಾಗುತ್ತದೆ.ಇಲ್ಲಿನ ಜನ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡಿದ್ದು ಕುರಿ,ಆಡು,ಒಂಟೆ ಮತ್ತು ಕೋಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕುತ್ತಾರೆ.


ಇಲ್ಲಿನ ಕೃಷಿಕರು ಬೆಳೆದ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವ ವ್ಯವಸ್ಥೆಯಿದ್ದು ಇದಕ್ಕೆಂದೇ ಪ್ರತ್ಯೇಕ ಮಾರುಕಟ್ಟೆಗಳಿವೆ.ಅಲ್ಲಿ ರೈತರು ತಾವು ಬೆಳೆದ ವಸ್ತುಗಳನ್ನು ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.ಅದೂ ಅಲ್ಲದೆ ಪ್ರತೀ ಶುಕ್ರವಾರ ನಮಾಜಿನ ನಂತರ ಮಸೀದಿಯ ಹೊರಭಾಗದಲ್ಲಿ ಕೃಷಿಕರು ತಾವು ಬೆಳೆದ ವಸ್ತುಗಳನ್ನು ವಾಹನಗಳಲ್ಲಿ ತುಂಬಿ ತಂದು ಮಾರಾಟ ಮಾಡುವ ದೃಶ್ಯವೂ ಇಲ್ಲಿ ಸಾಮಾನ್ಯ.
ರಾಜಧಾನಿ ರಿಯಾದಿನಿಂದ ಸುಮಾರು 1400 ಕಿ.ಮೀ.ದೂರ ಇರುವ ತಬೂಕ್ ನಗರ ಸೌದಿ ಅರೇಬಿಯಾದ ಗಡಿಪ್ರದೇಶವಾಗಿದ್ದು ಇದಕ್ಕೆ ಹೊಂದಿಕೊಂಡಂತೆ ಜೋರ್ಡಾನ್ ಹಾಗೂ ಈಜಿಪ್ಟ್ ದೇಶಗಳಿವೆ.ಅದಲ್ಲದೆ ಈ ನಗರ ಈ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿದ್ದು ಆದ ಕಾರಣ ಇಲ್ಲಿನ ರಸ್ತೆಗಳಲ್ಲಿ ಸೇನಾಪಡೆಯ ಸಮವಸ್ತ್ರ ಧರಿಸಿದ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.ಇಲ್ಲಿನ ಸೈನಿಕರಿಗೆ ಮತ್ತು ನಾಗರಿಕರಿಗೆ ಪರ್ಯಾಯ ಆದಾಯಕ್ಕಾಗಿ ಇಲ್ಲಿನ ಸರ್ಕಾರ ಸ್ಥಳೀಯವಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಮಿನಿಗೂಡ್ಸ್ ಟೆಂಪೋಗಳನ್ನು ಸಾಲದ ರೂಪದಲ್ಲಿ ನೀಡುತ್ತದೆ.ಆದ ಕಾರಣ ಇಲ್ಲಿ ಟ್ಯಾಕ್ಸಿಗಳು ಕಾಣಸಿಗುವುದಿಲ್ಲ. ಇಲ್ಲಿನ ನಾಗರೀಕರು ಸ್ಥಳೀಯ ಪ್ರಯಾಣಕ್ಕಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಈ ಟೆಂಪೋಗಳನ್ನು ಆಶ್ರಯಿಸಬೇಕಾಗುತ್ತದೆ.


ಇಲ್ಲಿಂದ ಸುಮಾರು 160 ಕಿ.ಮೀ.ದೂರದಲ್ಲಿ ದುಬಾ ಎಂದು ಕರೆಯಲ್ಪಡುವ ಸಮುದ್ರತೀರ ಪ್ರದೇಶವಿದ್ದು ಅದು ಇಲ್ಲಿನ ನೆಚ್ಚಿನ ಪ್ರವಾಸಿ ತಾಣ.ಇಲ್ಲಿನ ಬೀಚ್ ಸುಂದರವಾಗಿದ್ದು ಸಮುದ್ರವೂ ಸಹ ಅಷ್ಟೆ ಶಾಂತವಾಗಿದೆ.ಹಾಗಾಗಿ ಈ ಬೀಚಿನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ.ಇಲ್ಲಿ ರಜಾದಿನದ ಮಜಾ ಸವಿಯುವುದೇ ಒಂದು ಅವಿಸ್ಮರಣೀಯವಾದ ಅನುಭವವಾಗಿದ್ದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.ಇಲ್ಲಿನ ಸಮುದ್ರ ತೀರದಿಂದ ಈಜಿಪ್ಟ್ ದೇಶಕ್ಕೆ ನಾಗರಿಕ ಹಡಗು ಸಾರಿಗೆ ವ್ಯವಸ್ಥೆಯಿದ್ದು ಸಾವಿರಾರು ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳ ಜೊತೆ ಈಜಿಪ್ಟಿಗೆ ಪ್ರಯಾಣಿಸಲು ಸಿದ್ಧರಾಗಿ ನಿಂತಿರುವ ದೃಶ್ಯ ಇಲ್ಲಿ ಸಾಮಾನ್ಯ.


ಪೂರ್ತಿ ಸೌದಿ ಅರೇಬಿಯಾ ಕಡು ಬಿಸಿಲಿಂದ ಧಗಧಗಿಸುತ್ತಿರುವಾಗಲೂ ತಬೂಕಿನ ಹವಾಮಾನ ಇದಕ್ಕೆ ವ್ಯತಿರಿಕ್ತವಾಗಿ ತಂಪಾಗಿರುತ್ತದೆ.ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಇಲ್ಲಿನ ನೈಸರ್ಗಿಕವಾದ ತಂಪು ಹವೆಯನ್ನು ಸವಿಯಲು ಇಲ್ಲಿಗೆ ಬರುವವರೂ ಬಹಳಷ್ಟಿದ್ದಾರೆ.ಈ ರೀತಿಯ ಕಾರಣಗಳಿಂದಾಗಿ ಇದು ಸೌದಿ ನಾಗರೀಕರ ನೆಚ್ಚಿನ ತಾಣವಾಗಿದ್ದು ತಾವು ಕೂಡ ಸೌದಿ ಅರೇಬಿಯಾಕ್ಕೆ ಬಂದರೆ ತಬೂಕ್ ಸಂದರ್ಶಿಸಲು ಮರೆಯದಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ