ಶುಕ್ರವಾರ, ಜೂನ್ 04, 2010

ನಕ್ಸಲ್ ಸಮಸ್ಯೆಗೆ ಪರಿಹಾರ ನಕ್ಸಲರ ಕೈಯಲ್ಲೇ ಇದೆ… !!!

ನಕ್ಸಲರ ಮೇಲೆ ಅನುಕಂಪ ತೋರಿಸುತ್ತಿರುವವರ ಮೇಲೆ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿರುವ ಬೆನ್ನಲ್ಲೇ ಈ ಬಗ್ಗೆ ವಿವಾದಗಳು ಆರಂಭವಾಗಿವೆ. ನಕ್ಸಲರ ಮೇಲೆ ಕ್ರಮಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿರುವ ಸರ್ಕಾರ ಈಗ ಅವರ ಮೇಲೆ ಅನುಕಂಪ ಹೊಂದಿರುವವರ ಮೇಲೆ ಕ್ರಮ ಕೈಗೊಳ್ಳಲು ಹೊರಟಿದೆ. ಈ ಬಗ್ಗೆ ಈಗಾಗಲೇ ದಾಂತೆವಾಡದ ದಂಡಕಾರಣ್ಯದಲ್ಲಿ ನಕ್ಸಲರೊಂದಿಗೆ ಕೆಲವು ದಿನಗಳನ್ನು ಕಳೆದು ಅವರ ಜೀವನದ ನೈಜ ಚಿತ್ರಣಗಳು ಅವರ ಉದ್ದೇಶಗಳನ್ನು ಪುಸ್ತಕ ರೂಪದಲ್ಲಿ ಹೊರತಂದ ಬೂಕರ್ ಪ್ರಶಸ್ತಿ ವಿಜೇತೆ, ಅಂತರಾಷ್ಟ್ರೀಯ ಖ್ಯಾತಿಯ ಕೇರಳ ಮೂಲದ ಲೇಖಕಿ ಆರುಂಧತಿ ರಾಯ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. ಜೊತೆಗೆ ಸರ್ಕಾರ ಇದಕ್ಕಾಗಿ ನನ್ನನ್ನು ಬಂಧಿಸುವುದಾದರೆ ಬಂಧಿಸಲಿ ಎಂಬ ನೇರ ಸವಾಲನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.ನಕ್ಸಲರು ಯಾರೆಂದು ನೋಡಲು ಹೋದರೆ ಈ ವ್ಯವಸ್ಥೆಯ ದಬ್ಬಾಳಿಕೆಯಿಂದ ನರಳಿ ಕೊನೆಗೆ ಈ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಾಗಿ ಮಾವೋ ಚಿಂತನೆಗೆ ಅನುಸಾರವಾಗಿ ಬಂದೂಕನ್ನು ಕೈಗೆತ್ತಿಕೊಂಡು ಸಮಾಜವನ್ನು ಸರಿದಾರಿಗೆ ತರುತ್ತೇವೆ ಎಂದು ಹೊರಟ ಶೋಷಿತ ಮತ್ತು ದಮನಿತ ಸಮುದಾಯದ ಜನರು. ಆದರೆ ಈ ಹೋರಾಟದಿಂದ ಅವರು ಸಾಧಿಸಿದ್ದೇನು ಎಂದು ನೋಡಿದರೆ ಕಂಡು ಬರುವ ಫಲಿತಾಂಶ ಮಾತ್ರ ಶೂನ್ಯ. ಆದರೆ ಇತ್ತೀಚಿನ ನಕ್ಸಲ್ ಹೋರಾಟದ ದಿಕ್ಕನ್ನು ನೋಡಿದರೆ ಎಲ್ಲೋ ಒಂದು ಕಡೆ ಈ ಹೋರಾಟದ ದಿಕ್ಕು ತಪ್ಪಿದೆ ಮತ್ತು ತಪ್ಪುತ್ತಿದೆ ಎಂದು ಎನಿಸುವುದು ಸಾಮಾನ್ಯ. ಇದಕ್ಕೆ ಇತ್ತೀಚಿಗೆ ನಕ್ಸಲ್ ಹೆಸರಿನಲ್ಲಿ ಮುಗ್ಧ ನಾಗರೀಕರ ಮೇಲೆ ನಡೆಯುತ್ತಿರುವ ದಾಳಿ ಒಂದು ಉದಾಹರಣೆ ಎನ್ನಬಹುದು. ಸಮಾಜವನ್ನು ಸರಿದಾರಿಗೆ ತರಲು ನಕ್ಸಲರು ಎನಿಸಿಕೊಂಡಂತೆ ಬಂದೂಕಿನ ಹೋರಾಟದ ಮೂಲಕ ಖಂಡಿತ ಸಾಧ್ಯವಿಲ್ಲ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಲು ಅನೇಕ ಮಾರ್ಗಗಳಿವೆ.


ಸಂವಿಧಾನ ಶಿಲ್ಪಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಒಂದು ಪುಸ್ತಕದಲ್ಲಿ ಈ ರೀತಿ ಹೇಳಿದ್ದಾರೆ. Ballet is more powerful than bullet. ಅಂದರೆ ಮತಪತ್ರ (ಬ್ಯಾಲೆಟ್) ಬುಲೆಟ್ ಗಿಂತಲೂ ಶಕ್ತಿಶಾಲಿಯಾದದ್ದು ಎಂದು. ಒಂದು ಸರ್ಕಾರದ ಅಥವಾ ಒಂದು ವ್ಯವಸ್ಥೆಯ ವಿರುದ್ಧ ಹೋರಾಡಲು ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುವುದು ಒಂದು ಅತೀ ದೊಡ್ಡ ಅಸ್ತ್ರ . ಈ ಕಾರಣದಿಂದಲೇ ಅಂಬೇಡ್ಕರ್ ತನ್ನ ಅನುಯಾಯಿಗಳಿಗೆ ಮತ್ತು ಶೋಷಿತ ಜನರಿಗೆ ಶಿಕ್ಷಣ, ಸಂಘಟನೆ, ಹೋರಾಟ ಮತ್ತು ರಾಜ್ಯಾಧಿಕಾರದ ಕರೆಯನ್ನು ಕೊಟ್ಟರು. ಅಂಬೇಡ್ಕರ್ ಶೋಷಿತ ಸಮುದಾಯಗಳ ಎಲ್ಲಾ ಸಮಸ್ಯೆಗಳಿಗೆ ರಾಜ್ಯಾಧಿಕಾರದಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ನಂಬಿದ್ದರು.


ಇಂದಿನ ಈ ನಕ್ಸಲ್ ಹೋರಾಟಗಾರರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ ತಮ್ಮ ಬಂದೂಕನ್ನು ಬದಿಗಿಟ್ಟು ತಾವು ಇದುವರೆಗೆ ಬಹಿಷ್ಕರಿಸಿಕೊಂಡು ಬಂದಿದ್ದ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು. ಹಾಗಾದಾಗ ಮಾತ್ರ ನಕ್ಸಲರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇಲ್ಲದಿದ್ದರೆ ಅವರ ಈ ಹೋರಾಟ ಅರ್ಥಹೀನವಾಗಬಹುದು. ನಕ್ಸಲರ ವಿಚಾರಧಾರೆಗಳು ಮಾನವ ಮತ್ತು ಮಾನವೀತೆಯ ಪರ ಇದ್ದರೂ ಅವರ ಕೈಯಲ್ಲಿರುವ ಬಂದೂಕು ಅವರ ಹೋರಾಟವನ್ನು ನಿಷ್ಪ್ರಯೋಜಕಗೊಳಿಸಬಹುದು.ಈ ಕಾರಣದಿಂದಲೇ ಆರುಂಧತಿ ರಾಯ್ ತನ್ನ ಪುಸ್ತಕದಲ್ಲಿ ನಕ್ಸಲೀಯರನ್ನು ಬಂದೂಕು ಹಿಡಿದ ಆಧುನಿಕ ಗಾಂಧಿಗಳು ಎಂದು ವರ್ಣಿಸಿರಬಹುದು. ಒಂದು ಸರ್ಕಾರ ಮನಸ್ಸು ಮಾಡಿದರೆ ನಕ್ಸಲರನ್ನು ಮಣ್ಣು ಮುಕ್ಕಿಸುವುದು ಅಷ್ಟು ಕಷ್ಟವೇನಲ್ಲ. ಆದರೆ ಅದರಿಂದ ಮುಗ್ಧ ನಾಗರೀಕರ ಹತ್ಯೆ ಆಗಬಹುದು ಎಂಬ ಆಘಾತಕಾರಿ ಅಂಶವೂ ಸತ್ಯವೇ ಆಗಿದೆ. ನಕ್ಸಲರು ಸ್ವತಹ ಸಮಾಜದ ಮುಖ್ಯವಾಹಿನಿಗೆ ಬಂದು ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಬೇಕೇ ಹೊರತು ಕಾಡಿನೊಳಗೆ ಕುಳಿತು ಮುಗ್ಧ ನಾಗರೀಕರನ್ನು ಸರ್ಕಾರದ ವಿರುದ್ಧ ದಾಳವಾಗಿ ಬಳಸಿಕೊಳ್ಳುವುದರ ಮೂಲಕ ಅಲ್ಲ.– ಅಶ್ರಫ್ ಮಂಜ್ರಾಬಾದ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ