ಶುಕ್ರವಾರ, ಜೂನ್ 04, 2010

ಆಶ್ರಮದಲ್ಲಿನ ಗುಂಡಿನ ದಾಳಿಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ.

ಬೆಂಗಳೂರಿನ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆಶ್ರಮದಲ್ಲಿ ನಡೆದ ಗುಂಡಿನ ದಾಳಿ ಮತ್ತು ಆನಂತರ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳು ಸಾರ್ವಜನಿಕ ವಲಯದಲ್ಲಿ ಒಂದು ರೀತಿಯ ಸಂಶಯದ ಮುಳ್ಳನ್ನು ಬಿತ್ತಿದೆ. ರವಿಶಂಕರ ಗುರೂಜಿ ಲಕ್ಷಾಂತರ ಭಕ್ತರನ್ನು ದೇಶ ವಿದೇಶಗಳಲ್ಲಿ ಒಳಗೊಂಡಿರುವಂತಹ ಆಧ್ಯಾತ್ಮಿಕ ಧರ್ಮಗುರುಗಳು. ಅಲ್ಲದೆ ಸದಾ ಯಾವಾಗಲೂ ಶಾಂತಿಯ ಮಂತ್ರವನ್ನು ಜಪಿಸುತ್ತಿರುವಂತಹವರು. ಅಂತಹವರ ಆಶ್ರಮದಲ್ಲಿ ನಡೆದ ಗುಂಡಿನ ದಾಳಿ ಈ ನಾಡಿನ ಶಾಂತಿಯ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ.


ಆದರೆ ಇದಕ್ಕೆ ಕಾರಣವೇನೂ ಎಂಬುವುದು ಇನ್ನೂ ಸ್ಪಷ್ಟವಾಗದಿದ್ದರೂ ಹಲವು ರೀತಿಯ ಸಂಶಯಗಳನ್ನು ಮಾತ್ರ ಹುಟ್ಟು ಹಾಕಿದೆ. ಅದೂ ಅಲ್ಲದೆ ಸ್ವಾಮೀಜಿ ಕಾರಿನಲ್ಲಿ ತೆರಳಿದ ನಂತರ ನಡೆದ ಈ ಗುಂಡು ಹಾರಾಟದ ಉದ್ದೇಶ ಸ್ವಾಮೀಜಿಯನ್ನು ಕೊಲ್ಲುವ ಉದ್ದೇಶದಿಂದ ನಡೆಸಿದ ದಾಳಿ ಅಲ್ಲ ಎಂಬುವುದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಕಂಡು ಕೊಂಡ ಸತ್ಯ.
ಈಗಂತೂ ಸ್ವತಹ ಸ್ವಾಮೀಜಿಯೇ ಝಡ್‌ಪ್ಲಸ್ ಭದ್ರತೆ ಪಡೆಯಲು ಈ ದಾಳಿಯ ನಾಟಕ ಹಮ್ಮಿಕೊಂಡಿದ್ದರು ಎಂಬುವುದು ಕೆಲ ಮೂಲಗಳಿಂದ ತಿಳಿದು ಬರುತ್ತಿರುವುದು ಒಂದು ರೀತಿಯ ಆಶ್ಚರ್ಯಕರ ಸುದ್ಧಿ . ಹೀಗಾದರೆ ಇದು ಮಾತ್ರ ಅತ್ಯಂತ ಖಂಡನೀಯ.


ಇತ್ತೀಚಿಗೆ ಸ್ವಾಮೀಜಿಗಳಿಗೆ ಝಡ್‌ಪ್ಲಸ್ ಭದ್ರತೆ ಮತ್ತು ಕೆಂಪು ದೀಪದ ಕಾರು ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಅನೇಕ ಸ್ವಾಮೀಜಿಗಳು ಈ ರೀತಿಯ ಕೆಂಪು ದೀಪದ ಕಾರಿನಲ್ಲಿ ಓಡಾಡುತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಅದನ್ನು ಕಂಡೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿದೆ. ಹೀಗಿರುವಾಗ ರವಿಶಂಕರ್ ಗುರೂಜಿ ತನ್ನ ಬಹುದಿನಗಳ ಕೋರಿಕೆಯಾದ ಝಡ್‌ಪ್ಲಸ್ ಭದ್ರತೆ ಪಡೆಯಲು ಈ ರೀತಿ ದಾಳಿಯ ನಾಟಕ ನಡೆಸಿದ್ದಾರೆ ಎಂದು ಕಂಡು ಬಂದರೆ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವೇ ಈ ದಾಳಿ ಬೇರೆ ಯಾರಿಂದಾದರೂ ನಡೆದಿದ್ದಲ್ಲಿ ಅವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಈ ಎಲ್ಲಾ ವಿಷಯ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ. ಸರ್ಕಾರ ಅದನ್ನು ಆದಷ್ಟು ಬೇಗ ಮಾಡಿ ಮುಗಿಸಲಿ.


- ಅಶ್ರಫ್ ಮಂಜ್ರಾಬಾದ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ