ಭಾನುವಾರ, ಡಿಸೆಂಬರ್ 27, 2009

ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...?


ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...? ಹೀಗೊಂದು ಸಂಶಯ ಮೂಡಿದ್ದು ಮೊನ್ನೆ ಪುತ್ತೂರು ಕ್ಷೇತ್ರದ ಮಾನ್ಯ ಶಾಸಕಿಯಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಯಿಂದ !. ತಾನು ಶಾಸಕಿಯಾಗಿ ಆಯ್ಕೆಯಾದ ನಂತರ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಬಾಯ್ಬಿಟ್ಟ ಮಲ್ಲಿಕಾ ಪ್ರಸಾದ್ ತನ್ನದೇ ಸರ್ಕಾರದ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀ ಮುಮ್ತಾಜ್ ಅಲೀಖಾನ್ ರವರ ಬಳಿ ಕೇಳಿದ್ದು ರಾಜ್ಯದಲ್ಲಿರುವ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯ ಎಷ್ಟು ಎಂದಾಗಿತ್ತು. ತನ್ನ ಕ್ಷೇತ್ರದ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳಿಗೆ ವಿಧಾನ ಮಂಡಲ ಅಧಿವೇಶನ ಒಂದು ಅತ್ತ್ಯುತ್ತಮ ವೇದಿಕೆ. ಆದರೆ ಇಲ್ಲಿ ಒಬ್ಬ ಶಾಸಕಿ ತನ್ನ ದೀರ್ಘಕಾಲದ ಮೌನದ ನಂತರ ಮೊದಲ ಪ್ರಶ್ನೆ ಕೇಳಿದ್ದು ರಾಜ್ಯದ ಮತ್ತು ತನ್ನ ಕ್ಷೇತ್ರದ ಸಮಸ್ಯೆಗಳ ಬದಲು ಈ ರಾಜ್ಯದ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ? ಎಂಬುವುದಾಗಿತ್ತು.

ವಾಸ್ತವವಾಗಿ ನೋಡುವುದಾದರೆ ಈ ಪ್ರಶ್ನೆಯೇ ಬಾಲಿಶವಾದದ್ದು. ರಾಜ್ಯದಲ್ಲಿರುವ ಅಥವಾ ದೇಶದಲ್ಲಿರುವ ಯಾವುದೇ ಮಂದಿರ ಅಥವಾ ಮಸೀದಿಗಳು ಆರ್ಥಿಕ ಲಾಭದ ಉದ್ದೇಶದಿಂದ ನಿರ್ಮಿಸಲ್ಪಟ್ಟವಲ್ಲ. ಅದೂ ಅಲ್ಲದೆ ಇವುಗಳಲ್ಲಿ ಹೆಚ್ಚಿನವು ಸರ್ಕಾರದ ಯಾವುದೇ ಸಹಾಯವಿಲ್ಲದೆ ಭಕ್ತರ ದೇಣಿಗೆಯಿಂದ ನಿರ್ಮಾಣವಾದಂತಹವುಗಳು. ಇಲ್ಲಿ ಭಕ್ತರು ತಮ್ಮಲ್ಲಿರುವ ದೈವಭಕ್ತಿಯಿಂದ ತಮ್ಮ ದುಡಿಮೆಯ ಒಂದು ಪಾಲನ್ನು ದೇಣಿಗೆ ರೂಪದಲ್ಲಿ ಕೊಟ್ಟು ಆರಾಧನಾಲಯಗಳನ್ನು ನಿರ್ಮಿಸಿ ಅಲ್ಲಿ ಪ್ರಾರ್ಥಿಸುವುದರ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇವುಗಳ ನಿರ್ಮಾಣ ಮನುಷ್ಯನ ಧಾರ್ಮಿಕ ನಂಬಿಕೆಗಳಿಗೆ ಸಂಭಂದಿಸಿದೆಯೇ ಹೊರತು ಇಲ್ಲಿ ಯಾವುದೇ ಲಾಭದ ಉದ್ದೇಶವಿರುವುದಿಲ್ಲ.

ಆದರೂ ಕೆಲವು ಪ್ರಭಾವಿ ವ್ಯಕ್ತಿಗಳು ಕೆಲವು ಧಾರ್ಮಿಕ ಸ್ಥಳಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಆ ಮೂಲಕ ಕೋಟ್ಯಾಂತರ ರೂಗಳನ್ನು ಸಂಪಾದಿಸುವುದರ ಜೊತೆಗೆ ಸರ್ಕಾರದ ಕೃಪಾಕಟಾಕ್ಷದಿಂದ ಅನೇಕ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ತೆರೆದು ಆ ಮೂಲಕ ಸರ್ಕಾರದಿಂದ ಮತ್ತು ವಿಧ್ಯಾರ್ಥಿಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಕೊಳ್ಳೆಹೊಡೆಯುತ್ತಿರುವುದನ್ನು ಕಾಣಬಹುದು. ಅದೂ ಅಲ್ಲದೆ ಇವರು ರಾಜ್ಯದಲ್ಲಿ ಪರ್ಯಾಯ ಸರ್ಕಾರದ ಮಾದರಿ ಆಡಳಿತ ನಡೆಸುತ್ತಿರುವುದನ್ನೂ ಕಾಣಬಹುದು. ಇಂತಹ ಆರ್ಥಿಕ ಲಾಭದಾಯಕ ಜೊತೆಗೆ ರಾಜಕೀಯ ಕೃಪಾಕಟಾಕ್ಷವುಳ್ಳ ಧಾರ್ಮಿಕ ಸ್ಥಳಗಳಿಗೆ ನಮ್ಮ ಮುಖ್ಯಮಂತ್ರಿಗಳು ಬಜೆಟ್ಟಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕೊಟ್ಟದ್ದನ್ನೂ ನಾವು ಕಾಣಬಹುದು.

ಇವೆಲ್ಲಾ ನಡೆದದ್ದು ಹೆಚ್ಚಾಗಿ ಮಾನ್ಯ ಮಲ್ಲಿಕಾ ಪ್ರಸಾದರ ಪಕ್ಷದ ಆಡಳಿತದ ಸರ್ಕಾರದಲ್ಲಿ. ಹೀಗಿರುವಾಗ ಮಲ್ಲಿಕಾ ಪ್ರಸಾದ್ ಕೇವಲ ರಾಜ್ಯದಲ್ಲಿರುವ ಮಸೀದಿಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ಎಂಬ ಅವರ ಪ್ರಶ್ನೆ ಅವರಲ್ಲಿರುವ ಕೋಮುವಾದಿ ಮನಸ್ಥಿತಿಯಿಂದ ಬಂದ ಪ್ರಶ್ನೆಯೇ ಹೊರತು ಇದರಲ್ಲಿ ಇನ್ನಾವ ಸಮಾಜಸೇವಾ ಉದ್ದೇಶವೂ ಇಲ್ಲ.

ಈ ಪ್ರಶ್ನೆ ಎಷ್ಟು ಬಾಲಿಶವಾದುದೆಂದರೆ ಸರ್ಕಾರಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರುವ ಆದಾಯವೆಷ್ಟು ಎಂದು ಕೇಳಿದ ರೀತಿ ಇದೆ. ಯಾವ ಸಂಸ್ಥೆಗಳು ಜನರ ಹಣದಿಂದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಾಪಿಸಲ್ಪಟ್ಟಿರುತ್ತವೆಯೋ ಅಲ್ಲಿಗೆ ಮತಭೇಧವಿಲ್ಲದೆ ಸಹಾಯ ಮತ್ತು ಸಹಕಾರ ನೀಡಬೇಕಾದುದು ಪ್ರಜ್ಞಾವಂತ ಸರ್ಕಾರದ ಕರ್ತವ್ಯ. ಆದರೆ ಅವುಗಳಲ್ಲಿ ಲಾಭ ಹುಡುಕುವ ಶ್ರೀಮತಿ ಮಲ್ಲಿಕಾ ಪ್ರಸಾದರ ಅರ್ಥಶಾಸ್ತ್ರ ಜ್ಞಾನವನ್ನು ಯಾವ ರೀತಿ ವಿಮರ್ಶಿಸಬೇಕೆಂದು ಬಹುಶ ಖ್ಯಾತ ಅರ್ಥಶಾಸ್ತ್ರಜ್ಞರಿಗೂ ಸಾಧ್ಯವಾಗಲಾರದು. ಕೇವಲ ಒಂದು ಫ್ಯಾಸಿಸ್ಟ್ ಸಂಘಟನೆಯ ಮುಖಂಡನ ಹೆಂಡತಿ ಎಂಬ ಒಂದೇ ಒಂದು ಕಾರಣಕ್ಕಾಗಿ ಶ್ರೀಮತಿ ಶಕುಂತಲಾ ಶೆಟ್ಟಿಯವರ ಟಿಕೆಟ್ ತಪ್ಪಿಸಿ ಪುತ್ತೂರು ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದ ಶ್ರೀಮತಿ ಮಲ್ಲಿಕಾ ಪ್ರಸಾದರ ಬಾಯಿಯಿಂದ ಇಂತಹ ಪ್ರಶ್ನೆಗಳನ್ನಲ್ಲದೆ ಇನ್ನ್ಯಾವುದನ್ನು ನಿರೀಕ್ಷಿಸಲು ಸಾಧ್ಯ...

ಮಂಗಳವಾರ, ಡಿಸೆಂಬರ್ 15, 2009

ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ?


ಕರ್ನಾಟಕ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಉಂಟಾಗಬಹುದೇ ? ಹೀಗೊಂದು ಪ್ರಶ್ನೆ ಇತ್ತೀಚಿಗೆ ರಾಜ್ಯದ ರಾಜಕೀಯ ವಲಯಗಳಲ್ಲಿ ಕೇಳಿ ಬರತೊಡಗಿದೆ. ಇದಕ್ಕೆ ರಾಜ್ಯದ ಕೆಲ ಪ್ರಮುಖ ನಾಯಕರುಗಳು ನೀಡುತ್ತಿರುವ ಹೇಳಿಕೆಗಳು ಒಂದು ಕಾರಣವಾದರೆ ಆಡಳಿತಾರೂಢ ಬಿ.ಜೆ.ಪಿಯಲ್ಲಿ ಇನ್ನೂ ಬೂದಿಮುಚ್ಚಿದ ಕೆಂಡದಂತಿರುವ ಭಿನ್ನಮತ ಇದಕ್ಕೆ ಮತ್ತಷ್ಟೂ ಪುಷ್ಟಿನೀಡುತ್ತಿದೆ.


ಇತ್ತೀಚಿನ ಉದಾಹರಣೆ ತೆಗೆದು ಕೊಂಡರೆ ದೇವೇಗೌಡರು ರಾಜಕೀಯವಾಗಿ ತಮ್ಮ ಬದ್ಧ ವೈರಿ ಎಂದೇ ಗುರುತಿಸಿಕೊಂಡ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಂಗ್ರೆಸ್ ಪಾಳಯದಿಂದ ಮುಖ್ಯಮಂತ್ರಿ ಆಗುವುದಾದರೆ ತಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ ಎಂಬ ಹೇಳಿಕೆ ನೀಡಿ ರಾಜ್ಯ ರಾಜಕಾರಣದ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಪ್ರದೇಶ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಈಗಿನ ಸರ್ಕಾರ ತನ್ನ ಸ್ವಯಂಕೃತ ಅಪರಾಧದಿಂದ ಅಧಿಕಾರ ಕಳೆದುಕೊಂಡರೆ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ಸರ್ಕಾರ ರಚನೆಯ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ನೀಡಿರುವ ಹೇಳಿಕೆ ಈ ಬಗೆಗಿನ ಊಹಾಪೋಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.


ಹೇಗಾದರೂ ಮಾಡಿ ಕರ್ನಾಟಕದಲ್ಲಿನ ಬಿ.ಜೆ.ಪಿ. ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಂಕಲ್ಪತೊಟ್ಟಂತೆ ವರ್ತಿಸುತ್ತಿರುವ ಕಾಂಗ್ರೆಸ್ ಹೈಕಮಾಂಡಿನ ವರ್ತನೆ ನೋಡಿದರೆ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಯಲ್ಲಿ ಈಗಾಗಲೇ ತೊಡಗಿರುವಂತೆ ಕಾಣುತ್ತಿದೆ. ಈ ಹಿಂದೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳ ಆಪ್ತರಾಗಿದ್ದ ಗಣಿದೊರೆಗಳ ಮೂಲಕ ಬಿ.ಜೆ.ಪಿ.ಪಕ್ಷದೊಳಗೆ ಬಂಡಾಯವೆಬ್ಬಿಸಿ ಆ ಮೂಲಕ ಬಂಡಾಯವೆದ್ದ ಗುಂಪು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಬಗ್ಗೆ ಯೋಜನೆ ರೂಪುಗೊಂಡಿತ್ತು ಎಂಬುವುದು ರಾಜಕೀಯ ವಲಯದಲ್ಲಿ ಕೇಳಿಬರುವ ಮಾಹಿತಿ. ಆದರೆ ವಿಧಿಯಾಟಕ್ಕೆ ಸಿಕ್ಕಿ ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ಅಕಾಲಿಕ ಮರಣಕ್ಕೀಡಾಗದೇ ಹೋಗುತ್ತಿದ್ದರೆ ಈವತ್ತಿಗಾಗಲೇ ಈ ಪ್ರಯತ್ನ ಯಶಸ್ವಿಯಾಗಿರುತಿತ್ತು. ಆದರೆ ಅವರ ಅಕಾಲಿಕ ಮರಣ ಈ ಎಲ್ಲಾ ಯೋಜನೆಗಳನ್ನು ತಲೆಕೆಳಗಾಗಿಸಿತು ಎಂಬುವುದು ಈಗೇನೂ ಗುಟ್ಟಾಗಿ ಉಳಿದ ವಿಷಯವಲ್ಲ.


ಆನಂತರ ಕೆಲದಿನಗಳ ಮಟ್ಟಿಗೆ ಈ ವಿಷಯವನ್ನು ಮುಂದೂಡಲಾಗಿತ್ತು. ಆದರೆ ಈಗ ಮತ್ತೆ ಅದಕ್ಕೆ ಜೀವ ಬರತೊಡಗಿದೆ. ಈಗ ಪ್ರಮುಖ ಪಾತ್ರ ಗಣಿದೊರೆಗಳ ಬದಲು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ನಾಯಕರು ವಹಿಸುತಿದ್ದಾರೆ. ಬಿ.ಜೆ.ಪಿ.ಯಲ್ಲಿನ ಕೆಲವು ಮತ್ತು ಆ ಪಕ್ಷಕ್ಕೆ ಬೆಂಬಲ ನೀಡಿರುವ ಕೆಲವು ಶಾಸಕರನ್ನು ತಮ್ಮತ್ತ ಸೆಳೆಯುವ ಮೂಲಕ ಸರ್ಕಾರ ರಚನೆಗೆ ಸೂಕ್ತ ಸಮಯದಲ್ಲಿ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿಯೇ ದೇವೇಗೌಡರು ಮತ್ತು ದೇಶಪಾಂಡೆಯವರ ಬಾಯಿಯಿಂದ ಈ ರೀತಿಯ ಮಾತುಗಳು ಕೇಳಿಬರುತ್ತಿದೆ ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.


ಗಣಿದೊರೆಗಳ ಅಡ್ಡೆಗಳ ಮೇಲೆ ಮೊನ್ನೆ ಸಿ.ಬಿ.ಐ ನಡೆಸಿದ ದಾಳಿಯ ಹಿಂದೆಯೂ ಇದರ ಕೈವಾಡವಿದೆ. ಯುಡಿಯೂರಪ್ಪನವರೊಂದಿಗೆ ಮುನಿಸಿಕೊಂಡು ಕೊನೆಗೆ ಸುಷ್ಮಾ ಸ್ವರಾಜರ ಒತ್ತಾಯಕ್ಕೆ ಮಣಿದ ಗಣಿದೊರೆಗಳ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರ ತೆಗೆದು ಕೊಂಡ ನಿಲುವುಗಳು ಇದನ್ನು ನೇರವಾಗಿ ಸೂಚಿಸುತ್ತದೆ. ಈಗಾಗಲೇ ಕೇಂದ್ರ ತನಿಖಾ ತಂಡದಿಂದ ಕಂಗಾಲಾಗಿರುವ ರೆಡ್ಡಿಗಳು ಈ ಮೂಲಕವಾದರೂ ಮುಂದಿನ ಸಮ್ಮಿಶ್ರ ಸರ್ಕಾರದ ರಚನೆಯಲ್ಲಿ ತಮ್ಮ ಕಡೆ ಬರಲಿ ಎಂಬ ಗುಪ್ತ ಅಜೆಂಡಾ ಇದ್ದರೂ ಇರಬಹುದು. ಇಲ್ಲದಿದ್ದಲ್ಲಿ ಅದರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂಬ ಎಚ್ಚರಿಕೆಯೂ ಇರಬಹುದು.


ಒಟ್ಟಿನಲ್ಲಿ ಕರ್ನಾಟಕದ ರಾಜಕೀಯದಲ್ಲಿ ಬಿಸಿ ಏರುತ್ತಿದೆ. ಕೆಲವೇ ದಿನಗಳಲ್ಲಿ ಇದರ ಫಲಿತಾಂಶ ಗೊತ್ತಾಗಲಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ, ಹೆಚ್.ಡಿ. ರೇವಣ್ಣ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು. ಗಣಿಧಣಿಗಳು ಸಾತ್ ಕೊಟ್ಟರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಜೊತೆ ಬಳ್ಳಾರಿ ಲೋಕಸಭಾ ಸದಸ್ಯೆ ಶಾಂತಾ ಕೇಂದ್ರ ಮಂತ್ರಿಯೂ ಆಗಬಹುದು. ಇಲ್ಲದಿದ್ದರೆ ಹೆಚ್.ಡಿ. ಕುಮಾರಸ್ವಾಮಿಯವರಂತೂ ಕೇಂದ್ರದಲ್ಲಿ ಮಂತ್ರಿಯಾಗುವ ಸಾಧ್ಯತೆ ಹೆಚ್ಚು. ಹಾಗೇನಾದರೂ ಆಗಿ ಕುಮಾರಸ್ವಾಮಿಯವರಿಗೆ ಗಣಿ ಖಾತೆ ಸಿಕ್ಕರೆ ರೆಡ್ಡಿಗಳ ಬೆವರಿಳಿಯುವುದಂತೂ ಸತ್ಯ...


- ಅಶ್ರಫ್ ಮಂಜ್ರಾಬಾದ್.

ಭಾನುವಾರ, ಡಿಸೆಂಬರ್ 13, 2009

ಹಿಂದಿ ಅನುವಾದಿತ ಕನ್ನಡ ಶಾಯರಿಗಳು...

ಕಣ್ಣೀರಿನ ಪ್ರಶ್ನೆ

ಒಂದು ದಿನ ನನ್ನ ಕಣ್ಣೀರು ನನ್ನನ್ನೇ ಕೇಳಿತು
ಪ್ರತಿದಿನ ನೀನು ನನ್ನನ್ನು ಏಕೆ ಕರೆಯುತ್ತೀಯಾ..?
ನಾನು ಹೇಳಿಯೇ ಬಿಟ್ಟೆ
ಪ್ರತಿದಿನ ನಾನು ಅವಳ ನೆನಪು ಮಾತ್ರ ಮಾಡುತ್ತೇನೆ,
ಆಗ ಕರೆಯದೆ ನೀನೇ ಏಕೆ ಬಂದು ಬಿಡುತ್ತೀಯಾ..?



ನನ್ನ ಹೃದಯ

ಅವಳ ಸವಿನೆನಪಿನೊಂದಿಗೆ ನನ್ನ ಹೃದಯವನ್ನು
ಹೇಗೆ ನಾ ಉಲ್ಲಸಿತಗೊಳಿಸಲಿ.....
ಯಾರನ್ನು ನಾ ಮರೆತೇ ಇಲ್ಲವೋ
ಅವಳ ನೆನಪನ್ನು ಪುನಃ ನಾ ಹೇಗೆ ಮಾಡಲಿ...
ನನ್ನ ಹೃದಯವನ್ನು ನನ್ನವಳೇ
ಘಾಸಿಗೊಳಿಸಿದಳು,
ಹೀಗಿರುವಾಗ ಇದರ ಬಗ್ಗೆ ಪರರಲ್ಲಿ
ನಾ ಏನೆಂದು ದೂರು ನೀಡಲಿ....



ಪ್ರೀತಿ ಎಂಬ ಮಾಯೆ

ಯಾರ ಮೇಲೆ ಪ್ರೀತಿ ಇತ್ತೋ
ಆ ಹುಡುಗಿ ನನ್ನವಳಾಗಲಿಲ್ಲ,
ಯಾವ ಕ್ಷಣಕ್ಕಾಗಿ ದಿನರಾತ್ರಿ ಕಾದೆನೋ
ಆ ಕ್ಷಣವೂ ನನ್ನದಾಗಲಿಲ್ಲ,
ಪ್ರೀತಿ ಎಂಬ ಈ ಪದ ಒಂದು
ಮಾಯೆಯೇ ಇರಬೇಕು
ಅವಳಿಗೆ ನಾನು ಸಿಗಲಿಲ್ಲ
ನನಗೆ ಯಾರೂ ಸಿಗಲಿಲ್ಲ...



ಭರವಸೆ

ಗೆಳೆತನದ ಹೂವು ಎಲ್ಲಾ
ಕಾಲದಲ್ಲೂ ಅರಳುತ್ತದೆ,
ಸ್ನೇಹದ ಮೋಡಗಳು ಎಲ್ಲಾ
ಕಾಲದಲ್ಲೂ ಘರ್ಜಿಸುತ್ತದೆ,
ನೀನು ನನ್ನನ್ನು ಪ್ರೀತಿಸು
ಇಲ್ಲವೇ ಪ್ರೀತಿಸದಿರು
ಇದು ಮಾತ್ರ ಸತ್ಯ
ಎಲ್ಲಾ ಕಾಲದಲ್ಲೂ
ನಿನ್ನ ನೆನಪುಗಳ ನಡುವೆಯೇ
ನನಗೆ ಬದುಕಲು ಬರುತ್ತದೆ....



ಆತ್ಮ ವಿಶ್ವಾಸ

ಒಡೆದು ಹೋದ ಕನಸುಗಳನ್ನು
ಪುನಃ ಮರಳಿ ಕಟ್ಟಲು ಬರುತ್ತದೆ,
ಮುನಿಸಿ ಹೋದ ಹೃದಯವನ್ನು
ಪುನಃ ಒಲಿಸಿಕೊಳ್ಳಲೂ ಬರುತ್ತದೆ,
ನೀನು ನನ್ನ ಯಾತನೆ ನೋಡಿ
ಕೊರಗಬೇಡ,
ಯಾತನೆಯ ನಡುವೆಯೂ ನನಗೆ
ಮುಗುಳ್ನಗಳು ಬರುತ್ತದೆ.......

ಮಾಧ್ಯಮ ಲೋಕದ ಆಶಾಕಿರಣ ಶ್ರೀ ಶಂಶೀರ್ ಬುಡೋಳಿ..



ಶಂಶೀರ್ ಬುಡೋಳಿ.ಇದು ಈಗ ಕರ್ನಾಟಕದ ಮಾಧ್ಯಮ ಲೋಕದಲ್ಲಿ ಚಿರಪರಿಚಿತ ಹೆಸರು .ಈಗ ಇವರು ವಾರ್ತಾಭಾರತಿ ಕನ್ನಡ ದೈನಿಕದ ಉಪಸಂಪಾದಕ. ಜೊತೆಗೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ(M.C.J)ಯನ್ನು ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಮಾಡುತಿದ್ದಾರೆ. ಹಾಗೆಯೇ ಮಂಗಳೂರಿನ ಖಾಸಗಿ ವಾಹಿನಿ ‘ಚಾನೆಲ್೯’ನ ನ್ಯೂಸ್ ರೀಡರ್. ವಿವಿಧ ಸಾಮಾಜಿಕ, ಸಾಹಿತ್ಯ ಸಂಘಟನೆಗಳಲ್ಲಿ ಗುರುತಿಸುವಿಕೆ. ೧೧ನೇ ಮಂಗಳೂರು ವಿ.ವಿ.ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ. ಮರೀಚಿಕೆ ಪೋಟೊ ಕಾಮಿಕ್ಸ್‌ನಲ್ಲಿ ನಟನಾಗಿ ಅಭಿನಯ.ಕಲಾಸತ್ಯ ಪಾಕ್ಷಿಕ, ಪ್ರಸ್ತುತ ಪಾಕ್ಷಿಕದಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸುವಿಕೆ. ವಿವಿಧ ಬಹುಮಾನ, ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ.



೨೦೦೮ ನೇ ಸಾಲಿನಲ್ಲಿ ಎಸ್.ಡಿ.ಎಂ ಕಾಲೇಜಿನ ಅತ್ತ್ಯುತ್ತಮ ವಿಧ್ಯಾರ್ಥಿ ಪ್ರಶಸ್ತಿ ಪಡೆದಿರುವ ಇವರು ರಾಷ್ಟ ಮಟ್ಟದ ವಿಚಾರಗೋಷ್ಠಿಯಲ್ಲಿ ಬಾಗವಹಿಸಿದ್ದಾರೆ.ಇವರ ಪ್ರಕಾರ ಇವರು ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇಟ್ಟುಕೊಂಡು ಇವರೆಗೆ ಬಂದಂತಹ ಹಾದಿ,ಸೋಲು-ಗೆಲುವಿನ ಹಾದಿ. ಈ ಹಾದಿಯೊಳಗೆ ನಾನು ಬರೆಹದ ಮೂಲಕ ಜನರಿಗೆ ಪರಿಚಯವಾಗುವ ಜೊತೆಗೆ ನನ್ನನ್ನು ಪತ್ರಕರ್ತನಾಗುವಂತೆ ಪ್ರೇರೆಪಿಸಿದ ಊರ ಜನತೆ, ಅಭಿಮಾನಿಗಳ,ಗುರುವರ್ಯರ, ಕುಟುಂಬಿಕರ ಆಶಯ ನನ್ನನ್ನು ಈವರೆಗೆ ಬೆಳೆಸಲು ಕಾರಣ. ಇವರೆಲ್ಲರಿಗೂ ನಾನು ಎಂದೆಂದೂ ಚಿರಋಣಿ ಎನ್ನುತ್ತಾರೆ. ಜೊತೆಗೆ ನಾನು ನನ್ನಷ್ಟಕ್ಕೆ ತಾನು ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಿ ಏನನ್ನಾದರೂ ಸಾಧಿಸುವ ಛಲ, ಇರಾದೆ ನನ್ನದು. ಇವರೆಗೆ ನಾನು ಅನುಭವಿಸಿದರಲ್ಲಿ ಹೆಚ್ಚಿನವು ಸೋಲುಗಳೇ.ಈ ಸೋಲುಗಳೇ ನನ್ನನ್ನು ಬೆಳೆಸುತ್ತಿದೆ ಎನ್ನುವ ಇವರು ಸಮಾಜದಲ್ಲಿನ ವಿರೋಧಾಭಾಸಗಳನ್ನು ವಿರೋಧಿಸುವ, ಪತ್ರಕರ್ತನಾಗಿ ನಾನು ಬರೆದ ಬರೆಹಗಳ ಮೂಲಕ ನನ್ನವರ,ನನ್ನ ರಾಜ್ಯದ, ದೇಶದ ಒಡಲಿನ, ಧಾರ್ಮಿಕತೆ ಹಾಗೂ ಬಡವ, ದಲಿತ,ಅಸ್ಪಶ್ಯರ, ಶೋಷಿತರ ಪರ ಧ್ವನಿಯಾಗಲು ಬಯಸುತ್ತೇನೆ ಎನ್ನುತ್ತಾರೆ. ಇವರು ತಮ್ಮ ಬರವಣಿಗೆಗಳಿಗಾಗಿ http://www.shamsheerbudoli.blogspot.com ಎಂಬ ಬ್ಲಾಗ್ ಒಂದನ್ನು ತೆರೆದಿದ್ದು ಅಲ್ಲಿ ಇವರ ಬರಹಗಳನ್ನು ನೋಡಬಹುದು.



- ಅಶ್ರಫ್ ಮಂಜ್ರಾಬಾದ್.

ಟಾಯ್ಲೆಟ್ ರೋಲ್ ಮತ್ತು ಪೀತ ಪತ್ರಿಕೆಗಳು..


ಮೊನ್ನೆ ಪತ್ರಿಕೆಯೊಂದರಲ್ಲಿ ಲವ್ ಜಿಹಾದ್ ಕುರಿತ ಲೇಖನ ಓದುತಿದ್ದಾಗ ಕನ್ನಡದ ಇಂದಿನ ಕೆಲ ಮಾಧ್ಯಮಗಳು ಪಾಶ್ಚಾತ್ಯರ ಶೈಲಿಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಶೌಚಾಲಯಕ್ಕೆ ಪೇಪರ್ ಬಳಸುವ ಪದ್ಧತಿ ಇದ್ದರೆ ಅದಕ್ಕೂ ನಾಲಾಯಕ್ ಆಗಿರುತಿದ್ದವು ಎಂಬ ವಾಖ್ಯಗಳನ್ನು ಓದಿ ನಿಜಕ್ಕೂ ಸರಿ ಎನಿಸಿತು.


ಇಂದಿನ ಕನ್ನಡದ ಕೆಲ ಮಾಧ್ಯಮಗಳು ಯಾವ ಮಟ್ಟಕ್ಕೆ ಬಂದು ತಲುಪಿವೆ ಎಂದರೆ ಒಂದು ವರದಿಯನ್ನು ತನಗೆ ಹೇಗೆ ಬೇಕೋ ಅದರಂತೆ ಪ್ರಕಟಿಸುತ್ತವೆ. ಇಲ್ಲಿ ಸುದ್ಧಿಯ ಮೂಲ ಯಾವುದು? ಆ ಸುದ್ಧಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುವುದನ್ನು ಅರಿಯುವ ಗೊಡವೆಗೆ ಹೋಗದೆ ಬಲ್ಲ ಮೂಲಗಳು ತಿಳಿಸಿವೆ ಎಂಬ ತಮ್ಮ ಕಪಟ ಮೆದುಳಿನ ವರದಿಯನ್ನು ತುರುಕಿ ಅದಕ್ಕೆ ಸ್ವಲ್ಪ ಮಸಾಲೆ ಸೇರಿಸಿ ಪ್ರಕಟಿಸಿಬಿಡುತ್ತದೆ. ಇದರಲ್ಲಿ ತನಗಾಗದ ಸಮುದಾಯದ ವ್ಯಕ್ತಿಗಳು ಒಳಗೊಂಡಿದ್ದಾರೆ ಎಂದು ಗೊತ್ತಾದ ಕೂಡಲೇ ಆ ವರದಿಗೆ ಮತ್ತಷ್ಟು ರೆಕ್ಕೆಪುಕ್ಕ ಸೇರಿಸಿ ಆ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತದೆ. ಈ ಮಾತುಗಳನ್ನು ಹೇಳುತ್ತಿರುವುದು ಕನ್ನಡ ನಾಡಿನ ಎಲ್ಲಾ ಪತ್ರಿಕೆಗಳ ಕುರಿತಲ್ಲ. ಇಂದಿಗೂ ಪತ್ರಿಕಾ ಧರ್ಮವನ್ನು ಗೌರವಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಬಯಸುವ ಪತ್ರಿಕೆಗಳು ನಮ್ಮ ನಡುವೆ ಇದೆ. ಇವುಗಳ ನಡುವೆ ಪತ್ರಿಕಾ ಧರ್ಮದ ಜೊತೆ ತಮ್ಮ ನೈತಿಕ ಮೌಲ್ಯಗಳನ್ನೂ ಗಾಳಿಗೆ ತೂರಿ ಸಮುದಾಯಗಳ ನಡುವೆ ದ್ವೇಷ ಹಚ್ಚುವ ಪತ್ರಿಕೆಗಳೂ ಹೆಚ್ಚಾಗಿವೆ.



ಇತ್ತೀಚಿಗೆ ನಡೆದ ಲವ್ ಜಿಹಾದ್ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ತಮ್ಮ ಮನೆಯ ಮಗಳು ಶೈಲಜಾ ಕಾಣೆಯಾಗಿದ್ದಾಳೆ ಎಂದು ಕ್ರೈಸ್ತ ಕುಟುಂಬವೊಂದು ಚಾಮರಾಜ ನಗರದ ಪೊಲೀಸರಿಗೆ ದೂರು ನೀಡಿ ಅವರನ್ನು ಪತ್ತೆ ಹಚ್ಚುವಂತೆ ಕರ್ನಾಟಕ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುತ್ತದೆ. ಅದರಂತೆ ಕರ್ನಾಟಕ ಪೊಲೀಸರು ತನ್ನ ಪ್ರಿಯಕರ ಅಜ್ಗರ್ ನೊಂದಿಗೆ ಪರಾರಿಯಾಗಿ ಆತನನ್ನು ವಿವಾಹವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಆಕೆಯನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ. ಭಾರತೀಯ ವಿವಾಹ ನೊಂದಣಿ ಸಂಹಿತೆಯಂತೆ ಅಜ್ಗರ್ 21 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದು ಆತನ ಪ್ರಿಯತಮೆ ಶೈಲಜಾ 18 ವರ್ಷಗಳಿಗಿಂತಲೂ ಮೇಲ್ಪಟ್ಟವಲಾಗಿದ್ದರೂ ಆಕೆ ತನ್ನ ಸ್ವ ಇಚ್ಛೆಯಿಂದ ತಾನು ಅಜ್ಗರ್ ನನ್ನು ಮದುವೆಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದೇನೆ ಎಂದು ಮುಚ್ಚಳಿಕೆ ಬರೆದು ಕೊಟ್ಟರೂ ಸಾಮಾನ್ಯವಾಗಿ ಇಲ್ಲಿ ಇವರ ಪರವಾಗಿ ಬರಬೇಕಿದ್ದ ತೀರ್ಪನ್ನು ಶೈಲಜಾಲ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕಾರಣ ಮುಂದೂಡಲಾಗುತ್ತದೆ. ಅದರಂತೆ ಕೆಲ ದಿನಗಳ ಮಟ್ಟಿಗೆ ಈ ಜೋಡಿ ಜೊತೆಯಾಗಿ ಇರಬಾರದೆಂದೂ ಅಷ್ಟರ ತನಕ ಈಕೆಯು ತನ್ನ ಹೆತ್ತವರೊಂದಿಗೆ ವಾಸಿಸಬೇಕೆಂದೂ ಕೋರ್ಟ್ ಆದೇಶ ನೀಡುತ್ತದೆ. ಜೊತೆಗೆ ಈಕೆಯ ಕುಟುಂಬದ ವಕೀಲ ಬಳಸಿದ ಲವ್ ಜಿಹಾದ್ ಎಂಬ ಪದದ ಕುರಿತಂತೆ ತನಿಖೆ ನಡೆಸುವಂತೆಯೂ ಆದೇಶಿಸುತ್ತದೆ.



ಅಬ್ಬಾ ಇಷ್ಟು ಸಾಕಾಗಿತ್ತು ಕನ್ನಡ ನಾಡಿನ ಕೋಮುವಾದಿ ಪತ್ರಿಕೆಗಳಿಗೆ, ತನಿಖಾ ತಂಡದ ಅಧಿಕಾರಿ ಹೈಕೋರ್ಟಿಗೆ ವರದಿ ನೀಡುವ ಮುನ್ನವೇ ಇಲ್ಲಿನ ಪತ್ರಿಕೆಗಳು ತೀರ್ಪು ನೀಡಿ ಬಿಟ್ಟಿದ್ದವು. ಕರ್ನಾಟಕ ಸೇರಿದಂತೆ ಕೇರಳ ರಾಜ್ಯದಲ್ಲಿ ಲವ್ ಜಿಹಾದಿ ಸಂಘಟನೆಗಳು ಸಕ್ರಿಯವಾಗಿವೆ. ಇವರು ಇಂತಿಷ್ಟು ಅನ್ಯ ಧರ್ಮೀಯ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಗುರಿಯೊಂದಿಗೆ ಕಾರ್ಯಾಚರಣೆಗಿಳಿಯುತ್ತಾರೆ. ಇವರಿಗೆ ಇದಕ್ಕಾಗಿ ವಿದೇಶಗಳಿಂದ ಲಕ್ಷಗಟ್ಟಲೆ ಹಣ ಬರುತ್ತದೆ. ಸ್ಥಳೀಯವಾಗಿ ಇವರಿಗೆ ಬೈಕು ಕಾರು ಮತ್ತು ಉತ್ತಮ ಉಡುಪುಗಳನ್ನು ಒದಗಿಸಲಾಗುತ್ತದೆ. ಹೀಗೆ ಬುಟ್ಟಿಗೆ ಬಿದ್ದ ಹೆಣ್ಣು ಮಕ್ಕಳನ್ನು ಮತಾಂತರಗೊಳಿಸಿ ಅವರಿಗೆ ಭಯೋತ್ಪಾದನೆಯ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿಗೊಂಡ ಯುವತಿಯರು ಆತ್ಮಾಹುತಿ ಬಾಂಬರುಗಳಾಗಿ ಮಾರ್ಪಾಡಾಗುತಿದ್ದಾರೆ ಎಂಬ ತಮ್ಮ ಎಂದಿನ ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಎಂಬ ಮಾಹಿತಿಯನ್ನು ಸೇರಿಸಿ ವರದಿ ತಯಾರಿಸಿ ಬಿಟ್ಟವು. ಇದನ್ನೇ ಕಾಯುತಿದ್ದ ಕೆಲವು ನಾಯಕರು ಮತ್ತು ಸಂಘಟನೆಗಳು ಈ ವಿಷಯವನ್ನು ಬೀದಿಗೆ ತಂದವು. ಬೇಟಿ ಬಚಾವೋ ಆಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಬೊಬ್ಬಿಡಲಾರಂಭಿಸಿದವು. ಒಟ್ಟಿನಲ್ಲಿ ಈ ರೀತಿಯ ವರದಿಗಳಿಂದ ನಾಗರೀಕ ಸಮಾಜ ಕಂಗೆಟ್ಟಿತ್ತು. ಇದುವರೆಗೂ ಜಿಹಾದ್ ಎಂದರೆ ಬಾಂಬು ಬಂದೂಕುಗಳನ್ನು ಹಿಡಿದು ಮಾಡುವ ದಾಳಿ ಎಂದು ಕೊಂಡಿದ್ದ ನಾಗರೀಕರೂ ಈ ಹೊಸ ಜಿಹಾದಿನ ಹೆಸರು ಕೇಳಿ ಬೆವೆತು ಹೋದರು. ಈ ಬಗ್ಗೆ ಮೊಬೈಲ್ ಫೋನಿನಲ್ಲಿ ಬಗೆಬಗೆಯ ಎಸ್.ಎಂ.ಎಸ್ ಗಳು ಹರಿದಾಡಿದವು. ಒಟ್ಟಿನಲ್ಲಿ ನಾಗರೀಕ ಸಮಾಜವೇ ಈ ರೀತಿಯ ವರದಿಗಳಿಂದ ಬೆವೆತು ಹೋಗಿದ್ದರೆ ಇದರ ನಿರ್ದೇಶಕರಾದ ಈ ಪೀತ ಪತ್ರಿಕೆಗಳ ಸಂಪಾದಕರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಮಜಾ ನೋಡುತಿದ್ದರು.



ಈ ಎಲ್ಲದರ ನಡುವೆ ಮತ್ತೆ ಕೋರ್ಟಿನ ಆದೇಶದಂತೆ ಶೈಲಜಾ ಮತ್ತೆ ಹಾಜರಾದಳು. ಕೋರ್ಟ್ ಆಕೆಯನ್ನು ಪುನಃ ಪ್ರಶ್ನಿಸಲಾಗಿ ಆಕೆ ತಾನು ಅಸ್ಗರಿನೊಂದಿಗೆ ಹೋಗುವುದಾಗಿಯೂ ತನಗೆ ಯಾವುದೇ ರೀತಿಯ ಆಮಿಷ ಒಡ್ಡಿ ಆತ ತನ್ನನ್ನು ಮದುವೆ ಆಗಿಲ್ಲವೆಂದೂ ತಾವಿಬ್ಬರೂ ಪರಸ್ಪರ ಪ್ರೀತಿಸುತಿದ್ದು ಇಬ್ಬರೂ ಇಷ್ಟಪಟ್ಟು ಮದುವೆ ಆಗಿರುವುದಾಗಿಯೂ ತಿಳಿಸಿ ಜೊತೆಗೆ ತನ್ನಿಷ್ಟದಂತೆ ತಾನು ಅಸ್ಗರಿನ ಧರ್ಮಕ್ಕೆ ಮತಾಂತರವಾಗುತ್ತಿರುವುದಾಗಿಯೂ ತಿಳಿಸಿದಳು. ಅದರಂತೆ ಘನವೆತ್ತ ನ್ಯಾಯಾಲಯ ಆಕೆಗೆ ಅಸ್ಗರಿನೊಂದಿಗೆ ಇರುವಂತೆ ತೀರ್ಪು ನೀಡಿತು. ಈ ಮಧ್ಯೆ ತನಿಖೆ ನಡೆಸಿದ ಇಲ್ಲಿನ ಪೋಲಿಸ್ ಅಧಿಕಾರಿಗಳು ಲವ್ ಜಿಹಾದ್ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲವೆಂದೂ ಇದುವರೆಗೆ ಆ ರೀತಿಯ ಯಾವುದೇ ದೂರು ರಾಜ್ಯದ ಯಾವುದೇ ಮೂಲೆಯಲ್ಲಿ ದಾಖಲಾಗಿಲ್ಲವೆಂದು ವರದಿ ನೀಡಿದರು. ಆದರೆ ಇದು ಹೆಚ್ಚಿನ ಯಾವುದೇ ಪತ್ರಿಕೆಗಳ ಮುಖಪುಟ ಸುದ್ಧಿಯಾಗಲಿಲ್ಲ. ಲವ್ ಜಿಹಾದ್ ಬಗ್ಗೆ ತನಗಿಷ್ಟ ಬಂದಂತೆ ಬರೆದ ಈ ಪೀತಪತ್ರಿಕೆಗಳು ಈಗ ಜಾಣ ಮೌನಕ್ಕೆ ಶರಣಾದವು. ಇವೆಲ್ಲರ ಮಧ್ಯೆ ಮೋಹನ್ ಕುಮಾರ್ ಎಂಬ ಕಾಮ ಜಿಹಾದಿಯ ಪತ್ತೆಯ ನಂತರ ಆತನ ಕಾಮ ಲೀಲೆಗಳಿಗೆ ಆತನ ಹತ್ಯೆಗಳಿಗೆ ಯಾವುದೇ ಟೈಟಲ್ ಕೊಡದೆ ಸರಳವಾಗಿ ಸರಣಿ ಹಂತಕ ಮೋಹನ್ ಕುಮಾರ್ ಬಂಧನ ಎಂದು ಪ್ರಕಟಿಸಿ ಕೃತಾರ್ಥವಾದವು. ಇವೆಲ್ಲಾ ನೋಡುವಾಗ ಈ ಪತ್ರಿಕೆಗಳು ಟಾಯ್ಲೆಟ್ ರೋಲ್ ಆಗಿ ಬಳಸಲೂ ನಾಲಾಯಕ್ ಎಂಬ ಮಾತುಗಳು ಅಕ್ಷರಸ ಸತ್ಯ ಎನಿಸುತ್ತದೆ.